Kannada NewsLatest

ಅಂದು ಹೀಗಾಗುತ್ತೆ ಎಂದು ಯಾರಿಗೂ ಅನಿಸಿರಲಿಲ್ಲ; ಭಾವುಕರಾದ ಸಿಎಂ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಧಾನಸಭೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ನೆನೆದ ಸಿಎಂ ಬಸವರಾಜ್ ಬೊಮ್ಮಾಯಿ, ಬಹಳಷ್ಟು ಪ್ರತಿಭೆ ಇರುವವರು, ವೈಚಾರಿಕವಾಗಿ ಮುಂದುರುವವರು, ಬೇರೆ ಬೇರೆ ರಂಗದ ಸಾಧಕರುಗಳಿಗೆ ವಯಸ್ಸು ಅಲ್ಪ ಎನಿಸುತ್ತೆ ಎಂದು ಹೇಳಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಕ್ರಾಂತಿಕಾರಿಗಳಿಗೆ, ಶರಣರಿಗೆ, ಆದ್ಯಾತ್ಮಿಕ ರಂಗ, ಚಿತ್ರರಂಗ ಹೀಗೆ ಬೇರೆ ಬೇರೆ ರಂಗದ ಬಹುತೇಕ ಸಾಧಕರಿಗೆ ಆಯಸ್ಸು ಅಲ್ಪ ಎನ್ನುವಂತಹ ಹಲವು ಸಂದರ್ಭ ಅನುಭವಕ್ಕೆ ಬಂದಿದೆ. ಹಾಗಾಗಿ ಪ್ರತಿಭೆ ಮತ್ತು ಸಾಧನೆ ಎಂಬುದು ಅಲ್ಪ ಆಯಸ್ಸು ಹೊಂದಿದೆ ಎನಿಸುತ್ತೆ. ಪುನೀತ್ ರಾಜ್ ಕುಮಾರ್ ವಿಷಯದಲ್ಲಿಯೂ ಹೀಗಾಗೆ ಎಂಬುದು ನನ್ನ ಭಾವನೆ ಎಂದು ಭಾವುಕರಾದರು.

ಅಂದು ಬೆಳಿಗ್ಗೆ ಜಿಮ್ ನಲ್ಲಿ ವರ್ಕೌಟ್ ಮಾಡಿದ ಬಳಿಕ ಪುನೀತ್ ಅವರಿಗೆ ಹೀಗಾಗುತ್ತೆ ಎಂದು ಯಾರಿಗೂ ಅನಿಸಿರಲಿಲ್ಲ. ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ನಾನು ಹೋಗುವುದಕ್ಕೂ ಮುನ್ನ ಅವರು ವಿಧಿವಶರಾಗಿದ್ದರು. ತಕ್ಷಣ ಅವರ ಕುಟುಂಬದ ಜತೆ ಮಾತನಾಡಿ ಸಹಕಾರ ಕೋರಿದೆವು. ಡಾ.ರಾಜ್ ಅವರ ಅಂತ್ಯಸಂಸ್ಕಾರದ ವೇಳೆ ನಡೆದ ಅಹಿತಕರ ಘಟನೆಗಳು ಮತ್ತೆ ಸಂಭವಿಸಬಾರದು ಎಂಬುದು ನಮ್ಮ ಉದ್ದೇಶವಾಗಿತ್ತು. ಅದಕ್ಕೆ ಪುನೀತ್ ಕುಟುಂಬದ ಸಹಕಾರ ಸಿಕ್ಕಿತು ಎಂದು ಅಂದು ಪರಿಸ್ಥಿತಿ ಹೇಗಿತ್ತು ಎಂಬುದನ್ನು ವಿವರಿಸಿದರು.

ಈಗಾಗಲೇ ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಲಾಗಿದೆ. ಪ್ರಶಸ್ತಿ ನೀಡುವ ದಿನಾಂಕವನ್ನು ಶೀಘ್ರವೇ ಘೋಷಿಸುತ್ತೇವೆ. ಪದ್ಮಶ್ರೀ ಪ್ರಶಸ್ತಿಗೆ ಪುನೀತ್ ಹೆಸರನ್ನು ಶಿಫಾರಸು ಮಾಡಲಾಗುವುದು ಎಂದರು.

ಚಿಕ್ಕ ವಯಸ್ಸಿನಲ್ಲಿಯೇ ಪುನೀತ್ ಸಾಧನೆ ದೊಡ್ಡದು. ಚಿತ್ರರಂಗ ಮಾತ್ರವಲ್ಲ ಸಮಾಜಮುಖಿ ಕೆಲಸದಲ್ಲಿಯೂ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ಚಿಕ್ಕಂದಿನಿಂದಲೇ ಅವರನ್ನು ನಾನು ಹತ್ತಿರದಿಂದ ನೋಡಿದ್ದೆ. ನಟನೆ ಬಗ್ಗೆ ಕೇಳಿದಾಗ ಇದು ನನಗೆ ಸಹಜವಾಗಿಯೇ ಬಂದಿದೆ ಎಂದು ಹೇಳಿದ್ದರು. ಪುನೀತ್ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ ನೋಡಿ ಅಚ್ಚರಿಯಾಯಿತು. ಅಲ್ಪ ಸಮಯದಲ್ಲಿ ಒಬ್ಬ ನಟ ಇಷ್ಟೊಂದು ಜನರ ಮನಸ್ಸಿನಲ್ಲಿ ಸ್ಥಾನಗಳಿಸಬಲ್ಲನೇ ಎಂಬುದು ಅಂದು ಅರಿವಾಗಿತ್ತು ಎಂದು ತಿಳಿಸಿದರು.

ಗಂಗಾನದಿಯಲ್ಲಿ ಮಿಂದೆದ್ದ ಪ್ರಧಾನಿ; ರುದ್ರಾಕ್ಷಿ ಮಾಲೆ ಹಿಡಿದು ಜಪ ಮಾಡಿದ ಮೋದಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button