ಪ್ರಗತಿವಾಹಿನಿ ಸುದ್ದಿ, ಧಾರವಾಡ
ಧಾರವಾಡದಲ್ಲಿ ಮಂಗಳವಾರ ಮಧ್ಯಾಹ್ನ ಬಹುಮಹಡಿ ಕಟ್ಟಡ ಕುಸಿತಕ್ಕೆ ಕಾರಣ ಕೇವಲ ಕಳಪೆ ಕಾಮಗಾರಿಯಲ್ಲ, ಬದಲಾಗಿ ಎಲ್ಲ ನಿಯಮಾವಳಿಗಳನ್ನೂ ಗಾಳಿಗೆ ತೂರಲಾಗಿದೆ ಎನ್ನಲಾಗುತ್ತಿದೆ.
ಕಟ್ಟಡ ಕುಸಿತದಲ್ಲಿ ಈವರೆಗೆ ಇಬ್ಬರು ಸಾವನ್ನಪ್ಪಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ. ಅವಶೇಷಗಳ ಅಡಿಯಲ್ಲಿ ಇನ್ನೆಷ್ಟು ಜನರು ಇದ್ದಾರೆ ಎನ್ನುವುದು ಗೊತ್ತಾಗಿಲ್ಲ. 50ಕ್ಕೂ ಹೆಚ್ಚು ಜನರು ಸಿಲುಕಿರಬಹುದು ಎಂದೂ ಹೇಳಲಾಗುತ್ತಿದೆ.
ಈ ಕಟ್ಟಡಕ್ಕೆ ಬಳಸಲಾದ ಸಾಮಗ್ರಿಗಳು ಕಳಪೆ ಗುಣಮಟ್ಟದ್ದಾಗಿದ್ದು, ಕಾಮಗಾರಿ ಸಂಪೂರ್ಣ ಕಳಪೆಯಾಗಿತ್ತು ಎನ್ನುವ ಆರೋಪ ಕೇಳಿ ಬಂದಿದೆ.
ಇದರ ಜೊತೆಗೆ ಕಟ್ಟಡ ಪರವಾನಿಗೆಗೆ ನೀಡಲಾದ ಯಾವು ನಿಯಮವನ್ನೂ ಪಾಲಿಸಿಲ್ಲ ಎಂದು ಹೇಳಲಾಗುತ್ತಿದೆ. 4 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಮಾತ್ರ ಅನುಮತಿ ನೀಡಲಾಗಿದ್ದು, ಈಗಾಗಲೆ 5 ಅಂತಸ್ತನ್ನು ಪೂರ್ಣಗೊಳಿಸಿ 6ನೇ ಅಂತಸ್ತನ್ನು ನಿರ್ಮಿಸಲಾಗುತ್ತಿದೆ.
ಕಟ್ಟಡಕ್ಕೆ ನಿಯಮಾವಳಿ ಪ್ರಕಾರ ಸೆಟ್ ಬ್ಯಾಕ್ ಬಿಟ್ಟಿಲ್ಲ. ಇದಕ್ಕಿಂತ ಮುಖ್ಯವಾಗಿ ಕಟ್ಟಡದ ಕಂಪ್ಲೀಶನ್ ಸರ್ಟಿಫಿಕೇಟ್ ಪಡೆಯದೆ, ನಿರ್ಮಾಣ ಹಂತದಲ್ಲಿರುವಾಗಲೇ ಬಳಕೆಗೆ ನೀಡಲಾಗಿದೆ. ಮೇಲ್ಗಡೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವಾಗಲೆ ನೆಲಮಹಡಿ ಮತ್ತು ಮೊದಲ ಮಹಡಿಯನ್ನು ಬಾಡಿಗೆಗೆ ನೀಡಲಾಗಿದೆ. ಇದು ಸ್ಪಷ್ಟವಾಗಿ ನಿಯಮಗಳ ಉಲ್ಲಂಘನೆಯಾಗಿದೆ.
ಈ ಕಟ್ಟಡಕ್ಕೆ 4-5 ಜನ ಪಾಲುದಾರರಿದ್ದು, ಅವರಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಮಾವ (ಹೆಂಡತಿಯ ತಂದೆ) ಸವದತ್ತಿಯ ಶಿಂತ್ರಿ ಕೂಡ ಒಬ್ಬರು. ಶಿಂತ್ರಿ ಸವದತ್ತಿ ಶಾಸಕ ಆನಂದ ಮಾಮನಿಯವರ ಸೋದರ ಮಾವ ಕೂಡ ಎನ್ನಲಾಗಿದೆ.
ಕಟ್ಟಡದ ಪರವಾನಿಗೆ ನೀಡುವಾಗ ವಿಧಿಸಲಾದ ಎಲ್ಲ ನಿಯಮಾವಳಿಗಳನ್ನೂ ಉಲ್ಲಂಘಿಸಿ ಕಟ್ಟಿರುವುದು ದುರಂತಕ್ಕೆ ಪ್ರಮುಖ ಕಾರಣವೆನ್ನಲಾಗಿದೆ.
ರಾಜಕೀಯ ಪ್ರಭಾವಕ್ಕೆ ಮಣಿಯದೆ ಪ್ರಕರಣದ ಸಮಗ್ರ ತನಿಖೆ ನಡೆಸಿದಲ್ಲಿ ಎಲ್ಲ ವಿಷಯ ಬೆಳಕಿಗೆ ಬರಬಹುದು.
ಈ ಲಿಂಕ್ ಗಳ ಸುದ್ದಿಗಳನ್ನೂ ಓದಿ:
ಧಾರವಾಡದಲ್ಲಿ ಬಹುಮಹಡಿ ಕಟ್ಟಡ ಕುಸಿತ
ಧಾರವಾಡ: ಲೆಕ್ಕಕ್ಕೆ ಸಿಗದ ಕಟ್ಟಡದ ಅಡಿ ಸಿಲುಕಿದವರ ಸಂಖ್ಯೆ
ಧಾರವಾಡ ಕಟ್ಟಡ ಕುಸಿತದ ವೀಡಿಯೋ ದೃಷ್ಯಗಳು
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಎಲ್ಲ ಗ್ರುಪ್ ಗಳಿಗೆ ಶೇರ್ ಮಾಡಿ)




