ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕೋವಿಡ್-೧೯ ರ ೨ ನೇ ಅಲೆ ಹಿನ್ನೆಲೆಯಲ್ಲಿ, ವಿದ್ಯುತ್ ಮಗ್ಗ ಘಟಕಗಳಲ್ಲಿನ ನೇಕಾರರಿಗೆ ತಲಾ ರೂ. ೩, ೦೦೦ ಗಳಂತೆ ಪರಿಹಾರ ಧನವನ್ನು ನೇರ ನಗದು ನಿರ್ವಹಣೆ (ಡಿ. ಬಿ. ಟಿ) ಮೂಲಕ ಜಮಾ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಕೈ ಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಕೋವಿಡ್-೧೯ ರ ೨ ನೇ ಅಲೆಯಿಂದ ಲಾಕ್ಡೌನ್ ಘೋಷಣೆ ಮಾಡಿದ್ದು, ಇದರಿಂದ ಬಾದಿತವಾದ ವಿದ್ಯುತ್ ಮಗ್ಗ ಘಟಕಗಳಲ್ಲಿನ ನೇಕಾರರು ಹಾಗೂ ಮಗ್ಗಪೂರ್ವ ಚಟುವಟಿಕೆಗಳಾದ ಟ್ವಿಸ್ಟಿಂಗ್, ವೈಂಡಿಂಗ್ ಯಾರ್ನಡೈಯಿಂಗ್, ವಾರ್ಪಿಂಗ್, ಝರಿ ವೈಂಡಿಂಗ್ ಮತ್ತು ವಾರ್ಪಿಂಗ್, ವಾರ್ಪ ನಾಟಿಂಗ್ ಹಾಗೂ ಸೈಜಿಂಗ್ ಕೆಲಸಗಾರರಿಗೆ ತಲಾ ರೂ. ೩, ೦೦೦ ಗಳಂತೆ ಪರಿಹಾರವನ್ನು ನೇರ ನಗದು ನಿರ್ವಹಣೆ ಮೂಲಕ ಜಮಾ ಮಾಡಲಾಗುವುದು.
ಈಗಾಗಲೇ ಕಳೆದ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಪರಿಹಾರ ಧನ ಪಡೆದ ಫಲಾನುಭವಿಗಳಿಗೆ ನೇರ ನಗದು ನಿರ್ವಹಣೆ (ಡಿ. ಟಿ. ಬಿ) ಮೂಲಕ ರೂ. ೩,೦೦೦ ಗಳ ಪರಿಹಾರ ಧನವನ್ನು ಜಮಾ ಮಾಡಲಾಗುವುದು.
ಕಳೆದ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಪರಿಹಾರ ಧನ ಜಮಾ ಆಗದೇ ಇರುವ ಫಲಾನುಭವಿಗಳು ನೇರ ನಗದು ನಿರ್ವಹಣೆ (ಡಿ. ಬಿ. ಟಿ) ಮೂಲಕ ಪ್ರಸಕ್ತ ಸಾಲಿನ ಪರಿಹಾರ ಧನ ರೂ. ೩,೦೦೦ ಗಳನ್ನು ಜಮಾ ಮಾಡಲು ತಮ್ಮ ಬ್ಯಾಂಕ್ ಖಾತೆಯು ಕಡ್ಡಾಯವಾಗಿ ಆಧಾರ್ ಸಂಖ್ಯೆ ಜೋಡಣೆ, ಇ-ಕೆವಾಯ್ಸಿ ಮಾಡಿಸಿಕೊಳ್ಳಬೇಕು ಹಾಗೂ ಖಾತೆ ಚಾಲನೆಯಲ್ಲಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು.
ಕಳೆದ ಸಾಲಿನಲ್ಲಿ ಅರ್ಜಿ ಸಲ್ಲಿಸದೇ ಇರುವ ವಿದ್ಯುತ್ ಮಗ್ಗ ಘಟಕ ಹಾಗೂ ಮಗ್ಗ ಪೂರ್ವ ಚಟುವಟಿಕೆ ಮಾಡುವ ಘಟಕಗಳ ಮಾಲೀಕರು, ನೇಕಾರ/ ಕೆಲಸಗಾರರ ವಿವರಗಳನ್ನು ಕಳೆದ ಸಾಲಿನ ಅರ್ಜಿ ನಮೂನೆಯಂತೆ ಲೆಟರ್ ಹೆಡ್/ ಬಾಂಡ್ ಪೇಟರ್/ ಸಾಮಾನ್ಯ ಕಾಗದದಲ್ಲಿ ದೃಢೀಕರಣ ಪತ್ರ ನೀಡಿ ಆಧಾರ್ ಕಾರ್ಡ್ ಮತ್ತು ಸಮ್ಮತಿ ಪತ್ರ, ವಿದ್ಯುತ್ ಬಿಲ್ಲಿನ ಪ್ರತಿ, ಉದ್ಯೋಗ ಆಧಾರ/ ಪಿಎಂಟಿ, ಆಧಾರ್ ನಂಬರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ನಕಲು ಪ್ರತಿ ಲಗತ್ತಿಸುವುದು.
ಯಾವುದೇ ಮಧ್ಯವರ್ತಿಗಳನ್ನು ಸಂಪರ್ಕಿಸದೇ ನೇರವಾಗಿ ಉಪ ನಿರ್ದೇಶಕರ ಕಛೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ ಜಿಲ್ಲಾ ಪಂಚಾಯತ್, ಬೆಳಗಾವಿ ಕಛೇರಿಗೆ ಜು. ೩೧ ರ ಒಳಗಾಗಿ ಅರ್ಜಿಗಳನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂ. ೦೮೩೧-೨೯೫೦೬೭೪ ಗೆ ಸಂಪರ್ಕಿಸಿ ಎಂದು ಜಿಲ್ಲಾ ಪಂಚಾಯತ್ ಕೈ ಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ