ರಾಜಕೀಯದಲ್ಲಿ ಒಂದೇ ನಿಲುವು ತಳೆಯಲು ಸಾಧ್ಯವಿಲ್ಲ ಎಂದ ಕೆಪಿಸಿಸಿ ಅಧ್ಯಕ್ಷ
ನಮಗೆ 224 ಸೀಟ್ ಗೆಲ್ಲುವುದು ಮಹತ್ವ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೇಶದ ಇತಿಹಾಸದಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಪುರಾತನ ಇತಿಹಾಸವಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಡಿಪಾಯ ಗಟ್ಟಿಯಾಗಿದೆ. ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡುವಲ್ಲಿ, ಜನರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಮುಖ್ಯಮಂತ್ರಿಗಳಿಂದ ಹಿಡಿದು ಸಚಿವರವರೆಗೂ ಭ್ರಷ್ಟಾಚಾರ ತಾರಕಕ್ಕೇರಿದೆ. ಸಚಿವರ ಪಿಎಗಳಿಂದ ಹಿಡಿದು ತಾಲೂಕು ಮಟ್ಟದ ತಹಶೀಲ್ದಾರ್ ಕಚೇರಿವರೆಗೂ ಲಂಚಕ್ಕೆ ಬೇಡಿಕೆ ಇಡಲಾಗುತ್ತಿದೆ. ಬಿಜೆಪಿ ಆಡಳಿತಕ್ಕೆ ಜನರು ಹೈರಾಣಾಗಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಕಿತ್ತಾಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದಲ್ಲಿ ಒಂದು ಪದ್ಧತಿಯಿದೆ. ಕೆಪಿಸಿಸಿ ಅಧ್ಯಕ್ಷನಾಗಿ ನಾನು ಯಾರೊಬ್ಬರ ಇಂತಹ ಹೇಳಿಕೆಗಳಿಗೂ ಮಹತ್ವ ಕೊಡಲ್ಲ. ಶಾಸಕ ಜಮೀರ್ ಅಹ್ಮದ್ ಹೇಳಿಕೆಯಿಂದ ಹಿಡಿದು ಸಂಸದ ಡಿ.ಕೆ ಸುರೇಶ್ ಹೇಳಿಕೆವರೆಗೂ ಯಾರೊಬ್ಬರ ಹೇಳಿಕೆಗೂ ಪ್ರತಿಕ್ರಿಯಿಸಲ್ಲ. ಪಕ್ಷದ ಮುಖಂಡರು ವೈಯಕ್ತಿಕ ಅಭಿಪ್ರಾಯಗಳನ್ನು ಕೊಡುವ ಬದಲು ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಿ ಜನರ ಸಂಕಷ್ಟಗಳನ್ನು ಆಲಿಸಿ ಅಭಿವೃದ್ಧಿಯತ್ತ, ಪಕ್ಷ ಸಂಘಟನೆಯತ್ತ ಗಮನಕೊಡಲಿ. ಸಿಎಂ ಅಭ್ಯರ್ಥಿ ವಿಚಾರವಾಗಿ ಯಾರೂ ಮಾತನಾಡಬಾರದು. ಪಕ್ಷವನ್ನು ಅಧಿಕಾರಕ್ಕೆ ತರುವನಿಟ್ಟಿನಲ್ಲಿ ಮಾತ್ರ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ಇನ್ನು ಸಿಎಂ ಬಿಎಸ್ ವೈ ಅವರಿಗೆ 130 ಸೀಟ್ ಮುಖ್ಯವಾಗಿರಬೇಕು. ಆದರೆ ನಮ್ಮ ಟಾರ್ಗೆಟ್ 224 ಕ್ಷೇತ್ರ, ಪ್ರತಿ ಕ್ಷೇತ್ರ, ಪ್ರತಿ ಸಂಖ್ಯೆಯೂ ಮುಖ್ಯವಾಗಿರಬೇಕು. ಹಾಗಾಗಿ ನಮಗೆ 224 ಸೀಟ್ ಗೆಲ್ಲುವುದು ಮಹತ್ವದ್ದಾಗಿದೆ ಎಂದರು.
ಇದೇ ವೇಳೆ ಪಕ್ಷ ಬಿಟ್ಟು ಹೋದವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ರಾಜಕೀಯದಲ್ಲಿ ಒಂದೇ ನಿಲುವು ತಳೆಯಲು ಸಾಧ್ಯವಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಬದಲಿಸಲಾಗುತ್ತದೆ. ಪಕ್ಷಬಿಟ್ಟು ಹೋದವರು ಮರಳಿ ಪಕ್ಷಕ್ಕೆ ಬರಲು ಅವಕಾಶವಿದೆ. ಬಿಟ್ಟುಹೋದವರು ಮೊದಲು ಅರ್ಜಿ ಹಾಕಲಿ. ಅರ್ಜಿ ಹಾಕಿದರೆ ನಂತರ ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳುವ ಮೂಲಕ ಬಾಂಬೆ ಫ್ರೆಂಡ್ಸ್ ಗೆ ಪರೋಕ್ಷ ಸಂದೇಶ ರವಾನಿಸಿದ್ದಾರೆ.
ವಿಜಯೇಂದ್ರ ಹೆಸರಲ್ಲಿ ರಾಜಣ್ಣ ಕುದುರಿಸಿದ್ದ ಡೀಲ್ ಎಷ್ಟಕ್ಕೆ ಗೊತ್ತಾ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ