ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಕುರಿತು ವಿಶೇಷ ಪ್ರೀತಿ ಹೊಂದಿದ್ದರು. ಹಾಗಾಗಿಯೇ ಅವರ ಸಂಪುಟದಲ್ಲಿ ನಾಲ್ವರಿಗೆ ಸಚಿವಸ್ಥಾನ ನೀಡಲಾಗಿತ್ತು. ಜೊತೆಗೆ 10ಕ್ಕೂ ಹೆಚ್ಚು ಜನರಿಗೆ ಬೇರೆ ಬೇರೆ ಹುದ್ದೆ ನೀಡಲಾಗಿತ್ತು.
ಬೆಳಗಾವಿ ಜಿಲ್ಲೆಯ ಲಕ್ಷ್ಮಣ ಸವದಿಗೆ ಉಪಮುಖ್ಯಮಂತ್ರಿ ಸ್ಥಾನ, ಉಮೇಶ ಕತ್ತಿ, ಶಶಿಕಲಾ ಜೊಲ್ಲೆ, ಶ್ರೀಮಂತ ಪಾಟೀಲ ಅವರಿಗೆ ಮಂತ್ರಿಸ್ಥಾನ ನೀಡಲಾಗಿತ್ತು.
ಜೊತೆಗೆ, ಶಂಕರಗೌಡ ಪಾಟೀಲ ಅವರಿಗೆ ದೆಹಲಿ ಪ್ರತಿನಿಧಿ ಸ್ಥಾನ, ಆನಂದ ಮಾಮನಿಗೆ ವಿಧಾನಸಭೆ ಉಪಾಧ್ಯಕ್ಷ ಸ್ಥಾನ, ಪಿ.ರಾಜೀವ, ದುರ್ಯೋಧನ ಐಹೊಳೆ, ಮಹೇಶ ಕುಮಟಳ್ಳಿಗೆ ನಿಗಮ ಮಂಡಳಿ ಸ್ಥಾನ, ಮಹಾಂತೇಶ ಕವಟಗಿಮಠ ಅವರಿಗೆ ವಿಧಾನಪರಿಷತ್ ಸಚೇತಕ ಸ್ಥಾನ ನೀಡಲಾಗಿತ್ತು.
2006ರಲ್ಲಿ ಯಡಿಯೂರಪ್ಪ ಉಪಮುಖ್ಯಮಂತ್ರಿಯಾದಾಗಿನಿಂದಲೂ ಬೆಳಗಾವಿ ಬಗೆಗೆ ವಿಶೇಷ ಪ್ರೀತಿ ಹೊಂದಿದ್ದಾರೆ. ಸುವರ್ಣ ವಿಧಾನಸೌಧ ನಿರ್ಮಾಣ, ವಿಶ್ವಕನ್ನಡ ಸಮ್ಮೇಳನ ಆಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಬೆಳಗಾವಿಗೆ ನೀಡಿದ್ದರು. ಅವರಿಂದಲೇ ಬೆಳಗಾವಿ ಅಭಿವೃದ್ಧಿಗೆ ಹೆಚ್ಚಿನ ಅವಕಾಶ ಸಿಕ್ಕಿತ್ತು.
2008ರಲ್ಲಿ ಅವರು ಮುಖ್ಯಮಂತ್ರಿಯಾಗಬೇಕಾದರೆ ಬೆಳಗಾವಿಯ ಉಮೇಶ ಕತ್ತಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲ (ಆಪರೇಶನ್ ಕಮಲದ ಮೂಲಕ) ಪಡೆದಿದ್ದರು. ಈ ಬಾರಿ ಮುಖ್ಯಮಂತ್ರಿಯಾಗುವಾಗ ರಮೇಶ ಜಾರಕಿಹೊಳಿ ಮತ್ತು ಅವರ ಟೀಮ್ ಬೆಂಬಲ ಸಿಕ್ಕಿತ್ತು. ಹಾಗಾಗಿ ಬೆಳಗಾವಿ ಬಗೆಗೆ ಯಡಿಯೂರಪ್ಪಗೆ ಹೆಚ್ಚಿನ ಪ್ರೀತಿ ಇತ್ತು.
ಈಗ ಯಡಿಯೂರಪ್ಪ ಜೊತೆಗೆ ಅವರ ಸಂಪುಟದ ಎಲ್ಲ ಸಚಿವರೂ ಅಧಿಕಾರ ಕಳೆದುಕೊಂಡಿದ್ದಾರೆ. ಹೊಸದಾಗಿ ಬರಲಿರುವ ಮುಖ್ಯಮಂತ್ರಿ ಹೊಸದಾಗಿ ಸಂಪುಟ ರಚಿಸಲಿದ್ದಾರೆ. ಹಾಗಾಗಿ ಹೊಸ ಸಂಪುಟದಲ್ಲಿ ಬೆಳಗಾವಿಯ ಯಾರ್ಯಾರಿಗೆ ಸ್ಥಾನ ಸಿಗಲಿದೆ ಎನ್ನುವ ಕುತೂಹಲ ಮೂಡಿದೆ.
ಪ್ರಾಥಮಿಕ ಮಾಹಿತಿಯಂತೆ ಬೆಳಗಾವಿಯಿಂದ ಹೊಸದಾಗಿ ಬಾಲಚಂದ್ರ ಜಾರಕಿಹೊಳಿ ಮತ್ತು ಅಭಯ ಪಾಟೀಲ ಸೇರ್ಪಡೆಯಬಹುದು ಎನ್ನಲಾಗುತ್ತಿದೆ. ಹಿಂದಿನ ಅವಧಿಯಲ್ಲಿ ಉತ್ತಮ ಸಾಧನೆ ತೋರಿರುವ ಶಶಿಕಲಾ ಜೊಲ್ಲೆ ಹಾಗೂ ಲಕ್ಷ್ಮಣ ಸವದಿಯನ್ನು ಕೈಬಿಡುವ ಸಾಧ್ಯತೆ ಕಡಿಮೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ