ದೇಶದ 5 ಟ್ರಿಲಿಯನ್ ಆರ್ಥಿಕತೆ ಗುರಿಯಲ್ಲಿ ರಾಜ್ಯದ ಭಾಗ ಅದರ 1/3 ಭಾಗ ಆಗಿರಬೇಕು – ಸಿಎಂ ಬಸವರಾಜ ಬೊಮ್ಮಾಯಿ ಆಶಯ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: 2024-25ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. ಇದರ 1/3 ಭಾಗದಷ್ಟು ಕೊಡುಗೆ ಕರ್ನಾಟಕದಿಂದ ಆಗಬೇಕು. ಅದು ನನ್ನ ಗುರಿ. ಇದನ್ನು ಸಾಧಿಸಲು ದಿನದ 24 ಗಂಟೆಗಳ ಕಾಲವೂ ಕೆಲಸ ಮಾಡಲು ತಾವು ಸಿದ್ದರಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಡಬ್ಲ್ಯೂ. ಎಂ.ಜಿ ಗ್ರೂಪ್ ಆಯೋಜಿಸಿದ್ದ ಕರ್ನಾಟಕ- ಇನ್ಫೈನೈಟ್ ಅಪಾರ್ಚುನಿಟಿಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನವ ಕರ್ನಾಟಕದಿಂದ ನವ ಭಾರತವನ್ನು ಕಟ್ಟಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವರು ಕರೆ ನೀಡಿದರು.
*ಪ್ರತಿಯೊಬ್ಬರೂ ಸಾಧಕರಾಗಬೇಕು*
ಪ್ರತಿಯೊಬ್ಬರೂ ಸಾಧಕರಾಗಬೇಕೆನ್ನುವುದು ನಮ್ಮ ಗುರಿ. ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎಲ್ಲರಿಗೂ ಅವಕಾಶಗಳ ಒದಗಿಸುವ ಹೊಸ ಭಾರತದ ಬಗ್ಗೆ ಕನಸು ಕಂಡಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಭಾರತ ವಿಶ್ವವನ್ನು ಮುನ್ನಡೆಸುವಂತಾಗಬೇಕು ಎಂದರು.
ಕರ್ನಾಟಕ ಸರ್ಕಾರ ಕೈಗಾರಿಕೋದ್ಯಮಿಗಳು ಹಾಗೂ ಹೂಡಿಕೆದಾರರೊಂದಿಗೆ ಹೆಜ್ಜೆಯಿಡಲು ಸಿದ್ಧವಿದೆ. ಅವರು ಯಶಸ್ವಿಯಾಗಲು ಮಾತ್ರವಲ್ಲದೇ ಸಾಧನೆ ಮಾಡಲೂ ಹೆಗಲಿಗೆ ಹೆಗಲು ನೀಡುವುದುದಾಗಿ ಭರವಸೆ ನೀಡಿದರು.
*ಮಹಿಳಾ ಶಕ್ತಿ*
ಮಹಿಳಾ ಶಕ್ತಿಯಲ್ಲಿ ನನಗೆ ನಂಬಿಕೆ ಇದೆ ಎಂದು ತಿಳಿಸಿದ ಮುಖ್ಯ ಮಂತ್ರಿಗಳು ಶಕ್ತಿ, ಪ್ರಾಮಾಣಿಕತೆ ಮಹಿಳೆಯರಿಗೆ ಸಹಜವಾಗಿಯೇ ಬಂದಿರುವ ಗುಣಗಳು. ಈ ಮೂಲಭೂತ ಗುಣಗಳೇ ಒಂದು ರಾಜ್ಯ, ಸಮಾಜ ಹಾಗೂ ವ್ಯಕ್ತಿಯ ಅನಂತ ಬೆಳವಣಿಗೆಗೆ ಪೂರಕವಾಗಿವೆ ಎಂದರು.
*ಅನಂತ ಅವಕಾಶ*
ಅನಂತ ಅವಕಾಶಗಳನ್ನು ಹುಡುಕಲು ಸೀಮಿತ ಅಂಶಗಳನ್ನು ಪರಿಶೀಲಿಸಬೇಕು. ಕರ್ನಾಟಕದಲ್ಲಿ ಅನಂತ ಅವಕಾಶಗಳಿದ್ದು, ಖಚಿತವಾದ ರಹದಾರಿಯನ್ನು ಹಾಗೂ ಅನುಷ್ಠಾನ ತಂತ್ರಗಳನ್ನು ನಮ್ಮಳಿವೆ. ಕರ್ನಾಟಕಕ್ಕೆ ಬಂದರೆ ಬೇಕಾದದ್ದು ಮಾತ್ರವಲ್ಲದೆ ಅವರ ನಿರೀಕ್ಷೆಗೂ ಮೀರಿ ಸಾಧನೆ ಮಾಡಲು ಸಾಧ್ಯವಿದೆ ಎಂದರು.
*ಪ್ರತಿಯೊಬ್ಬರೂ ಚರಿತ್ರೆಯ ಫಲಾನುಭವಿಗಳು*
ಕರ್ನಾಟಕಕ್ಕೆ ತನ್ನದೇ ಇತಿಹಾಸವಿದೆ. ಈ ರಾಜ್ಯದ ಪ್ರತಿ ವ್ಯಕ್ತಿಯೂ ಈ ಚರಿತ್ರೆಯ ಫಲಾನುಭವಿಗಳೇ ಆಗಿದ್ದಾರೆ. ಮೈಸೂರು ಮಹಾರಾಜರು ದೂರದೃಷ್ಟಿ ಹೊಂದಿದ್ದ ಅತ್ಯಂತ ಪ್ರಗತಿಶೀಲ ರಾಜರಾಗಿದ್ದರು. ಮಹಿಳೆಯರಿಗೆ ಪ್ರತ್ಯೇಕ ಕಾಲೇಜು , ಬ್ಯಾಂಕ್ ಸ್ಥಾಪನೆ ಸೇರಿದಂತೆ ಶ್ಯಾಯಿಯಿಂದ ಮೊದಲುಗೊಂಡು ಸ್ಟೀಲ್, ಸಾಬೂನು, ಕಾಗದದವರೆಗೆ ಕೈಗಾರಿಕೆಗಳ ಸ್ಥಾಪನೆ ಮಾಡಿದ ಪ್ರಥಮ ವ್ಯಕ್ತಿ ಅವರು. ಮೊಟ್ಟ ಮೊದಲ ಬಾರಿಗೆ ಜಲಶಕ್ತಿಯ ಬಳಕೆ ಮಾಡಿದರು. ವಿಶ್ವೇಶ್ವರಯ್ಯ ನಂಥ ದೂರದೃಷ್ಟಿಯುಳ್ಳ ನಾಯಕರು ಅವರೊಂದಿಗೆ ಇದ್ದುದರ ಪರಿಣಾಮವಾಗಿ ನಮ್ಮಲ್ಲಿ ರಕ್ಷಣಾ ಕೈಗಾರಿಕೆಗಳು, ಬೃಹತ್ ಕೈಗಾರಿಕೆ ಗಳು, ಏರೋಸ್ಪೇಸ್ ತಂತ್ರಜ್ಞಾನ,ಹೆಚ್.ಎ.ಎ ಲ್, ಎನ್.ಎ. ಎಲ್, ಬಿ.ಹೆಚ್.ಇ. ಎಲ್ ಮುಂತಾದ ಪ್ರಮುಖ ಕೈಗಾರಿಕೆಗಳು ಇವೆ ಎಂದರು.
*ಕರ್ನಾಟಕ ಜ್ಞಾನ, ತಂತ್ರಜ್ಞಾನದ ಭಂಡಾರ*
ಕರ್ನಾಟಕ ಮೊದಲಿನಿಂದಲೂ ಇಲೆಕ್ಟ್ರಾನಿಕ್ ನಲ್ಲಿ ಮುಂಚೂಣಿಯಲ್ಲಿದ್ದ ರಾಜ್ಯ. ಇಲೆಕ್ಟ್ರಾನಿಕ್ ಯಂತ್ರೋಪಕರಣ, ಉತ್ಪಾದನೆ, ಇಂಜಿನಿಯರ್ ಗಳು ಲಭ್ಯವಿದ್ದದ್ದು, ಕಂಪ್ಯೂಟರ್ ಸೈನ್ಸ್ ಗೆ ದಾರಿ ಮಾಡಿಕೊಟ್ಟಿತು. ಹಾಗಾಗಿ ಕರ್ನಾಟಕ ಜ್ಞಾನ, ತಂತ್ರಜ್ಞಾನದ ಭಂಡಾರ. ಅಕ್ಷರ, ಜ್ಞಾನ, ವಿಜ್ಞಾನ, ತಂತ್ರಜ್ಞಾನ, ತಂತ್ರಾಂಶ ಜ್ಞಾನವಿರುವುದರಿಂದ ಐ.ಟಿ ಬಿಟಿಯಲ್ಲಿಯೂ ಮುಂಚೂಣಿ ಯಲ್ಲಿದೆ.
ದೇಶದ ಪ್ರಥಮ ಐ.ಟಿ ಕಂಪನಿ ಬೆಂಗಳೂರಿನಲ್ಲಿ ಪ್ರಾರಂಭವಾಯಿತು. ತಂತ್ರಜ್ಞಾನ ಮತ್ತು ಕೌಶಲ್ಯ ನಮ್ಮಲ್ಲಿದ್ದು, ಇಲ್ಲಿನ ವಾತಾವರಣ ಕೈಗಾರಿಕೆಗಳ ಸ್ಥಾಪನೆಗೆ ಸೂಕ್ತವಾಗಿದೆ. ಈ ಸಂದರ್ಭದಲ್ಲಿ ಕೈಗಾರಿಕೆ ಹಾಗೂ ತಂತ್ರಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಎಲ್ಲಾ ಪ್ರಥಮ ಇಂಜಿನಿಯರ್ ಗಳನ್ನು ಸ್ಮರಿದ ಮುಖ್ಯಮಂತ್ರಿಗಳು, ಕೆಲವು ದಶಕಗಳ ನಂತರ ಅನಂತ ಅವಕಾಶಗಳನ್ನು ಬಳಸಿಕೊಂಡ ಸಾಧನೆಗೈದ ಇಂಜಿನಿಯರ್ ಗಳನ್ನು ಇಲ್ಲಿಯೇ ಸ್ಮರಿಸುವಂತಾಗಬೇಕು ಎಂದು ಆಶಿಸಿದರು.
ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ ಘೋಷಣೆಗೆ ರಾಜ್ಯ ಸರ್ಕಾರದ ವಿರೋಧ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ