ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಲಾಕ್ ಡೌನ್ ಅವಧಿಯಲ್ಲಿ ಶತಾಯಗತಾಯ ಕೋವಿಡ್ ಸೋಂಕು ನಿಯಂತ್ರಣಕ್ಕೆ ತರಲು ಮುಂದಾಗಿರುವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಇಂದು ಭಾನುವಾರ ರಾಯಬಾಗ ಹಾಗೂ ಚಿಕ್ಕೋಡಿ ತಾಲ್ಲೂಕುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಚಿಕ್ಕೋಡಿ ಪಟ್ಟಣದ ವಾರ್ಡ ಸಂಖ್ಯೆ 23 ರಲ್ಲಿ ಸಂಚರಿಸಿದ ಜಿಲ್ಲಾಧಿಕಾರಿಗಳು, ಮನೆಗಳಲ್ಲಿ ಪ್ರತ್ಯೇಕವಾಗಿ(ಐಸೋಲೇಷನ್) ಇರುವ ಸೋಂಕಿತರನ್ನು ಭೇಟಿ ಮಾಡಿ ಆರೋಗ್ಯವನ್ನು ವಿಚಾರಿಸಿದರು.
ಆರೋಗ್ಯ ಇಲಾಖೆಯ ಅಧಿಕಾರಿಗಳು ನೀಡುವ ಔಷಧಿಗಳನ್ನು ಸರಿಯಾಗಿ ತೆಗೆದುಕೊಂಡು ಉತ್ತಮ ಆಹಾರವನ್ನು ಸೇವಿಸಿದರೆ ಆದಷ್ಟು ಬೇಗನೇ ಗುಣಮುಖರಾಗಬಹುದು. ಆದ್ದರಿಂದ ಲಕ್ಷಣರಹಿತ ಸೋಂಕಿತರು ಈ ಬಗ್ಗೆ ಗಮನಹರಿಸಬೇಕು ಎಂದು ತಿಳಿಸಿದರು.
ಇದೇ ವೇಳೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ಅವರು, ಲಾಕಡೌನ್ ಅವಧಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದರು.
ಕಡ್ಡಾಯವಾಗಿ ಕೋವಿಡ್ ಕೇರ್ ಕೇಂದ್ರಕ್ಕೆ ದಾಖಲಿಸಲು ಸೂಚನೆ:
ಲಕ್ಷಣರಹಿತ ಸೋಂಕಿತರನ್ನು ಕಡ್ಡಾಯವಾಗಿ ಸಮೀಪದ ಕೋವಿಡ್ ಕೇರ್ ಕೇಂದ್ರಕ್ಕೆ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಒಂದು ವೇಳೆ ಮನೆಯಲ್ಲಿಯೇ ಪ್ರತ್ಯೇಕವಾಗಿರಲು ಅವಕಾಶವಿದ್ದರೂ ಒಬ್ಬರು ಮಾತ್ರ ಇರಬಹುದು. ಒಂದೇ ಮನೆಯಲ್ಲಿ ಇಬ್ಬರಿಗೆ ಸೋಂಕು ದೃಢಪಟ್ಟರೆ ಕಡ್ಡಾಯವಾಗಿ ಅವರನ್ನು ಕೋವಿಡ್ ಕೇರ್ ಕೇಂದ್ರಕ್ಕೆ ದಾಖಲಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಚಿಕ್ಕೋಡಿ ತಾಲೂಕಿನ ಪಾಂಗೀರ ಗ್ರಾಮ, ಯಡೂರ ಕೋವಿಡ್ ಕೇರ್ ಕೇಂದ್ರಗಳಿಗೆ ಕೂಡ ಜಿಲ್ಲಾಧಿಕಾರಿ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು.
ನಂತರ ರಾಯಬಾಗ ತಾಲ್ಲೂಕಿನ ನಂದಿಕುರಳಿ, ಅಲಕನೂರ ಗ್ರಾಮಗಳಿಗೂ ಭೇಟಿ ನೀಡಿ ಕೋವಿಡ್ ನಿಯಂತ್ರಣ ಕ್ರಮಗಳ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.
ಎನ್.ಡಿ.ಆರ್. ಎಫ್. ತಂಡದ ಜತೆ ಚರ್ಚೆ:
ಸಂಭವನೀಯ ಪ್ರವಾಹ ಸ್ಥಿತಿಯ ಹಿನ್ನೆಲೆಯಲ್ಲಿ ತುರ್ತು ರಕ್ಷಣಾ ಕಾರ್ಯಕ್ಕೆ ಆಗಮಿಸಿರುವ ಎನ್.ಡಿ.ಆರ್.ಎಫ್. ತಂಡವನ್ನು ಚಿಕ್ಕೋಡಿ ತಾಲ್ಲೂಕಿನ ಯಡೂರ ಗ್ರಾಮದ ಬಳಿ ಬೀಡುಬಿಟ್ಟಿದೆ.
ಈ ತಂಡದ ಜತೆ ಚರ್ಚೆ ನಡೆಸಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ತುರ್ತು ಪರಿಸ್ಥಿತಿ ನಿರ್ವಹಣೆಗೆ ಸಂಬಂಧಿಸಿದಂತೆ ಯಾವ ರೀತಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂಬುದರ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ಚಿಕ್ಕೋಡಿ, ರಾಯಬಾಗ ತಹಶೀಲ್ದಾರರು, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ