Kannada NewsKarnataka News

ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳನ್ನು ಜನರು ಮೆಚ್ಚಿದ್ದಾರೆ – ಲಕ್ಷ್ಮೀ ಹೆಬ್ಬಾಳಕರ್

4.5 ಕೊಟಿ ರೂ ವೆಚ್ಚದಲ್ಲಿ ರಸ್ತೆ ಡಾಂಬರೀಕರಣಕ್ಕೆ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಒಂದಿಲ್ಲೊಂದು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಯಾರು ಏನೇ ಅಪಪ್ರಚಾರ ಮಾಡಿದರೂ ಗ್ರಾಮೀಣ ಕ್ಷೇತ್ರದ ಐತಿಹಾಸಿಕ ಅಭಿವೃದ್ಧಿಗೆ ಕ್ಷೇತ್ರದ ಜನರೇ ಸಾಕ್ಷಿಯಾಗಿದ್ದಾರೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ.
 ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಂಬೇವಾಡಿ ಗ್ರಾಮದಲ್ಲಿ 4.5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗಳಿಗೆ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಅಪಪ್ರಚಾರ ಮಾಡುವವರಿಗೆಲ್ಲ ನಾನು ಉತ್ತರಿಸಬೇಕಾಗಿಲ್ಲ. ಕ್ಷೇತ್ರದ ಜನರಿಗೆ ನಾನು ಉತ್ತರಿಸುತ್ತೇನೆ, ಅವರಿಗೆ ಋಣಿಯಾಗಿರುತ್ತೇನೆ. ನಾನು ಮಾಡುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಜನರು ಮೆಚ್ಚಿಕೊಂಡಿದ್ದಾರೆ, ಸಹಕಾರ ನೀಡುತ್ತಿದ್ದಾರೆ. ಆದರೆ ಕೆಲವರು ತಮ್ಮಿಂದ ಅಭಿವೃದ್ಧಿ ಮಾಡಲಾಗದಿರುವುದಕ್ಕೆ ಕ್ಷೇತ್ರದ ಜನರ ಕ್ಷಮೆ ಕೇಳುವ ಬದಲು ಅಭಿವೃದ್ಧಿ ಮಾಡುತ್ತಿರುವ ನಮ್ಮ ಬಗ್ಗೆ ಅಸೂಯೆಪಟ್ಟುಕೊಂಡು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಇದನ್ನೆಲ್ಲ ಜನರು ಗಮನಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಪ್ರತಿ ಕಾಮಗಾರಿ ಗುಣಮಟ್ಟದ ಬಗ್ಗೆ ನಾವು ನಿಗಾ ವಹಿಸುತ್ತಿದ್ದೇವೆ. ಜನರೂ ಗಮನವಿಡುವಂತೆ ಎಲ್ಲಕಡೆ ವಿನಂತಿಸಿಕೊಳ್ಳುತ್ತೇನೆ. ಅತಿಯಾದ ಮಳೆಯಿಂದ ಕೆಲವು ಕಡೆ ರಸ್ತೆ ಹಾಳಾಗಿದೆ. ಇದು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಎಲ್ಲೆಲ್ಲಿ ಮಳೆ ಜಾಸ್ತಿಯಾಗಿದೆಯೋ ಅಲ್ಲೆಲ್ಲ ರಸ್ತೆಗಳು ಹಾಳಾಗಿವೆ. ಇಂತದಕ್ಕೆಲ್ಲ ಕೆಲವರು ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ಹೆಬ್ಬಾಳಕರ್ ಅಸಮಾಧಾನ ವ್ಯಕ್ತಪಡಿಸಿದರು.
 ಪಿ.ಎಮ್.ಜಿ.ಎಸ್. ವೈ ಯೋಜನೆಯಡಿಯಲ್ಲಿ ಇಲ್ಲಿಯ ಅನುದಾನ ಮಂಜೂರಾಗಿದ್ದು, ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮತ್ತು ಗುಣಮಟ್ಟ ಕಾಪಾಡಿಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷರು, ಸರ್ವಸದಸ್ಯರು, ಚನ್ನರಾಜ ಹಟ್ಟಿಹೊಳಿ, ಯುವರಾಜ ಕದಂ, ಅಮುಲ್ ಬಾತ್ಕಂಡೆ, ವಿಕ್ರಮ್ ತರಳೆ, ಕುಲದೀಪ್ ತರಳೆ, ಬಾಂದುರ್ಗಿ, ಶ್ರೀಮತಿ‌‌ ಕೋಳಿ, ಶಿವಾಜಿ ಕಾಂಬಳೆ, ಅಧಿಕಾರಿಗಳು, ಗುತ್ತಿಗೆದಾರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button