Latest

ಹುಚ್ಚಗಣಿ ದೇವಸ್ಥಾನ ಪುನರ್ ನಿಮಾ೯ಣ ನನ್ನ ಜವಾಬ್ದಾರಿ – ಗ್ರಾಮಸ್ಥರಿಗೆ ಶಾಸಕ ಬಿ.ಹಷ೯ವಧ೯ನ್ ಅಭಯ

ಪ್ರಗತಿವಾಹಿನಿ ಸುದ್ದಿ, ನಂಜನಗೂಡು – ನಂಜನಗೂಡು ತಾಲ್ಲೂಕಿನ ಹುಚ್ಚಗಣಿ ಗ್ರಾಮದಲ್ಲಿ ಮಹದೇವಮ್ಮ ದೇವಸ್ಥಾನ ಪುನರ್ ನಿರ್ಮಾಣ ನನ್ನ ಜವಾಬ್ದಾರಿ. ಈ ವಿಷಯದಲ್ಲಿ ಕೆಲವರು ನನ್ನ ತೇಜೋವಧೆ ಮಾಡಲು ಹುನ್ನಾರ ನಡೆಸಿದ್ದು, ಈ ವಿಷಯವನ್ನು ಸವಾಲಾಗಿ ಸ್ವೀಕರಿಸಿ ಎಲ್ಲರಿಗೂ ಸಮಾಧಾನವಾಗುವಂತೆ ದೇವಸ್ಥಾನ ಪುನರ್ ನಿರ್ಮಾಣ ಮಾಡಿಸುತ್ತೇನೆ. ಈ ವಿಷಯದಲ್ಲಿ ಯಾರಿಗೂ ಸಂಶಯ, ಆತಂಕ ಬೇಡ ಎಂದು ಶಾಸಕ ಬಿ.ಹರ್ಷವರ್ಧನ್ ಗ್ರಾಮಸ್ಥರಿಗೆ ಅಭಯ ನೀಡಿದ್ದಾರೆ.
 ಶ್ರೀ ಮಹದೇವಮ್ಮ ದೇವಸ್ಥಾನ ತೆರವುಗಳಿಸಿದ ಸ್ಥಳಕ್ಕೆ ಶಾಸಕ ಬಿ.ಹಷ೯ವಧ೯ನ್ ಅವರು ಸೋಮವಾರ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿ ಸೇರಿದ್ದ ಗ್ರಾಮಸ್ಥರೊಂದಿಗೆ ಮಾತನಾಡಿದ ಅವರು, ಯಾರು, ಏನೇ ಮಾತನಾಡಲಿ. ಜನರು ಯಾವುದೇ ಸಂಶಯ, ಆತಂಕ ಇಟ್ಟುಕೊಳ್ಳುವುದು ಬೇಡ. ನಾನು ನಿಮ್ಮೊಂದಿಗಿದ್ದೇನೆ. ಬೇರೆಡೆಗಿಂತ ಹೆಚ್ಚಿನ ದೇವಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ನಾನು ಯಶಸ್ವಿಯಾಗಿದ್ದೇನೆ. ಆದರೆ ಹುಚ್ಚಗಣಿ ದೇವಸ್ಥಾನ ಉಳಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಹಾಗಂತ ನಾನು ಸುಮ್ಮನೇ ಕುಳಿತುಕೊಳ್ಳಲಿಲ್ಲ. ಯಾರ್ಯಾರ ಜೊತೆ ಮಾತನಾಡಬೇಕೋ, ಪುನರ್ ನಿರ್ಮಾಣಕ್ಕೆ ಏನಾಗಬೇಕೋ ಅದೆಲ್ಲವನ್ನೂ ಮಾಡುತ್ತಿದ್ದೇನೆ. ಹಾಗಾಗಿ ಯಾರ ಮಾತನ್ನೂ ಕೇಳಬೇಡಿ. ನಾನು ನಿಮ್ಮ ಜೊತೆಗಿದ್ದೇನೆ ಎಂದು ಸ್ಪಷ್ಟವಾಗಿ ತಿಳಿಸಿದರು.
ದೇವಾಲಯ ಪುನರ್ ನಿಮಾ೯ಣಕ್ಕೆ ನನ್ನ ಸ್ವಂತ ಬೆವರಿನಿಂದ ದುಡಿದ 5 ಲಕ್ಷ ರೂ. ಕೊಡುವುದಾಗಿ ಗ್ರಾಮದ ಯಜಮಾನರು, ಮುಖಂಡರಿಗೆ ತಿಳಿಸಿ ಅವರು, ವಾರದೊಳಗೆ ಚೆಕ್ ನ್ನು ನಿಮಗೆ ಹಸ್ತಾಂತರಿಸುತ್ತೇನೆ ಎಂದು ತಿಳಿಸಿದರು. ಗ್ರಾಮಸ್ಥರು ಚಪ್ಪಾಳೆ ತಟ್ಟಿ ಶಾಸಕರ ಹೇಳಿಕೆಗೆ ಹರ್ಷ ವ್ಯಕ್ತಪಡಿಸಿದರು.
 ಹಿಂದೆ ಶಾಸಕರು ಗ್ರಾಮಕ್ಕೆ ಭೇಟಿ ನೀಡಿದ್ದ ಸಂದಭ೯ದಲ್ಲಿ ನಾಗೇಗೌಡ ಎಂಬುವವರು ತನ್ನ ಜಮೀನಿನಲ್ಲಿ 5 ಗುಂಟೆ ಜಾಗ ನೀಡುತ್ತೇನೆ ಎಂದು ಒಪ್ಪಿಗೆ ಸೂಚಿಸಿದ್ದರು. ಅದರಂತೆ ಇಂದು ಶಾಸಕರು ವಿವಿಧ ಮುಖಂಡರ ಜೊತೆ ಹುಚ್ಚುಗಣಿ ದೇವಸ್ಥಾನಕ್ಕೆ ಭೇಟಿ ನೀಡಿ, ಗ್ರಾಮದ ಭಕ್ತಾಧಿಗಳು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ, ನಿಮ್ಮೊಂದಿಗೆ ಸದಾ ನಾನಿದ್ದೇನೆ ಎಂದರು.
 ಹಿಂದೆ ಇದ್ದಂತಹ ಶಾಸಕರು ನಿಮ್ಮ ಊರು ಸಣ್ಣ ಗ್ರಾಮವೆಂದು ತಿಳಿದು ಯಾವುದೇ ಅನುದಾನ ನೀಡಿರಲಿಲ್ಲ, ನಾನು ಶಾಸಕನಾಗಿ ಆಯ್ಕೆಯಾಗಿ ಬಂದ ನಂತರ ನಿಮ್ಮೂರಿನ ಮುಖ್ಯರಸ್ತೆ ಹಾಗೂ ಚರಂಡಿ ಮತ್ತು ಕಾಂಕ್ರೀಟ್ ರಸ್ತೆಗಳಿಗೆ ಸುಮಾರು ಒಂದು ಕೋಟಿ ರೂ. ಅನುದಾನ ನೀಡಿ ಅಭಿವೃದ್ದಿ ಕೆಲಸ ಮಾಡಿದ್ದೇನೆ. ಹಾಗೆಯೇ ಈಗ ನನ್ನ ಸ್ವಂತ ಹಣದಲ್ಲಿ ನಿಮಗೆ 5 ಲಕ್ಷ ರೂ.ಗಳನ್ನು ಒಂದು ವಾರದೊಳಗೆ ಚೆಕ್ ಮೂಲಕ ನೀಡುತ್ತೇನೆ. ಗ್ರಾಮಸ್ಥರು ಪಕ್ಷಾತೀತವಾಗಿ ಸೇರಿ ಟ್ರಸ್ಟ್ ಮಾಡಿಕೊಂಡು ಜಾಗವನ್ನು ಅಳತೆ ಮಾಡಿ ದಾಖಲೆ ಮಾಡಿಕೊಳ್ಳಿ. ಸ್ಥಳಕ್ಕೆ ಎಂಜಿನಿಯರ್ ಕರೆಸಿ ಅಂತಿಮಗೊಳಿಸೋಣ. ನಾನು ಆಡಿದ ಮಾತಿನಂತೆ  ನಡೆದುಕೊಳ್ಳುತ್ತೇನೆ, ಬೊಗಳೆ ಮಾತನಾಡಲು ನನಗೆ ಬರುವುದಿಲ್ಲ. ಮಹದೇವಮ್ಮ ದೇವಾಲಯ ಪುನರ್ ನಿಮಾ೯ಣದ ಜವಾಬ್ದಾರಿ ನನಗೆ ಬಿಡಿ ಎಂದು ಅಭಯ ನೀಡಿದರು.
ನಮ್ಮ ಕ್ಷೇತ್ರದಲ್ಲಿ ಸಾಕಷ್ಟು ದೇವಸ್ಥಾನಗಳನ್ನು ನಾನು ಉಳಿಸಿಕೊಂಡಿದ್ದೇನೆ. ಹುಚ್ಚಗಣಿ ದೇವಸ್ಥಾನವನ್ನು ಮಾತ್ರ ಬೇರೆ ಬೇರೆ ಕಾರಣಗಳಿಂದ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬೇರೆಡೆ ಅನೇಕ ದೇವಸ್ಥಾನಗಳನ್ನು ಕೆಡವಲಾಗಿದೆ. ಆದರೆ ಹುಚ್ಚಗಣಿ ದೇವಸ್ಥಾನ ಕೆಡವಿದ್ದು ಮಾತ್ರ ಭಾರಿ ಪ್ರಚಾರ ಪಡೆಯಿತು. ನಾವೆಲ್ಲ ಸುಪ್ರಿಂ ಕೋರ್ಟ್ ಮತ್ತು ಸಂವಿಧಾನಕ್ಕೆ ತಲಬಾಗಲೇಬೇಕಾಗಿದೆ. ಗ್ರಾಮಸ್ಥರು ಇತರರ ಮಾತುಗಳನ್ನ ಕೇಳದೆ ಗ್ರಾಮದಲ್ಲಿ ಶಾಂತಿ – ಸಾಹೌದ೯ತೆ ಕಾಪಾಡಿಕೊಳ್ಳಬೇಕಿದೆ. ಈ ಮೂಲಕ ‘ನಂಜನಗೂಡು ಶಾಂತಿಯಗೂಡು’ ಎಂಬ ಸಂದೇಶವನ್ನು ಸಾರಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಬಿಜೆಪಿ ಗ್ರಾಮಾಂತರ ಮಂಡದ ಅಧ್ಯಕ್ಷರಾದ ಮಹೇಶ್, ತಾ.ಪಂ. ಮಾಜಿ ಅಧ್ಯಕ್ಷರಾದ ಬಿ.ಎಸ್.ಮಹದೇವಪ್ಪ, ಕುಂಬ್ರಳ್ಳಿ ಸುಬ್ಬಣ್ಣ, ಕೆಂಡಗಣ್ಣಪ್ಪ, ಕೆಂಪಣ್ಣ, ಬಸಪ್ಪ, ಪರಶಿವಮೂತಿ೯, ರಜಾಕ್ ಮುಂತಾದವರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button