ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಟ್ ಕಾಯಿನ್ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನ ಜೊತೆ ಈ ಹಿಂದೆ ಸಂಪರ್ಕವಿತ್ತು. ಆದರೆ ಆತನ ಜೊತೆ ಬಿಟ್ ಕಾಯಿನ್ ವ್ಯವಹಾರ ಇಲ್ಲ. ಆದರೆ ಬಿಜೆಪಿ ನಾಯಕರು ನನ್ನ ವಿರುದ್ಧ ಮಾಡುತ್ತಿರುವ ಆರೋಪಗಳು ಸುಳ್ಳು ಎಂದು ಯುವ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ಮೊಹಮ್ಮದ್ ನಲಪಾಡ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ನಲಪಾಡ್, ಶ್ರೀಕಿ ಪರಿಚಯವಿದ್ದದ್ದು ನಿಜ. ಆದರೆ ಆತನೊಂದಿಗೆ ಯಾವುದೇ ಬಿಟ್ ಕಾಯಿನ್ ವ್ಯವಹಾರದಲ್ಲಿ ಭಾಗಿಯಾಗಿಲ್ಲ. 2018ರ ಗಲಾಟೆ ಪ್ರಕರಣವೇ ಕೊನೆ. ಆತ ಓರ್ವ ಹ್ಯಾಕರ್ ಎಂಬುದು ಮಾಧ್ಯಮಗಳ ಮೂಲಕ ಗೊತ್ತಾಗುತ್ತಿದ್ದಂತೆ ಆತನೊಂದಿಗೆ ಅಂತರ ಕಾಯ್ದುಕೊಂಡೆ. ಈಗ ಆತನೊಂದಿಗೆ ಯಾವುದೇ ಸಂಬಂಧವಿಲ್ಲ ಎಂದರು.
ಬಿಟ್ ಕಾಯಿನ್ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಈ ಹಗರಣದಲ್ಲಿ ನಾನು ಭಾಗಿಯಾಗಿಲ್ಲ ಒಂದು ವೇಳೆ ನಾನು ತಪ್ಪು ಮಾಡಿದ್ದರೆ ಬಿಜೆಪಿ ಸರ್ಕಾರ ನನ್ನು ಸುಮ್ಮನೆ ಬಿಡುತ್ತಿತ್ತೇ ಇಷ್ಟೊತ್ತಿಗೆ ಬಂಧಿಸುತ್ತಿದ್ದರು. ನಾನು ಬಿಟ್ ಕಾಯಿನ್ ಹಗರಣದಲ್ಲಿ ಇದ್ದರೆ ನನ್ನನ್ನು ಬಂಧಿಸಲಿ ಎಂದು ಹೇಳಿದರು.
ಜನವರಿಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುತ್ತಿದ್ದೇನೆ. ಅದನ್ನು ತಪ್ಪಿಸಲೆಂದು ಇಂತಹ ಆರೋಪಗಳನ್ನು ನನ್ನ ವಿರುದ್ಧ ಮಾಡುತ್ತಿರಬಹುದು ಅಷ್ಟೆ. ಆದರೆ ನಾನು ಯಾವತ್ತೂ ಜನಪರ ಕೆಲಸಗಳನ್ನು ಮಾಡುವವನು. ಯುವಜನತೆ, ಪಕ್ಷ ಸಂಘಟನೆ ಬಗ್ಗೆ ಗಮನ ಹರಿಸುವವನು ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ