Kannada NewsKarnataka News
ಅರಣ್ಯ ಕೃಷಿಗೆ ಉತ್ತೇಜನ; ಬೊಮ್ಮಾಯಿ ಸಿಎಂ ಆಗಿದ್ದರಿಂದ ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಅನುಕೂಲ -ಉಮೇಶ ಕತ್ತಿ
ಪ್ರಗತಿವಾಹಿನಿ ಸುದ್ದಿ, ಸಂಕೇಶ್ವರ : ಎಂಟು ಬಾರಿ ಶಾಸಕನಾಗಿ ಹಾಗೂ ಐದು ಬಾರಿ ಸಚಿವನಾಗಲು ಅವಕಾಶ ಒದಗಿಸಿಕೊಟ್ಟ ಹುಕ್ಕೇರಿ ಕ್ಷೇತ್ರದ ಜನರಿಗೆ ನಾನು ಆಭಾರಿಯಾಗಿದ್ದು, ಅಭಿವೃದ್ಧಿ ಮೂಲಕ ಜನರ ಋಣ ತೀರಿಸುವ ಕೆಲಸ ಮಾಡುವೆ ಎಂದು ಆರಣ್ಯ ಹಾಗೂ ಆಹಾರ ಇಲಾಖೆ ಸಚಿವ ಉಮೇಶ ಕತ್ತಿ ಹೇಳಿದರು.
ಇಲ್ಲಿಗೆ ಸಮೀಪದ ನಿಡಸೋಸಿ ದುರದುಂಡೀಶ್ವರ ಮಠಕ್ಕೆ ಭೇಟಿ ನೀಡಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಆಶೀರ್ವಾದ ಪಡೆದು ಮಾತನಾಡಿದ ಅವರು, ನಮ್ಮ ಮನೆತನ ಮೊದಲಿನಿಂದಲೂ ಶ್ರೀಮಠದ ಭಕ್ತರಾಗಿದ್ದು, ಶ್ರೀಗಳ ಆಶೀರ್ವಾದ ಹಾಗೂ ಜನರ ವಿಶ್ವಾಸದಿಂದಾಗಿ ನಾನು ರಾಜ್ಯದ ಹಿರಿಯ ಶಾಸಕನೆಂಬ ಹೆಗ್ಗಳಿಕೆ ಬಂದಿದೆ. ಜನರ ಪ್ರೀತಿ, ವಿಶ್ವಾಸ ಉಳಿಸುವ ನಿಟ್ಟಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯ. ಕೈಕೊಂಡಿದ್ದು, ಮುಂಬರುವ ದಿನಮಾನಗಳಲ್ಲಿ ಕ್ಷೇತ್ರವನ್ನು ಗಮನಾರ್ಹವಾಗಿ ಅಭಿವೃದ್ಧಿ ಪಡಿಸುವ ಸಂಕಲ್ಪ ತೊಟ್ಟಿದ್ದೇನೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಹಾರ ಇಲಾಖೆ ಜೊತೆಗೆ ಅರಣ್ಯ ಇಲಾಖೆ ಸಚಿವನನ್ನಾಗಿ ಆಯ್ಕೆ ಮಾಡಿದ್ದು, ನಾನು ಮುಖ್ಯಮಂತ್ರಿ ಬಳಿ ಯಾವುದೇ ಖಾತೆಗೆ ಬೇಡಿಕೆ ಇಟ್ಟಿರಲಿಲ್ಲ. ಯಾವುದೇ ಖಾತೆ ಕೊಟ್ಟರೂ ಅಭಿವೃದ್ಧಿ ಕಾರ್ಯ ಮಾಡುತ್ತೇನೆ. ಆಹಾರ ಇಲಾಖೆಯಲ್ಲಿ ಕಳೆದ ಬಾರಿ ಹಲವು ನಕಲಿ ಬಿಪಿಎಲ್ ರದ್ದಪಡಿಸಿದ್ದು, ಇದೀಗ ಅರಣ್ಯ ಇಲಾಖೆಯಲ್ಲಿ ಕಾಡು ಬೆಳೆಸಿ ನಾಡು ಉಳಿಸಿ ಎನ್ನುವ ತತ್ವದೊಂದಿಗೆ ರಾಜ್ಯದಲ್ಲಿ ಅರಣ್ಯ ಕೃಷಿ ಬಗೆಗೆ ರೈತರಿಗೆ ಅರಿವು ಮೂಡಿಸುವ ಮೂಲಕ ಅರಣ್ಯ ಕೃಷಿಗೆ ಉತ್ತೇಜನ ನೀಡಲಾಗುವದು ಎಂದರು.
ಉತ್ತರ ಕರ್ನಾಟಕದವರೆ ರಾಜ್ಯದ ಮುಖ್ಯಮಂತ್ರಿ ಆಗಿರುವುದರಿಂದ ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಹೆಚ್ಚಿನ ಅನುಕೂಲ ದೊರೆತಂತಾಗಿದೆ. ಇಲಾಖಾ ವ್ಯಾಪ್ತಿಗೆ ಬರುವ ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ಜಿಲ್ಲೆ ಹಾಗೂ ರಾಜ್ಯದ ಸಮಸ್ಯೆಗಳ ನಿವಾರಣೆಗೆ ಶ್ರಮಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಶ್ರೀಗಳು, ಗ್ರಾಮ ಪಂಚಾಯತ್, ಪಿಕೆಪಿಎಸ್, ಎಸ್.ಜೆಪಿಎನ್ ಟ್ರಸ್ಟ್, ವಿವಿಧ ಸಂಘ ಸಂಸ್ಥೆಗಳ ಪರವಾಗಿ ಸಚಿವರನ್ನು ಸನ್ಮಾನಿಸಲಾಯಿತು.
ಸಂಗಮ ಕಾರಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಹಿರಿಯ ಧುರೀಣ ದುಂಡಪ್ಪಣ್ಣ ಹೆದ್ದೂರಿ, ಶ್ರೀಕಾಂತ್ ಹತನೂರೆ, ಸಂಜು ಪಾಟೀಲ, ರಾಜು ಗಡಕರಿ, ಶಾಂತಿನಾಥ ಖಾನಾಪುರೆ, ಸಂತೋಷ ಪಾಟೀಲ್, ಪವನ ಪಾಟೀಲ, ವಿಶ್ವನಾಥ ಕಾಮಗೌಡ, ಬಿ.ಎಸ್. ಸನದಿ ಪ್ರಾಚಾರ್ಯ ಎಸ್.ಸಿ. ಕಮತೆ, ಬಿ.ಆರ್. ಉಮರಾಣಿ, ಟಿ.ಎಂ. ಕಮ್ಮಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ