ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ದೇಶದ ಪ್ರತಿಯೊಬ್ಬ ನಾಗಕರಿಕನಿಗೂ ಉಚಿತವಾಗಿ ಕೊರೊನಾ ಲಸಿಕೆ ನೀಡಬೇಕು. ಪ್ರತಿದಿನ ಒಂದು ಕೋಟಿ ಲಸಿಕೆ ನೀಡಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದಲ್ಲಿ ಇಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಬೆಳಗಾವಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜು ಸೇಠ್ ಹಾಗೂ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ ಅವರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿನಯ ನಾವಲಗಟ್ಟಿ, ದೇಶದಲ್ಲಿ ಕೊರೊನಾ ಹಾವಳಿ ವ್ಯಾಪಕವಾಗಿದ್ದು, ಪ್ರತಿ ಕುಟುಂಬಗಳಲ್ಲೂ ಒಬ್ಬರಾದರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಇದಕ್ಕೆ ಲಸಿಕೆ ನೀಡುವುದೇ ಪರಿಹಾರವಾಗಿದೆ. ಹೀಗಾಗಿ, ದೇಶಾದ್ಯಂತ ಸಾರ್ವತ್ರಿಕವಾಗಿ ಪ್ರತಿಯೊಬ್ಬರಿಗೂ ತ್ವರಿತವಾಗಿ ಲಸಿಕೆ ಕೊಡಬೇಕು ಎಂದು ಆಗ್ರಹಿಸಿದರು.
ಒಂದೊಂದು ಆಸ್ಪತ್ರೆಗಳು ಒಂದೊಂದು ದರಕ್ಕೆ ಕೊರೊನಾ ಲಸಿಕೆ ನೀಡುತ್ತಿವೆ. ಇದರಿಂದ ಜನರಿಗೆ ಸಮಸ್ಯೆಯಾಗಿದೆ. ಹಾಗಾಗಿ, ಸರ್ಕಾರವೇ ಪ್ರತಿದಿನ ಒಂದು ಕೋಟಿ ಲಸಿಕೆಯನ್ನು ಉಚಿತವಾಗಿ ನೀಡಬೇಕು. 2021ರ ಡಿಸೆಂಬರ್ 31 ರೊಳಗೆ ದೇಶದ ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ತಲುಪುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ತೈಲ ಬೆಲೆ ಇಳಿಕೆಗೆ ಆಗ್ರಹ:
ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಗಗನಕ್ಕೇರಿರುವುದರಿಂದ ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗುತ್ತಿದೆ. ಕೊರೊನಾ ಮಧ್ಯೆ ಎಲ್ಲ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿರುವುದರಿಂದ ಜನರು ಆರ್ಥಿಕವಾಗಿ ತತ್ತರಿಸಿ ಹೋಗಿದ್ದಾರೆ. ಹೀಗಾಗಿ, ಕೂಡಲೇ ತೈಲ ಬೆಲೆಗಳನ್ನು ಇಳಿಕೆ ಮಾಡಬೇಕು. ಈ ಬಗ್ಗೆ ರಾಷ್ಟ್ರಪತಿಗಳು ಕೇಂದ್ರ ಸರ್ಕಾರಕ್ಕೆ ಸಲಹೆ, ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.
ಮಾಸ್ಕ್, ಸ್ಯಾನಿಟೈಸರ್ ವಿತರಣೆ:
ಇದೇ ಸಂದರ್ಭದಲ್ಲಿ ಜಿಲ್ಲೆಯ ಕೊರೊನಾ ವಾರಿಯರ್ಸ್ ಗಳಿಗೆ ಪಕ್ಷದ ವತಿಯಿಂದ ಮಾಸ್ಕ್, ಸ್ಯಾನಿಟೈಸರ್ ಹಾಗೂ ಪಿಪಿಇ ಕಿಟ್ ಗಳನ್ನು ವಿತರಿಸಲಾಯಿತು.
ಪಕ್ಷದ ಕಾರ್ಯಕರ್ತರಾದ ಅನ್ನಪೂರ್ಣಾ ಅಸೂರಕರ್, ಅಂಜಲಿ ಪಾಟೀಲ, ವಿಶಾಲ್ ಪಾಟೀಲ, ಗಜು ದರನಾಯಕ್, ಸದಾ ಕೋಲಕಾರ, ಆನಂದ ವೈದ್ಯ ಸೇರಿ ಇನ್ನಿತರರು ಇದ್ದರು.
ಪರಿಸರ ದಿನ ಆಚರಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ