ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೊರೊನಾ ರೂಪಾಂತರಿ ಒಮಿಕ್ರಾನ್ ವೈರಸ್ ಭೀತಿ ಹಿನ್ನೆಲೆಯಲ್ಲಿ ಕೇರಳ, ಮಹಾರಾಷ್ಟ್ರ ಸೇರಿದಂತೆ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ. ಹೊರ ರಾಜ್ಯಗಳಿಂದ ರಾಜ್ಯಕ್ಕೆ ಆಗಮಿಸುವವರನ್ನು ತಪಾಸಣೆ ನಡೆಸಿ ಅವರ ಮೇಲೆ ನಿಗಾ ವಹಿಸುವಂತೆ ರಾಜ್ಯ ಸರ್ಕಾರ ಕಟ್ಟಪ್ಪಣೆ ಮಾಡಿದೆ. ಆದರೆ ಗಡಿ ಭಾಗದ ಕೆಲ ಚೆಕ್ ಪೋಸ್ಟ್ ಗಳಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಮೆರೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮಹಾರಾಷ್ಟ್ರ, ಬೆಳಗಾವಿ ಜಿಲ್ಲೆಯ ಗಡಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್ ಪೋಸ್ಟ್ ಬಳಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ಪೊಲೀಸರ ತಪಾಸಣೆ ಬೆನ್ನಲ್ಲೇ ಜನರು ಅಧಿಕಾರಿಗಳ ಕಣ್ತಪ್ಪಿಸಿ ಕಳ್ಳದಾರಿ ಹಿಡಿದು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ತಮಿಳುನಾಡು ಗಡಿ ಭಾಗದಲ್ಲಿಯೂ ಕಠಿಣ ತಪಾಸಣೆ ನಡೆಸಲಾಗುತ್ತಿದೆ. ಆದರೆ ಕೇರಳ-ಕರ್ನಾಟಕ ಗಡಿಯಲ್ಲಿ ಮಾತ್ರ ನಿರ್ಲಕ್ಷ ಮೆರೆಯಲಾಗುತ್ತಿದೆ. ಕೊರೊನಾ ಹೆಚ್ಚಲ, ಒಮಿಕ್ರಾನ್ ಭೀತಿ ನಡುವೆಯೂ ಗಡಿ ಭಾಗದಲ್ಲಿ ತಪಾಸಣೆ ನಡೆಯುತ್ತಿಲ್ಲ.
ಕೇರಳ-ಕರ್ನಾಟಕ ಗಡಿ ಭಾಗವಾಗಿರುವ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿ ಆರೋಗ್ಯ ಸಿಬ್ಬಂದಿಗಳೇ ನಾಪತ್ತೆಯಾಗಿದ್ದಾರೆ. ಕೇರಳದಿಂದ ಬರುವ ವಾಹನಗಳ ತಪಾಸಣೆ ನಡೆಸುವಂತೆ ಸರ್ಕಾರ ಸೂಚಿಸಿದ್ದರೂ ಕೂಡ ತಪಾಸಣೆ ಮಾತ್ರ ನಡೆಯುತ್ತಿಲ್ಲ. ಈ ಭಾಗದಲ್ಲಿ ಪ್ರತಿನಿತ್ಯ 500ಕ್ಕೂ ಹೆಚ್ಚು ವಾಹನ ಸಂಚರಿಸುತ್ತಿದ್ದು, ಆರೋಗ್ಯ ಸಿಬ್ಬಂದಿಗಳು ಮಾತ್ರ ನಾಪತ್ತೆಯಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ