ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಸವಣ್ಣ ಒಬ್ಬ ವಿಶ್ವ ನಾಯಕ, ಅವರ ಸಿದ್ಧಾಂತಗಳನ್ನು ಅರಿತವರೇ ಲಿಂಗಾಯತರು. ಲಿಂಗಾಯತರಿಗಷ್ಟೇ ಸೀಮಿತರಾದವರು ಅವರಲ್ಲ, ದೇಶದಲ್ಲಿ ಇರುವ ಎಲ್ಲರಿಗೂ ಬೇಕಾದವರಲ್ಲಿ ಒಬ್ಬರು ನಮ್ಮ ಮಹಾತ್ಮ ವಿಶ್ವಗುರು ಬಸವಣ್ಣನವರು ಎಂದು ಬೈಲೂರು ನಿಷ್ಕಲ ಮಂಟಪದ ಸಂಸ್ಥಾಪಕಾರದ ಶ್ರೀ ನಿಜಗುಣಾನಂದ ಮಹಾಸ್ವಾಮೀಜಿಗಳು ಹೇಳಿದರು. ಬೈಲಹೊಂಗಲ ತಾಲೂಕಿನ ಗಿರಿಯಾಲ(ಕೆಬಿ) ಗ್ರಾಮದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಮಹಾ ಮಾನವತಾವಾದಿ, ಸ್ತ್ರೀಕುಲೋದ್ಧಾರಕ, ದಲಿತೋದ್ಧಾರಕ, ಲಿಂಗಾಯತ ಧರ್ಮ ಸಂಸ್ಥಾಪಕ ಗುರು ಬಸವಣ್ಣನವರ ಅಶ್ವರೂಢ ಕಂಚಿನ ಮೂರ್ತಿಯನ್ನು ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು ಹಾಗೂ ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಅದ್ಧೂರಿಯಾಗಿ ಅನಾವರಣಗೊಳಿಸಲಾಯಿತು.
ಶ್ರೀ ಬಸವೇಶ್ವರ ಪುತ್ಥಳಿ ಅನಾವರಣ ಹಿನ್ನೆಲೆ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣವೇ ತುಂಬಿತ್ತು. ನಂತರ ಕಾರ್ಯಕ್ರಮ ಉದ್ದೇಶಿಸಿ ಶ್ರೀ ನಿಜಗುಣಾನಂದ ಮಹಾಸ್ವಾಮೀಜಿಗಳು ಮಾತನಾಡಿ, ಬಸವಣ್ಣನವರ ತ್ಯಾಗವೇ ಬಹಳ ವಿಭಿನ್ನವಾದ ತ್ಯಾಗ. ಬಸವಣ್ಣನವರು ದೇವರನ್ನು ಕಾಣಲು ತ್ಯಾಗ ಮಾಡಿದವರಲ್ಲ. ತಮ್ಮ ಆತ್ಮವನ್ನು ಸಾಕ್ಷಾತ್ಕಾರ ಮಾಡಿಕೊಂಡು ದೇವರನ್ನು ಕೂಡಬೇಕು ಎಂದು ಮನೆ ಬಿಟ್ಟವರಲ್ಲ. ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಪ್ರಧಾನಮಂತ್ರಿ ಆಗಿ ಮೆರೆಯಬೇಕು ಎಂದು ಮನೆ ಬಿಟ್ಟವರಲ್ಲ. ಕರಣಿಕನಾಗಬೇಕು, ದಂಡನಾಯಕನಾಗಬೇಕು ಎಂದು ತ್ಯಾಗ ಮಾಡಿದವರಲ್ಲ. ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಮನುಷ್ಯನನ್ನಾಗಿಯೇ ನೋಡಬೇಕು ಎಂದು ತ್ಯಾಗ ಮಾಡಿದವರು ಎಂದು ಸ್ಮರಿಸಿಕೊಂಡರು. ಈ ಸಂದರ್ಭದಲ್ಲಿ ಲಿಂಗಾಯತ ಮುಖಂಡ ಶಂಕರ ಗುಡಸ ಮಾತನಾಡಿ, ಬರೀ ಬಸವಣ್ಣನವರ ಮೂರ್ತಿ ಇಡುವುದರಿಂದ ಕೆಲಸ ಮುಗಿಯುವುದಿಲ್ಲ. ಈಗ ನಿಮ್ಮ ಕೆಲಸ ಆರಂಭವಾಯಿತು. ಬಸವಾದಿ ಶರಣರ ತತ್ವಗಳನ್ನು ಮೈಗೂಡಿಸಿಕೊಂಡು ಶರಣಮಾರ್ಗದಲ್ಲಿ ಸಾಗಿದರೆ ಮಾತ್ರ ನಿಜಕ್ಕೂ ನಿಮ್ಮ ಜೀವನ ಸಾರ್ಥಕವಾಗುತ್ತದೆ. ಬಸವಣ್ಣನವರು ಕೇವಲ ಲಿಂಗಾಯತರ ಸ್ವತ್ತಲ್ಲ, ಎಲ್ಲ ಜಾತಿ, ಧರ್ಮಗಳ, ಇಡೀ ವಿಶ್ವದ ಸ್ವತ್ತು ಎಂದರು. ಇಂದಿನ ಕಾರ್ಯಕ್ರಮದಲ್ಲಿ ಶಾಸಕ ಮಹಾಂತೇಶ ದೊಡ್ಡಗೌಡರ, ಮಾಜಿ ಜಿ.ಪಂ.ಸದಸ್ಯೆ ರೋಹಿಣಿ ಪಾಟೀಲ್, ಲಿಂಗಾಯತ ಮುಖಂಡರಾದ ಶಿವಪ್ಪ ಇಟಗಿ, ಗಿರೀಶ್ ಇಟಗಿ, ಅಡಿವೇಶ ಇಟಗಿ ಸೇರಿದಂತೆ ಗ್ರಾಮದ ನೂರಾರು ಜನರು ಭಾಗಿಯಾಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ