Kannada NewsKarnataka News

ಬೆಳಗಾವಿಯ 2 ಏರಿಯಾಗಳ ಸೀಲ್ ಡೌನ್ ಗೆ ಜಿಲ್ಲಾಧಿಕಾರಿ ಆದೇಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಕೋವಿಡ್ ಆರೈಕೆ ಕೇಂದ್ರದಿಂದ ಮನೆಗೆ ಹೊರಟ ಜನರಿಗೆ ಸಸಿಗಳನ್ನು ನೀಡುವ ಮೂಲಕ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಬೀಳ್ಕೊಟ್ಟರು.
ಇಲ್ಲಿನ ಕುಮಾರಸ್ವಾಮಿ ಲೇಔಟ್ ನಲ್ಲಿರುವ ಕೋವಿಡ್ ಕೇಂದ್ರದಲ್ಲಿ ಹಲವು ದಿನಗಳಿಂದ ಆರೈಕೆ ಪಡೆಯುತ್ತಿದ್ದ ಏಳು ಜನರನ್ನು ಶನಿವಾರ (ಜೂ.೧೨) ಬೀಳ್ಕೊಡಲಾಯಿತು.
ಕೋವಿಡ್ ಸೋಂಕಿತರನ್ನು ಸರಕಾರದ ಮಾರ್ಗಸೂಚಿ ಪ್ರಕಾರ ಕೋವಿಡ್ ಕೇರ್ ಕೇಂದ್ರಗಳಿಗೆ ದಾಖಲಿಸಿ ಔಷಧೋಪಚಾರ ಹಾಗೂ ಊಟೋಪಹಾರ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಈ ಕೇಂದ್ರದಲ್ಲಿ ಆರೈಕೆ ಪಡೆದುಕೊಂಡು ಸಂಪೂರ್ಣ ಗುಣಮುಖರಾದ ಏಳು ಜನರನ್ನು ಇಂದು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸ್ವತಃ ಹಾಜರಿದ್ದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಗುಣಮುಖರಾದ ಜನರಿಗೆ ಹೂವು ಮತ್ತಿತರ ಸಸಿಗಳನ್ನು ನೀಡುವ ಮೂಲಕ ಶುಭ ಕೋರಿ ಬೀಳ್ಕೊಟ್ಟರು.
ಈ ವೇಳೆ ಮಾತನಾಡಿದ ಅವರು, ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಮತ್ತು ಲಕ್ಷಣರಹಿತ ಸೋಂಕಿತರಿಗೆ ಕೋವಿಡ್ ಕೇರ್ ಕೇಂದ್ರದಲ್ಲಿ ಪ್ರತ್ಯೇಕವಾಗಿರಿಸಿ ಆರೈಕೆ ಮಾಡಲು ಎಲ್ಲ ರೀತಿಯ ಸೌಲಭ್ಯಗಳನ್ನು ಸರಕಾರದಿಂದ ಕಲ್ಪಿಸಲಾಗಿದೆ ಎಂದರು.
ಆಯಾ ತಾಲ್ಲೂಕು ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇರುವ ವಸತಿ ನಿಲಯಗಳಲ್ಲಿ ಸುಸಜ್ಜಿತ ಕೋವಿಡ್ ಕೇರ್ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಲಕ್ಷಣರಹಿತ ಸೋಂಕಿತರು ಇಂತಹ ಆರೈಕೆ ಕೇಂದ್ರಗಳ ಪ್ರಯೋಜನ ಪಡೆದುಕೊಳ್ಳಬೇಕು.
ಸರಕಾರದ ಮಾರ್ಗಸೂಚಿ ಪ್ರಕಾರ ಲಕ್ಷಣರಹಿತ ಸೋಂಕಿತರಿಗೆ ಔಷಧಿಗಳ ಜತೆಗೆ ಅತ್ಯುತ್ತಮ ಆಹಾರ ನೀಡಲಾಗುತ್ತಿದೆ. ಆದ್ದರಿಂದ ಸೋಂಕು ದೃಢಪಟ್ಟಾಗ ಯಾವುದೇ ಭಯ-ಆತಂಕವಿಲ್ಲದೇ ಕೋವಿಡ್ ಕೇರ್ ಕೇಂದ್ರಗಳಿಗೆ ಸ್ವಯಂಪ್ರೇರಣೆಯಿಂದ ದಾಖಲಾಗಬೇಕು.
ಸೂಕ್ತ ಆರೈಕೆ ಬಳಿಕ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳುತ್ತಿರುವವರು ಇನ್ನಷ್ಟು ದಿನಗಳ ಕಾಲ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಉತ್ತಮ ಪೌಷ್ಟಿಕಾಹಾರ ಸೇವಿಸುವ ಮೂಲಕ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಎಂದು ಜಿಲ್ಲಾಧಿಕಾರಿ ಹಿರೇಮಠ ಸಲಹೆ ನೀಡಿದರು.
ನಗರ ಪೊಲೀಸ್ ಉಪ ಆಯುಕ್ತರಾದ ಡಾ.ವಿಕ್ರಮ್ ಆಮಟೆ, ಮಹಾನಗರ ಪಾಲಿಕೆಯ ಆಯುಕ್ತ ಜಗದೀಶ್ ಕೆ.ಎಚ್., ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ ಮತ್ತಿತರರು ಉಪಸ್ಥಿತರಿದ್ದರು.

ದೇಶದಲ್ಲೇ ಮೊದಲ ಬಾರಿಗೆ ರೈಲಿನ ಮೂಲಕ ತಾಜಾ ಹಣ್ಣುಗಳ ಸಾಗಣೆ

ಮನೆ ಮನೆಗೆ ತೆರಳಿ ಸೋಂಕಿತರ ಭೇಟಿ:
ಇದಕ್ಕೂ ಮುಂಚೆ ನಗರದ ೫೩ ಹಾಗೂ ೫೪ ನೇ ವಾರ್ಡುಗಳಲ್ಲಿ ಸಂಚರಿಸಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಮನೆಯಲ್ಲಿಯೇ ಪ್ರತ್ಯೇಕವಾಗಿರುವ ಕೋವಿಡ್ ಸೋಂಕಿತರನ್ನು ಭೇಟಿ ಮಾಡಿದರು.
ಈ ಎರಡೂ ವಾರ್ಡುಗಳಲ್ಲಿ ಇರುವ ಸೋಂಕಿತರ ಮನೆಗಳಿಗೆ ತೆರಳಿದ ಜಿಲ್ಲಾಧಿಕಾರಿಗಳು ಹೊರಗಡೆಯಿಂದಲೇ ಸೋಂಕಿತರ ಜತೆ ಸಮಾಲೋಚನೆ ನಡೆಸುವ ಮೂಲಕ ಅವರಿಗೆ ಧೈರ್ಯ ಹೇಳಿದರು.
ಸರಕಾರದ ಮಾರ್ಗಸೂಚಿ ಪ್ರಕಾರ ಔಷಧಿಗಳನ್ನು ಮನೆಗಳಿಗೆ ಕಳುಹಿಸಲಾಗಿದ್ದು, ವೈದ್ಯರ ನಿರ್ದೇಶನ ಪ್ರಕಾರ ಅವುಗಳನ್ನು ತೆಗೆದುಕೊಳ್ಳಬೇಕು. ಇದರ ಜತೆಗೆ ಉತ್ತಮ ಆಹಾರ ಸೇವಿಸಿದರೆ ಆದಷ್ಟು ಬೇಗನೆ ಗುಣಮುಖರಾಗಬಹುದು. ಆದ್ದರಿಂದ ವೈದ್ಯರು ನೀಡುವ ಸೂಚನೆಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ಸಲಹೆಗಳನ್ನು ನೀಡಿದರು.
ಕಂಗ್ರಾಳಿ ಬಿ.ಕೆ. ಹಾಗೂ ಹಿಂಡಲಗಾ ಪ್ರದೇಶದಲ್ಲಿ ಸೋಂಕಿನ ಪ್ರಮಾಣ ಹೆಚ್ಚಳವಾಗಿರುವುದರಿಂದ ಆ ಭಾಗದಲ್ಲೂ ಸಂಚರಿಸಿದ ಜಿಲ್ಲಾಧಿಕಾರಿ ಹಿರೇಮಠ ಅವರು, ಸರಕಾರದ ಮಾರ್ಗಸೂಚಿ ಪ್ರಕಾರ ಸೀಲ್ ಡೌನ್ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು. ಪಾಲಿಕೆಯ ಆಯುಕ್ತರಾದ ಜಗದೀಶ್ ಕೆ.ಎಚ್. ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ದೇಶದಲ್ಲೇ ಮೊದಲ ಬಾರಿಗೆ ರೈಲಿನ ಮೂಲಕ ತಾಜಾ ಹಣ್ಣುಗಳ ಸಾಗಣೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button