ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪೇಜಾವರ ಶ್ರೀಗಳು ಮಾನವ ಧರ್ಮ ಸ್ವೀಕಾರ ಮಾಡಿದವರು. ದಲಿತರಿರುವಲ್ಲಿಗೆ ಸ್ವತಃ ಹೋಗಿ ಪ್ರವಚನ ಮಾಡಿದ್ದಾರೆ. ದಲಿತರನ್ನು ಉದ್ಧಾರ ಮಾಡುವಲ್ಲಿ ಶ್ರಮಿಸಿದ್ದಾರೆ. ಇಂತಹ ವ್ಯಕ್ತಿಯ ವಿರುದ್ಧ ಮಾತನಾಡುವ ಹಂಸಲೇಖ ಅವರಿಗೆ ನಾಚಿಕೆಯಾಗಬೇಕು. ಬ್ರಾಹ್ಮಣರಿಗೆ ಏನನ್ನಾದರೂ ಅನ್ನಬಹುದೆಂಬ ಕಾಲವೊಂದಿತ್ತು ಆದರೆ ಈಗ ಹಾಗಿಲ್ಲ. ಬ್ರಾಹ್ಮಣರ ಜನಿವಾರವನ್ನು ಮಾತ್ರ ನೀವು ನೋಡಿದ್ದೀರಿ. ಅವರ ಹೃದಯದಲ್ಲಿರುವ ತಲವಾರವನ್ನು ನೀವು ನೋಡಿಲ್ಲ. ಪ್ರಸಂಗ ಬಂದರೆ ಬ್ರಾಹ್ಮಣರು ತಲವಾರ ಹಿಡಿಯಲೂ ಸಿದ್ಧ ಎಂದು ಬ್ರಾಹ್ಮಣ ಸಮಾಜದ ಮುಖಂಡ ಅನಿಲ ಪೋತದಾರ ಹೇಳಿದರು.
ಉಡುಪಿಯ ಪೇಜಾವರ ವಿಶ್ವೇಶತೀರ್ಥ ಸ್ವಾಮಿಜಿಯವರ ಕುರಿತಂತೆ ಹಂಸಲೇಖ ಅವರು ಹಗುರವಾಗಿ ಮಾತನಾಡಿರುವ ಹಿನ್ನೆಲೆಯಲ್ಲಿ ಎಲ್ಲ ಕೃಷ್ಣ ಭಕ್ತರು, ಅಭಿಮಾನಿಗಳು ಹಾಗೂ ಅನುಯಾಯಿಗಳು ನಿನ್ನೆ ದಿ.18 ಗುರುವಾರದಂದು ನಗರದ ಟಿಳಕಚೌಕ ವೃತ್ತದಲ್ಲಿ ನಡೆದ ಖಂಡನಾ ನಿರ್ಣಯ ಸಭೆಯಲ್ಲಿ ಅನಿಲ ಪೋತದಾರ ಮಾತನಾಡಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ಎಸ್. ಎಂ. ಕುಲಕರ್ಣಿ ಅವರು ಮಾತನಾಡಿ ಹಂಸಲೇಖ ಅವರು ಬ್ರಾಹ್ಮಣ ಹಾಗೂ ಹಿಂದೂ ಸಮಾಜದ ಭಾವನೆಗಳನ್ನು ಕೆಣಕುವಂತಹ ಮಾತುಗಳನ್ನು ಆಡಿದ್ದಾರೆ. ಈ ಕುರಿತಂತೆ ಹಂಸಲೇಖ ಅವರು ಒಂದು ವಾರದೊಳಗೆ ಕ್ಷಮೆ ಕೇಳಬೇಕು. ಕ್ಷಮೆ ಕೇಳದಿದ್ದಲ್ಲಿ ಸರಕಾರದವರು ತಾವಾಗಿಯೇ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಯಾಕೆಂದರೆ ಎಲ್ಲೆಡೆ ಇಂಥ ವಿರೋಧಗಳು ಬಂದಿದ್ದು ಇದು ಸರಕಾರದ ಗಮನಕ್ಕೆ ಬಂದಂತಹ ವಿಷಯ ಎಂದು ಹೇಳಿದರು.
ಗುರುರಾಜಾಚಾರ್ಯ ಜೋಶಿ ಅವರು ಮಾತನಾಡಿ ಹಂಸಲೇಖ ಅವರನ್ನು ಸಂಗೀತ ಕ್ಷೇತ್ರದ ಅತ್ಯಂತ ಎತ್ತರದ ವ್ಯಕ್ತಿಯಾಗಿ ನಾವು ಕಂಡಿದ್ದೆವು. ಅಂಥವರ ಬಾಯಲ್ಲಿ ಇಂಥ ಕೀಳು ಮಟ್ಟದ ಮಾತುಗಳು ಬರಬಾರದಿತ್ತು. ಈಗಾಗಿರುವ ನಿಂದನೆ ಇದು ಕೇವಲ ಬ್ರಾಹ್ಮಣರದ್ದಲ್ಲ. ಹಿಂದುಗಳಿಗಾಗಿರುವ ಅಪಮಾನ ಇದನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಸಂಘದ ಕಾರ್ಯದರ್ಶಿಗಳಾದ ಆರ್, ಎಸ್. ಮುತಾಲಿಕ ಅವರು ಮಾತನಾಡುತ್ತ ಪೂಜ್ಯ ಪೇಜಾವರ ಶ್ರೀಗಳ ಕುರಿತಂತೆ ಅವಹೇಳನಕಾರಿ ಮಾತುಗಳನ್ನಾಡಿದ ಹಂಸಲೇಖ ಅವರ ವಿರುದ್ಧ ಈಗಾಗಲೇ ಕೋರ್ಟಿನಲ್ಲಿ ಕೇಸನ್ನು ದಾಖಲಿಸಿದ್ದು ಅದು ಅಷ್ಟಕ್ಕೆ ನಿಲ್ಲದೇ ಅವರಿಗೆ ಶಿಕ್ಷೆಯಾಗುವವರೆಗೆ ಆ ಕೇಸ್ನ್ನು ಮುಂದುವರೆಸುತ್ತೇವೆ. ಅಲ್ಲದೇ ಹಂಸಲೇಖ ಅವರಿಗೆ ಸರಕಾರದ ಎಲ್ಲ ಸೌಲಭ್ಯಗಳನ್ನ ಬಂದ್ ಮಾಡುವಂತೆ ಒತ್ತಾಯಿಸುವುದಾಗಿ ಎಂದು ಹೇಳಿದರು.
ನಗರ ಸೇವಕರಾದ ಜಯತೀರ್ಥ ಸವದತ್ತಿ, ವಾಣಿ ಜೋಶಿ, ಸೇರಿದಂತೆ ಶ್ರೀನಿವಾಸಾಚಾರ್ಯ ಹೊನ್ನಿದಿಬ್ಬ, ಬನಾ ಕೌಜಲಗಿ, ಅನುರಾಧಾ ಗೊಗ್ಗಿ, ಸುಭಾಷ ಕುಲಕರ್ಣಿ, ಪಂ. ಪ್ರಮೋದಾಚಾರ್ಯ ಕಟ್ಟಿ ಮುಂತಾದವರು ಮಾತನಾಡಿದರು. ಶ್ರೀಧರ ಹುಕ್ಕೇರಿ, ಪ್ರೊ. ಜಿ. ಕೆ. ಕುಲಕರ್ಣಿ, ವ್ಯಾಸಾಚಾರ್ಯ ಅಂಬೇಕರ, ಪಿ. ಬಿ. ಸ್ವಾಮಿ, ಗುರುರಾಜ ಪರ್ವತಿ, ರಾಜೇಂದ್ರ ಕುಲಕರ್ಣಿ, ಅರವಿಂದ ಹುನಗುಂದ, ಕೇಶವ ಮಾಹುಲಿ, ಮಧುಕರ ತೇರದಾಳ, ಶ್ರೀಧರ ಹಲಗತ್ತಿ, ನರಸಿಂಹ ಸವದತ್ತಿ ಮುಂತಾದವರು ಸೇರಿದಂತೆ ಐದನೂರಕ್ಕೂ ಹೆಚ್ಚು ಜನ ಖಂಡನಾ ಸಭೆಯಲ್ಲಿ ಪಾಲ್ಗೊಂಡಿದ್ದರು.
ಈ ಪ್ರತಿಭಟನೆಯಲ್ಲಿ ಹಂಸಲೇಖ ಅವರ ಭಾವ ಚಿತ್ರಕ್ಕೆ ಮಸಿ ಬಳಿದು ಸುಟ್ಟು ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಭಾರಿ ಮಳೆ: ತಿರುಪತಿಯಲ್ಲಿ ಭೂ ಕುಸಿತ; ಪ್ರವಾಹ ಭೀತಿಯಲ್ಲಿ ಭಕ್ತಾದಿಗಳು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ