ಪ್ರಗತಿವಾಹಿನಿ ಸುದ್ದಿ; ಹಾನಗಲ್: ಇಂದಿಗೂ ಕಾಂಗ್ರೆಸ್ ಪಕ್ಷ ಬ್ರಿಟಿಷರ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆರೋಪಿಸಿದರು.
ಹಾನಗಲ್ ವಿಧಾನಸಭಾ ಕ್ಷೇತ್ರದ ಆಡೂರು ಗ್ರಾಮದಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರವಾಗಿ ಮತಯಾಚನೆ ಮಾಡಿದ ನಂತರ ಅವರು ಮತದಾರರನ್ನು ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದು ಬ್ರಿಟಿಷ್ ವ್ಯಕ್ತಿ. ಒಡೆದು ಆಳುವುದು ಬ್ರಿಟಿಷರ ನೀತಿಯನ್ನು ಅವರು ಸದಾ ಅನುಸರಿಸಿಕೊಂಡು ಬಂದವರು. ಈಗ ಅದೇ ಸಂಸ್ಕೃತಿಯನ್ನು ಕಾಂಗ್ರೆಸ್ ಮುಂದುವರಿಸಿದೆ. ಹೀಗಾಗಿ ಕಾಂಗ್ರೆಸ್ಸನ್ನು ಪುಡಿ ಪುಡಿ ಮಾಡಿ ಎಂದು ಬೊಮ್ಮಾಯಿ ಕರೆ ನೀಡಿದರು.
ಅಲ್ಪಸಂಖ್ಯಾತರ ಸಮುದಾಯಕ್ಕೆ ಅತಿ ಹೆಚ್ಚು ಅನ್ಯಾಯ ಮಾಡಿದ ಯಾವುದಾದರೂ ಪಕ್ಷವಿದ್ದರೆ ಅದು ಕಾಂಗ್ರೆಸ್ ಪಕ್ಷ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕಾಂಗ್ರೆಸ್ 5 ವರ್ಷ ಅಧಿಕಾರದಲ್ಲಿ ಇತ್ತಲ್ಲ. ಏನು ಅಭಿವೃದ್ಧಿ ಮಾಡಿದ್ರು? ಎಂದು ಪ್ರಶ್ನಿಸಿದ ಅವರು ಬರೀ ಜಾತಿ ,ಮತ, ಪಂಥ ಇವುಗಳ ರಾಜಕೀಯವನ್ನು ಕಾಂಗ್ರೆಸ್ ಪಕ್ಷದವರು ಮಾಡಿದ್ದಾರೆ. ಎಲ್ಲಾ ಸಮುದಾಯಗಳನ್ನು ಒಡೆಯುವ ಕೆಲಸ ಮಾಡಿದ್ದಾರೆ. ಅಲ್ಪಸಂಖ್ಯಾತರೊಳಗೂ ಉಪಜಾತಿಗಳನ್ನು ಹುಡುಕಿ ಒಡೆದು ಆಳುವ ಬ್ರಿಟಿಷ್ ನೀತಿ ಕಾಂಗ್ರೆಸ್ ಪಕ್ಷವನ್ನು ಅನುಸರಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಸುಳ್ಳಿನ ಕಂತೆಯನ್ನೇ ಹೇಳಿದ್ರೂ ಜನ ತೀರ್ಮಾನ ಮಾಡಿದ್ದಾರೆ. ಜಾತ್ಯಾತೀತ ಪಕ್ಷವೆಂದು ಕರೆದುಕೊಳ್ಳುವ ಕಾಂಗ್ರೆಸ್ ಜಾತಿಯನ್ನೇ ಹಿಡಿದು ಜನರನ್ನು ಒಲೈಸುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತ ಬಂಧುಗಳಿಗೆ ಕಾಂಗ್ರಸ್ ಏನು ಮಾಡಿದೆ. ಅವರ ಪರಿಸ್ಥಿತಿ ಏನಿತ್ತು ಹಾಗೆಯೇ ಇದೆ. ಈ ಸಮುದಾಯದ ಮಕ್ಕಳಿಗೆ 10 ವರ್ಷವಾದ ಕೂಡಲೇ ಕೈಯಲ್ಲಿ ಪುಸ್ತಕ ಪೆನ್ ಇರುವುದಿಲ್ಲ ಎಂದರು.
ಕೋವಿಡ್ ಸಂದರ್ಭದಲ್ಲಿ ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದ್ದು ಭಾರತೀಯ ಜನತಾ ಪಕ್ಷ. ವಿವಿಧ ಸಂಘ ಸಂಸ್ಥೆಗಳಿಮದ 10-15 ಸಾವಿರ ಕಿಟ್‌ಗಳನ್ನು ಸಣ್ಣಪುಟ್ಟ ಸಂಸ್ಥೆಗಳು ಹಂಚಿವೆ. ಕಾಂಗ್ರೆಸ್ ಕಿಟ್ ಕೊಟ್ಟಿದ್ದನ್ನೇ ದೊಡ್ಡ ಬಂಡವಾಳ ಮಾಡುತ್ತಾರೆ ಎಂದರೆ, ಕೋವಿಡ್ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡಲೆಂದು ಮಾಡಿಲ್ಲ. ಚುನಾವಣೆ ದೃಷ್ಟಿಯಿಂದ ಹಂಚಿದ್ದಾರೆ.
ಭಾಜಪದ ಶಿವರಾಜ್ ಸಜ್ಜನರ್ ಅವರಿಗೆ ಮತ ಹಾಕಿ ತಾಲ್ಲೂಕಿನ ಅಭಿವೃದ್ಧಿಗೆ ಭವಿಷ್ಯವನ್ನು ಬರೆಯಿರಿ ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು. ಕಾಂಗ್ರೆಸ್ ಎಷ್ಟೇ ಗೋಣಿಚೀಲ ತಂದು, ಕತ್ತಲ ರಾತ್ರಿ ಮಾಡಿದರೂ ಎಲ್ಲವನ್ನೂ ಜನರು ವಾಪಸ್ಸು ಬೆಂಗಳೂರಿಗೆ ಮತ್ತು ಹುಬ್ಬಳಿಗೆ ಕಳಿಸುತ್ತಾರೆ. ಬರುವ ದಿನಗಳಲ್ಲಿ ಇಡೀ ಕರ್ನಾಟಕದಲ್ಲಿ ಅತಿ ಎತ್ತರದಲ್ಲಿ ಹಾನಗಲ್‌ನ್ನು ತೋರಿಸುವ ಕಾಲ ಬರಲಿದೆ ಎಂದರು.
ಕಾರ್ಮಿಕರು, ಶ್ರಮಜೀವಿಗಳು, ಕುರಿ ಕಾಯುವವರು, ನೇಕಾರರು ಎಲ್ಲಾ ವೃತ್ತಿಯ ಬಾಂಧವರೂ ಕೂಡ ನನ್ನ ಸಮುದಾಯದವರು. ಬದುಕನ್ನು ಹಂಚಿಕೊಂಡು ಬಾಳ್ವೆ ಮಾಡಿದ್ದೇವೆ. ಅದನ್ನೇ ಹಾನಗಲ್‌ನಲ್ಲಿ ಮಾಡುತ್ತಿದ್ದೇವೆ. ಎಲ್ಲಾ ಸಮುದಾಯವದರೂ ಒಂದಾಗಬೇಕು. ಒಂದಾಗಿ ದೇಶವನ್ನು ಕಟ್ಟೋಣ ಎಂದು ತಿಳಿಸಿದರು.
ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಹೆಸರಲ್ಲಿ ಜಾತಿ ಒಡೆದ ಕಾಂಗ್ರೆಸ್
ಇದೇ ವೇಳೆ ಹಾನಗಲ್ ನ ಉಪ್ಪುಣಶಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿಎಂ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಹೆಸರಿನಲ್ಲಿ ಒಂದು ಆಯೋಗವನ್ನು ರಚಿಸಿತು. ಆಯೋಗದ ಮೂಲಕ ಯಾವುದೇ ಸಮೀಕ್ಷೆ ನಡೆಸದೆ ಕೇವಲ ಜಾತಿ ಉಪಜಾತಿಗಳ ಪಟ್ಟಿ ತಯಾರಿಸಲಾಯಿತು ಎಂದು ಹೇಳಿದರು.
ಸಮೀಕ್ಷೆ ಹೆಸರಲ್ಲಿ ಜಾತಿ ಉಪಜಾತಿಗಳನ್ನು ಪತ್ತೆಹಚ್ಚಿದರು ಅಲ್ಪಸಂಖ್ಯಾತರಲ್ಲಿ 50ಕ್ಕೂ ಹೆಚ್ಚು ಉಪಜಾತಿಗಳಿವೆ ಎಂಬುದನ್ನು ಕಾಂಗ್ರೆಸ್ ಪತ್ತೆ ಮಾಡಿತು ಈ ಮೂಲಕ ಮತ ಗಳಿಸುವ ಹುನ್ನಾರವನ್ನು ಮಾಡಿದೆ ಹೀಗಾಗಿ ಯಾರನ್ನು ಕಾಂಗ್ರೆಸ್ ಪಕ್ಷ ಗುತ್ತಿಗೆ ಪಡೆದಿಲ್ಲ ಅದಕ್ಕೆ ಅವಕಾಶವನ್ನು ಕೊಡಬೇಡಿ ಎಂದು ಅವರು ಮತದಾರರಲ್ಲಿ ಮನವಿ ಮಾಡಿದರು.
ಅಧಿಕಾರ ಬಂದಾಗ ಕೆಲಸ ಮಾಡಬಹುದೆಂಬ ತವಕ ಭಾಜಪಕ್ಕಿದೆ. ಅಧಿಕಾರ ಬಂದಾಗ ಅದನ್ನು ಚಲಾಯಿಸುವುದಲ್ಲ ಅಧಿಕಾರ ಬಂದರೆ ಅದನ್ನು ಜನರಿಗಾಗಿ ಬಳಸುವ ಧರ್ಮ ಮತ್ತು ಸಂಸ್ಕೃತಿ ನಮ್ಮದು ಎಂದರು.
ಇನ್ನೊಂದು ಕಡೆ ಕಾಂಗ್ರೆಸ್ ಪಕ್ಷದವರು ನೀರಾವರಿ, ಕೆರೆ ತುಂಬಿಸುವ ಯೋಜನೆ, ಅಭಿವೃದ್ಧಿ ಬಗ್ಗೆ ಮಾತಾಡೋಲ್ಲ. ಶಾಲೆ, ಆಸ್ಪತ್ರೆ ಕಟ್ಟಡಗಳು ಸಿ.ಎಂ ಉದಾಸಿ ಅವರ ಹೆಸರು ಹೇಳುತ್ತವೆ. ಐದು ವರ್ಷ ಆಡಳಿತ ಮಾಡಿದ ಸಿದ್ದರಾಮಯ್ಯ ಹಾನಗಲ್ ತಾಲ್ಲೂಕಿಗೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದರು. ದಾಖಲೆ ಸಮೇತ ನಾವು ಮಾಡಿರುವ ಸಾಧನೆ ತೋರುತ್ತೇವೆ. ಮುಂದಿನ ಚುನಾವಣೆಯ ವೇಳೆಗೆ 7500 ಸಾವಿರ ಮನೆಗಳನ್ನು ಕಟ್ಟಲಾಗುವುದು ಎಂದರು.
ದಣಿವರಿಯದೇ ಸಿ.ಎಂ.ಉದಾಸಿ ಅವರು ಈ ಭಾಗದ ಅಭಿವೃದ್ಧಿಗೆ ಕೆಲಸ ಮಾಡಿದ್ದಾರೆ. ಶಿವಕುಮಾರ್ ಉದಾಸಿಯವರು ತಂದೆಯ ಹಾದಿಯಲ್ಲೇ ನಡೆದು, ಅಡಿಕೆ, ಮೆಣಸು ಮತ್ತು ಶುಂಠಿಗೆ ವಿಮೆ ಕೊಡುವ ಕೆಲಸವನ್ನು ಮಾಡುತ್ತಿದ್ದಾರೆ. ಕಷ್ಟಕ್ಕಾಗುವವರೇ ನಿಜವಾದ ಬಂಧುಗಳು ಎಂದರು.
ಕಾಂಗ್ರೆಸ್ ಪಕ್ಷವು ಆರ್ಥಿಕ ಸಮೀಕ್ಷೆ ಆಯೋಗ ರಚಿಸಿ, ಜಾತಿ ಜಾತಿಗಳ ನಡುವೆ ಜಗಳ ತಂದು ಅದರ ಲಾಭ ಪಡೆಯಲು ನೋಡಿದರು. ಎಲ್ಲಾ ಸಮಾಜಗಳ ಉಪಜಾತಿಗಳ ಉಪಜಾತಿಗಳನ್ನು ಗುರುತಿಸುವ ಕೆಲಸವನ್ನು ಮಾಡಿದರು. ಇದನು ಅರಿತಿರುವ ಜನ ಹಾನಗಲ್ ತಾಲ್ಲೂಕಿನ ಜನ ಒಟ್ಟಾಗಿ ಭಾರತೀಯ ಜನತಾ ಪಕ್ಷಕ್ಕೆ ಮತ ಹಾಕಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಭಾಜಪದಿಂದ ನೋಟು ತೆಗೆದುಕೊಳ್ಳಿ ನಮಗೆ ಮತ ಹಾಕಿ ಅನ್ನುತ್ತಾರೆ ಕಾಂಗ್ರೆಸ್ ನವರು. ಅಡ್ಡದಾರಿ ಹಿಡಿಸುವ ಕೆಲಸ ಅವರದ್ದು. ನಿಮ್ಮ ಸ್ವಾಭಿಮಾನ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಭಾಜಪಕ್ಕೆ ಮತ ಹಾಕಿ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ