Kannada NewsKarnataka NewsLatest

ಜನಮನಸೂರೆಗೊಂಡ‌ ಕಲಾವಾಹಿನಿ; ಚನ್ನಮ್ಮನ ಸಾಧನೆಯ ಮೆಲುಕು ; ಕಿತ್ತೂರು ಉತ್ಸವ-2021ಕ್ಕೆ ಅದ್ಧೂರಿ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಿತ್ತೂರು ವಿಜಯೋತ್ಸವದ ಸವಿನೆನಪಿಗಾಗಿ ಜಿಲ್ಲೆಯಾದ್ಯಂತ ಸಂಚರಿಸಿದ ವೀರಜ್ಯೋತಿಯನ್ನು ಶನಿವಾರ(ಅ.23) ಸಂಭ್ರಮದಿಂದ ಬರಮಾಡಿಕೊಂಡು ಧ್ವಜಾರೋಹಣ ನೆರವೇರಿಸುವ ಮೂಲಕ ಕಿತ್ತೂರು ಉತ್ಸವಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು.
ಪ್ರತಿವರ್ಷ ನಡೆಯುವ ಉತ್ಸವದ ಸಂಪ್ರದಾಯದಂತೆ ಚನ್ನಮ್ಮನ ಸಮಾಧಿ ಸ್ಥಳ ಬೈಲಹೊಂಗಲದಿಂದ ಹೊರಟು ಜಿಲ್ಲೆಯಾದ್ಯಂತ ಸಂಚರಿಸಿದ ವೀರಜ್ಯೋತಿಯನ್ನು ಕಿತ್ತೂರು ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಸ್ವಾಗತಿಸಲಾಯಿತು.
ಸಂಸದರಾದ ಮಂಗಳಾ ಅಂಗಡಿ ಅವರು ಚನ್ನಮ್ಮನ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಉತ್ಸವದ ಧ್ವಜಾರೋಹಣ ನೆರವೇರಿಸಿ ಜ್ಯೋತಿಯನ್ನು ಬರಮಾಡಿಕೊಂಡರು.
ಚನ್ನಮ್ನ ಕಿತ್ತೂರಿನ ರಾಜಗುರು ಸಂಸ್ಥಾನ ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಸಕರಾದ ಮಹಾಂತೇಶ ದೊಡ್ಡಗೌಡರ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ., ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಶಿಧರ್ ಬಗಲಿ ಮತ್ತಿತರರು ಉಪಸ್ಥಿತರಿದ್ದರು.
ಮನಸೂರೆಗೊಂಡ ಜನಪದ ಕಲಾವಾಹಿನಿ:
ಜ್ಯೋತಿ ಸ್ವಾಗತದ ಬಳಿಕ ಚನ್ನಮ್ನ ಕಿತ್ತೂರಿನ ರಾಜಗುರು ಸಂಸ್ಥಾನ ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಅವರು ಜಾನಪದ ಕಲಾವಾಹಿನಿಗೆ ಚಾಲನೆ ನೀಡಿದರು.
ನವಿಲು ನೃತ್ಯ, ಕೇರಳ ತೆಯಮ್ ನೃತ್ಯ, ಚಂಡಮದ್ದಳೆ, ಪೂಜಾ ಕುಣಿತ, ನಂದಿಧ್ವಜ, ಪಟಾಕುಣಿತ, ಚಿಟ್ಟೆಮೇಳ, ಗೊಂಬೆ ಕುಣಿತ, ಝಾಂಜ್ ಪಥಕ ಸೇರಿದಂತೆ ವಿವಿಧ ಕಲಾತಂಡಗಳ ನೂರಾರು ಕಲಾವಿದರು ಕಲಾವಾಹಿನಿಯಲ್ಲಿ ಪಾಲ್ಗೊಂಡಿದ್ದರು.
ಜನಪದ ಗೀತೆಗಳನ್ನು ಹಾಡುತ್ತಾ ಸಾಗಿದ ತಂಡವು ಚನ್ನಮ್ಮನ ಶೌರ್ಯ, ಸಾಹಸದ ಗುಣಗಾನ‌ ಮಾಡುವ ಮೂಲಕ ಕಿತ್ತೂರಿನ ಗತವೈಭವವನ್ನು ಮೆಲುಕು ಹಾಕಿತು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಕಲಾವಾಹಿನಿಯು ಜನರ ಮನಸೂರೆಗೊಂಡಿತು. ಇದರೊಂದಿಗೆ ವಿವಿಧ ಇಲಾಖೆಯ ಕಾರ್ಯಗಳು ಹಾಗೂ ಯೋಜನೆಗಳ ಅರಿವು ಮೂಡಿಸುವ ಸ್ತಬ್ಧಚಿತ್ರಗಳು ಕೂಡ ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
ಪೂರ್ಣಕುಂಭ ಹೊತ್ತ ನೂರಾರು ಜನ ಮಹಿಳೆಯರು ಕಲಾವಾಹಿನಿಯ ಮೆರಗು ಹೆಚ್ಚಿಸಿದರು. ರಸ್ತೆಯ ಇಕ್ಕೆಗಲಗಳಲ್ಲಿ ನೆರೆದಿದ್ದ ಸಾವಿರಾರು ಜನರು ವಿವಿಧ ಕಲಾತಂಡಗಳ ಪ್ರದರ್ಶನವನ್ನು ವೀಕ್ಷಿಸಿದರು.
ಇದೇ ಸಂದರ್ಭದಲ್ಲಿ ಕಿತ್ತೂರು ಮಹಾದ್ವಾರದ ಬಳಿ ಇರುವ ಶೂರ ಸಂಗೊಳ್ಳಿ ರಾಯಣ್ಣ ಹಾಗೂ ಅಮಟೂರ ಬಾಳಪ್ಪ ಅವರ ಪ್ರತಿಮೆಗಳಿಗೂ ಗಣ್ಯರು ಮಾಲಾರ್ಪಣೆ ಮಾಡಲಾಯಿತು.
ಉತ್ಸವದ ಅಂಗವಾಗಿ ಕಿತ್ತೂರಿನ ಗಡಾದಮರಡಿಯಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಧ್ವಜಾರೋಹಣ ನೆರವೇರಿಸಿದರು.
ವಸ್ತುಪ್ರದರ್ಶನ ಮೇಳಕ್ಕೆ ಜಿಲ್ಲಾಧಿಕಾರಿ ಚಾಲನೆ:
ಉತ್ಸವದ ಪ್ರಯುಕ್ತ ಕಲ್ಮಠದ ಗುರುಶಿದ್ದೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿರುವ ವಸ್ತುಪ್ರದರ್ಶನ ಮೇಳಕ್ಕೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಚಾಲನೆ ನೀಡಿದರು.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರ ಪ್ರಚಾರ ವಿಭಾಗವು ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಸ್ಥಾಪಿಸಿರುವ ವಿಶೇಷ ಮಳಿಗೆ, ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್, ಕೃಷಿ, ಆರೋಗ್ಯ, ಪಶುಪಾಲನೆ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಮಳಿಗೆಗಳನ್ನು ಗಣ್ಯರು ವೀಕ್ಷಿಸಿದರು.
ವಿವಿಧ ಮಹಿಳಾ ಸ್ವಯಂ ಸೇವಾ ಸಂಘಗಳ ಉತ್ಪಾದನಾ ಮಾರಾಟವಾದ ಮಳಿಗೆ, ಆಹಾರ ಪದಾರ್ಥಗಳು, ಖಾದಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿದ ಅವರು, ಆಯೋಜಕರಿಂದ ಮಾಹಿತಿಯನ್ನು ಪಡೆದುಕೊಂಡರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಭೀಮಪ್ಪ ಅವರು ಮಳಿಗೆಗಳ ಕುರಿತು ವಿವರಿಸಿದರು.
ಚನ್ನಮ್ನ ಕಿತ್ತೂರಿನ ರಾಜಗುರು ಸಂಸ್ಥಾನ ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಮ್ಮುಖದಲ್ಲಿ ನಡೆದ ಈ ಎಲ್ಲ ಕಾರ್ಯಕ್ರಮಗಳಲ್ಲಿ ಶಾಸಕರಾದ ಮಹಾಂತೇಶ ದೊಡ್ಡಗೌಡರ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ., ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಶಿಧರ್ ಬಗಲಿ, ವಾರ್ತಾ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ,  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಕಿತ್ತೂರು ತಹಶೀಲ್ದಾರ ಮತ್ತಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button