ಪ್ರಗತಿವಾಹಿನಿ ಸುದ್ದಿ, ವಿಜಯಪುರ – ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೀಶ್ವರ ವಿಜಯಪುರಕ್ಕೆ ಭೇಟಿ ನೀಡಿದ್ದು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ಇಲಾಖೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಜಯಪುರಕ್ಕೆ ಬಂದಿರುವ ಅವರು, ಯತ್ನಾಳ್ ಅವರನ್ನು ವಯಕ್ತಿಕವಾಗಿ ಭೇಟಿ ಮಾಡಲಿದ್ದಾರೆ. ಆದರೆ ಭೇಟಿಯಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ, ರಾಜಕೀಯ ಮಾತುಕತೆ ಇಲ್ಲ ಎಂದಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಯತ್ನಾಳ ಬಹು ಹಿಂದಿನಿಂದಲೇ ಪ್ರಯತ್ನ ನಡೆಸುತ್ತಿದ್ದರೆ ಯೋಗೀಶ್ವರ ಈಚೆಗೆ ಆರಂಭಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ರಾಜ್ಯಕ್ಕೆ ಆಗಮಿಸಿ ಅಹವಾಲು ಆಲಿಸಿ ಹೋಗಿದ್ದಾರೆ. ಕೇವಲ ಒಂದಿಬ್ಬರು ಮಾತ್ರ ಸಿಎಂ ಬದಲಾವಣೆ ವಿಷಯ ಪ್ರಸ್ತಾಪಿಸಿದ್ದಾರೆ. ಉಳಿದಂತೆ ಏನೂ ಸಮಸ್ಯೆ ಇಲ್ಲ ಎಂದು ಹೇಳಿ ಹೋಗಿದ್ದಾರೆ. ಈ ಸಂಬಂಧ ಸುಮಾರು 80 ಪುಟಗಳ ವರದಿಯನ್ನೂ ಹೈಕಮಾಂಡ್ ಗೆ ಸಲ್ಲಿಸಿದ್ದಾರೆ.
ಇದಾದ ಮೇಲೂ ಯೋಗೀಶ್ವರ ತಮ್ಮ ವರ್ತನೆ ಬದಲಿಸಿಲ್ಲ. ನಾವು ಪರೀಕ್ಷೆ ಬರೆದಿದ್ದೇವೆ. ಹೈಕಮಾಂಡ್ ನಿಂದ ಫಲಿತಾಂಶ ಬರಬೇಕಿದೆ ಎಂದಿದ್ದರು. ಇಂದು ಕೂಡ ಇದೇ ಮಾತನ್ನು ಪುನರುಚ್ಛರಿಸಿದ್ದಾರೆ. ಎಕ್ಸಾಂ ಬರೆದಿದ್ದೇವೆ. ಫಲಿತಾಂಶಕ್ಕಾಗಿ ಕಾಯೋಣ ಕಾಯೋಣ ಎಂದಿದ್ದಾರೆ. ಅರುಣ ಸಿಂಗ್ ಬಂದು ಸ್ಪಷ್ಟನೆ ನೀಡಿ ಹೋದ ಬಳಿಕವೂ ಯೋಗೀಶ್ವರ ಪ್ರಯತ್ನ ನಿಂತಿಲ್ಲ. ಮತ್ತೊಮ್ಮೆ ದೆಹಲಿವರೆಗೂ ಹೋಗಿ ಬಂದಿದ್ದಾರೆ.
ಬಹಿರಂಗವಾಗಿಯೇ ಯತ್ನಾಳ್, ಯೋಗೀಶ್ವರ್, ವಿಶ್ವನಾಥ್ ಅಂತವರು ಮುಖ್ಯಮಂತ್ರಿ ವಿರುದ್ಧ ಮಾತನಾಡುತ್ತಿದ್ದರೂ ಬಿಜೆಪಿ ಹೈಕಮಾಂಡ್ ಅವರ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.
ದುರಂತ ಘಟನೆ: ಕೃಷಿಹೊಂಡದಲ್ಲಿ 6 ಜನ ಆತ್ಮಹತ್ಯೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ