Latest

ಘಟಪ್ರಭಾ ಕಾಲುವೆ ಮೂಲಕ 7 ದಿನ ನೀರು ಬಿಡುಗಡೆ -ಬಾಲಚಂದ್ರ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಗೋಕಾಕ :

ಸಾರ್ವಜನಿಕರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಅನುಕೂಲಕ್ಕಾಗಿ ಘಟಪ್ರಭಾ ಎಡದಂಡೆ ಹಾಗೂ ಬಲದಂಡೆ ಮತ್ತು ಸಿಬಿಸಿ ಕಾಲುವೆಗಳಿಗೆ ಹಿಡಕಲ್ ಜಲಾಶಯದಿಂದ ಬರುವ ಶುಕ್ರವಾರದಿಂದ ಒಟ್ಟು 7 ದಿನಗಳವರೆಗೆ ನೀರನ್ನು ಹರಿಸಲಾಗುತ್ತಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
 ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹಿಡಕಲ್ ಜಲಾಶಯದಿಂದ ನೀರು ಬಿಡಲು  ಬೆಳಗಾವಿ ಪ್ರಾದೇಶಿಕ ಆಯುಕ್ತರು ನೀರಾವರಿ ಇಲಾಖೆಯ ಮುಖ್ಯ ಇಂಜನೀಯರರಿಗೆ ಇಂದು ಆದೇಶ ನೀಡಿದ್ದಾರೆಂದು ಬಾಲಚಂದ್ರ ತಿಳಿಸಿದ್ದಾರೆ.
ಎ.12 ರಿಂದ ಎ.19 ರವರೆಗೆ ಹಿಡಕಲ್ ಜಲಾಶಯದಿಂದ ಪ್ರತಿನಿತ್ಯ ಘಟಪ್ರಭಾ ಎಡದಂಡೆ ಕಾಲುವೆಗೆ 2200 ಕ್ಯೂಸೆಕ್ಸ್, ಘಟಪ್ರಭಾ ಬಲದಂಡೆ ಕಾಲುವೆಗೆ 2 ಸಾವಿರ ಕ್ಯೂಸೆಕ್ಸ್ ಹಾಗೂ ಎ.12 ರಿಂದ ಎ.22 ರವರೆಗೆ 10 ದಿನಗಳವರೆಗೆ ಚಿಕ್ಕೋಡಿ ಬ್ರ್ಯಾಂಚ್ ಕಾಲುವೆ(ಸಿಬಿಸಿ)ಗೆ 500 ಕ್ಯೂಸೆಕ್ಸ್ ನೀರು ಬಿಡುಗಡೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ಎ.24 ರಿಂದ ಮೇ 1 ರವರೆಗೆ ಘಟಪ್ರಭಾ ನದಿಗೆ ಪ್ರತಿನಿತ್ಯ 3300 ಕ್ಯೂಸೆಕ್ಸ್‌ನಂದ 2 ಟಿಎಂಸಿ ನೀರು ಹಾಗೂ ಮೇ 24 ರಿಂದ ಜೂ 1 ರವರೆಗೆ ಘಟಪ್ರಭಾ ನದಿಗೆ ಪ್ರತಿನಿತ್ಯ 3300 ಕ್ಯೂಸೆಕ್ಸ್‌ನಂತೆ 2 ಟಿಎಂಸಿ ನೀರನ್ನು ಹರಿಸಲಾಗುತ್ತಿದೆ. ಈಗಾಗಲೇ ಹಿಡಕಲ್ ಜಲಾಶಯದಲ್ಲಿ 9.78 ಟಿಎಂಸಿ ನೀರು ಸಂಗ್ರಹವಿದೆ ಎಂದು ಹೇಳಿದ್ದಾರೆ.
ಘಟಪ್ರಭಾ ಎಡದಂಡೆ-ಬಲದಂಡೆ ಹಾಗೂ ಸಿಬಿಸಿ ಕಾಲುವೆಗಳ ವ್ಯಾಪ್ತಿಯ ಹಳ್ಳಿಗಳು ಹಾಗೂ ಅದರಲ್ಲೂ ಗೋಕಾಕ ಹಾಗೂ ಮೂಡಲಗಿ ತಾಲೂಕಿನಾದ್ಯಂತ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾದ ಹಿನ್ನೆಲೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಘಟಪ್ರಭಾ ಮತ್ತು ಸಿಬಿಸಿ ಕಾಲುವೆಗಳಿಗೆ ಹಿಡಕಲ್ ಜಲಾಶಯದಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ನೀರನ್ನು ಬಿಡುಗಡೆ ಮಾಡುವಂತೆ ಅರಣ್ಯ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ನೀರನ್ನು ಮಿತವಾಗಿ ಬಳಸಿ : ಸಾರ್ವಜನಿಕರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಂಬಂಧ ಮಾತ್ರ ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ, ಬಲದಂಡೆ ಮತ್ತು ಸಿಬಿಸಿ ಕಾಲುವೆಗಳಿಗೆ ನೀರನ್ನು ಬಿಡುಗಡೆಗೊಳಿಸಲಾಗುತ್ತಿದೆ. ಈ ನೀರನ್ನು ಕೇವಲ ಕುಡಿಯುವ ನೀರಿಗಾಗಿ ಮಾತ್ರ ಬಳಕೆ ಮಾಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಾರ್ವಜನಿಕರು ಹಾಗೂ ರೈತ ಬಾಂಧವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button