Kannada NewsKarnataka News

ಬಿಜೆಪಿ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ – ಶಂಕರಗೌಡ ಪಾಟೀಲ ವ್ಯಂಗ್ಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪ್ರವಾಹದಿಂದಾಗಿ ಹಾಳಾಗಿರುವ ರಸ್ತೆಗಳ ದುರಸ್ತಿಗೆ ಹಣ ಬಿಡುಗಡೆ ಮಾಡದ ರಾಜ್ಯದ ಬಿಜೆಪಿ ಸರಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರೇ ಪ್ರತಿಭಟನೆ ನಡೆಸುತ್ತಿರುವುದು ವಿಪರ್ಯಾಸವಾಗಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ ಹೇಳಿದ್ದಾರೆ.

ಈ ಕುರಿತು ಅವರು ಹೇಳಿಕೆ ನೀಡಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ರಸ್ತೆಗಳು ಪ್ರವಾಹದಿಂದಾಗಿ ಹಾಳಾಗಿವೆ. ಬಹುತೇಕ ಎಲ್ಲ ರಸ್ತೆಗಳನ್ನೂ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಬೇರೆಬೇರೆ ಮೂಲಗಳಿಂದ ಅನುದಾನ ತಂದು ಅಭಿವೃದ್ಧಿ ಮಾಡಿಸಿದ್ದಾರೆ. 4 ರಸ್ತೆಗಳು ಮಾತ್ರ ಅನುದಾನ ಕೊರತೆಯಿಂದಾಗಿ ಇನ್ನೂ ಕೆಲಸವಾಗುವುದು ಬಾಕಿ ಉಳಿದಿದೆ. ಇದಕ್ಕೂ ಅನುದಾನ ತರಲು ಶಾಸಕರು ಪ್ರಯತ್ನ ನಡೆಸುತ್ತಿದ್ದಾರೆ.

ಸರಕಾರ ಈ ರಸ್ತೆಗಳಿಗೆ ಅನುದಾನ ನೀಡದಿರುವುದನ್ನು ಪ್ರತಿಭಟಿಸಿ ಇದೀಗ ಬಿಜೆಪಿ ಕಾರ್ಯಕರ್ತರು ಬ್ಯಾನರ್ ಹಚ್ಚುವ, ಕಲ್ಲು, ಮಣ್ಣು ತಂದು ಮುಚ್ಚುವ ನಾಟಕ ಮಾಡುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮದೇ ಕಾರ್ಯಕರ್ತರ ಪ್ರತಿಭಟನೆಯಿಂದಾದರೂ ಸರಕಾರ ಎಚ್ಚೆತ್ತುಕೊಂಡು ಶೀಘ್ರ ಅನುದಾನ ಬಿಡುಗಡೆ ಮಾಡಿದರೆ ಒಳ್ಳೆಯದು ಎಂದು ಅವರು ಹೇಳಿದ್ದಾರೆ.

ಉಚಗಾಂವ್ – ಅತ್ತಿವಾಡ, ಬೆನಕನಳ್ಳಿ – ಬೆಳಗುಂದಿ, ಹಲಗಾ- ತಾರಿಹಾಳ ಮತ್ತು ಬಸಾಪುರ -ಮೋದಗಾ ಈ 4 ರಸ್ತೆಗಳನ್ನು ಬಿಟ್ಟರೆ ಇಡೀ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕರ ವಿರುದ್ಧ ಮಾತನಾಡಲು ಬಿಜೆಪಿ ಕಾರ್ಯಕರ್ತರಿಗೆ ಏನೂ ಇಲ್ಲ. ಎಲ್ಲವನ್ನೂ ಶಾಸಕರು ಅಭಿವೃದ್ಧಿಪಡಿಸಿದ್ದಾರೆ. ಹೊಲಹಗಳಿಗೆ ಹೋಗುವ ಕೆಲವು ರಸ್ತೆಗಳನ್ನು ಅಭಿವೃದ್ಧಿಪಡಿಸಲು ಸಹ ಈಗ ಶಾಸಕರು ಕ್ರಮ ತೆಗೆದುಕೊಂಡಿದ್ದಾರೆ ಎಂದು ಶಂಕರಗೌಡ ಪಾಟೀಲ ತಿಳಿಸಿದ್ದಾರೆ.

ಪ್ರವಾಹದಿಂದ ಹಾಳಾಗಿರುವ ರಸ್ತೆಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಹಿಂದಿನ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರ ಬಳಿ ಸಾಕಷ್ಟು ಬಾರಿ ಶಾಸಕರು ವಿನಂತಿಸಿದ್ದಾರೆ. ಆದರೆ ಅವರಿಂದ ಸ್ಪಂದನೆ ಸಿಕ್ಕಿಲ್ಲ. ಈಗ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯ ಮೂಲಕ ಸಚಿವರ, ಸರಕಾರದ ವೈಫಲ್ಯವನ್ನು ಜನರಿಗೆ ಎತ್ತಿ ತೋರಿಸುತ್ತಿದ್ದಾರೆ. ಜನರು ಇದನ್ನೆಲ್ಲ ಅರ್ಥ ಮಾಡಿಕೊಳ್ಳದಷ್ಟು ದಡ್ಡರಲ್ಲ ಎಂದು ಅವರು ಹೇಳಿದ್ದಾರೆ.

ಪ್ರವಾಹ, ಕೊರೋನಾದಂತಹ ಸಂದಿಗ್ದ ಪರಿಸ್ಥಿತಿಯಲ್ಲೂ ಇತಿಹಾಸದಲ್ಲೇ ಮೊದಲ ಬಾರಿಗೆ ಬೆಳಗಾವಿ ಗ್ರಾಮೀಣ ಕ್ಷೇತ್ರ ಅಭಿವೃದ್ಧಿ ಕಂಡಿರುವುದನ್ನು ಜನರು ಗಮನಿಸುತ್ತಿದ್ದಾರೆ. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ನಿರಂತರ ಶ್ರಮ, ಇಡೀ ಕ್ಷೇತ್ರವನ್ನು ತಮ್ಮ ಕುಟುಂಬ ಎನ್ನುವಂತೆ ನೋಡಿ ಸ್ಪಂದಿಸುತ್ತಿರುವ ರೀತಿಗೆ ಜನರು ಖುಷಿಯಾಗಿದ್ದಾರೆ. ಆದರೆ ಇದನ್ನೆಲ್ಲ ನೋಡಿ ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ತಾವೇ ರಾತ್ರಿ ವೇಳೆ ಅಸಹ್ಯಕರ ಬ್ಯಾನರ್ ಕಟ್ಟಿ ಮರಾಠಿ ಭಾಷಿಕರು ಕಟ್ಟಿದ್ದಾರೆಂದು ಹೇಳಿ ಮರಾಠಿಗರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಶಂಕರಗೌಡ ಪಾಟೀಲ ಕಿಡಿಕಾರಿದ್ದಾರೆ.

 

ಸ್ಮಾರ್ಟ್ ಶಿಕ್ಷಣದತ್ತ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಲಕ್ಷ್ಯ: ಮೊದಲ ಹಂತದಲ್ಲಿ 20 ಸ್ಮಾರ್ಟ್ ಕೊಠಡಿ ನಿರ್ಮಾಣ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button