Kannada NewsKarnataka News

ಬೆಳಗಾವಿಯ 418 ಗ್ರಾಮಗಳು ಕೋವಿಡ್ ಮುಕ್ತ ; ಪಂಚಾಯಿತಿಗೊಂದು ಕೆರೆ ಅಭಿವೃದ್ಧಿ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕೆರೆ ನಿರ್ಮಾಣ ಯೋಜನೆ ಪ್ರಧಾನಮಂತ್ರಿಗಳ ಕನಸಿನ ಯೋಜನೆಯಾಗಿದೆ. ಇದು ರೈತರಿಗೆ ಹಾಗೂ ಅಂತರ್ಜಲ ಹೆಚ್ಚಳಕ್ಕೆ ಸಹಕಾರಿಯಾಗಿರುವುದರಿಂದ ಪ್ರತಿ ಪಂಚಾಯಿತಿಗಳಲ್ಲೂ ಕಡ್ಡಾಯವಾಗಿ ಒಂದು ಕೆರೆ ನಿರ್ಮಾಣ ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್. ಈಶ್ವರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಸೋಂಕು ತಡೆಗಟ್ಟುವುದಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಗಳಿಂದ ತೆಗೆದುಕೊಂಡಿರುವ ಕ್ರಮಗಳು ಹಾಗೂ ವಿವಿಧ ವಿಷಯಗಳ ಕುರಿತು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗುರುವಾರ (ಜೂ.17) ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೃಷಿಹೊಂಡಗಳಿಂದ ರೈತರಿಗೆ ಹೆಚ್ಚಿನ ಪ್ರಯೋಜನ ವಿರುವುದರಿಂದ ಕೃಷಿಹೊಂಡಗಳ ನಿರ್ಮಾಣದ ನಿಗದಿತ ಗುರಿಯನ್ನು ಸಾಧಿಸಬೇಕು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಸೂಚನೆ ನೀಡಿದರು.
ಕೆರೆಗಳನ್ನು ನಿರ್ವಹಣೆಗೆ ಗ್ರಾಮ ಪಂಚಾಯತಿಗಳಿಗೆ ಹಸ್ತಾಂತರಿಸಲಾಗಿದೆ.
ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಗೆ ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಜಾಗೆಯನ್ನು ಒದಗಿಸಿರುವುದಕ್ಕೆ ಜಿಲ್ಲಾಧಿಕಾರಿ ‌ಹಿರೇಮಠ ಅವರಿಗೆ ಸಚಿವರು ಕೃತಜ್ಞತೆ ಸಲ್ಲಿಸಿದರು‌
ನರೇಗಾ ಯೋಜನೆಯಡಿ ನಿಗದಿತ ಗುರಿ ಸಾಧನೆ ಆಗದಿರುವುದಕ್ಕೆ ಕಾರಣಗಳೇನು ಎಂದು ಅಧಿಕಾರಿಗಳಿಂದ ತಿಳಿದುಕೊಂಡ ಅವರು, ನಿಗದಿತ ಗುರಿ ಸಾಧನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.
ಗುರಿ ಸಾಧನೆ ಆಗದಿರುವುದಕ್ಕೆ ಕಾರಣಗಳನ್ನು ಪತ್ತೆ ಮಾಡಬೇಕು. ಸಮುದಾಯ ಆಧಾರಿತ ಕಾಮಗಾರಿ ಸಾಧ್ಯವಾಗದಿದ್ದರೆ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಂಡು ಗುರಿ ತಲುಪಬೇಕು ಎಂದು ತಿಳಿಸಿದರು.
ಜಲಜೀವನ ಮಿಷನ್ ಕಾಮಗಾರಿಗಳನ್ನು ತಕ್ಷಣವೇ ಆರಂಭಿಸಬೇಕು ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಅದೇ ರೀತಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿಗಳನ್ನು ಕಾಲಮಿತಿ ನಿಗದಿಪಡಿಸಿಕೊಂಡು ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು.
ನಿಗದಿತ ಗುರಿ ಸಾಧನೆಗೆ ಆದ್ಯತೆ ನೀಡಬೇಕು ಎಂದರು.
ಗ್ರಾಪಂ ಸದಸ್ಯರಿಗೆ ಲಸಿಕೆ ನೀಡಲು ಸೂಚನೆ:
ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿ ಸದಸ್ಯರಿಗೆ ಕೋವಿಡ್ ನಿರೋಧಕ ಲಸಿಕೆಯನ್ನು ನೀಡಲು ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಈಶ್ವರಪ್ಪ ಅವರು ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.
ಕೋವಿಡ್ ನಿಂದ ನಿಧನರಾಗಿರುವ ಪಂಚಾಯತ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಆದಷ್ಟು ಬೇಗನೇ ಪರಿಹಾರ ಒದಗಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಪಂಚಾಯತಿ ಅಧ್ಯಕ್ಷರ ಜತೆ‌ ಸಂವಾದ:
ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಗ್ರಾಮ ಪಂಚಾಯತಿ ಅಧ್ಯಕ್ಷರ ಜತೆ ಸಂವಾದ ನಡೆಸಿದ ಸಚಿವ ಕೆ.ಎಸ್. ಈಶ್ವರಪ್ಪ ಅವರು, ಕೋವಿಡ್ ನಿರ್ವಹಣೆ ಮತ್ತು ಕೆರೆಗಳ ಅಭಿವೃದ್ಧಿ ಕುರಿತು ಚರ್ಚಿಸಿದರು.
ಕೆರೆಗಳ ನಿರ್ವಹಣೆ ಜವಾಬ್ದಾರಿಯನ್ನು ಗ್ರಾಮ ಪಂಚಾಯತಿಗೆ ನೀಡಿರುವುದರಿಂದ ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ತೋಟಪಟ್ಟಿ ರಸ್ತೆ ಮಾಡುವಾಗ ಪಕ್ಕದಲ್ಲೇ ಇರುವ ಮಣ್ಣು ಬಳಕೆ ಮಾಡುವ ಬದಲು‌ ಬೇರೆ ಕಡೆಯ‌ ಮಣ್ಣು ತಂದು ತೋಟಪಟ್ಟಿ ರಸ್ತೆಗೆ ಬಳಸಬೇಕು. ಈ ಕಾರ್ಯಕ್ಕೆ ಸಂಬಂಧಿಸಿದ ಜಮೀನುಗಳ ಮಾಲೀಕರ ನೆರವು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಎಲ್.ಕೆ‌.ಅತೀಕ್, ನರೇಗಾ ಯೋಜನೆಯಡಿ ಜಿಲ್ಲೆಯಾದ್ಯಂತ ಕೃಷಿಹೊಂಡ, ಶೌಚಾಲಯ, ಶಾಲಾ ಕಂಪೌಂಡ ಮತ್ತಿತರ ಕಾಮಗಾರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೈಗೆತ್ತಿಕೊಂಡು ಉತ್ತಮ ಕೆಲಸ ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅರಣ್ಯೀಕರಣ ಯೋಜನೆಯಡಿ ಬರೀ ಸಸಿಗಳನ್ನು ನೆಟ್ಟರೆ ಸಾಲದು; ಅವುಗಳ ಪೋಷಣೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಜಲಜೀವನ ಮಿಷನ್ ಅಡಿಯಲ್ಲಿ ಬಾಕಿ ಉಳಿದಿರುವ ಅಂಗನವಾಡಿ ಕೇಂದ್ರ ಹಾಗೂ ಶಾಲೆಗಳಿಗೆ ಜೂನ್ 30 ರೊಳಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, 1308 ಹಳ್ಳಿಗಳಲ್ಲಿ 65 ಸಾವಿರಕ್ಕೂ ಅಧಿಕ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ (ರ್ಯಾಟ್) ಮಾಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪಾಸಿಟಿವಿಟಿ ದರ ಶೇ.5 ಕ್ಕಿಂತ ಕಡಿಮೆಯಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ.,
ನರೇಗಾ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಇದಯವರೆಗೆ 32.15 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಿ ನಿಗದಿತ ಗುರಿಯ ಶೇ.25 ರಷ್ಟು ಸಾಧನೆ ಮಾಡಲಾಗಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ 247 ಹೊಸ ಕೆರೆಗಳ ನಿರ್ಮಾಣ ಮಾಡಲಾಗುತ್ತಿದ್ದು, ಕೆಲವೇ ಕೆಲವು ಕಡೆಗಳಲ್ಲಿ ಮಾತ್ರ ಜಾಗದ ಸಮಸ್ಯೆಯಿದೆ. ಅದನ್ನು ಹೊರತುಪಡಿಸಿದರೆ ಹೊಸ ಕೆರೆಗಳ ನಿರ್ಮಾಣ ಕಾರ್ಯ ನಡೆದಿದೆ ಎಂದು ಸಭೆಯಲ್ಲಿ ತಿಳಿಸಿದರು.
ಕಾಮಗಾರಿ ಸ್ಥಳದಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸಲಾಗುತ್ತಿದೆ. ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್ ಮತ್ತಿತರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಮೂರು ಹಂತಗಳಲ್ಲಿ ಕೋಟಿವೃಕ್ಷ ಆಂದೋಲನ ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಹರಿಯುವ ಬಚ್ಚಲುಗುಂಡಿ ನೀರು ಹಿಂಗಿಸಲು ಅನುಕೂಲವಾಗುವಂತೆ 4 ಸಾವಿರಕ್ಕೂ ಅಧಿಕ ಬಚ್ಚಲುಗುಂಡಿಗಳನ್ನು ನಿರ್ಮಿಸಲಾಗಿದೆ. ಕೃಷಿಹೊಂಡ ಹಾಗೂ ತೆರೆದ ಬಾವಿ ನಿರ್ಮಾಣಕ್ಕೆ ರೈತರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಮಾಹಿತಿಯನ್ನು ನೀಡಿದರು.
ಗ್ರಾಮಗಳಲ್ಲಿ ಕೋವಿಡ್ ನಿರ್ವಹಣೆ:
ಸದ್ಯಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಸೋಂಕು ಇಳಿಮುಖವಾಗಿದೆ. 1303 ಗ್ರಾಮ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸಿ ಕೋವಿಡ್ ಮಾರ್ಗಸೂಚಿ ಪಾಲನೆ ಹಾಗೂ ಸೋಂಕಿತರ ಚಿಕಿತ್ಸೆ ಮತ್ತು ಆರೈಕೆಗೆ ಕ್ರಮ ಕೈಗೊಳ್ಳಲಾಗಿದೆ.
ಸೋಂಕಿತರ ಮೇಲೆ ನಿಗಾ, ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರ ಪತ್ತೆ, ಸೋಂಕಿತರನ್ನು ಆರೈಕೆ ಕೇಂದ್ರಕ್ಕೆ ದಾಖಲಿಸುವುದು, ಔಷಧಿ ಕಿಟ್ ವಿತರಣೆ,  ಜಾಗೃತಿ ಮೂಡಿಸಲು ಗ್ರಾಮ ಪಂಚಾಯತಿ ವತಿಯಿಂದ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇದಲ್ಲದೇ ತಾಲ್ಲೂಕು ಮಟ್ಟದಲ್ಲಿ ಕೂಡ ಕಾಲ್ ಸೆಂಟರ್ ಆರಂಭಿಸಿ ಸೋಂಕಿತರ ಆರೋಗ್ಯ ವಿಚಾರಣೆಗೆ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲೆಯ 418 ಗ್ರಾಮಗಳು ಕೋವಿಡ್ ಮುಕ್ತ:
ಜಿಲ್ಲೆಯಲ್ಲಿ ಒಟ್ಟಾರೆ 418 ಗ್ರಾಮಗಳನ್ನು ಕೋವಿಡ್ ಮುಕ್ತ ಗ್ರಾಮ ಎಂದು ಘೋಷಿಸಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ತಿಳಿಸಿದರು.
ನಿರಂತರ ಹತ್ತು ದಿನಗಳ ಕಾಲ ಸೋಂಕು ಪತ್ತೆಯಾಗದ ಗ್ರಾಮಗಳನ್ನು ಕೋವಿಡ್ ಮುಕ್ತ ಗ್ರಾಮ ಎಂದು ಘೋಷಿಸಲಾಗಿದೆ ಎಂದು ವಿವರಿಸಿದರು.
ಕಿತ್ತೂರು ತಾಲ್ಲೂಕು ಪ್ರತ್ಯೇಕ ಎಂದು ಗುರುತಿಸಲು ಒತ್ತಾಯ:
ಕಿತ್ತೂರು ತಾಲ್ಲೂಕು ಘೋಷಣೆಯಾಗಿ ಹಲವಾರು ವರ್ಷ ಕಳೆದರೂ ಯಾವುದೇ ಯೋಜನೆ ರೂಪಿಸುವಾಗ ಕಿತ್ತೂರು ಪ್ರತ್ಯೇಕ ತಾಲ್ಲೂಕು ಎಂದು ಪರಿಗಣಿಸುತ್ತಿಲ್ಲ. ಇದರಿಂದ ಕಿತ್ತೂರು ಸೌಲಭ್ಯ ವಂಚಿತವಾಗುತ್ತಿದೆ. ಆದ್ದರಿಂದ ಕಿತ್ತೂರು ತಾಲ್ಲೂಕು ಪ್ರತ್ಯೇಕವಾಗಿ ಪರಿಗಣಿಸಬೇಕು ಎಂದು ಶಾಸಕ ಮಹಾಂತೇಶ ದೊಡಗೌಡ್ರ ಅಧಿಕಾರಿಗಳಿಗೆ ಹೇಳಿದರು.
ಕುಡಿಯುವ ನೀರು ಯೋಜನೆಗಳು ಹಲವಾರು ವರ್ಷಗಳಿಂದ ನಿಧಾನಗತಿಯಲ್ಲಿ ಸಾಗುತ್ತಿವೆ. ಹೊಸ ಯೋಜನೆಗಳಲ್ಲಿ ಕೆಲ ಗ್ರಾಮಗಳು ತಪ್ಪುತ್ತಿವೆ. ಆದ್ದರಿಂದ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದೇ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸುವ ಮುಂಚೆ ಸಂಬಂಧಿಸಿದ ಶಾಸಕರ ಜತೆ ಚರ್ಚಿಸಿ ಸಲಹೆ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಿತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಉಳಿದಿರುವ ಗ್ರಾಮಗಳನ್ನು ಸೇರ್ಪಡೆಗೊಳಿಸಿ ಹೊಸ ಡಿಪಿಆರ್ ರೂಪಿಸುವಂತೆ ಒತ್ತಾಯಿಸಿದರು.
ಕಳೆದ ಎರಡು ದಿನಗಳಲ್ಲಿ ಲಸಿಕೆ ಪೂರೈಕೆ ಕಡಿಮೆಯಾಗಿದೆ ಎಂದು ಶಾಸಕ ಮಹಾಂತೇಶ ದೊಡಗೌಡ್ರ ಅವರು ಸಚಿವರ ಗಮನಕ್ಕೆ‌ ತಂದರು.
ಸಂಸದರಾದ ಮಂಗಲಾ ಸುರೇಶ್ ಅಂಗಡಿ ಸಭೆಯಲ್ಲಿ ಭಾಗವಹಿಸಿದ್ದರು. ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button