ಪ್ರಗತಿವಾಹಿನಿ ಸುದ್ದಿ; ತೆಲಸಂಗ: ವಿಜಯಪುರದಿಂದ ತೆಲಸಂಗ ಮಾರ್ಗವಾಗಿ ಬೆಳಗಾವಿಗೆ ತೆರಳುತ್ತಿದ್ದ ಚಿಕ್ಕೋಡಿ ವಿಭಾಗದ ಅಥಣಿ ಡಿಪೊ ಬಸ್ಸಿನಲ್ಲಿ ಗ್ರಾಮಕ್ಕೆ ಆಗಮಿಸುತ್ತಿದ್ದ ವಿದ್ಯಾರ್ಥಿನಿಗೆ, ಕಂಡೆಕ್ಟರ್ ಅಮೋಘ ಪೂಜಾರಿ ಪಾಸ್ ಅನುಮತಿ ಇಲ್ಲವೆಂದು ಹೇಳಿ ಬಸ್ ನಿಂದ ಇಳಿಸಿದ ಪರಿಣಾಮ ಗ್ರಾಮಸ್ಥರು ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯಪುರದ ಹೊರವಲಯದಲ್ಲಿ ವಿದ್ಯಾರ್ಥಿಗಳನ್ನು ಬಸ್ಸಿಂದ ಇಳಿಸಿ ಬಂದಿದ್ದಕ್ಕೆ, ಗ್ರಾಮಸ್ಥರು ಗ್ರಾಮದಲ್ಲಿ ಬಸ್ಸ್ ತಡೆದು ನಿರ್ವಾಹಕ ಅಮೋಘನ ಬೆವರಿಳಿಸಿದ್ದಾರೆ.
ಬಸ್ಸಿಂದ ಇಳಿಸಿ ಹೋದ ತಕ್ಷಣ ವಿದ್ಯಾರ್ಥಿನಿ ಪಾಲಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ವಿಷಯ ತಿಳಿದ ಪಾಲಕರು ತೆಲಸಂಗ ಬಸ್ಸ್ ನಿಲ್ದಾಣದಲ್ಲಿ ಬಸ್ಸು ಬರುತ್ತಿದ್ದಂತೆ ತಡೆದು, ನಿರ್ವಾಹಕನನ್ನು ಪ್ರಶ್ನಿಸಿದ್ದಾರೆ. ಮೊದಮೊದಲು ವಿದ್ಯಾರ್ಥಿಗಳ ಪಾಸ್ಗೆ ಅನುಮತಿ ಇಲ್ಲವೆಂದು ಹೇಳಿ ಜಾರಿಕೊಳ್ಳಲೆತ್ನಿಸಿದ್ದಾನೆ. ಸ್ಥಳದಲ್ಲಿದ್ದ ಸ್ಥಳಿಯ ಸಾರಿಗೆ ನಿಯಂತ್ರಕ ಪಿ.ಎ.ಬೋಸಲೆ ಮಧ್ಯ ಪ್ರವೇಶಿಸಿ, ಅನುಮತಿ ಇಲ್ಲವೆಂದು ಏಕೆ ಸುಳ್ಳು ಹೇಳುತ್ತಿ. ನಿಮ್ಮಂತವರಿಂದಲೇ ಸಂಸ್ಥೆಗೆ ಕೆಟ್ಟ ಹೆಸರು
ಬರುತ್ತಿದೆ ಎಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ತಪ್ಪೊಪ್ಪಿಕೊಂಡಿದ್ದಾನೆ.
ಈ ಘಟನೆಯಿಂದ ಆಕ್ರೋಶಗೊಂಡ ಸ್ಥಳಿಯರು, ನಿನ್ನ ಮಗಳೋ ಅಥವಾ ತಂಗಿಯೋ ಆಗಿದ್ದರೆ ರಸ್ತೆಯ ಮಧ್ಯೆ ಇಳಿಸಿ ಬರುತ್ತಿದ್ದಿರೇನು. ಸರಕಾರ ಸಂಬಳ ಕೊಡುವುದು ಜನರ ಸೇವೆಗಾಗಿ. ಮನ ಬಂದಂತೆ ವರ್ತಿಸಲಿಕ್ಕಲ್ಲ. ಕೆಎಸ್ಆರ್ಟಿಸಿಯ ಅದೆಷ್ಟೋ ಚಾಲಕ ನಿರ್ವಾಹಕರು ಉಳಿದೆಲ್ಲ ರಾಜ್ಯಗಳಿಗೆ ಮಾದರಿಯಾಗಿದ್ದಾರೆ. ಓರ್ವ ಯುವತಿಯನ್ನು ಪಾಸ್ ಹೊಂದಿದ್ದರೂ ವಿನಾಕಾರಣ ರಸ್ತೆ ಮಧ್ಯೆ ಇಳಿಸಲು ಮನಸ್ಸಾದರೂ ಹೇಗೆ ಬಂತು ಎಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ನಿರ್ವಾಹಕ ಕ್ಷಮೆಯಾಚಿಸಿದನು.
ಒಪ್ಪದ ಗ್ರಾಮಸ್ಥರು ನಿಮ್ಮ ಮೇಲಧಿಕಾರಿ ಬರುವವರೆಗೂ ಬಸ್ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಮಧ್ಯ ಪ್ರವೇಶಿಸಿದ ಸಾರಿಗೆ ನಿಯಂತ್ರಕ ಪಿ.ಎ.ಬೋಸಲೆ, ಕ್ರಮಕ್ಕಾಗಿ ಮೇಲಧಿಕಾರಿಗಳ ಗಮನಕ್ಕೆ ತರುವ ಭರವಸೆಯೊಂದಿಗೆ, ಇನ್ನೊಮ್ಮೆ ಹೀಗಾಗದಂತೆ ನಿರ್ವಾಹಕನಿಗೆ ತಾಕೀತು ಮಾಡಿ ಬಸ್ ತೆರಳಲು ಅನುಮತಿ ಮಾಡಿಕೊಟ್ಟರು.
ಸಚಿವರಿಗೆ ಜಿಲ್ಲೆಗಳ ಉಸ್ತುವಾರಿ ಹಂಚಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ