ರೈತರ ಕಣ್ಣೀರು ಒರೆಸುವ ದಿಲೀಪ್ ಕುಮಾರ್ ಕನಸಿಗೆ ನೀರೆರೆದ ಸಚಿವರು

 ಬಿಕ್ಕೆಗುಡ್ಡ, ಹಾಗಲವಾಡಿ ಕೆರೆಗೆ ಹೇಮೆ ನೀರು: ಶೀಘ್ರದಲ್ಲೇ ಯೋಜನೆ ಅನುಷ್ಠಾನ -ಸಚಿವ ಮಾಧುಸ್ವಾಮಿ ಘೋಷಣೆ

 

ಪ್ರಗತಿವಾಹಿನಿ ಸುದ್ದಿ, ಗುಬ್ಬಿ – ತಾಲ್ಲೂಕಿನ ಬಿಕ್ಕೆಗುಡ್ಡ ಮತ್ತು ಹಾಗಲವಾಡಿ ಕೆರೆಗೆ ಹೇಮಾ ನದಿ ನೀರು ಹರಿಸುವ ಯೋಜನೆಯ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲಾಗಿದ್ದು, ಕೆಲವೇ ದಿನಗಳಲ್ಲಿ ಆ ಭಾಗದಲ್ಲಿರುವ ಇನ್ನಿತರ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ರಾಜ್ಯ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಘೋಷಿಸಿದ್ದಾರೆ.

ಗುಬ್ಬಿ ತಾಲ್ಲೂಕಿನ ಕಡಬಾ ಹೋಬಳಿಯ ಯಲಚಿಹಳ್ಳಿ ಗ್ರಾಮದಲ್ಲಿ ಹೇಮಾವತಿ ನೀರಿನಿಂದ ಕೆರೆ ತುಂಬಿದ ಹಿನ್ನೆಲೆಯಲ್ಲಿ ಗಂಗಾ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಬಿಕ್ಕೆಗುಡ್ಡ ಯೋಜನೆಗೆ ಈಗಾಗಲೆ ಚಾಲನೆ ನೀಡಲಾಗಿದೆ. ಶೀಘ್ರದಲ್ಲೇ ಈ ಯೋಜನೆ ಪೂರ್ಣಗೊಳ್ಳಲಿದೆ. ಹಾಗಲವಾಡಿ ಕೆರೆಗೆ ನೀರು ಹರಿಸಲು ವಿಶೇಷ ಮೇಲ್ಗಾಲುವೆ ನಿರ್ಮಾಣಕ್ಕೂ ಸಮ್ಮತಿ ದೊರಕಲಿದೆ. ಬೆಳೆ ಪರಿಹಾರ ಸೇರಿದಂತೆ ಇನ್ನಿತರ  ಸಮಸ್ಯೆಗಳನ್ನು ಅತೀ ಶೀಘ್ರದಲ್ಲಿ ಬಗೆಹರಿಸಲಾಗುವುದು ಎಂದು ಮಾಧುಸ್ವಾಮಿ ಭರವಸೆ ನೀಡಿದರು.

ತಾಲೂಕಿನ ಮಂಚಲದೊರೆ ಭಾಗದ ಕೆರೆಗಳಿಗೆ ನೀರು ಹರಿಸುವ ಯೋಜನೆ ಜಾರಿಗೆ ಸಮಸ್ಯೆಗಳಿವೆ.  2 ಬಾರಿ ಪ್ರಸ್ತಾವನೆ ವಾಪಸಾಗಿದೆ. ಆದರೆ ಈ ಯೋಜನೆಗೂ ಸೂಕ್ತ ಪರಿಹಾರ ಕಂಡುಕೊಂಡು ಶೀಘ್ರದಲ್ಲೇ ಅನುಷ್ಠಾನಗೊಳಿಸಲಾಗುತ್ತದೆ ಎಂದೂ ಸಚಿವರು ಭರವಸೆ ನೀಡಿದರು.

ಜಿಲ್ಲೆಯ ಕಡಬ ಮತ್ತು ಸಿ ಎಸ್ ಪುರ ಕೆರೆಗೆ ನೀರು ಹರಿಸುವ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಈ ಪ್ರಮುಖ ಕೆರೆಗಳು ಬಹು ನಿರೀಕ್ಷೆಯಲ್ಲಿವೆ ಎಂದು ಅವರು ತಿಳಿಸಿದರು.
ಇದಕ್ಕೂ ಮೊದಲು ಮಾತನಾಡಿದ್ದ ಬಿಜೆಪಿ ಮುಖಂಡ ದಿಲೀಪ್ ಕುಮಾರ್, ಗುಬ್ಬಿ ತಾಲೂಕಿನ ಕೆರೆಗಳಿಗೆ ನೀರು ಹರಿಸುವ ಅವಶ್ಯಕತೆ ಮತ್ತು ಅದರ ಮಹತ್ವದ ಕುರಿತು ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದರು.
 ಈ ಭಾಗದ ಸಾಕಷ್ಟು ಕೆರೆಗಳಿಗೆ ನೀರು ಹರಿಯುತ್ತಿದೆ. ಆದರೆ ನೀರು ಹರಿಯುವ ಸಂದರ್ಭದಲ್ಲಿ ನಾಲೆಯಲ್ಲಿ ಸಾಕಷ್ಟು ಮಣ್ಣು ತುಂಬುವುದರಿಂದ ನೀರು ಹರಿಯುವ ಪ್ರಕ್ರಿಯೆ ನಿಧಾನವಾಗುತ್ತಿದೆ. ಹಾಗಾಗಿ ಎಲ್ಲಾ ನಾಲೆಗಳನ್ನೂ ವೈಜ್ಞಾನಿಕವಾಗಿ ನಿರ್ಮಾಣ ಮಾಡಿದರೆ ನೀರು ಸರಾಗವಾಗಿ ಕೆರೆಗಳಿಗೆ ಹರಿದು ಈ ಭಾಗದ ರೈತರಿಗೆ ಅನುಕೂಲವಾಗುತ್ತದೆ ಎಂದೂ ದಿಲೀಪ್ ಕುಮಾರ ತಿಳಿಸಿದ್ದರು.
ದಿಲೀಪ್ ಕುಮಾರ ಅವರ ಪ್ರಸ್ತಾವನೆಗೆ ಸಚಿವ ಮಾಧುಸ್ವಾಮಿ ಸ್ಥಳದಲ್ಲೇ ಒಪ್ಪಿಗೆ ಸೂಚಿಸಿ, ಆ ಭಾಗದ ರೈತರ ಕಣ್ಣೀರು ಒರೆಸುವ ಸ್ಪಷ್ಟ ಭರವಸೆ ನೀಡಿದರು.

 

ಹಾಸನದವರಿಗೆ ಮನಸ್ಸಿರಲಿಲ್ಲ

 

ಹಾಸನ ಮಂಡ್ಯ ತುಮಕೂರು ಎಲ್ಲಿಯೂ ಸಹ ಹೇಮಾವತಿ ನೀರಿನ ಸಮಸ್ಯೆ ಆಗದ ರೀತಿಯಲ್ಲಿ ಆಡಳಿತ ವ್ಯವಸ್ಥೆಯನ್ನು ಮಾಡಿದ ಪರಿಣಾಮ ಯಾವುದೇ ಸಮಸ್ಯೆಗಳಿಲ್ಲದೆ ನಾಲೆಯಲ್ಲಿ ನೀರು ಹರಿಯುತ್ತಿದೆ ಎಂದು ಮಾಧುಸ್ವಾಮಿ ತಿಳಿಸಿದರು
 ಹಾಸನದವರಿಗೆ ತುಮಕೂರು ಜಿಲ್ಲೆಗೆ ನೀರು ಬಿಡಬೇಕು ಎಂಬ ಮನಸ್ಸು ಇರಲಿಲ್ಲ. ಆದರೆ ನಮ್ಮ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಸರಿಯಾದ ರೀತಿಯಲ್ಲಿ ಯೋಜನೆ ಮಾಡಿ ಎಲ್ಲಾ ಭಾಗದಲ್ಲಿಯೂ  ನೀರು ಹರಿಸುವಂತಹ ಕೆಲಸವನ್ನು ಮಾಡಲಾಗುತ್ತಿದೆ. ಕರ್ನಾಟಕದ 71 ತಾಲ್ಲೂಕುಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು ಮರುಭೂಮಿಯಾಗಿ ಸೃಷ್ಟಿಯಾಗಿದೆ. ಅಂತರ್ಜಲ ಸುಮಾರು 1200 ಅಡಿ ಆಳ ತಲುಪಿದ್ದು ಅಲ್ಲಿಂದ ನೀರು ತೆಗೆಯುವುದೇ ಬಹಳ ಕಷ್ಟಕರವಾಗಿದೆ ಎಂದು ಸಚಿವರು ಹೇಳಿದರು.
  ಪ್ರಧಾನಿ ನರೇಂದ್ರ ಮೋದಿಯವರು ಅಟಲ್ ಭೂಜಲ ಯೋಜನೆಯನ್ನು ಜಾರಿಗೆ ತಂದಿದ್ದು ಯಾವ ಬೆಳೆಗೆ ಎಷ್ಟು ಪ್ರಮಾಣದಲ್ಲಿ ನೀರನ್ನು ಹರಿಸಬೇಕು, ಹೇಗೆ ನೀರನ್ನು ಸಂಗ್ರಹ ಮಾಡಬೇಕು ಎಂಬ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಮಾಧುಸ್ವಾಮಿ ವಿವರಿಸಿದರು.

ಹೊಸಬರನ್ನು ತಂದು ಗೆಲ್ಲಿಸುವ ಶಕ್ತಿ ಪಕ್ಷಕ್ಕಿದೆ

 ಹಲವು ಮುಖಂಡರು ಪಕ್ಷ ಬಿಡುವ ವದಂತಿ ಕುರಿತು ಪ್ರಸ್ತಾಪಿಸಿ, ಈ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಇವೆಲ್ಲ ಕೇವಲ ವದಂತಿ.  ಪಕ್ಷ ಬಿಡುವವರ ಬಗ್ಗೆ ಬಿಜೆಪಿಗೆ ಭಯವಿಲ್ಲ.ಬಿಜೆಪಿ ಸಾಕಷ್ಟು ಗಟ್ಟಿಯಾಗಿದೆ. ಹೊಸಬರನ್ನು ತಂದು ಗೆಲ್ಲಿಸುವ ಶಕ್ತಿ ಪಕ್ಷಕ್ಕಿದೆ ಎಂದು ಸ್ಪಷ್ಟಪಡಿಸಿದರು.
 ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂದ್ರಶೇಖರಬಾಬು ಮಾತನಾಡಿ, ಮಾಧುಸ್ವಾಮಿ ಅವರು ಜಿಲ್ಲಾ ಉಸ್ತುವಾರಿ ಸಚಿವರೂ, ಸಣ್ಣನೀರಾವರಿ ಸಚಿವರೂ ಆಗಿರುವುದರಿಂದ ಇಡೀ ಜಿಲ್ಲೆಯಲ್ಲಿ ಸಮಗ್ರ ನೀರಾವರಿ ವ್ಯವಸ್ಥೆಯು ನಿರ್ಮಾಣವಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಸಿಲ್ದಾರ್ ಬಿ ಆರತಿ, ಬಿಜೆಪಿ ಮುಖಂಡರಾದ ಪಾರ್ಥಸಾರಥಿ, ಸಾಗರನಹಳ್ಳಿ ನಂಜೇಗೌಡ, ರೈತಸಂಘದ ಗುರುಚನ್ನಬಸಪ್ಪ, ಗ್ರಾಮ ಪಂಚಾಯಿತಿ ಸದಸ್ಯ ನಂದೀಶ್, ಸದಾಶಿವಯ್ಯ  ಇನ್ನಿತರರು ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button