2021-22 ನೇ ಸಾಲಿನ 66ನೇ ರಾಜ್ಯೋತ್ಸವ ಪ್ರಶಸ್ತಿಗಾಗಿ 6210 ಅರ್ಜಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಜ್ಯದಲ್ಲಿ ಮೊದಲ ಬಾರಿ ಆನ್ ಲೈನ್ ಮೂಲಕ ರಾಜ್ಯೋತ್ಸವ ಪ್ರಶಸ್ತಿಗಾಗಿ ಸಾರ್ವಜನಿಕರೇ ಶಿಫಾರಸ್ಸು ಮಾಡಲು ಅವಕಾಶ ನೀಡಲಾಗಿತ್ತು. “ಸೇವಾ ಸಿಂಧು” ಮೂಲಕ ಎಲೆಮರೆಯ ಸಾಧಕರನ್ನು ಸಾರ್ವಜನಿಕರು ಗುರುತಿಸುವ ಅವಕಾಶ ಮಾಡಿ ಕೊಡಲಾಗಿತ್ತು. ಈ ಪ್ರಕ್ರಿಯೆಗೆ ನಾಡಿನ ಜನರು ಭಾರಿ ಬೆಂಬಲ ವ್ಯಕ್ತ ಪಡಿಸಿದ್ದಾರೆ.
ಕಳೆದ ಮೂರು ವರ್ಷಗಳ ಪೈಕಿ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಜನರ ಸ್ಪಂದನೆ ಹೆಚ್ಚಾಗಿದೆ. 2021-22 ನೇ ಸಾಲಿನ 66ನೇ ರಾಜ್ಯೋತ್ಸವ ಪ್ರಶಸ್ತಿಗಾಗಿ 6210 ಅರ್ಜಿಗಳು ಇಲಾಖೆಗೆ ಬಂದಿವೆ. ಅವುಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೇಂದ್ರ ಕಚೇರಿಗೆ ಭೌತಿಕ 1450 ಅರ್ಜಿಗಳು ಹಾಗೂ `ಸೇವಾ ಸಿಂಧು’ ಮೂಲಕ 4770 ಹೆಸರುಗಳು ಬಂದಿದ್ದು ಅವುಗಳನ್ನು 28,857 ಜನರು ಆನ್ಲೈನ್ ಮೂಲಕ ಶಿಫಾರಸ್ಸು ಮಾಡಿದ್ದಾರೆ. ಶಿಕ್ಷಣ, ಸಾಹಿತ್ಯ, ಸಂಗೀತ, ಕಲೆ, ನಾಟಕ, ಕ್ರೀಡೆ, ಕೃಷಿ, ವಿಜ್ಞಾನ-ತಂತ್ರಜ್ಞಾನ ಸೇರಿದಂತೆ 26 ಕ್ಷೇತ್ರಗಳಲ್ಲಿ ಸಾಧಕರ ಅರ್ಜಿಗಳು ಬಂದಿವೆ.
2018-19ನೇ ಸಾಲಿನ 63ನೇ ರಾಜ್ಯೋತ್ಸವ ಪ್ರಶಸ್ತಿಗೆ 1300 ಅರ್ಜಿಗಳು ಬಂದಿದ್ದವು. 2019-20ನೇ ಸಾಲಿನ 64ನೇ ರಾಜ್ಯೋತ್ಸವ ಪ್ರಶಸ್ತಿಗಾಗಿ 1191 ಅರ್ಜಿಗಳು ಹಾಗೂ 2020-21ನೇ ಸಾಲಿನ 65ನೇ ರಾಜ್ಯೋತ್ಸವ ಪ್ರಶಸ್ತಿಗಾಗಿ 1144 ಅರ್ಜಿಗಳು ಬಂದಿದ್ದವು.
ಕಳೆದ ಮೂರು ವರ್ಷಗಳ ಅಂಕಿಸಂಖ್ಯೆಗಳನ್ನು ಗಮನಿಸಿದಾಗ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಜನರು ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರು ಸ್ಪಂದಿಸಿದ್ದು ಕಂಡುಬಂದಿದೆ. ಅದರಂತೆ ಆನ್ಲೈನ್ ವ್ಯವಸ್ಥೆ ಮಾಡಿರುವುದರಿಂದ ಆಯ್ಕೆ ಪ್ರಕ್ರಿಯೆಯಲ್ಲಿ ಜನರು ನೇರವಾಗಿ ಭಾಗಿಯಾಗಿದ್ದು ರಾಜ್ಯೋತ್ಸವ ಪ್ರಶಸ್ತಿಗೆ ಹೆಚ್ಚಿನ ಗೌರವ ತಂದಿದೆ. ಜೊತೆಗೆ ಈ ಬಾರಿಯ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿರುವುದು ಜನರ ಮೆಚ್ಚುಗೆಗೆ ಕಾರಣವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ