ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 2020-21ನೇ ಸಾಲಿನಲ್ಲಿ ಖಾಸಗಿ ಶಾಲೆಗಳು ಪೂರ್ಣ ಶುಲ್ಕ ಪಡೆದಿದ್ದರೆ ಹೆಚ್ಚುವರಿ ಶುಲ್ಕ ವಾಪಸ್ ನೀಡುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.
2020-21ನೇ ಸಾಲಿನ ಶೇ.30ರಷ್ಟು ಶುಲ್ಕ ಕಡಿತ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಇದನ್ನು ಪ್ರಶ್ನಿಸಿದ ಕೆಲ ಖಾಸಗಿ ಶಾಲೆಗಳ ಒಕ್ಕೂಟ ಕೋರ್ಟ್ ಮೊರೆ ಹೋಗಿತ್ತು. ಸಧ್ಯ ಹೈಕೋರ್ಟ್ ಈ ಬಗ್ಗೆ ತೀರ್ಪು ನೀಡಿದ್ದು, ಶುಲ್ಕ ಪರಿಷ್ಕರಿಸಿ ಬೋಧನಾ ಶುಲ್ಕದಲ್ಲಿ ಶೇಕಡಾ 15ರಷ್ಟು ಹಿಂದಿರುಗಿಸಬೇಕು ಎಂದು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇದೀಗ ಅಧಿಕೃತ ಆದೇಶ ಹೊರಡಿಸಿದ್ದು, ಖಾಸಗಿ ಶಾಲೆಗಳು ಈಬಾರಿ ಶೇ.85ರಷ್ಟು ಮಾತ್ರ ಶುಲ್ಕ ಪಡೆಯಬೇಕು ಎಂದು ಆದೇಶ ನೀಡಿದೆ.
ಶುಲ್ಕ ಕಡಿಮೆ ಮಾಡುವಂತೆ ಪೋಷಕ ಸಂಘಟನೆಗಳು ಈ ಹಿಂದೆ ಪ್ರತಿಭಟನೆ ಕೂಡ ನಡೆಸಿದ್ದರು. ಹೈಕೋರ್ಟ್ ಆದೇಶದಂತೆ ಸರ್ಕಾರ ಅಧಿಕೃತವಾಗಿ ಶುಲ್ಕ ಆದೇಶ ಪ್ರಕಟ ಮಾಡಿದೆ. ಆ ಮೂಲಕ ಬೋಧನಾ ಶುಲ್ಕದಲ್ಲಿ ಶೇ.15ರಷ್ಟು ಕಡಿತ ಮಾಡಲು ಆದೇಶಿಸಿದೆ.
ಈ ಹಿಂದೆ 2020-21ನೇ ಸಾಲಿನ ಭೋದನಾ ಶುಲ್ಕವನ್ನು ಶೇ.70ರಷ್ಟು ಮಾತ್ರ ಈ ವರ್ಷ ಪಡೆಯಬೇಕು. ಬೋದನಾ ಶುಲ್ಕ ಬಿಟ್ಟು ಬೇರೆ ಶುಲ್ಕ ಪಡೆಯುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶ ನೀಡಿತ್ತು. ಈಗಾಗಲೇ ಪೋಷಕರು ಹೆಚ್ಚಿನ ಶುಲ್ಕ ಪಾವತಿ ಮಾಡಿದ್ದರೆ ಹೆಚ್ಚುವರಿ ಶುಲ್ಕ ವಾಪಸ್ ಕೊಡಬೇಕು ಇಲ್ಲವೇ ಮುಂದಿನ ವರ್ಷಕ್ಕೆ ಅದನ್ನು ಸರಿದೂಗಿಸಬೇಕು ಎಂದು ರಾಜ್ಯ ಸರ್ಕಾರ ಷರತ್ತು ಹಾಕಿತ್ತು. ಇದೀಗ ಖಾಸಗಿ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಶುಲ್ಕ ಪಡೆದಿದ್ದರೆ ಶೇ.85ರಷ್ಟು ಮಾತ್ರ ಉಳಿಸಿಕೊಂಡು, ಬಾಕಿ ಶೇ 15ರಷ್ಟು ಶುಲ್ಕವನ್ನು ಹಿಂತಿರುಗಿಸುವಂತೆ ಆದೇಶ ಹೊರಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ