Latest

ಷೇರು ವ್ಯವಹಾರ -ತಾಳ್ಮೆಯೇ ಬಂಡವಾಳ

M.K.Hegde

ಎಂ.ಕೆ.ಹೆಗಡೆ

ಷೇರು ಎಂದ ತಕ್ಷಣ ಎಂತವರೂ ಒಮ್ಮೆ ಕಣ್ಣರಳಿಸಿ ನೋಡುತ್ತಾರೆ. ಅದಕ್ಕಿರುವ ಕೀರ್ತಿ ಮತ್ತು ಅಪಕೀರ್ತಿ ಎರಡೂ ಇದಕ್ಕೆ ಕಾರಣ. ಷೇರು ವ್ಯವಹಾರದಲ್ಲಿ ಹಣ ಮಾಡಿಕೊಂಡವರೂ ಇದ್ದಾರೆ. ಕಳೆದುಕೊಂಡವರೂ ಇದ್ದಾರೆ. ಆದರೆ, ಕಳೆದುಕೊಂಡು ದಿವಾಳಿಯಾವರು ಸುದ್ದಿಯಾದಷ್ಟು ಹಣ ಗಳಿಸಿಕೊಂಡು ಶ್ರೀಮಂತರಾದವರು ಸುದ್ದಿಯಾಗಿಲ್ಲ. ಹಾಗಾಗಿಯೇ ಷೇರಿನ ವ್ಯವಹಾರವನ್ನು ಜೂಜಿನ ರೀತಿಯಲ್ಲಿ ಪರಿಗಣಿಸುವವರೇ ಹೆಚ್ಚು. ಷೇರು ವ್ಯವಹಾರ ಮಾಡುತ್ತಾನೆಂದರೆ ಆತ ಯಾವುದೋ ಕಾನೂನು ಬಾಹಿರ ವ್ಯವಹಾರಕ್ಕಿಳಿದಿದ್ದಾನೆ ಎಂದೇ ಅರ್ಥೈಸುತ್ತಾರೆ. ಅವರನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಹಾಗಾಗಿ, ಷೇರಿನ ಬಗೆಗೆ ಆಸಕ್ತಿ ವಹಿಸುವವರಿಗಿಂತ ಮೂಗು ಮುರಿಯುವವರೇ ಹೆಚ್ಚು. ಇದೊಂದು ಕಬ್ಬಿಣದ ಕಡಲೆ ಎಂದೇ ಜನ ಸಾಮಾನ್ಯರು ಪರಿಗಣಿಸುತ್ತಾರೆ.
ಹಾಗೆ ನೋಡಿದರೆ, ಷೇರು ವ್ಯವಹಾರ ಬಿಟ್ಟರೆ, ಮನೆಯಲ್ಲೇ ಕುಳಿತು, ಅತ್ಯಂತ ಸುಲಭವಾಗಿ ಹಣ ಗಳಿಸುವ ಮತ್ತೊಂದು ಮಾರ್ಗವಿಲ್ಲ. ಹಾಗಂತ, ದುಡುಕಿ ವ್ಯವಹಾರ ಮಾಡಲು ಹೋದರೆ ಅಷ್ಟೇ ಸುಲವಾಗಿ ಹಣ ಕಳೆದುಕೊಳ್ಳುವುದೂ ನಿಶ್ಚಿತ.
ಷೇರು ವ್ಯವಹಾರಕ್ಕೆ ಮುಖ್ಯವಾಗಿ ಬೇಕಿರುವುದು ತಾಳ್ಮೆ. ತಮ್ಮ ಸಂಪೂರ್ಣ ವ್ಯವಹಾರವನ್ನು ಯೋಜನಾ ಬದ್ಧವಾಗಿ ನಿರ್ವಹಣೆ ಮಾಡಬಲ್ಲ ಯಾರೇ ಆದರೂ ಷೇರು ವ್ಯವಹಾರವನ್ನು ಲಾಭದಾಯಕವಾಗಿ ಮಾಡಬಹುದು.
ಷೇರು ವ್ಯವಹಾರಕ್ಕೆ ಮೊದಲು ಬೇಕಿರುವುದು ತಾಳ್ಮೆಯ ಅಧ್ಯಯನ. ಅಧ್ಯಯನವಿಲ್ಲದೆ ಯಾವುದೇ ವ್ಯವಹಾರಕ್ಕಿಳಿಯಬಾರದು. ಹಾಗೆಯೇ ಷೇರು ವ್ಯವಹಾರ ಕೂಡ. ಅನುಭವ ಇಲ್ಲದೆ, ಯಾರೋ ಸಲಹೆ ನೀಡುತ್ತಾರೆಂದು ಷೇರು ಕೊಳ್ಳಲು ಹೋದರೆ ಅಥವಾ ಕೊಂಡ ಷೇರನ್ನು ಮಾರಲು ಹೋದರೆ ಆತ ಅನಾಯಾಸವಾಗಿ ದಿವಾಳಿಯಾಗುವುದರಲ್ಲಿ ಸಂಶಯವೇ ಇಲ್ಲ.
ಹಾಗಾದರೆ, ಷೇರು ಮಾರುಕಟ್ಟೆ ಕುರಿತು ತಿಳಿದುಕೊಳ್ಳುವುದು ಹೇಗೆ?

ಸ್ವಯಂ ಅಧ್ಯಯನ

ಷೇರು ಮಾರುಕಟ್ಟೆಯನ್ನು ಅಧ್ಯಯನ ಮಾಡುವುದು ಹೇಗೆ? ಈ ಕುರಿತು ಕಲಿಸುವ ಶಾಲೆಗಳಿವೆಯೇ? ಖಂಡಿತ ಕಲಿಸುವವರು ಬೇಕಾದಷ್ಟು ಜನರಿದ್ದಾರೆ. ಬೇಕಾದಷ್ಟು ಪುಸ್ತಕಗಳು ಸಿಗುತ್ತವೆ. ಸಾಕಷ್ಟು ವೆಬ್‌ಸ್ಶೆಟ್‌ಗಳಿವೆ. ಆದರೆ, ಇವೆಲ್ಲಕ್ಕಿಂತ ಸ್ವಯಂ ಅಧ್ಯಯನವೇ ಮೇಲು. ಸ್ವತಂತ್ರವಾಗಿ ಎಷ್ಟು ಅಧ್ಯಯನ ಮಾಡುತ್ತೀರೋ ಅಷ್ಟು ಒಳ್ಳೆಯದು.
ಹಾಗಾದರೆ, ಮಾರುಕಟ್ಟೆಗಿಳಿಯದೆ ಅಧ್ಯಯನ ಹೇಗೆ ಸಾಧ್ಯ. ಬೀಜ ಮೊದಲೋ, ವೃಕ್ಷ ಮೊದಲೋ ಎನ್ನುವ ಗಾದೆಯಂತೆ, ಅಧ್ಯಯನವಿಲ್ಲದೆ ಮಾರುಕಟ್ಟೆಗಿಳಿಯುವಂತಿಲ್ಲ, ವ್ಯವಹಾರಕ್ಕಿಳಿಯದೆ ತಿಳಿದುಕೊಳ್ಳಲು ಸಾಧ್ಯವಿಲ್ಲ.
ಹಾಗಾಗಿ, ತಾಳ್ಮೆಯೊಂದಿದ್ದರೆ, ನೀವೇ ಸ್ವತಂತ್ರವಾಗಿ ಕಲಿತು, ವ್ಯವಹಾರ ಆರಂಭಿಸಿ, ಯಶಸ್ವಿಯಾಗಿ ಮುನ್ನಡೆಯಬಹುದು. ಯಾರೋ ಹೇಳಿದ್ದನ್ನು ಕೇಳಿಯೋ, ಯಾವುದೋ ಪುಸ್ತಕ ಓದಿಯೋ ವ್ಯವಹಾರ ಮಾಡುವುದಕ್ಕಿಂತ ಇದು ಬಹು ಪಾಲು ವಾಸಿ.

ಪರಿಹಾರ ಹೇಗೆ

ಹಾಗಾದರೆ ವ್ಯವಹಾರ ಶುರು ಮಾಡುವುದು ಹೇಗೆ?. ಈ ಸಮಸ್ಯೆಗೆ ಸುಲಭವಾದ ಪರಿಹಾರ ಇಲ್ಲಿದೆ. ಸ್ವ ಅನುಭವ ಅಥವಾ ಸ್ವಯಂ ಅಧ್ಯಯನವೇ ಷೇರು ಮಾರುಕಟ್ಟೆಯ ಮೊದಲ ಮೆಟ್ಟಿಲು. ನೇರವಾಗಿ ಮಾರುಕಟ್ಟೆಗಿಳಿಯುವುದರಿಂದಲೇ ಅಧ್ಯಯನ ಆರಂಭಿಸಬೇಕು. ಹಾಗಂತ ಕೊಟ್ಯಂತರ ರು. ತೊಡಗಿಸಬೇಕಿಲ್ಲ. ಕೆಲವೇ ಸಾವಿರ ರು. ಬಂಡವಾಳದೊಂದಿಗೆ ವ್ಯವಹಾರ ಆರಂಭಿಸಬಹುದು.

ಷೇರು ವ್ಯವಹಾರ ಆರಂಭಿಸುವಾಗ ಡಿ ಮ್ಯಾಟ್ ಅಕೌಂಟ್ ತೆರೆಯಬೇಕಾಗುತ್ತದೆ. ಯಾವುದಾದರೂ ಉತ್ತಮ ಬ್ರೋಕಿಂಗ್ ಏಜಂಟರ ಬಳಿ ಖಾತೆ ತೆರೆಯಬೇಕು. ಇದು ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ತೆರೆದಂತೆಯೇ. ಸ್ಟೇಟ್ ಬ್ಯಾಂಕ್, ಏಕ್ಸಿಸ್ ಬ್ಯಾಂಕ್ ಸೇರಿದಂತೆ ಹಲವಾರು ಬ್ಯಾಂಕ್‌ಗಳೂ ಈಗ ಡಿ ಮ್ಯಾಟ್ ಖಾತೆ ತೆರೆಯುತ್ತಿವೆ. ಪೋಟೋ, ಪ್ಯಾನ್ ಕಾರ್ಡ್, ವಿಳಾಸದ ದಾಖಲೆ ಮತ್ತು ಸ್ವಲ್ಪ ಹಣದ ಜತೆ ಅರ್ಜಿ ಸಲ್ಲಿಸಿದರೆ ಡಿ ಮ್ಯಾಟ್ ಖಾತೆ ತೆರೆಯಲಾಗುತ್ತದೆ. ಒಮ್ಮೆ ಖಾತೆ ತೆರೆಯಲಾಯಿತೆಂದರೆ ಷೇರು ವ್ಯವಹಾರ ಆರಂಭಿಸಬಹುದು.
ಯಾವುದೇ ಉದ್ಯಮ ಆರಂಭಿಸುವಾಗ ಒಂದಿಷ್ಟು ಬಂಡವಾಳ ಬೇಕೇ ಬೇಕು. ಷೇರು ಉದ್ಯಮಕ್ಕೂ ಹಾಗೆಯೇ ಅಂದುಕೊಳ್ಳಿ. ಆರಂಭದಲ್ಲಿ ಕನಿಷ್ಟ ಮೊತ್ತದ ಬಂಡವಾಳ ಹೊಂದಿಸಿಕೊಳ್ಳಬೇಕು. ಒಂದೆರಡು ಸಾವಿರ ರು. ಇದ್ದರೂ ಆದೀತು. (ಈಗಂತೂ 50 ರುಪಾಯಿಗೆ ಕೂಡ ಉತ್ತಮ ಕಂಪನಿಯ ಷೇರು ಸಿಗುತ್ತದೆ)
ಹಾಗೆ ಜೋಡಿಸಿದ ಹಣದಲ್ಲಿ ಯಾವುದಾದರೂ 2 ಅಥವಾ 3 ಕಂಪನಿಯ (ಎ ವರ್ಗ-ಬ್ಲೂ ಚಿಪ್) ಕನಿಷ್ಟ ಸಂಖ್ಯೆಯ ಷೇರುಗಳನ್ನು ಖರೀದಿಸಬೇಕು. ಎ ವರ್ಗದ ಷೇರು ಯಾವುದು, ಯಾವುದನ್ನು ಈಗ ಖರೀದಿಸಬಹುದು ಎನ್ನುವ ಆರಂಭಿಕ ಸಲಹೆಯನ್ನು ಷೇರು ಬ್ರೋಕರ್‌ನಿಂದಲೇ ಪಡೆಯಬಹುದು. ಅಥವಾ ಈಗಾಗಲೆ ವ್ಯವಹಾರ ಮಾಡುತ್ತಿರುವ ಯಾರಿಂದಲಾದರೂ ಪಡೆಯಬಹುದು. ಅಥವಾ ವೆಬ್‌ಸೈಟ್‌ನಲ್ಲಿ ಸುಲವಾಗಿ ಮಾಹಿತಿ ಸಿಗುತ್ತದೆ. ಯಾವುದೇ ಷೇರಿನ, ಯಾವುದೇ ಅವಧಿಯ ಗರಿಷ್ಟ ಅಥವಾ ಕನಿಷ್ಟ ದರವನ್ನು ವೆಬ್‌ಸೈಟ್‌ನಲ್ಲಿ ನೋಡಿಕೊಳ್ಳಬಹುದು. 52 ವಾರದ ಕನಿಷ್ಟ ಅಥವಾ ಸರಾಸರಿಗಿಂತ ಕಡಿಮೆ ಬೆಲೆಯಲ್ಲಿ ಸಿಗುವ ಷೇರನ್ನು ಖರೀದಿಸಬಹುದು. ಇವಿಷ್ಟು ಮಾಹಿತಿ ಷೇರು ಪೇಟೆಯಲ್ಲಿ ಪಾದಾರ್ಪಣೆ ಮಾಡಲು ಮಾತ್ರ. ಇದಕ್ಕೆ ಸಮಯಕ್ಕಾಗಿ ಕಾಯಬೇಕಾದ ಅಗತ್ಯವಿಲ್ಲ. ಡಿ ಮ್ಯಾಟ್ ಖಾತೆ ತೆರೆದ ದಿನವೇ ಷೇರನ್ನು ಖರೀದಿಸಬಹುದು. ಹಾಗೆ ಷೇರು ಖರೀದಿಸಿದಿರೆಂದರೆ ನೀವು ಆ ಕಂಪನಿಯ ಪಾಲುದಾರರಾದಂತಾಯಿತು. ಹಾಗೆೆಯೇ ಷೇರು ಮಾರುಕಟ್ಟೆಗೆ ಇಳಿದಂತಾಯಿತು.

ಇಲ್ಲಿಂದ ಆರಂಭ

ಮಾರುಕಟ್ಟೆ ಕುರಿತು ನಿಮ್ಮ ಅಧ್ಯಯನ ಅಧಿಕೃತವಾಗಿ ಆರಂವಾಗುವುದೇ ಇಲ್ಲಿಂದ. ನೀವು ಹಣ ತೊಡಗಿಸಿದ ವಿನಹ ನಿಮಗೆ ಇದರಲ್ಲಿ ಆಸಕ್ತಿಯೇ ಹುಟ್ಟುವುದಿಲ್ಲ. ಗಂಭೀರ ಅ ಧ್ಯಯನಕ್ಕೆ ಹಣ ತೊಡಗಿಸುವುದು ಅನಿವಾರ್ಯ. ನೀವು ಖರೀದಿಸಿದ ಷೇರಿನ ಚಲನೆಯನ್ನು ಗಮನಿಸುತ್ತಿದ್ದರೆ ತನ್ನಿಂದ ತಾನೇ ನಿಮಗೆ ಸಾಕಷ್ಟು ಪಾಠ ಕಲಿಸುತ್ತದೆ. ಇದಕ್ಕಾಗಿ ನಿಮಗೆ ಟಿವಿ ಚಾನೆಲ್‌ಗಳು, ವೆಬ್ ಸೈಟ್ ಗಳು, ಪತ್ರಿಕೆಗಳು ನೆರವಾಗುತ್ತವೆ. ಹಲವಾರು ಬಿಸಿನೆಸ್ ಚಾನೆಲ್‌ಗಳು ಮತ್ತು ಪತ್ರಿಕೆಗಳು ಷೇರು ಮಾರುಕಟ್ಟೆಗೆ ಸಾಕಷ್ಟು ಪ್ರಾತಿನಿಧ್ಯ ನೀಡುತ್ತಿವೆ. ಅನೇಕ ವೆಬ್‌ಸೈಟ್‌ಗಳನ್ನೂ ಗಮನಿಸಬಹುದು. ಹಾಗೆಯೇ, ಈಗಾಗಲೆ ವ್ಯವಹಾರ ಮಾಡಿ ಗಳಿಸಿದವರು ಹಾಗೂ ಕಳೆದುಕೊಂಡವರೊಂದಿಗೂ ಚರ್ಚಿಸಬಹುದು. ಆದರೆ, ಒಂದು ಮಾತನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನೀವು ಈಗ ಷೇರು ಮಾರುಕಟ್ಟೆ ಅಧ್ಯಯನ ವಿದ್ಯಾರ್ಥಿ. ಪತ್ರಿಕೆಯಲ್ಲಿ ಬಂದಿದ್ದನ್ನಾಗಲಿ, ಚರ್ಚೆಯ ವೇಳೆ ಯಾರೋ ನೀಡಿದ ಸಲಹೆಯನ್ನಾಗಿ ನಂಬಿ ಷೇರು ಖರೀದಿಗಿಳಿಯಬೇಡಿ. ಪತ್ರಿಕೆಯಲ್ಲಿ ಬಂದಂತೆ ಅಥವಾ ಹಿರಿಯರು ಹೇಳಿದಂತೆ ಮಾರುಕಟ್ಟೆಯ ಚಲನೆ ಇದೆಯೇ ಎನ್ನುವುದನ್ನು ಷೇರು ಮಾರುಕಟ್ಟೆಯ ಭಾಗವಾಗಿ ಹತ್ತಿರದಿಂದ ಗಮನಿಸುತ್ತಿರಿ.
ಆದರೆ, ನೀವು ಖರೀದಿಸಿದ ಷೇರು ಮೌಲ್ಯ ಕುಸಿದರೆ ದೃತಿಗೆಡಬೇಕಿಲ್ಲ. ಏರಿದರೆ ಮಾರಾಟವನ್ನೂ ಮಾಡಬೇಕಿಲ್ಲ. ಮಾರುಕಟ್ಟೆಯ ಏರಿಳಿತ ನಿಮ್ಮ ಅಧ್ಯಯನಕ್ಕೆ ಅವಕಾಶ ಒದಗಿಸುತ್ತದೆ. ಇನ್ನಷ್ಟು ಆಳವಾದ ಅಧ್ಯಯನಕ್ಕಾಗಿ ಏರಿದ ಸಂದರ್ಭದಲ್ಲಿ ನೀವು ಖರೀದಿಸಿದ 2 ಷೇರಿನಲ್ಲಿ ಒಂದನ್ನು ಮಾರಾಟ ಮಾಡಬಹುದು. ಅದೇ ಷೇರು ಮೌಲ್ಯ ಕುಸಿದಾಗ ಮತ್ತೆ ಖರೀದಿ ಮಾಡಬಹುದು. ಆದರೆ, ಈಗಲೂ ಹೆಚ್ಚಿನ ಹಣ ತೊಡಗಿಸುವುದು ಉಚಿತವಲ್ಲ. 3 ರಿಂದ 6 ತಿಂಗಳು ಹೀಗೆ ಹತ್ತಿರದ ಅಧ್ಯಯನ ಷೇರು ಮಾರುಕಟ್ಟೆಯಲ್ಲಿ ಮುನ್ನುಗ್ಗಲು ನಿಮಗೆ ಖಂಡಿತ ಸಾಕಷ್ಟು ಪಾಠ ಕಲಿಸುತ್ತದೆ. ಇಷ್ಟಾದ ನಂತರವೂ ಒಂದೊಂದೇ ಹೆಜ್ಜೆಯಾಗಿ ಮುಂದಕ್ಕೆ ಹೋಗಬೇಕೇ ವಿನಹ ದುಡುಕುವುದು ಸರಿಯಲ್ಲ.

ತಾಳ್ಮೆಯೇ ಬಂಡವಾಳ

ಒಮ್ಮೆ ಷೇರು ವ್ಯವಹಾರ ಆರಂಭಿಸಿದವರು ನಂತರದಲ್ಲೂ ತಾಳ್ಮೆಯನ್ನು ಕಳೆದುಕೊಳ್ಳಬಾರದು. ಷೇರು ಖರೀದಿಸುವಾಗಲೂ, ಖರೀದಿಸಿದ ಷೇರು ಮಾರಾಟ ಮಾಡುವಾಗಲೂ ತಾಳ್ಮೆಯೇ ಮುಖ್ಯ. ಖರೀದಿಸಿದ ಮೇಲೆ ಸಾವಿರಾರು ರು. ಮೌಲ್ಯ ಕುಸಿಯಬಹುದು. ಮಾರಾಟ ಮಾಡಿದ ಮೇಲೆ ದರ ಏರುತ್ತಲೇ ಹೋಗಬಹುದು. ಇದೆಲ್ಲ ಸಹಜ ಪ್ರಕ್ರಿಯೆ. ದರ ಸ್ವಲ್ಪ ಕಡಿಮೆಯಾಯಿತೆಂದು ದುಡುಕಿ ಖರೀದಿಸುವುದಾಗಲಿ, ಸ್ವಲ್ಪ ಏರಿದ ತಕ್ಷಣ ಮಾರಾಟ ಮಾಡುವುದಾಗಲೀ ಸಲ್ಲದು. ಹಾಗಂತ ಭಾರೀ ಪ್ರಮಾಣದಲ್ಲಿ ಬೀಳುತ್ತಿರುವಾಗ ಹಾಗೆಯೇ ಇಟ್ಟುಕೊಳ್ಳದೆ, ಮಾರಾಟ ಮಾಡಿ, ಪೂರ್ಣ ಕುಸಿದಾಗ ಮತ್ತೆ ಖರೀದಿಸುವ ಜಾಣ್ಮೆಯನ್ನೂ ಪ್ರದರ್ಶಿಸಬೇಕಾಗುತ್ತದೆ. ಇದೆಲ್ಲವನ್ನೂ ಹಂತ ಹಂತವಾಗಿ ಮಾರುಕಟ್ಟೆಯೇ ನಿಮಗೆ ಕಲಿಸುತ್ತದೆ. ಹಾಗಾಗಿಯೇ ಹಣ ತೊಡಗಿಸುವಾಗ ಸಾಕಷ್ಟು ಯೋಚಿಸಬೇಕು. ಒಮ್ಮೆಯೇ ಹೆಚ್ಚಿನ ಷೇರನ್ನು ಖರೀದಿಸುವುದಾಗಲಿ, ಒಂದೇ ಕ್ಷೇತ್ರದ ಷೇರನ್ನು ಖರೀದಿಸುವುದಾಗಲಿ ಅಥವಾ ಖರೀದಿಸಿದ ಷೇರನ್ನು ಒಂದೇ ಬಾರಿಗೆ ಮಾರಾಟ ಮಾಡುವುದಾಗಲಿ ಸರಿಯಲ್ಲ. ಹಾಗಂತ ಎಲ್ಲ ಸಂದರ್ಭದಲ್ಲೂ ಈ ಮಾತು ಅನ್ವಯವಾಗುವುದೂ ಇಲ್ಲ. ಹೆಚ್ಚೆಚ್ಚು ಅಧ್ಯಯನ ಮಾಡುತ್ತ ಹೋದಂತೆ ನಿಮಗೆ ಮಾರುಕಟ್ಟೆಯೇ ಎಲ್ಲವನ್ನೂ ಕಲಿಸುತ್ತದೆ. ಸಂಪೂರ್ಣ ಪಳಗಿದ್ದೇನೆ ಎನ್ನುವ ವಿಶ್ವಾಸ ಮೂಡುವವರೆಗೆ ಹಣ ತೊಡಗಿಸುವಾಗ ಹತ್ತು ಬಾರಿ ಯೋಚಿಸುವುದೇ ಉತ್ತಮ.
ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರುವ ಅಂಶಗಳು

ಇದೊಂದು ಅತ್ಯಂತ ಮಹತ್ವ ಪೂರ್ಣ ಅಂಶ. ಷೇರು ಮಾರುಕಟ್ಟೆಯಲ್ಲಿ ವ್ಯವಹರಿಸುವ ಮುನ್ನ ಪ್ರತಿಯೊಬ್ಬರೂ ತಿಳಿದುಕೊಳ್ಳಲೇ ಬೇಕಾದ ವಿಷಯ. ಮಾರುಕಟ್ಟೆಯ ಮೇಲೆ ಪರಿಣಾಮ ಬೀರಬಲ್ಲ ಅಂಶಗಳನ್ನು ಆಧರಿಸಿ  ಖರೀದಿ ಇಲ್ಲವೆ ವಿಕ್ರಿಯಲ್ಲಿ ತೊಡಗಬೇಕಾಗುತ್ತದೆ. ಹಾಗಾಗಿ, ಪ್ರಸಕ್ತ ವಿದ್ಯಮಾನ ತಿಳಿದುಕೊಳ್ಳುವ ಜತೆಗೆ, ವಿಷಯದ ಬೆಳವಣಿಗೆಯನ್ನು ವಿಶ್ಲೇಷಿಸಬಲ್ಲ ಮತ್ತು ಹಿಂದಿನ ವಿದ್ಯಮಾನಗಳೊಂದಿಗೆ ಹೋಲಿಕೆ ಮಾಡುವ ಸಾಮರ್ಥ್ಯವನ್ನೂ ಬೆಳೆಸಿಕೊಂಡಲ್ಲಿ ಮಾರುಕಟ್ಟೆಯಲ್ಲಿ ಮುಗ್ಗರಿಸುವ ಪ್ರಶ್ನೆಯೇ ಬರುವುದಿಲ್ಲ. ಜಾಗತಿಕ ಬೆಳವಣಿಗೆಗಳ ಜ್ಞಾನವಿಲ್ಲದಿದ್ದರೆ ಮಾರುಕಟ್ಟೆಯಲ್ಲಿ ಕೈ ಸುಟ್ಟುಕೊಳ್ಳುವುದು ಖಚಿತ. ಹಾಗಾಗಿ ಸಾದ್ಯವಾದಷ್ಟು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಬೆಳವಣಿಗೆಗಳ ಕಡೆಗೆ ಕಣ್ಣಿಟ್ಟಿರಬೇಕಾಗುತ್ತದೆ. ಕೇವಲ ಆರ್ಥಿಕ ಬದಲಾವಣೆಯಷ್ಟೆ ಅಲ್ಲದೆ, ರಾಜಕೀಯ ಮತ್ತು ಸಾಮಾಜಿಕ ಬದಲಾವಣೆಗಳು ಅನೇಕ ಸಂದರ್ಭಗಳಲ್ಲಿ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಬಲ್ಲದು.

ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರದ ವಿದ್ಯಮಾನವಿಲ್ಲವೆಂದೇ ಹೇಳಬೇಕಾಗುತ್ತದೆ. ಅದು ಜಾಗತಿಕ ವಿದ್ಯಮಾನವಾಗಿರಬಹುದು, ದೇಶೀಯ ವಿದ್ಯಮಾನವಾಗಿರಬಹುದು. ಜಾಗತಿಕ ಆರ್ಥಿಕತೆಯಲ್ಲಾಗುವ ಬದಲಾವಣೆ, ಅಮೇರಿಕಾ, ಯುರೋಪ್ ಮುಂತಾದ ದೇಶಗಳ ಆರ್ಥಿಕತೆ, ಜಾಗತಿಕ ತೈಲ ಮಾರುಕಟ್ಟೆಯಲ್ಲಾಗುವ ಏರು-ಪೇರು, ಅಮೇರಿಕ ತೆಗೆದುಕೊಳ್ಳುವ ಆಡಳಿತಾತ್ಮಕ ತೀರ್ಮಾನಗಳು ಇತ್ಯಾದಿ. ಹಾಗಂತ ಎಲ್ಲವೂ ಎಲ್ಲ ಸಂದರ್ಭದಲ್ಲೂ ಪರಿಣಾಮ ಬೀರುತ್ತದೆ ಎಂದು ನಿರೀಕ್ಷಿಸುವುದೂ ಸಾಧ್ಯವಿಲ್ಲ.
2008ರಲ್ಲಿ ಸೆನ್ಸೆಕ್ಸ್ 21000 ದಿಂದ 7000ಕ್ಕೆ ಇಳಿದು ಷೇರು ಮಾರುಕಟ್ಟೆಯನ್ನೇ ಅಲ್ಲೋಲ ಕಲ್ಲೋಲ ಮಾಡಲು ಕಾರಣವಾಗಿದ್ದು ಅಮೇರಿಕಾದ ಆರ್ಥಿಕತೆ ಕುಸಿತ. ಪರಿಣಾಮವಾಗಿ ಷೇರು ಮಾರುಕಟ್ಟೆ ಮೇಲಿನ ವಿಶ್ವಾಸವೇ ಕಡಿಮೆಯಾಗುವಂತಾಯಿತು. ಹಲವಾರು ಹೂಡಿಕೆದಾರರು ಜೀವವನ್ನೇ ಕಳೆದುಕೊಂಡರು.
2011ರಲ್ಲಿ ಮಾರುಕಟ್ಟೆಯನ್ನು ಕಾಡಿದ್ದು ಭಾರತದ ಆರ್ಥಿಕ ಬೆಳವಣಿಗೆ ದರ. 2010ರ ಅಂತ್ಯದ ವೇಳೆ 21000 ತಲುಪಿದ್ದ ಸೆನ್ಸೆಕ್ಸ್ ಕೆಲವೇ ದಿನಗಳಲ್ಲಿ ಕುಸಿತ ಕಾಣಲು ಆರಂಭವಾಯಿತು. ನಂತರ ಬಹು ಕಾಲದವರೆಗೆ ಮೇಲಕ್ಕೇರದೆ ಹೂಡಿಕೆದಾರರನ್ನು ಕಂಗೆಡಿಸಿತು. ಬಹುತೇಕ ಆರ್ಥಿಕ ತಜ್ಞರ ಲೆಕ್ಕಾಚಾರಗಳನ್ನೂ ತಲೆಕೆಳಗಾಗಿಸಿತು. ಬಹುತೇಕ ಎ ದರ್ಜೆಯ ಷೇರುಗಳೂ ಶೇ.50ರಿಂದ60ರ ವರೆಗೆ ಕುಸಿತ ದಾಖಲಿಸಿದವು. ಭಾರತೀಯ ಸ್ಟೆಟ್ ಬ್ಯಾಂಕ್‌ನ ಪ್ರತಿ ಷೇರಿನ ಬೆಲೆ 3,500ರಿಂದ 15,00ರ ವರೆಗೆ ಇಳಿಯಿತು. ಪೂಂಜ್ ಲಾಯ್ಡ್, ರಿಲಾಯನ್ಸ (ಅನಿಲ ಅಂಬಾನಿ ಸಮೂಹ) ಷೇರುಗಳು ಶೇ. 70ರ ವರೆಗೆ ಕುಸಿತ ಕಂಡಿತು. ಇನ್ನೇನು ಏರುಮುಖ ಹಿಡಿಯಿತು ಎನ್ನುವ ಹೊತ್ತಿಗೆ ಮತ್ತೆ ಮತ್ತೆ ಕುಸಿತ ಕಾಣುತ್ತ ಬಹುತೇಕ ಹೂಡಿಕೆದಾರರನ್ನೆಲ್ಲ ಹಿಂದೆ ಮುಂದೆ ನೋಡುವಂತೆ ಮಾಡಿತು. ಆದರೆ, ಇದಕ್ಕೆಲ್ಲ ಕಾರಣವೇನು ಎನ್ನುವುದನ್ನು ಸರಿಯಾಗಿ ವಿಶ್ಲೇಷಿಸಲು ಆರ್ಥಿಕ ತಜ್ಞರೂ ಅನೇಕ ಬಾರಿ ವಿಫಲರಾಗಿದ್ದಿದೆ. ಕೆಲವೊಮ್ಮೆ ಸಣ್ಣ ಪುಟ್ಟ ಕಾರಣಗಳೂ ಮಾರುಕಟ್ಟೆಯನ್ನು ಅಲ್ಲಾಡಿಸುತ್ತಿದ್ದವು. ಇದೇ ವೇಳೆ ವಿದೇಶಿ ಹೂಡಿಕೆದಾರರೂ ಮಾರುಕಟ್ಟೆಯನ್ನು ಸಾಕಷ್ಟು ಆಟವಾಡಿಸಿದರು. ಸಹಸ್ರ ಸಹಸ್ರ ಕೋಟಿ ರು.ಗಳಲ್ಲಿ ಹರಿದು ಬರುತ್ತಿದ್ದ ವಿದೇಶಿ ಬಂಡವಾಳ ಏಕಾ ಏಕಿ ಹಿಂತೆಗೆಯಲ್ಪಟ್ಟಾಗ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗುತ್ತಿತ್ತು. ದೇಶೀಯ ಮ್ಯೂಚ್ಯುವಲ್ ಪಂಡ್‌ಗಳ ಹೂಡಿಕೆ ಹಾಗೂ ಹಿಂತೆಗೆದುಕೊಳ್ಳುವಿಕೆಯ ಪ್ರಮಾಣ ಕೂಡ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. 2010ರಲ್ಲಾದ ಹಗರಣದಿಂದಾಗಿ ಎಲ್‌ಐಸಿ ಹೌಸಿಂಗ್ ಪೈನಾನ್ಸ್, ಪಂಜಾಬ್ ನ್ಯಾಶನಲ್ ಬ್ಯಾಂಕ್ ಮೊದಲಾದ ಷೇರುಗಳು ಸಾಕಷ್ಟು ಕುಸಿತ ಕಂಡವು. ಆದರೆ, ಕೆಲವೆ ತಿಂಗಳಲ್ಲಿ ಅವು ಆಶ್ಚರ್ಯಕರ ರೀತಿಯಲ್ಲಿ ಚೇತರಿಸಿಕೊಂಡವು. ಡಾಲರ ಎದುರು ರೂಪಾಯಿ ಮೌಲ್ಯ ಕುಸಿತ 2012ರಲ್ಲಿ ಷೇರು ಪೇಟೆಯನ್ನು ಸಾಕಷ್ಟು ಅಲ್ಲಾಡಿಸಿದೆ.

ಈಗ ಸೆನ್ಸೆಕ್ಸ್ 60 ಸಾವಿರ ರೂ ಸನಿಹದಲ್ಲಿದೆ. ಇದರ ಅರ್ಥ ಪ್ರಮುಖ ಶೇರುಗಳು ಮೇಲೇರಿವೆ ಎಂದು ಅರ್ಥವಲ್ಲ. ಕೆಲವು ಬಲಾಢ್ಯ ಕಂಪನಿಗಳ ಶೇರು ಪಾತಳದಲ್ಲಿ ಬಿದ್ದು ಒದ್ದಾಡುತ್ತಿವೆ. ಅವು ಮೇಲೆ ಬರುವುದೇ ಇಲ್ಲ ಎನ್ನಲಾಗದು, ಆದರೆ ಯಾವಾಗ ಎನ್ನುವುದೇ ಪ್ರಶ್ನೆ.

ಇದನ್ನೆಲ್ಲ ಗಮನಿಸಿದಾಗ ಷೇರು ಮಾರುಕಟ್ಟೆ ಅತ್ಯಂತ ನಾಜೂಕಾದ ಹೂಡಿಕೆ ಕ್ಷೇತ್ರ ಎನ್ನುವುದು ಸ್ಪಷ್ಟವಾಗುತ್ತದೆ. ಎಚ್ಚರಿಕೆಯಿಂದ ಹೂಡುವವನಿಗೆ ಸಾಕಷ್ಟು ಲಾಭ ತಂದುಕೊಟ್ಟರೆ, ಮೈ ಮರೆತು ವ್ಯವಹಾರ ಮಾಡುವವನನ್ನು ಹೊಸಕಿ ಹಾಕುವುದೂ ಅಷ್ಟೇ ಸತ್ಯ. ಹಾಗಾಗಿಯೇ ಇರಬೇಕು ಹಲವರು ಇದನ್ನು ಜೂಜಿನ ವ್ಯವಹಾರ ಎಂದು ಪರಿಗಣಿಸಿರುವುದು.

ಹೂಡಿಕೆ ಮಾಡುವಾಗ ಮುನ್ನೆಚ್ಚರಿಕೆ

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವಾಗ ಸಾಕಷ್ಟು ಮುಂಜಾಗ್ರತೆ ವಹಿಸಬೇಕು. ಸಾಲ ಮಾಡಿ ಹಣ ತೊಡಗಿಸುತ್ತೇನೆ ಎನ್ನುವವರಿಗೆ ಇದು ಎಲ್ಲ ಸಂದರ್ಭಗಳಲ್ಲೂ ಕೈ ಹಿಡಿಯುವುದಿಲ್ಲ. ನಿರ್ಧಿಷ್ಟ ಸಮಯದವರೆಗೆ ಮಾತ್ರ ಹಣ ಹಾಕಬಲ್ಲೆ ಎನ್ನುವವರಿಗೂ ಷೇರು ಮಾರುಕಟ್ಟೆ ಸೂಕ್ತವಾದುದಲ್ಲ. ಮಾರುಕಟ್ಟೆ ಏರುವವರೆಗೂ ಕಾಯುತ್ತೇನೆ ಎನ್ನುವವರಿಗೆ ಮಾತ್ರ ಇಲ್ಲಿ ವಿಪುಲವಾದ ಅವಕಾಶವಿದೆ. ಏಕೆಂದರೆ ಷೇರು ಮಾರುಕಟ್ಟೆಯೇ ಅನಿಶ್ಚಿತವಾದದ್ದು. ಒಂದೇ ವಾರದಲ್ಲಿ ನಿರೀಕ್ಷೆಗಿಂತ ಹೆಚ್ಚು ಲಾಭ ತಂದುಕೊಡಲೂಬಹುದು. ವರ್ಷಾನುಗಟ್ಟಲೆ ಕಾಯಿಸಲೂಬಹುದು. ನಾವು ಖರೀದಿಸಿದ ನಂತರ ಏರುತ್ತಲೇ ಹೋಗಬೇಕು, ನಾವು ಮಾರಿದ ನಂತರ ಇಳಿಯಬೇಕು ಎಂದು ನಿರೀಕ್ಷಿಸುವುದು ಮೂರ್ಖರ ಲಕ್ಷಣ. ನಮ್ಮ ಲಾಭದ ಗುರಿಯವರೆಗೆ ಕಾಯುವ ತಾಳ್ಮೆ ಇರಲೇ ಬೇಕು. ಅದಕ್ಕಾಗಿ ಸಮಯಮಿತಿ ಹಾಕಿಕೊಳ್ಳುವಂತಿಲ್ಲ, ತಾಳ್ಮೆ ಕಳೆದುಕೊಳ್ಳುವಂತಿಲ್ಲ. ಖರೀದಿ ದರಕ್ಕೂ ಮಾರುಕಟ್ಟೆಯ ಪ್ರಸಕ್ತ ದರಕ್ಕೂ ಸಾಕಷ್ಟು ವ್ಯತ್ಯಾಸ ಕಂಡಾಗ, ಮತ್ತೆ ಸ್ವಲ್ಪ ಹಣ ತೊಡಗಿಸುವ ಮೂಲಕ ಸರಾಸರಿ ದಾರಣೆಯನ್ನು ಕಡಿಮೆ ಮಾಡಿಕೊಳ್ಳುವ ಜಾಣ್ಮೆಯೂ ಹೂಡಿಕೆದಾರನಿಗಿರಬೇಕಾಗುತ್ತದೆ. ಇಲ್ಲವಾದಲ್ಲಿ ಕಾಯುವಿಕೆ ಇನ್ನಷ್ಟು ಸುದೀರ್ಘವಾಗಬಹುದು. ಹಾಗಾಗಿ, ಇದು ದೀರ್ಘಕಾಲೀನ ಉಳಿತಾಯ ಯೋಜನೆ ಎಂದೇ ಪರಿಗಣಿಸಲ್ಪಡುವ ಯೋಜನೆ. ಆದರೆ, ನಮ್ಮ ಗುರಿಯಷ್ಟು ಆದಾಯ ಬಂತೆಂದರೆ ಹಿಂದಕ್ಕೆ ಪಡೆದು ಮತ್ತೆ ಮಾರುಕಟ್ಟೆ ಕೆಳಗೆ ಬರುವುದನ್ನು ಕಾಯುವುದು ನಿಜವಾದ ಹೂಡಿಕೆದಾರನ ಲಕ್ಷಣ.
2008ರಲ್ಲಿ ಮಾರುಕಟ್ಟೆ ಭಾರೀ ಪ್ರಮಾಣದಲ್ಲಿ ಕುಸಿದಾಗ ಅನೇಕರು ಆತ್ಮಹತ್ಯೆಯ ದಾರಿ ಹಿಡಿದರು. ಕಾರಣ, ಅವರು ಕಾಯುವ ಸ್ಥಿತಿಯಲ್ಲಿರಲಿಲ್ಲ. ಸಾಲ ಮಾಡಿ ಹಣ ಹೂಡಿಕೆ ಮಾಡಿದ್ದರು. ಅಥವಾ ಬೇರೆ ಕಾರಣಕ್ಕೆಂದು ಉಳಿತಾಯ ಮಾಡಿದ್ದ ಹಣವನ್ನು ಅಲ್ಪಾವಧಿಗೆಂದು ಷೇರು ಮಾರುಕಟ್ಟೆಯಲ್ಲಿ ತೊಡಗಿಸಿದ್ದರು. ಆದರೆ, ಕುಸಿದಾಗ ತಾಳ್ಮೆ ಕಳೆದುಕೊಳ್ಳದೆ ಕಾದವರು ನಂತರದಲ್ಲಿ ಸಾಕಷ್ಟು ಲಾಭವನ್ನೇ ಗಳಿಸಿಕೊಂಡರು.

ಯಾರ ಮಾತನ್ನು ನಂಬಬೇಕು?

ಷೇರು ಮಾರುಕಟ್ಟೆಯಲ್ಲಿ ವ್ಯವಹರಿಸುವಾಗ ಯಾರ ಸಲಹೆ ತೆಗೆದುಕೊಳ್ಳಬೇಕು, ಯಾರನ್ನು ನಂಬಬೇಕು ಎನ್ನುವ ಗೊಂದಲ ಹಲವರನ್ನು ಕಾಡುವುದು ಸಹಜ. ಇದಕ್ಕೆ ಕಾರಣ, ಪುಕ್ಕಟೆ ಸಲಹೆಕೊಡುವವರ ಸಾಲು. ನೀವು ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುತ್ತಿದ್ದೀರಿ ಎಂದು ತಿಳಿದರೆ ನಿಮಗೆ ಸಲಹೆ ಕೊಡಲು ಸಾಲುಗಟ್ಟಿ ನಿಲ್ಲುವ ಜನರಿದ್ದಾರೆ. ಪುಕ್ಕಟೆ ಸಲಹೆಗಳು ಎಲ್ಲೆಡೆಯಿಂದ ಹರಿದುಬರುತ್ತವೆ. ಪತ್ರಿಕೆಗಳಲ್ಲೂ, ಟಿವಿ, ಇಂಟರನೆಟ್‌ಗಳಲ್ಲೂ ಸಾಕಷ್ಟು ವಿಶ್ಲೇಷಣೆಗಳು ಕಾಣಸಿಗುತ್ತವೆ. ಕೆಲವರು ತಾವು ಹೇಳಿದಂತೆ ಹೂಡಿಕೆ ಮಾಡುವಂತೆ ಒತ್ತಡವನ್ನೂ ಹೇರುತ್ತಾರೆ. ನೀವು ಮಾಡದೆ ಇದ್ದರೆ, ಅವರು ಹೇಳಿದಂತೆ ಮಾರುಕಟ್ಟೆ ಮೇಲೇರಿದಾಗ ಛೇಡಿಸುವವರೂ ಇರುತ್ತಾರೆ. ಆದರೆ, ನೆನಪಿಡಿ ಅವರು ಹೇಳಿದ್ದನ್ನು ನೀವು ಖರೀದಿಸಿ, ನಂತರ ಅದು ಕುಸಿತ ಕಂಡಲ್ಲಿ ಅವರು ನಿಧಾನವಾಗಿ ಕಣ್ಮರೆಯಾಗಿಬಿಡುತ್ತಾರೆ. ಇಲ್ಲಿ ನೆನಪಿಡಬೇಕಾದ ಮುಖ್ಯ ಅಂಶವೆಂದರೆ, ಯಾವುದೇ ಸಲಹೆ ಸಂಪೂರ್ಣ ಸತ್ಯವೂ ಅಲ್ಲ, ಸಂಪೂರ್ಣ ಮಿಥ್ಯವೂ ಅಲ್ಲ. ಯಾವುದನ್ನೂ ಸಾರಾಸಗಟಾಗಿ ತಿರಸ್ಕರಿಸುವುದೂ ಸರಿಯಲ್ಲ, ಯೋಚಿಸದೆ ಒಪ್ಪಿಕೊಳ್ಳುವುದೂ ಸರಿಯಲ್ಲ. ಸಲಹೆ ಮತ್ತು ವಿಶ್ಲೇಷಣೆಗಳನ್ನು ನಮ್ಮದೆ ಲೆಕ್ಕಾಚಾರದೊಂದಿಗೆ ತಾಳೆ ಹಾಕಿ ವ್ಯವಹರಿಸುವುದು ಉತ್ತಮ ಹೂಡಿಕೆದಾರರ ಲಕ್ಷಣ. ಇದಕ್ಕಾಗಿಯೇ ಸ್ವಯಂ ಅಧ್ಯಯನ ಮತ್ತು ನಿರ್ಧಾರಕ್ಕಿಂತ ಉತ್ತಮವಾದದ್ದು ಬೇರೆ ಇಲ್ಲ.
ಹಿಂದಿನ ಲೆಕ್ಕಾಚಾರಗಳು ಮುಂದಿನ ಬೆಳವಣಿಗೆಯ ದಿಕ್ಸೂಚಿಯಾಗಲು ಸಾಧ್ಯವೇ ಇಲ್ಲ. ಹಿಂದೆ 10 ವರ್ಷದಲ್ಲಿ 10 ಪಟ್ಟು ಏರಿಕೆ ಕಂಡ ಷೇರು ಮುಂದಿನ ಹತ್ತು ವರ್ಷದಲ್ಲಿ ನೂರು ಪಟ್ಟು ಇಳಿಕೆ ಕಂಡ ಉದಾಹರಣೆಗಳೂ ಇವೆ. ಬೆಳವಣಿಗೆಯ ವೇಗ ಆಯಾ ಸಂದರ್ಭಕ್ಕನುಗುಣವಾಗಿ, ಮಾರುಕಟ್ಟೆ ಹಲವಾರು ಸ್ಥಿತಿಗತಿಯ ಮೇಲೆ ಅವಲಂಭಿಸಿರುತ್ತದೆಯೇ ವಿನಃ ಯಾವುದೇ ಹಳೆಯ ಲೆಕ್ಕಾಚಾರಗಳನ್ನಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ನಿಮ್ಮ ಪ್ರತಿಕ್ರಿಯೆ – ವಾಟ್ಸಪ್ -8197712235, ಇ ಮೇಲ್ – [email protected]

ಇದನ್ನೂ ಓದಿ – 

ಉಳಿತಾಯ: ತಪ್ಪು ತಿಳಿವಳಿಕೆಯಿಂದ ಮೊದಲು ಹೊರ ಬನ್ನಿ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button