Kannada NewsLatest

ಕವಟಗಿಮಠ ಅವರಿಗೆ ಮೋಸವಂತೂ ಮಾಡುವುದಿಲ್ಲ – ಬಾಲಚಂದ್ರ ಜಾರಕಿಹೊಳಿ

 

ಪ್ರಗತಿವಾಹಿನಿ ಸುದ್ದಿ, ಗೋಕಾಕ : ಕಳೆದ ೧೨ ವರ್ಷಗಳಿಂದ ವಿಧಾನ ಪರಿಷತ್ ಸದಸ್ಯನಾಗಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣ ಕ ಪ್ರಯತ್ನ ಮಾಡಿದ್ದೇನೆ. ಈ ಬಾರಿಯೂ ರಾಜ್ಯದಲ್ಲಿ ಅಧಿಕಾರ ವಿಕೇಂದ್ರಿಕರಣ ಬಲಪಡಿಸಲು ನನ್ನನ್ನು ೩ನೇ ಬಾರಿಗೆ ಆಯ್ಕೆ ಮಾಡುವಂತೆ ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರು ಮನವಿ ಮಾಡಿಕೊಂಡರು.
ಶುಕ್ರವಾರ ಸಂಜೆ ಸಮೀಪದ ಮೆಳವಂಕಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಗ್ರಾಪಂ ಸದಸ್ಯರು ಹಾಗೂ ಬಿಜೆಪಿ ಮುಖಂಡರುಗಳ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ಎಲ್ಲ ಸಮಸ್ಯೆಗಳು ಪರಿಹಾರವಾಗಲಿವೆ ಎಂದು ಹೇಳಿದರು.
ಗ್ರಾಮ ಪಂಚಾಯತಿ ಸದಸ್ಯರ ಗೌರವ ಧನ ಹೆಚ್ಚಿಸಲು ಅನೇಕ ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಈಗ ನೀಡುತ್ತಿರುವ ಅನುದಾನವನ್ನು ಗ್ರಾಮ ಪಂಚಾಯತ ಸದಸ್ಯರ ಸಂಖ್ಯೆ ಮತ್ತು ಜನಸಂಖ್ಯೆ ಆಧಾರದ ಮೇಲೆ ಹೆಚ್ಚಿಸಲು ಪ್ರಾಮಾಣಿಕ ಮಾಡುತ್ತೇನೆ. ಬೆಳಗಾವಿ ವಿಧಾನ ಪರಿಷತ್ ಕ್ಷೇತ್ರ ಲೋಂಡಾದಿಂದ ಕಕಮರಿವರೆಗೆ ವಿಸ್ತಾರ ಹೊಂದಿರುವ ದೊಡ್ಡ ಕ್ಷೇತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರತಿ ಮನೆ ಮನೆಗೆ ಶುದ್ಧ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಿದ್ದಾರೆ. ಗ್ರಾಮಗಳ ಅಭಿವೃದ್ಧಿಯೇ ದೇಶದ ಸರ್ವಾಂಗೀಣ ಅಭಿವೃದ್ಧಿ ಎಂಬಂತೆ ಮಹಾತ್ಮಾ ಗಾಂಧೀಜಿ ಅವರು ಕಂಡ ಕನಸನ್ನು ನನಸು ಮಾಡಲು ನನಗೆ ಆಶೀರ್ವಾದ ಮಾಡಬೇಕು ಎಂದು ಮಹಾಂತೇಶ ಕವಟಗಿಮಠ ಮನವಿ ಮಾಡಿದರು.
ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಈ ಚುನಾವಣೆಯಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ದುಡಿದು ಕಾಂಗ್ರೇಸ್ ಅಭ್ಯರ್ಥಿಯನ್ನು ಸೋಲಿಸಬೇಕಾಗಿದೆ. ಅದಕ್ಕಾಗಿ ಅರಭಾವಿ ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು ೬೧೦ ಸ್ಥಳೀಯ ಸಂಸ್ಥೆಗಳ ಸದಸ್ಯರಿದ್ದಾರೆ. ಇವೆಲ್ಲ ಮತಗಳು ನಮಗೆ ಬೀಳಲಿವೆ. ಎಲ್ಲರೂ ನಾವು ಹೇಳಿದಂತೆಯೇ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕಾಂಗ್ರೇಸ್‌ನ್ನು ಸೋಲಿಸಬೇಕಾಗಿದೆ. ಮಹಾಂತೇಶ ಕವಟಗಿಮಠ ಅವರಿಗೆ ನೀಡಿರುವ ಭರವಸೆಯಂತೆ ನಾವು ಅವರನ್ನು ಗೆಲ್ಲಿಸುತ್ತೇವೆ. ಕವಟಗಿಮಠ ಅವರಿಗೆ ಮೋಸವಂತೂ ಮಾಡುವುದಿಲ್ಲ. ಇದರ ಬಗ್ಗೆ ಚಿಂತೆ ಬಿಡಿ ಎಂದು ಅಭ್ಯರ್ಥಿ ಕವಟಗಿಮಠ ಅವರಿಗೆ ವೇದಿಕೆಯಲ್ಲಿಯೇ ಅಭಯ ನೀಡಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಈಗಾಗಲೇ ಎರಡು ಬಾರಿ ಪರಿಷತ್ ಸದಸ್ಯರಾಗಿರುವ ಮಹಾಂತೇಶ ಕವಟಗಿಮಠ ಅವರು ಹ್ಯಾಟ್ರಿಕ್ ಗೆಲುವಿನ ಉತ್ಸಾಹದಲ್ಲಿದ್ದಾರೆ. ೧೨ ವರ್ಷಗಳಿಂದ ಸಕ್ರೀಯರಾಗಿ ಜನರ ಮಧ್ಯೆ ಉಳಿದು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಆದ್ದರಿಂದ ಬುದ್ಧಿ ಮನೆ ಎನಿಸಿಕೊಂಡಿರುವ ವಿಧಾನ ಪರಿಷತ್‌ಗೆ ಆಯ್ಕೆ ಮಾಡುವ ಮೂಲಕ ವಿಶ್ವಮಾನ್ಯ ನಾಯಕ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೈಗಳನ್ನು ಬಲಪಡಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ, ಮೆಳವಂಕಿ ಜಿಪಂ ಕ್ಷೇತ್ರ ವ್ಯಾಪ್ತಿಯ ಚುನಾಯಿತ ಪ್ರತಿನಿಧಿಗಳು, ಸಹಕಾರಿಗಳು, ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಮೇಶ್ ಜಾರಕಿಹೊಳಿ ಬಿಜೆಪಿ ಸೇರಿದ್ದೇಕೆ? ಗುಟ್ಟು ಬಹಿರಂಗ!

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button