ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇತ್ತೀಚಿಗೆ ಸಾರ್ವಜನಿಕರು ಮಾರಿಹಾಳ ಪೊಲೀಸ್ ಠಾಣೆಗೆ ನೀಡಿದ ಖಚಿತ ಮಾಹಿತಿ ಆಧಾರದಿಂದ 1 ಟ್ರಕ್ ಗೋವುಗಳ ಹಾಗೂ ಎಮ್ಮೆಗಳ ಚರ್ಮ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಬುಧವಾರ ಮಾರಿಹಾಳ ಪೊಲೀಸ್ ಠಾಣೆಗೆ ಭೇಟಿ ನೀಡಿ ಪ್ರಕರಣದ ಸಂಪೂರ್ಣ ಮಾಹಿತಿ ಪಡೆದರು.
ಡಿ10 ರಂದು ರಾತ್ರಿ ಸಾರ್ವಜನಿಕರು ಪೆಟ್ರೋಲ್ ಬಂಕ್ ನಲ್ಲಿ ಡಿಸೈಲ್ ಹಾಕಿಸುತ್ತಿದ್ದ ಟ್ರಕ್ ನಿಂದ ರಕ್ತದ ನೀರು ಹರಿಯುತ್ತಿರುವುದನ್ನು ಕಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಟ್ರಕ್ ವಶಪಡಿಸಿಕೊಂಡು ತನಿಖೆ ನಡೆಸಿದಾಗ ಟ್ರಕ್ ನಲ್ಲಿ 5 ಸಾವಿರ ದನಗಳ ಚರ್ಮ ಕಂಡುಬಂದಿದ್ದು ಅದರಲ್ಲಿ 60% ಆಕಳುಗಳ ಹಾಗೂ 40% ಎಮ್ಮೆಗಳ ಚರ್ಮ ಕಂಡುಬಂದಿದೆ.
ಇದೊಂದು ದೊಡ್ಡ ಜಾಲವಿದ್ದು ಗೋವುಗಳ ಹತ್ಯೆ ನಿಷೇಧವಿದ್ದರೂ ಇಷ್ಟೊಂದು ಪ್ರಮಾಣದ ಹತ್ಯೆ ನಡೆದಿರುವುದರ ಬಗ್ಗೆ ತನಿಖೆ ನಡೆಸಿ ಹತ್ಯೆಯ ಹಿಂದಿರುವ ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೆ ಪ್ರಕರಣ ದಾಖಲಿಸಿ ಶಿಕ್ಷೆಗೆ ಗುರಿಪಡಿಸುವಂತೆ ಪೊಲೀಸರಿಗೆ ಸಚಿವರು ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಸಕ ಅನಿಲ್ ಬೆನಕೆ, ಬೆಳಗಾವಿ ಗ್ರಾಮಾಂತರ ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂಜಯ್ ಪಾಟೀಲ್, ಬಜರಂಗದಳದ ಕಾರ್ಯಕರ್ತರು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ