Latest

ಮಹಾರಾಷ್ಟ್ರದಲ್ಲಿ ಸಬ್ ಕುಚ್ ದೇವೇಂದ್ರ ಫಡ್ನವೀಸ್

ಶ್ಯಾಮ್ ಹಂದೆ
ಮಹಾರಾಷ್ಟ್ರ ವಿಪಕ್ಷ ನೇತಾ ದೇವೇಂದ್ರ ಫಡ್ನವೀಸ್ ಇತ್ತೀಚೆಗೆ  ದೆಹಲಿಗೆ ಹೋಗಿದ್ದರು. ಅವರ ಎರಡು ಭೇಟಿಗಳ ಬಗ್ಗೆ ಎಲ್ಲಿಯೂ ಹೆಚ್ಚು ವರದಿಯಾಗಲಿಲ್ಲ. ಒಂದು- ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಒಂದು ಗಂಟೆ ಭೇಟಿಯಾದದ್ದು , ಮತೊಂದು- ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾಹ ಅವರೊಂದಿಗೆ ಸುಮಾರು ಎರಡು ಗಂಟೆಗಳ  ಕಾಲ  ಚರ್ಚಿಸಿದ್ದು.
ಈ ಎರಡು ಭೇಟಿಗಳಲ್ಲಿ, ಮಹಾರಾಷ್ಟ್ರದ ರಾಜಕೀಯಕ್ಕೆ ಸಂಬಂಧಿಸಿದ ಮುಂದಿನ ಕಾರ್ಯತಂತ್ರ ನಿಶ್ಚಿತವಾಗಿ ಫಿಕ್ಸ್ ಆಗಿರಬಹುದು. ಫಡ್ನವೀಸ್ ಅವರನ್ನು ರಾಷ್ಟ್ರೀಯ ರಾಜಕಾರಣಕ್ಕೆ ಕರೆದೊಯ್ಯಲು ಚಟುವಟಿಕೆಗಳು ನಡೆಯುತ್ತಿವೆ. ಅವರು ನಿಧಾನವಾಗಿ ಬಿಜೆಪಿಯ ಥಿಂಕ್ ಟ್ಯಾಂಕ್‌ನತ್ತ ಸಾಗುತ್ತಿದ್ದಾರೆ. ಅವರ ದೆಹಲಿ ಸುತ್ತಾಟ  ಹೆಚ್ಚಾಗಿದೆ. ವಿವಾದಾತ್ಮಕ ಸಿಡಿಯಿಂದಾಗಿ ಕರ್ನಾಟಕದಲ್ಲಿ ಸಚಿವ ಸ್ಥಾನವನ್ನು ಕಳಕೊಂಡು ತೀವ್ರ ಅಸಮಾಧಾನಗೊಂಡಿರುವ ರಮೇಶ್ ಜಾರಕಿಹೊಳಿ ಇತ್ತೀಚೆಗೆ ಮುಂಬೈಗೆ ಬಂದು ಫಡ್ನವೀಸ್ ಅವರನ್ನು ಭೇಟಿಯಾಗಿದ್ದರು. ಅಲ್ಲದೇ ಫಡ್ನವೀಸ್ ನನ್ನ ಗಾಡ್ ಫಾದರ್ ಎಂದು ಹೇಳಿದರು.
ಬಿಹಾರದ ಶಹನ್ ವಾಜ್ ಹುಸೇನ್ ಕೂಡ ಇತ್ತೀಚೆಗೆ ಅವರನ್ಬು ಮುಂಬೈಗೆ ಬಂದು ಭೇಟಿಯಾಗಿದ್ದರು. ಕೇಂದ್ರ ಸಚಿವ ಸಂಪುಟದ ವಿಸ್ತರಣೆ ಹಿನ್ನೆಲೆಯಲ್ಲಿ  ಫಡ್ನವೀಸ್ ಕೇಂದ್ರಕ್ಕೆ ಹೋಗುತ್ತಾರೆಯೇ ಎಂಬುದರ ಬಗ್ಗೆ ಚರ್ಚೆ ಕಾವೇರಿತ್ತು.ಆದರೆ ಫಡ್ನವೀಸ್ ರಾಜ್ಯದಲ್ಲಿ  ಇಲ್ಲದಿದ್ದರೆ ಬಿಜೆಪಿಗೆ ಎಲ್ಲಿ ದುರವಸ್ಥೆ ಆಗಬಹುದೋ ಎಂಬ ಏಕೈಕ ಚಿಂತೆ ಅವರನ್ನು ದೆಹಲಿಗೆ ಹೋಗಲು  ತಡೆಯುತ್ತಿದೆ.  ಮಹಾರಾಷ್ಟ್ರದ ಬಿಜೆಪಿಯಲ್ಲಿ, ಪ್ರಸ್ತುತ ಫಡ್ನವೀಸ್ ಅವರಿಗೆ ಓನ್ಲಿ ಫಡ್ನವೀಸ್ ಮಾತ್ರ ಪರ್ಯಾಯವಾಗಿದ್ದಾರೆ. ಮೂರು ಪಕ್ಷಗಳೊಂದಿಗಿನ ಸಮರಕ್ಕೆ ರಾಜ್ಯ ಬಿಜೆಪಿಗೆ  ಅವರ ಅಗತ್ಯವಿದೆ.
ಪ್ರಸ್ತುತ ಪರಿಸ್ಥಿತಿಯಿಂದ ಬಿಜೆಪಿ ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರು ಕೂಡ ಗೊಂದಲಕ್ಕೊಳಗಾಗಿದ್ದಾರೆ. ಅನಿಲ್ ದೇಶಮುಖ್ ಅವರ ಇಡಿ ತನಿಖೆ, ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಸಾರಿಗೆ ಸಚಿವ ಅನಿಲ್ ಪರಬ್ ಅವರ ಸಿಬಿಐ ತನಿಖೆಗಾಗಿ, ನೇರವಾಗಿ ಅಮಿತ್ ಶಾಹ ಅವರ ಹತ್ತಿರ ಪ್ರದೇಶ ಬಿಜೆಪಿಯಿಂದ ಪತ್ರ ಬರೆದು ಕೋರಿಕೆ ಮಾಡಲಾದ ಹಿನ್ನೆಲೆಯಲ್ಲಿ ಬಿಜೆಪಿ ಶ್ರೇಷ್ಠಿಗಳಿಂದ ಎನ್ ಸಿಪಿ ಮತ್ತು ಶಿವಸೇನೆಗೆ  ಪಾಠ ಸಿಗಬಹುದು. ಹಿಂದೊಮ್ಮೆ ಸಚಿವ ಧನಂಜಯ್ ಮುಂಡೆ ಅವರ ಸುಲಭದ ಕ್ಯಾಚ್ ಬಿಟ್ಟರು.  ಭವಿಷ್ಯದಲ್ಲಿ  ಈಗ ಯಾರೂ ಕ್ಯಾಚ್ ಬಿಡಲು  ಬಯಸಲಿಕ್ಕಿಲ್ಲ ಎಂದು ತೋರುತ್ತದೆ. ಈಗ ಯಾವುದೇ ಪಕ್ಷಕ್ಕೆ ಸರ್ಕಾರ ಸ್ಥಾಪಿಸಲು ಸೆಟಿಂಗ್  ಮಾಡಬಾರದು. ಮೈತ್ರಿಕೂಟದಲ್ಲಿರುವ ಈ ಎರಡು ಪಕ್ಷಗಳಲ್ಲಿ ಯಾರಾದರೂ ಬಿಜೆಪಿಯೊಂದಿಗೆ ಸರ್ಕಾರ ರಚಿಸಲು ಬಯಸಿದರೆ, ಅವರು ಮೊದಲು ಸರ್ಕಾರದಿಂದ ಹೊರಬರಬೇಕು, ನಂತರ ನಾವು ಸರ್ಕಾರ ರಚಿಸುವುದನ್ನು ನೋಡುತ್ತೇವೆ. ಕೇಂದ್ರದಲ್ಲಿರುವ ತನಿಖಾ ಸಂಸ್ಥೆಯವರು ಸುಲಭ ಟಾರ್ಗೇಟ್ ಹೊಂದಿರುವ ಸಚಿವರನ್ನು ಸುತ್ತುವರಿಯುತ್ತಾರೆ , ಯಾರೂ ಮಧ್ಯ  ಪ್ರವೇಶಿಸದಿರಿ ಎಂದು ರಾಜ್ಯದ ಬಿಜೆಪಿ ಮುಖಂಡರಿಗೆ ದೆಹಲಿಯಿಂದ ಎಚ್ಚರಿಕೆ ನೀಡಲಾಗಿರುವ ಸಂಗತಿ ತಿಳಿದುಬಂದಿದೆ. ಯಾವುದೊಂದು ಪಕ್ಷದೊಂದಿಗೆ ಅಧಿಕಾರದ ಸಂಸಾರ ಮಾಡುವುದಕ್ಕಿಂತ ರಾಜ್ಯದಲ್ಲಿ  ರಾಷ್ಟ್ರಪತಿ ಆಡಳಿತ ಮತ್ತು ನಂತರ ರಾಜ್ಯದಲ್ಲಿ ಮಧ್ಯಕಾಲೀನ ಚುನಾವಣೆಯ ಸ್ಥಿತಿ ಸೃಷ್ಟಿಸುವುದು ಬಿಜೆಪಿಯ ಭವಿಷ್ಯದಲ್ಲಿ ಪ್ಲಾನ್ ತೋರುತ್ತದೆ.
ಅಡ್ಡ ಮಾರ್ಗದಿಂದ ಬಂದ ಹಣ ಕಂಪೆನಿಗಳಿಗೆ ಹವಾಲಾ ಮೂಲಕ ಕಳುಹಿಸಿದ ನಂತರ ಅದನ್ನು ತಮ್ಮ ಸಂಸ್ಥೆಗಳಿಗೆ ದೇಣಿಗೆಯೆಂದು ತಿರುಗಿಸುವ ಮೋಡಸ್ ಒಪೆರಾಂಡಿ ಬಳಸುವ ಇಬ್ಬರು ಮಂತ್ರಿಗಳ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಅನೇಕ ರಾಜಕಾರಣಿಗಳು ಈ ತಂತ್ರವನ್ನು ಇಲ್ಲಿಯವರೆಗೆ ಬಳಸಿದ್ದಾರೆ. ಆದರೆ ನಮ್ಮಲ್ಲಿ ಸಿಕ್ಕಿಬಿದ್ದವನು ಕಳ್ಳ, ಉಳಿದವರು ಸಾಧುಗಳು. ದಯವಿಟ್ಟು ನಮ್ಮನ್ನು ಕೇಂದ್ರ ತನಿಖಾ ಸಂಸ್ಥೆಯಿಂದ ರಕ್ಷಿಸಿ ಎಂದು ಕೆಲವರು ಇತ್ತೀಚೆಗೆ ಫಡ್ನವೀಸ್ ಅವರ ಸಾಗರ್ ಬಂಗಲೆಯ ಪರಿಸರದಲ್ಲಿ ಕಂಡು ಬರುತಿದ್ದಾರೆ.
 ‘ಸಾಗರ್’ ಬಂಗ್ಲೆಯ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದರೆ ಆಘಾತಕಾರಿ ಹೆಸರುಗಳು ಬಯಲಿಗೆ ಬರಬಹುದು. ಕಳೆದ ವಾರ ತನ್ನ ಸ್ವಂತ ವಸತಿ ನಿರ್ಮಾಣ ಉಳಿಸಲು ಓರ್ವ ಸಚಿವ ಎರಡು ಗಂಟೆಗಳ ಕಾಲ ಫಡ್ನವೀಸ್ ಅವರನ್ನು ಭೇಟಿಯಾದ ಸುದ್ದಿ ಇದೆ. ಫಡ್ನವೀಸ್ ಯಾರನ್ನೂ ಕಾಪಾಡುವ ಗೋಜಿಗೆ ಹೋಗುವುದಿಲ್ಲ .ಆದ್ದರಿಂದಲೇ ಅವರ ಬಗ್ಗೆ ಜನರು ಭಯಪಡುತ್ತಾರೆ.
ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಮೇಲೆ ಬಿಜೆಪಿಗೆ ಸದ್ಯ ಯಾವುದೇ ಮೋಹವಿಲ್ಲ. ಕಾರಣ ಬೆಳಿಗ್ಗೆ ಒಮ್ಮೆ ಅವರು ಬಿಜೆಪಿಯ ಪ್ರಿಯಕರರಾಗಿದ್ದರು. ಆದರೆ ಈಗ ಸಂದರ್ಭ ಬದಲಾಗಿದೆ. ಅಜಿತ್ ಪವಾರ್ ಈಗ  ಬೆಳಿಗ್ಗೆ ರಾಜ್ ಭವನಕ್ಕೆ ಮರಳುವ ಸಾಧ್ಯತೆ ಇಲ್ಲ. ಅನಿಲ್ ದೇಶ್ಮುಖ್ ಸಹಿತ, ಇತರ ಕೆಲವು ನಾಯಕರ “ಮನಿ ಟ್ರೇಲ್” ಇಡಿಯ ಕೈಗೆ ಸಿಕ್ಕಿರುವ ಮಾಹಿತಿ ಇದೆ. ಅದರಿಂದ ಎನ್‌ಸಿಪಿ ಮತ್ತು ಶಿವಸೇನೆ ಸಚಿವರನ್ನು ಚಕ್ರವ್ಯೂಹದಲ್ಲಿ ಸುತ್ತುವರಿಯ ಸಾಧ್ಯತೆ ಇದೆ. ಬಿಜೆಪಿಗೆ ಈ ವಿಷಯ ತಿಳಿಯುತ್ತಲೇ  ಅಮಿತ್ ಶಾಹಗೆ ನೇರವಾಗಿ ಪತ್ರ ಬರೆಯಲಾಗಿದೆ. ಈಗ ಶಾಹ ಖಂಡಿತವಾಗಿಯೂ ತಮ್ಮ ಪಕ್ಷದ ರಾಜ್ಯ ಕಾರ್ಯಕಾರಿಣಿ ಮಾಡಿದ ಬೇಡಿಕೆಯನ್ನು ಕಸದ ಬುಟ್ಟಿಗಂತೂ ಎಸೆಯಲಿಕ್ಕಿಲ್ಲ. ಎಲ್ಲ ವಿಷಯ ನಿರ್ಧರಿಸಿಯೇ ಮಾಡಿದಂತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button