Latest

ನವಲೂರ ಹತ್ತಿರ ಬಣಜಿಗ ಸಮಾಜದ ಬೃಹತ್ ಭವನ ನಿರ್ಮಾಣ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಧಾರವಾಡ ತಾಲೂಕಿನ ನವಲೂರ ಹತ್ತಿರ ಸುಮಾರು ಹದಿನೈದು ಕೋಟಿ ರೂ. ವೆಚ್ಚದಲ್ಲಿ ಬಣಜಿಗ ಸಮಾಜದ ಬೃಹತ್ ಭವನ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾ ಬಣಜಿಗ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಕನಶೆಟ್ಟಿ (ಅಥಣಿ) ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘವು ಕಳೆದ ಹಲವು ದಶಕಗಳಿಂದ ಬಣಜಿಗ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಮೂಲತಃ ವ್ಯಾಪಾರಸ್ಥರಾಗಿರುವ ಬಣಜಿಗರು ವಿಶ್ವಾದ್ಯಂತ ಪಸರಿಸಿದ್ದು ದೇಶದ ವಿವಿಧ ಭಾಗಗಳಲ್ಲಿ ವಾಸಿಸುತ್ತಿದ್ದಾರೆ. ಹೀಗೆ ಹರಿದು ಹಂಚಿ ಹೋಗಿರುವ ಸಮಾಜದವರನ್ನೆಲ್ಲ ಒಗ್ಗೂಡಿಸುವ ಕಾರ್ಯವನ್ನು ಬಣಜಿಗ ಸಂಘ ಮಾಡುತ್ತಿದೆ ಎಂದರು.
ಬಣಜಿಗ ಭವನಕ್ಕೆ ಈಗಾಗಲೇ ೪ ಕೋಟಿ ರೂ. ಗಳನ್ನು ಸಮಾಜದ ಮುಖಂಡರಿಂದ ಸಂಗ್ರಹಿಸಲಾಗಿದ್ದು, ಇನ್ನುಳಿದ ಧನ ಒಗ್ಗೂಡಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗುವದು ಎಂದು ಮಾಹಿತಿ ನೀಡಿದರು.
ಜಿಲ್ಲಾ ಬಣಜಿಗ ಸಂಘದ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಜಗಜಂಪಿ ಮಾತನಾಡಿ, ಸಮಾಜದ ವಧು-ವರರ ಸಮಾವೇಶಗಳನ್ನು  ನಡೆಸುವುದು, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳಿಗೆ ಸಹಾಯ ಮಾಡುವುದು ಮುಂತಾದ ಕೆಲಸಗಳನ್ನು ಸಂಘದ ಪರವಾಗಿ ಮುಂಚಿನಿಂದಲೂ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ ಕಟ್ಟಿ ಮಾತನಾಡಿದರು. ಬಣಜಿಗ ಸಮಾಜದ ಮುಖಂಡರಾದ ಆನಂದ ವಾಡೇದ, ಬಸನಗೌಡಾ ಪಾಟೀಲ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button