Kannada NewsLatest

ಪ್ರತಿಭಾನ್ವಿತ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ಆರ್ಥಿಕ ಸಹಾಯ ಮಾಡಲು ಜೊಲ್ಲೆ ಕುಟುಂಬ ಸಿದ್ಧ: ಸಚಿವೆ ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ‘ಒಳ್ಳೆಯ ಫಲಿತಾಂಶ ಪಡೆದು ಉನ್ನತ ಶಿಕ್ಷಣ ಪಡೆಯಲು ಬಯಸುವವರು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಜೊಲ್ಲೆ ಮನೆತನದ ಬಾಗಿಲು ಸದಾವಕಾಲ ತೆರೆದಿರುತ್ತದೆ. ಅಂತಹ ವಿದ್ಯಾರ್ಥಿಗಳ ಮುಂದಿನ ಶಿಕ್ಷಣಕ್ಕೆ ಜೊಲ್ಲೆ ಕುಟುಂಬ ಸದಾ ಕಟಿಬದ್ಧ’ ಎಂದು ಮುಜರಾಯಿ, ವಕ್ಫ್ ಮತ್ತು ಹಜ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಶನಿವಾರ ನಗರದ ಗುರುಕೃಪಾ ಮಂಗಲ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ನನ್ನ ಕ್ಷೇತ್ರದ ವಿದ್ಯಾರ್ಥಿಗಳಿಗೆ ಒಳ್ಳೆಯ ಜ್ಞಾನಾರ್ಜನೆಯಾಗಬೇಕು, ಸುಸಜ್ಜಿತ ಶಾಲಾ ಕೊಠಡಿಗಳ ನಿರ್ಮಾಣ, ಕ್ಷೇತ್ರದ ಗ್ರಾಮೀಣ ಪ್ರದೇಶಗಳ ಎಲ್ಲ ರೈತರ ಮಕ್ಕಳಿಗೆ ವಿದ್ಯಾಭ್ಯಾಸ ಸಿಗಬೇಕು, ಉತ್ತಮ ಫಲಿತಾಂಶ ಮೊದಲಾದ ನಾನು ಕಂಡಿದ್ದ ಕನಸ್ಸುಗಳನ್ನು ಬಿಇಓ ರೇವತಿ ಮಠದ ಅವರು ಬಂದಾಗಿನಿಂದ ನನಸಾಗುತ್ತಿವೆ. ಉತ್ತಮ ಫಲಿತಾಂಶಕ್ಕೆ ನಾನು ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆ ನಿಮಿತ್ತ ಮಾತ್ರ. ಇದೆಲ್ಲರ ಶ್ರೇಯ ಬಿಇಓ ರೇವತಿ ಮಠದ ಮತ್ತು ಅವರ ಶಿಕ್ಷಕವೃಂದಕ್ಕೆ ಸಲ್ಲುತ್ತದೆ’ ಎಂದರು.

‘ಎಸ್‌ಎಸ್‌ಎಲ್‌ಸಿ ನಂತರ ಪದವಿಪೂರ್ವ ಘಟ್ಟವು ಜೀವನದಲ್ಲಿಯ ಒಂದು ಟರ್ನಿಂಗ್ ಪಾಯಿಂಟ್ ಇದ್ದಂತೆ. ನಿಮ್ಮ ಪರಿಶ್ರಮವು ಇಲ್ಲಿ ಸಾಫಲ್ಯಗೊಂಡಲ್ಲಿ, ಗಂಭೀರತೆಯಿಂದ ನಿಮ್ಮ ಓದು ಇಲ್ಲಿಯೂ ಮುಂದುವರೆಸಿ ಯಶಸ್ವಿಯಾದಲ್ಲಿ ನಿಮ್ಮ ಜೀವನ ಸುಂದರ ರೀತಿಯಲ್ಲಿ ರೂಪುಗೊಳ್ಳುತ್ತದೆ’ ಎಂದು ಕಿವಿಮಾತು ಹೇಳಿದ ಅವರು ‘ನನ್ನ ಜೀವನದ ಆದರ್ಶರು ನನ್ನ ಶಿಕ್ಷಕರು. ನಾವು ಸಾಧಿಸಬೇಕಾದರೆ ಅದಕ್ಕೆ ಶಿಕ್ಷಕರು ಕಾರಣಿಭೂತರು. ಶಿಕ್ಷಕರು ತೋರಿದ ದಾರಿಯಿಂದ ನಮಗೆ ಸಾಧನೆಗಳು ಒಲಿಯುತ್ತವೆ’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ರೇವತಿ ಮಠದ ಮಾತನಾಡಿ ‘ಸಚಿವೆ ಜೊಲ್ಲೆ ಹಾಗೂ ಸಂಸದ ಜೊಲ್ಲೆಯವರು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿಯ ಎಲ್ಲ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕಗಳನ್ನು ಗಳಿಸಲೆಂದು ‘ಗೆಲುವಿನತ್ತ ನಮ್ಮ ಚಿತ್ತ’ ಎಂಬ ಒಂದು ಕಿರುಹೊತ್ತಿಗೆಯನ್ನು ವಿತರಿಸಿದರು. ಇದರ ಪರಿಣಾಮವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಕ್ಷೇತ್ರದ 54 ಪ್ರೌಢಶಾಲೆಗಳಿಂದ ಸುಮಾರು 4300 ವಿದ್ಯಾರ್ಥಿಗಳಲ್ಲಿ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಬಂದಿದ್ದಾರೆ. ಸುಮಾರು 60ಕ್ಕೂ ಅಧಿಕ ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕಗಳನ್ನು ಪಡೆದು ಕ್ಷೇತ್ರಕ್ಕೆ ಕೀರ್ತಿ ತಂದಿದ್ದಾರೆ. 471 ವಿದ್ಯಾರ್ಥಿಗಳು ಆಯಾ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾರೆ’ ಎಂದರು.

ದಿವ್ಯ ಸಾನಿಧ್ಯ ವಹಿಸಿದ್ದ ಸ್ಥಳೀಯ ವಿರೂಪಾಕ್ಷಲಿಂಗ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ, ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ರಾಮು ಘುಗವಾಡ, ವಿದ್ಯಾರ್ಥಿ ಪ್ರಜ್ವಲ್ ಕಾಂಬಳೆ, ನಿವೃತ್ತ ಶಿಕ್ಷಕ ಚೌಗುಲೆ, ಮಾತನಾಡಿದರು. ಆರಂಭದಲ್ಲಿ ವಿ.ಎಸ್.ಎಂ. ಪ್ರೌಢಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ವಲಯದ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಆದರ್ಶ ಶಿಕ್ಷಕ ಪ್ರಶಸ್ತಿ ವಿಜೇತರನ್ನು ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಿ ಗೌರವಿಸಲಾಯಿತು. ಶಿಕ್ಷಕವರ್ಗದಿಂದ ಸಚಿವರಿಗೆ ಸತ್ಕರಿಸಲಾಯಿತು.

ಈ ಸಂದರ್ಭದಲ್ಲಿ ಸ್ಥಳೀಯಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವೈ. ಗೋಕಾಕ, ಎಪಿಎಂಸಿ ಅಧ್ಯಕ್ಷ ಅಮಿತ ಸಾಳವೆ, ಸ್ಥಳೀಯ ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಉಪಾಧ್ಯಕ್ಷೆ ನೀತಾ ಬಾಗಡೆ, ಸದಸ್ಯರು, ಶಿಕ್ಷಕ ವೃಂದ ಉಪಸ್ಥಿತರಿದ್ದರು.
ಸೆ. 17 ರಂದು ಬೃಹತ್ ಲಸಿಕೆ ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button