ಎನ್ಇಪಿ ಯಶಸ್ವಿ ಅನುಷ್ಠಾನಕ್ಕೆ ಕ್ರಮ: ಮುಖ್ಯಮಂತ್ರಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –  ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಎಲ್ಲ ರೀತಿಯಲ್ಲೂ ಬೆಂಬಲ ನೀಡಲಾಗುವುದು. ಈ ನೀತಿಯ ಯಶಸ್ವಿ ಅನುಷ್ಠಾನಕ್ಕೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ವಿಷಯಗಳ ಕುರಿತು ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಭಾರತೀಯರಿಂದ ಭಾರತೀಯರಿಗಾಗಿ ರೂಪಿಸಿದ್ದು, ಅತ್ಯಂತ ಪ್ರಸ್ತುತತೆ ಹೊಂದಿದೆ. ಈ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಯುವ ಪೀಳಿಗೆಗೆ ಉತ್ತಮ ಭವಿಷ್ಯ ರೂಪಿಸಲು ಸಾಧ್ಯವಾಗುವುದು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.
ಈ ನಿಟ್ಟಿನಲ್ಲಿ ಇಲಾಖೆಯ ಎಲ್ಲ ಭಾಗೀದಾರರಿಗೆ ಅರಿವು ಮೂಡಿಸುವ ಕೆಲಸವಾಗಬೇಕಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತೂ ಸಹ ಚರ್ಚಿಸಲಾಯಿತು.

ಆರ್ ಅಂಡ್ ಡಿ ಪಾಲಿಸಿ

ರಾಜ್ಯ ಸರ್ಕಾರವು ಸಂಶೋಧನೆ ಮತ್ತು ಅಭಿವೃದ್ಧಿಗೆ ಪ್ರತ್ಯೇಕ ನೀತಿ ಜಾರಿಗೊಳಿಸಲು ಉದ್ದೇಶಿಸಿದ್ದು, ಇದಕ್ಕಾಗಿ ಕಾರ್ಯಪಡೆ ರಚಿಸಲು ಕ್ರಮ ವಹಿಸುವಂತೆ ಉನ್ನತ ಶಿಕ್ಷಣ, ಐಟಿ, ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ತಿಳಿಸಿದರು. ಈ ಕಾರ್ಯಪಡೆಯಲ್ಲಿ ಐಐಟಿ, ಐಐಎಸ್.ಸಿ., ಸಿ.ಎಫ್.ಟಿ.ಆರ್.ಐ ಸೇರಿದಂತೆ ಸರ್ಕಾರಿ ಮತ್ತು ಖಾಸಗಿ ವಲಯಗಳ ಪ್ರತಿನಿಧಿಗಳನ್ನು ನೇಮಕ ಮಾಡುವಂತೆ ಸಲಹೆ ನೀಡಿದರು.
ರಾಜ್ಯದಲ್ಲಿ ವಿಶ್ವವಿದ್ಯಾನಿಲಯಗಳೂ ಸೇರಿದಂತೆ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ, ಉದ್ಯಮಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದೆ. ಇದಕ್ಕೆ ಈ ನೀತಿ ಪೂರಕವಾಗಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಸಭೆಯಲ್ಲಿ ಉನ್ನತ ಶಿಕ್ಷಣ, ಐಟಿ, ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಿ. ಕುಮಾರ ನಾಯಕ್, ಇಲಾಖೆ ಆಯುಕ್ತ ಪ್ರದೀಪ್ ಮೊದಲಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button