Latest

ಬಿಜೆಪಿ ಕಾರ್ಯಕಾರಿಣಿಯಲ್ಲಿ ಬೊಮ್ಮಾಯಿ ವಾಗ್ದಾಳಿ

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಕಾಂಗ್ರೆಸ್ ಗೆ ವೈಚಾರಿಕತೆ, ಸಿದ್ಧಾಂತ, ದೇಶದ ಬಗ್ಗೆ ನಿಖರ ನಿರ್ಣಯಗಳಾಗಲಿ ಇಲ್ಲ, ತೋರಿಕೆಗಾಗಿ ಗಾಂಧಿ ಸಿದ್ಧಾಂತ ಇಟ್ಟುಕೊಂಡರು. ಅದಕ್ಕಾಗಿಯೇ ಮಹಾತ್ಮಾ ಗಾಂಧೀಜಿ ಕಾಂಗ್ರೆಸ್ ನ್ನು ವಿಸರ್ಜಿಸಲು ಹೇಳಿದ್ದರು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದಾವಣಗೆರೆಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಸಿಎಂ, ನಳೀನ್ ಕುಮಾರ್ ಕಟೀಲ್ 2 ವರ್ಷಗಳಿಂದ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಪ್ರತಿ ಎರಡು ತಿಂಗಳಿಗೆ ಕಾರ್ಯಕಾರಿಣಿ ನಡೆಸಿಕೊಂಡು ಬಂದಿದ್ದಾರೆ. ಒಳ್ಳೆಯ ಪರಂಪರೆ ಹಾಕಿದ್ದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕಾಂಗ್ರೆಸ್ ನವರು ತೋರಿಕೆಗಾಗಿ ಗಾಂಧಿ ಸಿದ್ಧಾಂತಗಳನ್ನಿಟ್ಟುಕೊಡು ಇಷ್ಟು ವರ್ಷಗಳ ಕಾಲ ದ್ವಂದ್ವದಲ್ಲಿ ದೇಶವನ್ನು ಆಳಿ ಪ್ರಜಾಪ್ರಭುತ್ವ ಕಾಪಾಡದ ಕಾರಣ ನಾವು ಅದನ್ನು ಸ್ವಚ್ಛಗೊಳಿಸುವ ಕೆಲಸ ಮಾಡಬೇಕಾಗಿದೆ. ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಪ್ರತಿಯೊಬ್ಬರೂ ಅದರಲ್ಲಿ ಪಾಲ್ಗೊಳ್ಳಬೇಕು. ಜನರ ನಾಡಿಮಿಡಿತ ಅರ್ಥಮಾಡಿಕೊಂಡು, ಅವರ ಕಷ್ಟ, ಸಮಸ್ಯೆಗಳಿಗೆ ಸ್ಪಂದಿಸಿ ಜನಪರ ಆಡಳಿತ ನೀಡುವ ಉದ್ದೇಶದಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದರು.

ಬಂಡವಾಳ ಶಾಹಿಗಳಿಗೆ ಪ್ರೋತ್ಸಾಹ ನೀಡಿದವರೇ ಕಾಂಗ್ರೆಸ್ ನವರು. ವಾಮ ಮಾರ್ಗದಿಂದ ಕುಟಿಲ ರಾಜಕಾರಣ ಮಾಡಿ ಬೇರೆ ಪಕ್ಷಗಳು ಯಶಸ್ವಿಯಾಗದಂತೆ ಮಾಡಿದರು. ಬ್ಯಾಂಕ್ ರಾಷ್ಟ್ರೀಕರಣ ಮಾಡಿದರು, ಖಾಸಗೀಕರಣ ಮಾಡಿದ್ದೂ ಅವರೇ. ದೇಶವನ್ನು ಕಾಪಾಡಲೆಂದೇ ಬಿಜೆಪಿಯನ್ನು ಹುಟ್ಟುಹಾಕಲಾಯಿತು. ದೇಶಭಕ್ತಿ, ವೈಚಾರಿಕತೆ, ಸಿದ್ಧಾಂತಗಳ ಮೇಲೆ ಜನರಿಗೆ ಸ್ಪಂದಿಸುವ ಆಡಳಿತ ನೀಡುವ ನಿಟ್ಟಿನಲ್ಲಿ ನಾವು ಅಧಿಕಾರಕ್ಕೆ ಬಂದೆವು. ಪ್ರಧಾನಿ ಮೋದಿಯವರ ನಾಯಕತ್ವ ನಮಗೆ ದೊರೆಯಿತು. ಸರ್ವವ್ಯಾಪಿ, ಸರ್ವಸ್ಪರ್ಶಿ ಆಡಳಿತ ನೀಡಿದವರು ಮೋದಿ.

ಪರಿಪಕ್ವ ನಾಯಕತ್ವ ಎಂಬುದು ಇದ್ದರೆ ಅದು ಬಿಜೆಪಿಯಲ್ಲಿ ಮಾತ್ರ. ಪ್ರಾದೇಶಿಕ ನಾಯಕತ್ವಕ್ಕೆ ಮನ್ನಣೆ ನೀಡಿರುವ ಪಕ್ಷ ಬಿಜೆಪಿ. ಬಿಜೆಪಿ ಕಟ್ಟಿ ಬೆಳೆಸಿದ ಬಿಎಸ್ ವೈ ನಮಗೆ ಸಾಕ್ಷಿ. ಯಡಿಯೂರಪ್ಪ ನಾಯಕತ್ವದಲ್ಲಿ 2ನೇ ಬಾರಿಗೆ ಅಧಿಕಾರ ಸಾಧ್ಯವಾಯಿಉ. ನಮ್ಮ ನೆರೆಹೊರೆ ರಾಜ್ಯದಲ್ಲಿ ಇದು ಏಕೆ ಸಾಧ್ಯವಾಗಿಲ್ಲ? ರಾಜ್ಯದಲ್ಲಿ ಜನರ ಧ್ವನಿಯಾಗಿ ಬಿಎಸ್ ವೈ ನಿಂತಿದ್ದರು. ಹೀಗಾಗಿ ಕರ್ನಾಟಕದಲ್ಲಿ ಇದು ಸಾಧ್ಯವಾಯಿತು. ಸ್ಟ್ರಾಂಗ್ ಸೆಂಟರ್, ಸ್ಟ್ರಾಂಗ್ ಸ್ಟೇಟ್ ಇದು ಬಿಜೆಪಿಯಲ್ಲಿ ಮಾತ್ರ ಕಾಣಸಿಗುತ್ತದೆ ಎಂದು ಹೇಳಿದರು.

ಜನರ ಭಾವನೆಗಳಿಗೆ, ನಾಯಕತ್ವಕ್ಕೆ ಮನ್ನಣೆ ನೀಡಬೇಕು ಅದು ಕಾಂಗ್ರೆಸ್ ನಲ್ಲಿ ಸಾಧ್ಯವಿಲ್ಲ. ಕಾಂಗ್ರೆಸ್ ಕೇಂದ್ರದಲ್ಲೂ ವೀಕ್, ರಾಜ್ಯದಲ್ಲಿಯೂ ವೀಕ್ ಆಗಿದೆ ಎಂದು ಟೀಕಿಸಿದರು.

ಬಿಜೆಪಿ ರಾಜ್ಯ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ದಾವಣಗೆರೆಯಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯ ಕೋರ್ ಕಮಿಟಿ ಸದಸ್ಯರಾಗಿರುವ  ಲಕ್ಷ್ಮಣ ಸವದಿ , ರಾಷ್ಟೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಉಸ್ತುವಾರಿ ಗಳಾಗಿರುವ  ಅರುಣ್ ಸಿಂಗ್,   ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಭಗವಂತ ಖೂಬಾ, ಶೋಭಾ ಕರಂದ್ಲಾಜೆ, ರಾಜ್ಯದ ಸಚಿವರುಗಳಾದ ಗೋವಿಂದ ಕಾರಜೋಳ, ಆರ್. ಅಶೋಕ್ ಹಾಗೂ ಪಕ್ಷದ ರಾಜ್ಯ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬೆಳಗಾವಿಯಲ್ಲಿ 4 ತಿಂಗಳ ಗರ್ಭಿಣಿ ಆತ್ಮಹತ್ಯೆ ಪ್ರಕರಣ; ಗಂಡನ ಕರಾಳ ಮುಖ ಬಯಲು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button