ಎಸ್ಟಿ ಸಮುದಾಯಕ್ಕೆ ಶೇ.7.5 ರಷ್ಟು ಮೀಸಲಾತಿ ಕಲ್ಪಿಸಲು ಸಿಎಂ ಬೊಮ್ಮಾಯಿ ಶೀಘ್ರ ಕ್ರಮ ಕೈಗೊಳ್ಳಲಿ: ಸತೀಶ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ; ಗೋಕಾಕ: ಎಸ್ಟಿ ಸಮುದಾಯಕ್ಕೆ ಶೇ.7.5 ರಷ್ಟು ಮೀಸಲಾತಿ ಕಲ್ಪಿಸಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಒತ್ತಾಯಿಸಿದರು.
ಇಲ್ಲಿನ ಹಿಲ್ ಗಾರ್ಡನ್ ಗೃಹಕಚೇರಿಯಲ್ಲಿ ಇಂದು (ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಲು ಪೂರಕವಾದ ವರದಿ, ದಾಖಲಾತಿ ಹಾಗೂ ಅಂಕಿಅಂಶಗಳು ಸರ್ಕಾರದ ಮುಂದಿವೆ. ಸರ್ಕಾರ ಸಂವಿಧಾನಾತ್ಮಕವಾಗಿ ನೀಡಬೇಕಾದ ಹಕ್ಕು ಇದಾಗಿದೆ. ಹೀಗಾಗಿ, ಮತ್ತೆ ವಿಳಂಬ ಮಾಡದೇ ಶೀಘ್ರ ಮೀಸಲಾತಿ ಒದಗಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದರು.
ರೈತರ ಹತ್ಯೆ, ಪ್ರಿಯಾಂಕಾ ಗಾಂಧಿ ಬಂಧನ ಖಂಡನೀಯ:
ಉತ್ತರಪ್ರದೇಶದ ಲಖಿಂಪುರದಲ್ಲಿ ಕೇಂದ್ರ ಸಚಿವರ ಮಗನೇ ಪ್ರತಿಭಟನಾನಿರತ ರೈತರ ಮೇಲೆ ಕಾರು ಹತ್ತಿಸಿ, ಕೊಲೆ ಮಾಡಿರುವುದು ಹಾಗೂ ರೈತರು ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ತೆರಳುತ್ತಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿರುವುದು ಖಂಡನೀಯ.
ಸರ್ಕಾರ ಕೊಲೆಗಾರರನ್ನು ಬಂಧಿಸುವುದನ್ನು ಬಿಟ್ಟು, ಕುಟುಂಬಸ್ಥರಿಗೆ ಸಾಂತ್ವನ ಹೇಳಲು ತೆರಳುತ್ತಿದ್ದ ಜನನಾಯಕಿಯನ್ನು ಬಂಧಿಸಿದೆ. ಸರ್ಕಾರ ನಾಯಕರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಪ್ರಿಯಾಂಕಾ ಗಾಂಧಿ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು. ಕೊಲೆ ಆರೋಪಿಗಳನ್ನು ಕೂಡಲೇ ಬಂಧಿಸಿ, ಶಿಕ್ಷೆ ನೀಡಬೇಕು. ಮೃತ ರೈತರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಬಿಡುಗಡೆ ಮಾಡಬೇಕು ಎಂದು ಸತೀಶ ಆಗ್ರಹಿಸಿದರು.
ಕೆಲಸದಾಳಿಗೆ ಹೊಡೆದ ಗುಂಡು ಮಗನ ತಲೆಗೆ ಬಡಿಯಿತು!
ಶಾಲಾ ಹಂತದಲ್ಲಿಯೇ ತಂತ್ರಜ್ಞಾನ ಶಿಕ್ಷಣ: ಮುಖ್ಯಮಂತ್ರಿ ಸಲಹೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ