ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಯಭಾಗ ತಾಲೂಕಿನ ಹಾರೂಗೆರಿ ಗ್ರಾಮದಲ್ಲಿ ಇತ್ತೀಚೆಗೆ ಕೊಲೆಯಾಗಿರುವ ಬಾಲಕಿ ಲಕ್ಷ್ಮೀ ಮನೆಗೆ ಮುಜರಾಯಿ, ವಕ್ಫ್ ಮತ್ತು ಹಜ್ ಸಚಿವರಾದ ಶಶಿಕಲಾ ಜೊಲ್ಲೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ವಯಕ್ತಿಕ ಧನ ಸಹಾಯ ಮಾಡಿದರು.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಗ್ರಾಮದ ಅಪ್ರಾಪ್ತ ಬಾಲಕಿಗೆ ಅಮಿರ್ ಜಮಾದಾರ್ ಎನ್ನುವ ಯುವಕ ಕಿರುಕುಳ ನೀಡಿ ಕೊಲೆ ಮಾಡಿದ್ದಾನೆ ಎಂದು ಪೋಲೀಸರು ಈಗಾಗಲೇ ಆರೋಪಿಯನ್ನು ಬಂಧಿಸಿದ್ದಾರೆ.
ಬಾಲಕಿಯ ತಂದೆ ತಾಯಿಗಳು ಅತ್ಯಂತ ಬಡವರಾಗಿದ್ದು, ಜೀವನ ನಿರ್ವಹಣೆಗೆ ಕೂಲಿ ಕೆಲಸ ಮಾಡಿಕೊಂಡಿದ್ದಾರೆ.
ಈ ಕುಟುಂಬದವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಚಿವರು ಪೋಲೀಸರಿಗೆ ಸೂಚನೆ ನೀಡಿದರು.
ಆರೋಪಿಯ ಹಿಂದೆ ಯಾರ ಕೈವಾಡ ಇದೆ ಎನ್ನುವುದನ್ನು ಪತ್ತೆ ಹಚ್ಚಬೇಕು. ಆರೋಪಿಗೆ ಆದಷ್ಟು ಬೇಗ ಶಿಕ್ಷೆಯಾಗಬೇಕು. ಈ ರೀತಿಯ ಘಟನೆ ಮಾಡುವವರಿಗೆ ಒಂದು ಪಾಠ ಆಗಬೇಕು. ಶೀಘ್ರ ತನಿಖೆ ಮುಗಿಸಿ ಚಾರ್ಜ್ ಶೀಟ್ ಸಲ್ಲಿಸುವಂತೆ ಸಚಿವರು ಪೊಲೀಸ್ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು. ಹಾಗೂ ಮೃತ ಬಾಲಕಿಗೆ ಮೂವರು ತಂಗಿಯರಿದ್ದು ಅವರಿಗೂ ಸಾಧ್ಯವಾದಷ್ಟು ಸಹಾಯ ನೀಡುವುದಾಗಿ ಸಚಿವರು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಬಸನಗೌಡ ಆಸಂಗಿ (ಪಾಟೀಲ), ರವಿ ಪಾಟೀಲ, ಸಂಜಯ ಗುರವ, ಮಲ್ಲಿಕಾರ್ಜುನ ಖಾನಗೌಡರ, ಶ್ರೀನಾಥ ಪಡ್ನಾಡ, ಶಿವಾನಂದ ಸಾರವಾಡ, ಸುವರ್ಣಾ ಬಡಿಗೇರ, ಮಂಜುಳಾ ಗಲಗಲಿ, ಲತಾ ಹುದ್ದಾರ, ಅನ್ನಪೂರ್ಣ ಎರಡೆತ್ತಿ ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ