ರಾಜಕೀಯಕ್ಕೂ ಬರಲಿಲ್ಲ, ವಿವಾದಕ್ಕೂ ಸಿಗಲಿಲ್ಲ, ಅಪ್ಪನ ಹಾದಿಯಲ್ಲಿ ಅಪ್ಪು -ನುಡಿ ನಮನ

ಶಿವಾನಂದ ತಗಡೂರು

ಶಿವಾನಂದ ತಗಡೂರು

ಅಪ್ಪು ಸಾವು ಅರಗಿಸಿಕೊಳ್ಳುವುದು ಕಷ್ಟ. ಇಡೀ ಕರುನಾಡು ಅವರ ಸಾವಿಗೆ ಮಿಡಿದ ಕಂಬನಿಗೆ ಬೆಲೆ ಕಟ್ಟಲಾಗದು. ಅಪ್ಪುನನ್ನ ಜನರು ಇಷ್ಟೊಂದು ಆಳವಾಗಿ ಹೃದಯಕ್ಕೆ ಹಚ್ಚಿಕೊಂಡಿರುವುದಕ್ಕೆ ಅವರ ಸಾವಿನ ಸಂದರ್ಭ ಸಾಕ್ಷೀಕರಿಸಿತು.

ಮಕ್ಕಳು, ಮಹಿಳೆಯರಿಂದ ಹಿಡಿದು ಯುವಕರು, ವೃದ್ದರ ತನಕ ಅವರು ತೋರಿದ ಅಭಿಮಾನ ನಿಬ್ಬೆರಗಾಗುವಂತಾದದ್ದು.

ಇಷ್ಟು ಅಭಿಮಾನ ಪಡೆದಿರುವುದನ್ನ ಒಂದು ಕ್ಷಣ ಅಪ್ಪು ಎದ್ದು ಕುಳಿತು ನೋಡಿದ್ದರೆ? ಎನ್ನುವ ನಿರೀಕ್ಷೆಗಳು ಕನಸಿನಲ್ಲಿ ತೇಲಿ ಹೋದವು.

ಪುನೀತ್ ರಾಜ್‍ಕುಮಾರ್ ಅಭಿನಾಮ ಪಡೆದ ಅಪ್ಪು ಇಷ್ಟೊಂದು ಅಭಿಮಾನವನ್ನು ಏಕಾಏಕಿ ಒಂದೇ ದಿನಕ್ಕೆ ಪಡೆದಿದ್ದು ಅಲ್ಲ. ಪುಟ್ಟ ಪೋರನಾಗಿ ಬೆಳ್ಳಿತೆರೆಗೆ ಎಂಟ್ರಿಕೊಟ್ಟು, ಅಣ್ಣಾವ್ರ ಜೊತೆಯಲ್ಲಿ ಮಾಡಿದ ಚಲಿಸುವ ಮೋಡಗಳು, ಬೆಟ್ಟದ ಹೂ ಸೇರಿದಂತೆ ಹಲವು ಸಿನಿಮಾಗಳಿಂದ ಹಿಡಿದು, ಇಲ್ಲಿಯ ತನಕ ಅಭಿನಯಿಸಿದ ಸಿನಿಮಾಗಳ ತನಕ ಅಪ್ಪು ನಟನೆ ಜೊತೆಗೆ ನಡೆದುಕೊಂಡ ಘಟನಾವಳಿಗಳ ತನಕ ಸಣ್ಣ ಅವಲೋಕನ ಮಾಡಿದರೆ ಸಾಕು, ವ್ಯಕ್ತಿತ್ವ ಎಂಥಾದ್ದು ಎಂದು ಅರ್ಥವಾಗುತ್ತದೆ.

ಅಪ್ಪು ಪ್ರೌಢಾವಸ್ಥೆಗೆ ಬಂದ ಮೇಲೆ 2002 ರಲ್ಲಿ ಮಾಡಿದ ಮೊದಲ ಅಪ್ಪು ಸಿನಿಮಾವನ್ನು ನನ್ನ ಮನೆಯವಳ ಜೊತೆಗೆ ನೋಡಿದ್ದೆ. ಆಗಲೇ ಭರವಸೆ ನಾಯಕನಾಗಿ ಹೊರಹೊಮ್ಮಿದ್ದ. ಆತನ‌ ಫೈಟಿಂಗ್, ಡ್ಯಾನ್ಸ್, ಅಭಿನಯ ಎಲ್ಲವೂ ಮನತುಂಬಿದ್ದವು. ರಾಜ್ ಕುಮಾರ್ ಹಾದಿಯಲ್ಲಿ ಅವರ ಮಗ ಎಂದು ನನ್ನ ಡೈರಿಯಲ್ಲಿ ಷರಾ ಬರೆದು ಸುಮ್ಮನಾಗಿದ್ದೆ.

2017ರಲ್ಲಿ ರಾಜ್ ಕುಮಾರ್ ಸಿನಿಮಾ ತೆಗೆದಾಗ ಅದರ ಪ್ರೈಮ್ ಶೋ ಅನ್ನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ದಂಪತಿಗಳ ಜೊತೆಗೆ ಬೆಂಗಳೂರು ಮಲ್ಲೇಶ್ವರಂ ನಲ್ಲಿ ನೋಡುವ ಅವಕಾಶ ಲಭ್ಯವಾಯಿತು.

ಅನಾಥಶ್ರಮ ಸೇರಿದಂತೆ ಹಲವು ಸಮಾಜಮುಖಿ ಚಿಂತನೆಗಳ ಹಿನ್ನೆಲೆಯಲ್ಲಿ ತೆಗೆದ ರಾಜಕುಮಾರ್ ಸಿನಿಮಾ ನನಗೆ ಇಷ್ಟವಾಗಿತ್ತು. ಹದಿನೈದು ವರ್ಷದ ಹಿಂದೆ ಡೈರಿಯಲ್ಲಿ ಬರೆದದ್ದು ನಿಜವಾಗುವ ಹಾದಿಯಲ್ಲಿ ಅಪ್ಪು ಹೆಜ್ಜೆ ಗುರುತು ನೋಡಿ ಖುಷಿಯಾಗಿತ್ತು. ಇತ್ತೀಚಿನ ಯುವರತ್ನ ಸಿನೆಮಾ ಕೋವಿಡ್ ಕಾಟದಿಂದ ನೋಡಲು ಸಾಧ್ಯ ಆಗಿರಲಿಲ್ಲ.

ಇದೆಲ್ಲದ್ದಕ್ಕೂ ಮಿಗಿಲಾಗಿ ಗೋಕಾಕ್ ಚಳವಳಿ ಸಂದರ್ಭದಲ್ಲಿ ರಾಜಕೀಯಕ್ಕೆ ಬರಬೇಕು ಎಂದು ಎಷ್ಟೇ ಒತ್ತಡ ಬಂದರೂ ಡಾ.ರಾಜ್ ಅದರಿಂದ ಮೈಲು ದೂರ ಉಳಿದು, ಚಿತ್ರ ಬದುಕು ಮೈಲಿಗೆ ಆಗದಂತೆ ನೋಡಿಕೊಂಡರು. ಅಂದು ಡಾ.ರಾಜ್ ರಾಜಕೀಯಕ್ಕೆ ಧುಮುಕಿದ್ದರೆ, ಬಹುಶಃ ಜನಮಾನಸದಲ್ಲಿ ಇಷ್ಟೊಂದು ಅಭಿಮಾನ ಉಳಿಯುತಿತ್ತೊ ಇಲ್ಲವೊ? ಗೊತ್ತಿಲ್ಲ.

ನನಗೆ ಅಚ್ಚರಿ ಅನ್ನಿಸಿದ್ದು,
ಅಪ್ಪು ಕೂಡ ಅದೇ ರೀತಿ ಅಪ್ಪನ ಹಾದಿ ತುಳಿದದ್ದು. ಶಿವಮೊಗ್ಗದ ಲೋಕಸಭಾ ಚುನಾವಣೆಯಲ್ಲಿ ಬಂಗಾರಪ್ಪ ಪುತ್ರಿ ಗೀತಾ‌ ಶಿವರಾಜ್ ಕುಮಾರ್ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಾಗಲೂ ಅಲ್ಲಿ ಪ್ರಚಾರಕ್ಕೆ ಹೋಗದೆ, ರಾಜಕೀಯ ಅಂತರ ಕಾಯ್ದುಕೊಂಡ ಅಪ್ಪು ನಿಜಕ್ಕೂ ಗ್ರೇಟ್. ಕೋಟ್ಯಾಧಿಪತಿ ಕಾರ್ಯಕ್ರಮ ಮೂಲಕ ಕೋಟಿ ಕೋಟಿ ಹೃದಯ ತಲುಪಿದ್ದು ಅಭಿಮಾನ ತರುವಾಂತಾದ್ದು.

ಕೆಎಂಎಫ್ ನಂದಿನಿ ಉತ್ಪನ್ನಗಳಿಗೆ ನಯಾ ಪೈಸೆ ಪಡೆಯದೆ ರಾಯಭಾರಿಯಾಗಿದ್ದ ಪುನೀತ್ ರಾಜ್‍ಕುಮಾರ್, ರೈತರ ಪರ ಹೊಂದಿದ್ದ ಕಾಳಜಿಗೆ ಸಾಕ್ಷಿ. ರಾಜ್ ಕುಮಾರ್ ಸಹ ಕೆಎಂಎಫ್ ನಿಂದ ಸಂಭಾವನೆಯನ್ನು ಪಡೆಯಲಿಲ್ಲ. ಅಣ್ಣಾವ್ರ ಪರಮ‌ಭಕ್ತರಾಗಿದ್ದ ಪ್ರೇಮ್ ಕುಮಾರ್ ಅವರು ಕೆಎಂಎಫ್ ಎಂಡಿ ಆಗಿದ್ದರಿಂದ ಇದೆಲ್ಲವೂ ಸಾಧ್ಯವಾಗಿತ್ತು ಎನ್ನುವುದು ಕೂಡ ಸತ್ಯದ ಮಾತು.
ಇಂತಹ ಒಂದಲ್ಲ, ಹತ್ತಾರು ಘಟನೆಗಳಿವೆ.

ಜನಸಾಗರದ ನಡುವಿನಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ತಣ್ಣನೆಗೆ ಮಲಗಿದ್ದ ಅಪ್ಪುಗೆ ಬೆಚ್ಚಗೊಂದು ನಮನ ಸಲ್ಲಿಸಿದಾಗ ದುಃಖ ಉಮ್ಮಳಿಸಿಬಂತು. ಅಪ್ಪುವಿನ ಇಡೀ ಬದುಕು ಕಣ್ಣೆದುರಿಗೆ ಬಂತು.

(ಲೇಖಕರು – ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರು)

ಇಬ್ಬರ ಬಾಳಿಗೆ ಬೆಳಕಾದ ಪವರ್ ಸ್ಟಾರ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button