ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇಂದು ದಿ.ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 11ನೇ ದಿನದ ಕಾರ್ಯ ನಡೆಯುತ್ತಿದ್ದು, ಕಂಠೀರವ ಸ್ಟುಡಿಯೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಡಾ,ರಾಜ್ ಕುಮಾರ್ ಕುಟುಬ, ಚಿತ್ರರಂಗದ ಗಣ್ಯರು, ಅಭಿಮಾನಿಗಳು ಭಾಗಿಯಾಗಿದ್ದಾರೆ.
ಈ ವೇಳೆ ಮಾತನಾಡಿದ ನಟ ಶಿವರಾಜ್ ಕುಮಾರ್, ಇಂದು ಪುನೀತ್ ರಾಜ್ ಕುಮಾರ್ ಅವರ 11ನೇ ದಿನದ ಕಾರ್ಯ ನಡೆಯುತ್ತಿದ್ದು, ಪುನೀತ್ ಗೆ ಇದನ್ನೆಲ್ಲ ಮಾಡಬೇಕೆಂದರೆ ತುಂಬಾ ನೋವಾಗುತ್ತಿದೆ. ಇಂತದೊಂದು ಸಂದರ್ಭವನ್ನು ಎಣಿಸಿರಲಿಲ್ಲ ಎಂದು ಭಾವುಕರಾದರು.
ಇಂದು ಮನೆಯಲ್ಲಿಯೂ 11ನೇ ದಿನದ ಕಾರ್ಯ ನಡೆಯಲಿದೆ. ನಾಳೆ ಪ್ಯಾಲೇಸ್ ಗ್ರೌಂಡ್ ನಲ್ಲಿ ಅನ್ನಸಂತರ್ಪಣೆ ನಡೆಯಲಿದೆ. ಅಪ್ಪುಗೆ ಹೀಗೆಲ್ಲ ಮಾಡಬೇಕೆ ಎಂಬ ನೋವು ನಮ್ಮೆಲ್ಲರನ್ನು ಕಾಡುತ್ತಿದೆ. ಅಭಿಮಾನಿಗಳಲ್ಲೇ ಅಪ್ಪು ಇದ್ದಾನೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದರು.
ಅಭಿಮಾನಿಗಳು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಮಾಡಬೇಡಿ. ಹಾಗೆಲ್ಲ ಮಾಡುವುದು ಅಪ್ಪುಗೂ ನೋವುಂಟು ಮಾಡಿದಂತೆ. ಅಪ್ಪು ನಮ್ಮ ಜೊತೆಯೇ ಇದ್ದಾನೆ ಎಂದು ಜೀವನ ಮಾಡಿ ಎಂದು ಹೇಳಿದರು.
ಇದೇ ವೇಳೆ ಪುನೀತ್ ರಾಜ್ ಕುಮಾರ್ ಅವರಿಗೆ ಪದ್ಮಶ್ರೀ ಗೌರವದ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿದ ಶಿವರಾಜ್ ಕುಮಾರ್, ಪದ್ಮಶ್ರೀ ಕೇವಲ ಗೌರವ, ಅಪ್ಪು ಯಾವತ್ತಿಗೂ ಅಮರಶ್ರೀ. ಆತ ಎಲ್ಲರ ಮನಸ್ಸಿನಲ್ಲಿ ಅಜರಾಮರನಾಗಿರುತ್ತಾನೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ