ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೆಎಲ್‌ಇ ಸಪ್ತರ್ಷಿಗಳ ತ್ಯಾಗದ ಪ್ರತಿಫಲವಾಗಿ ಉತ್ತರ ಕರ್ನಾಟಕದಲ್ಲಿ ಶತಮಾನಗಳ ಶೈಕ್ಷಣಿಕ ಹಸಿವು ನೀಗಿಸುವಂತಾಯಿತು. ಶಿಕ್ಷಣವೇ ಬದುಕಿನ ದಾರಿದೀಪ ಎಂಬ ಅವರ ನಿಲುವು ಸುವರ್ಣಾಕ್ಷರಗಳಲ್ಲಿ ದಾಖಲಾಗಿದೆ. ಧರ್ಮಾತೀತ ಹಾಗೂ ಜಾತ್ಯಾತೀವಾದ ಮೌಲ್ಯದ ಮೇಲೆ ಸಂಸ್ಥೆಯನ್ನು ಹುಟ್ಟಿಹಾಕಿದ್ದೇ ಒಂದು ರೋಚಕ ಇತಿಹಾಸವೆಂದು ಕೆಎಲ್‌ಇ ಸಂಸ್ಥೆಯ ಕರ‍್ಯಾದ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರಿಂದಿಲ್ಲಿ ಹೇಳಿದರು.
ಕೆಎಲ್‌ಇ ಸಂಸ್ಥೆಯ 106ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಈ ಭಾಗದಲ್ಲಿ ಕೇವಲ ಎರಡು ಶಾಲೆಗಳಿದ್ದವು, ಇದನ್ನರಿತ ಸಪ್ತರ್ಷಿಗಳು ಬೆಳಗಾವಿ ಶಾಲೆ ಪ್ರಾರಂಭಿಸಿದರು. ಅವರು ನೆಟ್ಟ ಸಸಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ದೇಶಾದ್ಯಂತ ಸುಮಾರು 279 ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಲಾಗಿದೆ. ಈಗ ನೆರೆಯ ಹುಬ್ಬಳ್ಳಿಯಲ್ಲಿ ಸಂಸ್ಥೆಯ 2ನೇ ವೈದ್ಯಕೀಯ ಮಹಾವಿದ್ಯಾಲವನ್ನು ಪ್ರಾರಂಭಿಸಲಾಗುತ್ತಿದ್ದು, ಅದರೊಂದಿಗೆ 500 ಹಾಸಿಗೆಗಳ ಆಸ್ಪತ್ರೆಯನ್ನೂ ಕೂಡ ಜನಸೇವೆಗೆ ಅರ್ಪಿಸಲು ಸನ್ನದ್ದವಾಗಿದ್ದೇವೆ. ಆದ್ದರಿಂದ ಯುವಕರು ಕೇವಲ ಉದ್ಯೋಗ ಪಡೆಯುವದಕ್ಕಾಗಿ ಅಧ್ಯಯನ ನಡೆಸದೇ ಉದ್ಯೋಗ ನೀಡುವ ಉದ್ಯಮಪತಿಗಳಾಗಲು ಮುಂದೆ ಬರಬೇಕು. ಇದರಿಂದ ತಮ್ಮ ಸುತ್ತಮುತ್ತಲಿನ ಪ್ರದೇಶವೂ ಕೂಡ ಅಭಿವೃದ್ಧಿ ಹೊಂದಿ, ಸಮಾಜ ಸುಧಾರಿಸುತ್ತದೆ ಎಂದು ಸಲಹೆ ನೀಡಿದರು.
ಹೊಸ ಯೋಜನೆಗಳು: ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಮುಂಬೈನಲ್ಲಿ ಶಾಲೆ ಹಾಗೂ ಕಾನೂನು ಮಹಾವಿದ್ಯಾಲಯ, ಪುಣೆಯಲ್ಲಿ 300 ಹಾಸಿಗೆಗಳ ಆಸ್ಪತ್ರೆ ಮತ್ತು ಹುಬ್ಬಳ್ಳಿಯಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಪ್ರಾರಂಭಿಸಲಾಗುತ್ತಿದ್ದು, 150 ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ 500 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಜನಸೇವೆಗೆ ಅರ್ಪಿಸಲಾಗುವದೆಂದು ತಿಳಿಸಿದರು.
ಆರೋಗ್ಯ ಸೇವೆ: 7 ಜನ ಶಿಕ್ಷಕರು, 3 ದಾನಿಗಳು ಸೇರಿಕೊಂಡು ಸ್ಥಾಪಿಸಿದ ಸಂಸ್ಥೆಯು ಯಾವುದೇ ಮನೆತನಕ್ಕೆ ಸೀಮಿತವಾಗದೇ ಪ್ರಜಾಪ್ರಭುತ್ವ ಅಡಿಯಲ್ಲಿ ಸೇವೆ, ನೀಡುತ್ತಿದೆ. ದೇಶಾದ್ಯಂತ 279 ಶಿಕ್ಷಣ ಸಂಸ್ಥೆಗಳಲ್ಲಿ 139000 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಸಮಾಜದ ಆರೋಗ್ಯ ಕಾಪಾಡುವ ದೃಷ್ಟಿಯಿಂದ 1986ರಲ್ಲಿ ಪ್ರಥಮ ಬಾರಿಗೆ ಆಸ್ಪತ್ರೆಯಲಾಯಿತು. ಪ್ರಾರಂಭಿಸಿ, ಇಂದು 13 ಆಸ್ಪತ್ರೆಗಳ 4800 ಹಾಸಿಗೆಗಳ ಮೂಲಕ ಜನ ಆರೋಗ್ಯ ಕಾಪಾಡುವಲ್ಲಿ ನಿರತರಾಗಿದ್ದೇವೆ.
ದಾನಿಗಳು ಕೊಡುಗೆ ಸ್ಮರಣೆ: ಕೆಎಲ್‌ಇ ಸಂಸ್ಥೆ ಬೆಳೆಯಬೇಕಾದರೆ ದಾನಿಗಳ ಕೊಡುಗೆ ಅತೀ ಮುಖ್ಯ. ಲಿಂಗರಾಜ ಟ್ರಸ್ಟ್, ರಾಜಾಲಖಮಗೌಡರು, ಭೂಮರೆಡ್ಡಿ ಬಸಪ್ಪನವರು ಮಹಾದಾನಿಗಳಾದರೆ, ನಿಪ್ಪಾಣಿಯ ಬಾಗೇವಾಡಿ, ಅಂಕೋಲಾದ ಪಿಕಳೆ ದಂಪತಿಗಳು, ಪಿಸಿ ಜಾಬಿನ್, ಅಥಣಿಯ ರಣಮೋಡೆ ದಂಪತಿಗಳು ಹೀಗೆ ಅನೇಕಾನೇಕ ದಾನಿಗಳು ಸಂಸ್ಥೆಯ ಬೆಳವಣಿಗೆಯಲ್ಲಿ ಮಹತ್ವಪೂರ್ಣ ಯೋಗದಾನ ನೀಡಿದ್ದಾರೆ.
ಕೆಎಲ್‌ಇ ಕರೋನಾ ಸೇನಾನಿಗಳು: ಕೋರೊನಾ ರೋಗಿಗಳ ಸೇವೆ ಮಾಡಿದ ಆಸ್ಪತ್ರೆಯ ಸಿಬ್ಬಂದಿ ತಮ್ಮ ಜೀವ ಕಳೆದುಕೊಂಡಿದ್ದಾರೆ. ಅವರ ಕರ‍್ಯ ಅತ್ಯಂತ ಶ್ಲಾಘನೀಯ. ಸರಕಾರದ ನಂತರ ಅತೀ ಹೆಚ್ಚು ಕೋವಿಡ್ ವ್ಯಾಕ್ಸಿನ ನೀಡಿ ಜನರನ್ನು ರಕ್ಷಿಸಲು ಕ್ರಮಕೈಕೊಳ್ಳಲಾಗಿದೆ. ಆರೋಗ್ಯ ತಪಾಸಣಾ ಶಿಬಿರಗಳ ಮೂಲಕ ಒಂದು ಲಕ್ಷ ಹಳ್ಳಿಗರಿಗೆ ವೈದ್ಯಕೀಯ ಸೇವೆ ನೀಡಲಾಗಿದೆ. ಇದು ನಿರಂತರವಾಗಿರಲಿದೆ. ರೈತರ ಸೇವೆಗಾಗಿ ಕೃಷಿ ಮಹಾವಿದ್ಯಾಲಯ, ಸಂಶೋಧನೆ, ಕ್ರೀಡೆ ಸೇರಿದಂತೆ ಎಲ್ಲ ಕ್ಷೇತ್ರಗಳಿಗೆ ಆದ್ಯತೆ ನೀಡಿ ಸೇವೆಗೈಯಲಾಗುತ್ತಿದೆ ಎಂದ ಅವರು, ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶಾದ್ಯಂತ ಹೆಸರು ಮಾಡಿದ್ದಾರೆ. ಸುಧಾಮೂರ್ತಿ, ಅನಂತಕುಮಾರ, ಬಿ ಶಂಕರಾನAದ, ಸುರೇಶ ಅಂಗಡಿ, ಶೆಟ್ಟರ, ಬೊಮ್ಮಾಯಿ, ನಿರಾಣಿ ಸೇರಿದಂತೆ ಅನೇಕರು ನಮ್ಮ ವಿದ್ಯಾರ್ಥಿಗಳು ಎಂಬುದು ನಮಗೆ ಅಭಿಮಾನದ ಸಂಗತಿ ಎಂದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆಎಲ್‌ಇ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ವಿವೇಕ ಸಾವಜಿ ಅವರು ಮಾತನಾಡಿ, ಕೆಎಲ್‌ಇ ಸಂಸ್ಥೆಯು ಕೇವಲ ಅಂಕಿಸಂಖ್ಯೆಗಳನ್ನು ಹೆಚ್ಚು ಮಾಡುತ್ತಿಲ್ಲ, ಗುಣಾತ್ಮಕವಾದ ಶಿಕ್ಷಣವನ್ನು ನೀಡುತ್ತಿದೆ. 58 ವರ್ಷಗಳ ಬಳಿಕ ಸಂಸ್ಥೆಯು 2ನೇ ವೈದ್ಯಕೀಯ ಮಹಾವಿದ್ಯಾಲಯವನ್ನು ಪ್ರಾರಂಭಿಸುತ್ತಿರುವದು ಅತ್ಯಂತ ಹೆಮ್ಮೆಯ ವಿಷಯ. ಸಮಾಜದಲ್ಲಿ ಯಶಸ್ಸಿನ ಮೆಟ್ಟಿಲು ಏರುವದಕ್ಕೆ ಕೆಎಲ್‌ಇ ಸಂಸ್ಥೆಯು ಏಣಿಯಾಗಿ ಕರ‍್ಯನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಡಾ. ಸುಜಾತಾ ಜಾಲಿ, ಡಾ. ಎಸ್ ಎಂ ಧಡೇದ, ರಜನೀಶ ಮ್ಯಾಥ್ಯೂ, ಡಾ. ಪ್ರವೀಣ, ಡಾ. ಉಮಾ ಮುದ್ದೇನಗುಡಿ,( ಬಿವಿಬಿ ಹುಬ್ಬಳ್ಳಿ)ಡಾ. ಸಿದ್ದಲಿಂಗ, (ದಂತವೈದ್ಯರು, ಬೆಂಗಳೂರು ) ಲಲಿತಾ ಬುಕರಿ, ಭಾರತಿ ಲಿಂಗಾಯತ ಹಾಗೂ ರಾಜ್ಯ ರಾಷ್ಟç ಮತ್ತು ಅಂತರಾಷ್ಟ್ರೀಯಮಟ್ಟದಲ್ಲಿ ಸಾಧನೆಗೈದ 84 ವಿದ್ಯಾರ್ಥಿಗಳಿಗೆ ಪದಕ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಕರ‍್ಯಾಧ್ಯಕ್ಷರಾದ ಮಹಾಂತೇಶ ಕೌಜಲಗಿ ಅವರು ವಹಿಸಿ ಮಾತನಾಡಿ, ಏಳು ಜನ ಶಿಕ್ಷಕರು ಅದ್ಭುತವಾದ ಕನಸುಕಂಡರು, ಅದನ್ನು ಸಾಕಾರಗೊಳಿಸಿ ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ಬೆಳಕಾದರು. ಅವರ ತ್ಯಾಗ ಚಿರಸ್ಮರಣೀಯ ಎಂದರು. ಡಾ. ಸುನೀಲ ಜಲಾಲಪುರ, ದೇವರಾಜ ಅರಸ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಸ್ ಕುಮಾರ, ಕೆಎಲ್‌ಇ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಬಿ ಜಿ ದೇಸಾಯಿ, ಡಾ. ವಿ ಎಸ್ ಸಾಧುನವರ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ವಾಯ್.ಎಸ್.ಪಾಟೀಲ, ಬಸವರಾಜ ಪಾಟೀಲ, ಪ್ರವೀಣ ಬಾಗೇವಾಡಿ, ವೈದ್ಯರಾದ ಡಾ.ಎಚ್.ಬಿ. ರಾಜಶೇಖರ ರಾಜಶೇಖರ, ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
ಕೆಎಲ್‌ಇ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಡಾ.ಮಹೇಶ ಗುರನಗೌಡರ, ಡಾ.ಸೌಮ್ಯಾ ಮಾಸ್ತಿ, ಡಾ.ಆದಿತ್ಯ ಆಚಾರ್ಯ ನಿರೂಪಿಸಿದರು. ಕೆಎಲ್‌ಇ ಸಂಸ್ಥೆ ಜಂಟಿ ಕಾರ್ಯದರ್ಶಿಗಳಾದ ಡಾ.ಸುನಿಲ ಜಲಾಲಪುರೆ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ