ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರಿನಲ್ಲಿ ಸ್ಥಳೀಯ ಪತ್ರಿಕಾ ಸಂಪಾದಕ ಶಂಕರ್ ಮನೆಯಲ್ಲಿ ಐವರು ಕುಟುಂಬ ಸದಸ್ಯರ ಸಾವು ಪ್ರಕರಣ ಕ್ಷಣ ಕ್ಷಣಕ್ಕೂ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಸಾವಿನ ಮನೆಯಲ್ಲಿ ಮೂರು ಡೆತ್ ನೋಟ್ ಗಳು ಪತ್ತೆಯಾಗಿವೆ.
ಬೆಂಗಳೂರಿನ ತಿಗಳರಪಾಳ್ಯದಲ್ಲಿನ ಶಂಕರ್ ನಿವಾಸದಲ್ಲಿ ಇಂದು ಪೊಲೀಸರು ಪಂಚನಾಮೆ ಮಾಡಿದ್ದು, ಈ ವೇಳೆ ಶಂಕರ್ ಮಗ ಮಧುಸಾಗರ್ ಹಾಗೂ ಪುತ್ರಿಯರಾದ ಸಿಂಚನಾ, ಸಿಂಧೂರಾಣಿ ಬರೆದಿಟ್ಟಿರುವ ಪ್ರತ್ಯೇಕ ಡೆತ್ ನೋಟ್ ಗಳು ಪತ್ತೆಯಾಗಿವೆ. ಮೂವರ ಡೆತ್ ನೋಟ್ ನಲ್ಲಿ ಒಂದೇ ರೀತಿ ಶೀರ್ಷಿಕೆಯಿದ್ದು, ’ಮಕ್ಕಳು, ಮಹಿಳೆಯರಿಗೆ ಕಿರುಕುಳ ನೀಡುವುದು ಇದೇ ಕೊನೆ’ ಎಂದು ಬರೆಯಲಾಗಿದೆ.
ಅಲ್ಲದೇ ಪುತ್ರಿಯರಿಬ್ಬರು ತಮಗೆ ಗಂಡನ ಮನೆಯಲ್ಲಿಯೂ ನೆಮ್ಮದಿಯಿಲ್ಲ, ತಂದೆಯ ಮನೆಯಲ್ಲಿಯೂ ನೆಮ್ಮದಿಯಿಲ್ಲ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು 3-4 ಪುಟಗಳ ಡೆತ್ ನೊಟ್ ನಲ್ಲಿ ಬರೆದಿದ್ದಾರೆ.
ಮಗ ಮಧುಸಾಗರ್ ಬರೆದಿರುವ ಡೆತ್ ನೋಟ್ ನಲ್ಲಿ ತಂದೆಯ ಅಕ್ರಮ ಸಂಬಂಧದ ಬಗ್ಗೆ ಉಲ್ಲೇಖಿಸಿದ್ದಾನೆ. ಇನ್ನು ಮನೆಯಲ್ಲಿ 1 ಕೆಜಿ ಚಿನ್ನಾಭರಣ, 10-13 ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ. ಮನೆಯಲ್ಲಿ ಮಡಿಚಿದ ರೀತಿಯಲ್ಲಿ ಬಿದ್ದಿರುವ ನೋಟುಗಳು ಕೂಡ ಪತ್ತೆಯಾಗಿವೆ. ಡೆತ್ ನೋಟ್ ಪತ್ತೆ ಬೆನ್ನಲ್ಲೇ ಇದೀಗ ಪೊಲೀಸರು ಶಂಕರ್ ವಿರುದ್ಧ ತನಿಖೆ ಚುರುಕುಗೊಳಿಸುವ ಸಾಧ್ಯತೆ ದಟ್ಟವಾಗಿದೆ.
ಬೆಳಗಾವಿಯಲ್ಲಿ 4 ತಿಂಗಳ ಗರ್ಭಿಣಿ ಆತ್ಮಹತ್ಯೆ ಪ್ರಕರಣ; ಗಂಡನ ಕರಾಳ ಮುಖ ಬಯಲು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ