ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಶೈಕ್ಷಣಿಕ ಪ್ರವಾಸದ ವೇಳೆ ವೈರಲ್ ಫೀವರ್ ಗೆ ತುತ್ತಾಗಿ ಶಿಕ್ಷಕರ ನಿರ್ಲಕ್ಷದಿಂದ ಹಾಸಿಗೆ ಹಿಡಿದಿದ್ದ 29 ವರ್ಷದ ಬೆಂಗಳೂರು ಯುವತಿಗೆ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ತಿಳಿಸಿದೆ.
ಬೆಂಗಳೂರು ಮೂಲದ ಯುವತಿ ಅಕ್ಷತಾ ಶೈಕ್ಷಿಣಿಕ ಪ್ರವಾಸಕ್ಕೆ ತೆರಳಿದ್ದ ವೇಳೆ ವೈರಲ್ ಜ್ವರ ಕಾಣಿಸಿಕೊಂಡಿತ್ತು. ಅದರಿಂದ ಆಕೆ ತೀವ್ರ ಅಸ್ವಸ್ಥಳಾಗಿ ಹಾಸಿಗೆ ಹಿಡಿದಿದ್ದಳು. ಇದೀಗ ಸುಪ್ರೀಂ ಕೋರ್ಟ್ ಅಕ್ಷತಾಗೆ 88 ಲಕ್ಷ ಪರಿಹಾರ ನೀಡುವಂತೆ ಆದೇಶ ನೀಡಿದೆ.
ಪ್ರವಾಸಕ್ಕೆ ಕರೆದೊಯ್ದಿದ್ದ ಅಧ್ಯಾಪಕರ ತೀವ್ರ ನಿರ್ಲಕ್ಷ್ಯದಿಂದ ಅಕ್ಷತಾ ಅವರು ಹಾಸಿಗೆ ಹಿಡಿಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ನ್ಯಾ. ನವೀನ್ ಸಿನ್ಹಾ ಮತ್ತು ನ್ಯಾ. ಸುಭಾಷ್ ರೆಡ್ಡಿ ಅವರಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಬೆಂಗಳೂರಿನ ಬಿಎನ್ಎಂ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಅಕ್ಷತಾಳನ್ನು 2006ರ ಡಿಸೆಂಬರ್ನಲ್ಲಿ ಶಾಲೆಯ ವತಿಯಿಂದ ಪ್ರವಾಸಕ್ಕೆ ಕರೆದೊಯ್ಯಲಾಗಿತ್ತು. ಆ ಸಂದರ್ಭದಲ್ಲಿ ಅಕ್ಷತಾಗೆ ತೀವ್ರ ಜ್ವರ ಕಾಣಿಸಿಕೊಂಡಿತು. ತಕ್ಷಣ ಚಿಕಿತ್ಸೆ ಕೊಡಿಸದೇ ಶಿಕ್ಷಕರು ನಿರ್ಲಕ್ಷ್ಯವಹಿಸಿದ್ದರು.
ವಿಷಯ ತಿಳಿದ ಪೋಷಕರು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ವೈರಲ್ ಜ್ವರವು ಗಂಭೀರ ಸ್ವರೂಪದ ‘ಮೆನಿಂಗೊಎನ್ಸಿಫೆಲಾಟಿಸ್’ ಎಂಬ ಕಾಯಿಲೆಯಾಗಿ ಪರಿವರ್ತನೆಯಾಗಿತ್ತು.
ದೆಹಲಿಯಲ್ಲಿ 53 ದಿನಗಳವರೆಗೆ ಚಿಕಿತ್ಸೆ ಪಡೆದ ಅಕ್ಷತಾಳನ್ನು ಏರ್ಲಿಫ್ಟ್ ಮೂಲಕ ಬೆಂಗಳೂರಿಗೆ ಕರೆತರಲಾಯಿತು. ಕಾಯಿಲೆಯಿಂದ ಅಕ್ಷತಾ 21 ತಿಂಗಳ ಮಗುವಿನ ಬುದ್ಧಿಮತ್ತೆಗೆ ತಲುಪಿದ್ದು, ಜೀವನಪೂರ್ತಿ ಹಾಸಿಗೆಯಲ್ಲಿ ಕಳೆಯುವಂತಾಗಿದೆ. ವೈರಲ್ ಜ್ವರಕ್ಕೆ ತುತ್ತಾಗಿದ್ದ ಯುವತಿಗೆ ತಕ್ಷಣ ಚಿಕಿತ್ಸೆ ನೀಡದ ಪರೀನಾಮ ಗಂಭೀರ ಅನಾರೋಗ್ಯಕ್ಕೆ ತುತ್ತಾಗಬೇಕಾಯಿತು ಎಂದು ಪೋಷಕರು ಕರ್ನಾಟಕ ರಾಜ್ಯ ಗ್ರಾಹಕರ ವೇದಿಕೆಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದೀದ ಸುಪ್ರೀಂ ಕೋರ್ಟ್ ಅಕ್ಷತಾಗೆ 88 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ತೀರ್ಪು ಪ್ರಕಟಿಸಿದೆ.
ಮಹಿಳಾ ಇನ್ಸ್ ಪೆಕ್ಟರ್ ಸೇರಿ ಮೂವರ ಪೊಲೀಸರ ವಿರುದ್ಧ ಎಫ್ ಐ ಆರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ