ನ.23ರಂದು ಬೆಳಗಾವಿಯಲ್ಲಿ ದಿಗ್ಗಜರ ನಾಮಪತ್ರ ಸಲ್ಲಿಕೆ; ಲಖನ್ ಸ್ಪರ್ಧೆ (?) ಸೃಷ್ಟಿಸಿದ ಆತಂಕ
ಲಖನ್ ಪಕ್ಷೇತರರಾಗಿ ಸ್ಪರ್ಧಿಸಿದಲ್ಲಿ ಬೆಳಗಾವಿ ಕ್ಷೇತ್ರದ ಮೇಲೆ ಬಿಜೆಪಿ ಹೆಚ್ಚಿನ ಗಮನ ನೀಡಬೇಕಾದ ಅನಿವಾರ್ಯತೆ ಎದುರಾಗಲಿದೆ. ರಾಜ್ಯದಲ್ಲಿಯೇ ಬೆಳಗಾವಿ ಎಲ್ಲರ ಗಮನ ಸೆಳೆಯುವ ಕ್ಷೇತ್ರವಾಗಲಿದೆ. ಎಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಸೋತು ರಾಜ್ಯ ಮಟ್ಟದಲ್ಲಿ ಅವಮಾನಕ್ಕೆ ಕಾರಣವಾಗಬಹುದೆನ್ನುವ ಕಾರಣಕ್ಕೆ ಲಖನ್ ಕಣಕ್ಕಿಳಿಸದಂತೆ ಜಾರಕಿಹೊಳಿ ಸಹೋದರರ ಮನವೊಲಿಸುವ ಕೆಲಸವನ್ನು ಬಿಜೆಪಿ ವರಿಷ್ಠರು ಮತ್ತು ಆರ್ ಎಸ್ಎಸ್ ಮುಖಂಡರು ಮಾಡುತ್ತಿದ್ದಾರೆನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಡಿಸೆಂಬರ್ 10ರಂದು ನಡೆಯಲಿರುವ ವಿಧಾನ ಪರಿಷತ್ತಿನ 2 ಸ್ಥಾನಗಳ ಚುನಾವಣೆಗೆ ಬೆಳಗಾವಿ ಜಿಲ್ಲೆಯಲ್ಲಿ ಭರ್ಜರಿ ಪ್ರಚಾರ ನಡೆಯುತ್ತಿದೆ. ಕಾಂಗ್ರೆಸ್ ನಿಂದ ಚನ್ನರಾಜ ಹಟ್ಟಿಹೊಳಿ ಹಾಗೂ ಬಿಜೆಪಿಯಿಂದ ಮಹಾಂತೇಶ ಕವಟಗಿಮಠ ಸ್ಪರ್ಧಿಸುತ್ತಿದ್ದು, ಪಕ್ಷೇತರರಾಗಿ ಲಖನ್ ಜಾರಕಿಹೊಳಿ ಸ್ಪರ್ಧಿಸಲಿದ್ದಾರೆ ಎನ್ನಲಾಗಿದ್ದರೂ ಇನ್ನೂ ಖಚಿತವಾಗಿಲ್ಲ.
ಮಂಗಳವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಎರಡೂ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಅಂದು ನಾಮಪತ್ರ ಸಲ್ಲಿಸಲಿದ್ದಾರೆ. ಲಖನ್ ಜಾರಕಿಹೊಳಿ ಕಣಕ್ಕಿಳಿಯುವುದು ನಿಜವಾದರೆ ಅವರೂ ಅಂದೇ ನಾಮಪತ್ರ ಸಲ್ಲಿಸುವರು.
ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಎರಡೂ ಪಕ್ಷಗಳ ರಾಜ್ಯ ನಾಯಕರು, ಸ್ಥಳೀಯ ಶಾಸಕರು, ಗಣ್ಯರು ಪಾಲ್ಗೊಳ್ಳಲಿದ್ದು, ಬೆಳಗಾವಿಯಲ್ಲಿ ಅಂದು ರಾಜಕೀಯ ರಂಗೇರಲಿದೆ.
ಬಿಜೆಪಿ ಹಾಗೂ ಕಾಂಗ್ರೆಸ್ ತಲಾ ಒಬ್ಬರನ್ನು ಮಾತ್ರ ಕಣಕ್ಕಿಳಿಸುವ ಮೂಲಕ ತಲಾ ಒಂದೊಂದು ಸ್ಥಾನಗಳನ್ನು ಹಂಚಿಕೊಂಡಿವೆ. 2 ಸ್ಥಾನಗಳಿರುವುದರಿಂದ ಗೊಂದಲ ಮತ್ತು ಅನಗತ್ಯ ಶಕ್ತಿ ವ್ಯಯ ಬೇಡ ಎನ್ನುವ ತೀರ್ಮಾನಕ್ಕೆ ಎರಡೂ ಪಕ್ಷಗಳು ಬಂದಂತಿದೆ.
ಆದರೆ ಲಖನ್ ಜಾರಕಿಹೊಳಿ ಪಕ್ಷೇತರರಾಗಿ ಕಣಕ್ಕಿಳಿದರೆ ಎರಡೂ ಪಕ್ಷಗಳಿಗೆ ತಲೆನೋವಾಗುವುದು ಖಚಿತ. ಸಧ್ಯ ಲಖನ್ ಜಾರಕಿಹೊಳಿ ಬಿಜೆಪಿಯಲ್ಲಿರುವುದರಿಂದ ಬಿಜೆಪಿಯ ಮತಗಳು ಹೆಚ್ಚಿನ ಪ್ರಮಾಣದಲ್ಲಿ ವಿಭಜನೆಯಾಗಿ ಅವರಿಗೆ ಹೋಗುವ ಸಾಧ್ಯತೆ ಇದೆ. ಹಾಗಾದಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಮೊದಲ ಪ್ರಾಶಸ್ತ್ಯದ ಮತದಲ್ಲಿ ಗೆಲ್ಲುವುದು ಕಷ್ಟವಾಗಬಹುದು ಅಥವಾ ಬಿಜೆಪಿಗೆ ಸೋಲಿನ ಭೀತಿಯೂ ಉಂಟಾಗಬಹುದು.
ಲಖನ್ ಜಾರಕಿಹೊಳಿ ಕಣಕ್ಕಿಳಿದರೆ, ಅವರಿಗೆ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಬೆಂಬಲವಾಗಿ ನಿಂತಲ್ಲಿ ಬೆಳಗಾವಿ ಚುನಾವಣೆ ಕಣ ಮತ್ತಷ್ಟು ರಂಗೇರಲಿದೆ. ರಮೇಶ ಮತ್ತು ಬಾಲಚಂದ್ರ ಇಬ್ಬರೂ ಬಿಜೆಪಿಯ ಅತ್ಯಂತ ಪ್ರಬಲ ನಾಯಕರಾಗಿರುವುದರಿಂದ ಸಹಜವಾಗಿ ಅವರ ಬೆಂಬಲಿಗರು ಲಖನ್ ಗೆ ಮತ ಚಲಾಯಿಸಲಿದ್ದಾರೆ. ಲಖನ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದಲ್ಲಿ ಬೆಂಬಲಿಗರನ್ನು ಹೊಂದಿದ್ದಾರಾದರೂ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಪರವಾಗಿ ಗಟ್ಟಿ ನಿಂತಿರುವದರಿಂದ ಅಷ್ಟಾಗಿ ಕಾಂಗ್ರೆಸ್ ಮತಗಳು ಒಡೆಯುವ ಸಾಧ್ಯತೆ ಇಲ್ಲ.
ಲಖನ್ ಪಕ್ಷೇತರರಾಗಿ ಸ್ಪರ್ಧಿಸಿದಲ್ಲಿ ಬೆಳಗಾವಿ ಕ್ಷೇತ್ರದ ಮೇಲೆ ಬಿಜೆಪಿ ಹೆಚ್ಚಿನ ಗಮನ ನೀಡಬೇಕಾದ ಅನಿವಾರ್ಯತೆ ಎದುರಾಗಲಿದೆ. ರಾಜ್ಯದಲ್ಲಿಯೇ ಬೆಳಗಾವಿ ಎಲ್ಲರ ಗಮನ ಸೆಳೆಯುವ ಕ್ಷೇತ್ರವಾಗಲಿದೆ. ಎಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಸೋತು ರಾಜ್ಯ ಮಟ್ಟದಲ್ಲಿ ಅವಮಾನಕ್ಕೆ ಕಾರಣವಾಗಬಹುದೆನ್ನುವ ಕಾರಣಕ್ಕೆ ಲಖನ್ ಕಣಕ್ಕಿಳಿಸದಂತೆ ಜಾರಕಿಹೊಳಿ ಸಹೋದರರ ಮನವೊಲಿಸುವ ಕೆಲಸವನ್ನು ಬಿಜೆಪಿ ವರಿಷ್ಠರು ಮತ್ತು ಆರ್ ಎಸ್ಎಸ್ ಮುಖಂಡರು ಮಾಡುತ್ತಿದ್ದಾರೆನ್ನಲಾಗಿದೆ.
ಈವರೆಗೂ ಲಖನ್ ಸ್ಪರ್ಧೆ ಖಚಿತವಾಗಿಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ರಮೇಶ ಜಾರಕಿಹೊಳಿ, ಲಖನ್ ಸ್ಪರ್ಧೆ ಬಗ್ಗೆ ನನಗೆ ಗೊತ್ತಿಲ್ಲ. ನಾನೂ ಪತ್ರಿಕೆಗಳಲ್ಲಿ ನೋಡಿದ್ದೇನೆ. ಅವರು ನಾಮಪತ್ರ ಸಲ್ಲಿಸಿದರೆ ನಂತರ ನೋಡೋಣ. ನಮ್ಮ ಮೊದಲ ಗುರಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ಗೆಲ್ಲಿಸುವುದು ಎಂದಿದ್ದಾರೆ.
ರಮೇಶ ಜಾರಕಿಹೊಳಿ ಈಗಾಗಲೆ ಜಿಲ್ಲೆಯನ್ನು ಸುತ್ತಿ ಪ್ರಚಾರ ಆರಂಭಿಸಿದ್ದಾರೆ. ಖಾನಾಪುರದಲ್ಲಿ ಎಂಇಎಸ್ ನಾಯಕ, ಮಾಜಿ ಶಾಸಕ ಅರವಿಂದ ಪಾಟೀಲ ಅವರನ್ನು ಭೇಟಿ ಮಾಡಿದ್ದಾರೆ. ಕಾಗವಾಡದಲ್ಲಿ ಕಾಂಗ್ರೆಸ್ ನಾಯಕ, ಮಾಜಿ ಶಾಸಕ ರಾಜು ಕಾಗೆ ಅವರನ್ನು ಭೇಟಿಯಾಗಿದ್ದಾರೆ. ರಾಯಬಾಗದಲ್ಲಿ ಹಾಲಿ ವಿಧಾನಪರಿಷತ್ ಸದಸ್ಯ ವಿವೇಕರಾವ್ ಪಾಟೀಲ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ವಿವೇಕರಾವ್ ಪಾಟೀಲ ಮೊದಲಿನಿಂದಲೂ ರಮೇಶ ಜಾರಕಿಹೊಳಿ ಅವರ ಕಟ್ಟಾ ಬೆಂಬಲಿಗರು. ಅವರು ಪುನಃ ಕಣಕ್ಕಿಳಿಯಲಿದ್ದಾರೆ ಎನ್ನುವ ಸುದ್ದಿ ಹರಡಿದೆಯಾದರೂ ಖಚಿತವಾಗಿಲ್ಲ.
ಒಟ್ಟಾರೆ, ಮಂಗಳವಾರ ಸಂಜೆಯ ಹೊತ್ತಿಗೆ ಬೆಳಗಾವಿ ಚುನಾವಣೆಯ ಕಣ ಸ್ಪಷ್ಟವಾಗಲಿದ್ದು, ಯಾರಿಗೆ, ಯಾರು ತಲೆನೋವಾಗಲಿದ್ದಾರೆ ಎನ್ನುವುದು ಗೊತ್ತಾಗಲಿದೆ.
ಬೆಳಗಾವಿ ದಕ್ಷಿಣದಲ್ಲಿ ಮತ್ತೆ ಸತೀಶ್ ಜಾರಕಿಹೊಳಿ ಸಂಚಾರ: ಕ್ಷೇತ್ರದಲ್ಲಿ ಕುತೂಹಲ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ