ಮಾಜಿ ಸಚಿವ ಆರ್.ಎಲ್.ಜಾಲಪ್ಪ ನಿಧನಕ್ಕೆ ಸದನದಲ್ಲಿ ಸಂತಾಪ ಸೂಚನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಸುವರ್ಣಸೌಧ ; ಹಿಂದುಳಿದ ವರ್ಗಗಳ ನಾಯಕರಾಗಿ, ಬಡವರು, ರೈತರ ಕಲ್ಯಾಣಕ್ಕಾಗಿ ಕೊಳವೆ ಬಾವಿಗಳ ಸಾಲಮನ್ನಾ ಸೇರಿದಂತೆ ಸಹಕಾರ ರಂಗದ ಸ್ವಾಯತ್ತತೆಗಾಗಿ ಮಾಜಿ ಸಚಿವ ಆರ್.ಎಲ್.ಜಾಲಪ್ಪನವರು ನೀಡಿದ ಕೊಡುಗೆ ಅಮೂಲ್ಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸಭೆ ಇಂದು ಬೆಳಿಗ್ಗೆ ಸಮಾವೇಶಗೊಳ್ಳುತ್ತಿದ್ದಂತೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರ ನಿಧನಕ್ಕೆ ಸಂತಾಪ ಸೂಚನೆ ನಿರ್ಣಯ ಮಂಡಿಸಿದರು.
ಸಂತಾಪ ಸೂಚನೆ ನಿರ್ಣಯಕ್ಕೆ ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು,ಜಾಲಪ್ಪನವರ ವ್ಯಕ್ತಿತ್ವ ವಿಭಿನ್ನವಾಗಿತ್ತು, ನೇರ, ನಿಷ್ಠುರ ಹಾಗೂ ಗಟ್ಟಿತನದ ನಡೆ, ನುಡಿ ಅವರದಾಗಿತ್ತು. ಸಹಕಾರ ರಂಗವು ಸ್ವಾಯತ್ತವಾಗಲು ಆ ಕಾಯ್ದೆಗಳಿಗೆ ತಿದ್ದುಪಡಿ ತಂದು ಮಹತ್ವದ ಛಾಪು ಮೂಡಿಸಿದ್ದಾರೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ, ಸಂತರ ಸಹಕಾರ ಸಚಿವರಾಗಿ ರೈತರ ಪರವಾಗಿ ಸಹಕಾರ ಕಾಯ್ದೆಗಳನ್ನು ಜಾರಿಗೊಳಿಸಿದರು. ೧೯೮೩ ರಿಂದ ೧೯೮೬ ರವರೆಗೆ ರಾಜ್ಯದಲ್ಲಿ ಕಾಣಿಸಿಕೊಂಡಿದ್ದ ಭೀಕರ ಬರಗಾಲದ ಸಂದರ್ಭದಲ್ಲಿ ಎಲ್ಲ ರೈತರ ಜಮೀನುಗಳಲ್ಲಿ ಕೊಳವೆಬಾವಿ ಕೊರೆಯಿಸಿ ನೀರ್‌ಸಾಬ್ ಎಂದು ನಜೀರ್‌ಸಾಬ್ ಹೆಸರು ಗಳಿಸಿದರು. ಈ ಸಂಬಂಧ ಮಾಡಿದ್ದ ರೈತರ ಸಾಲಗಳನ್ನು ಆರ್.ಎಲ್.ಜಾಲಪ್ಪ ಮನ್ನಾ ಮಾಡಿದರು. ಕೋಲಾರ-ಚಿಕ್ಕಬಳ್ಳಾಪುರ ಭಾಗದಿಂದ ಅವರು ಬಂದಿದ್ದರಿಂದ ನೀರಿನ ಬವಣೆಯ ತೀವ್ರತೆ ಅವರಿಗೆ ಗೊತ್ತಿತ್ತು. ರಾಮಕೃಷ್ಣ ಹೆಗಡೆ ಅವರ ನೇತೃತ್ವದ ಸರ್ಕಾರ ಎಲ್ಲ ಸಮಾಜದ ಸಂಘ, ಸಂಸ್ಥೆಗಳಿಗೆ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಅನುಮತಿ ನೀಡಿತ್ತು. ಆಗ ಜಾಲಪ್ಪನವರು ಸ್ವತಃ ಮುಂದೆ ಬಂದು ಹಿಂದುಳಿದ ವರ್ಗಗಳ ಹೆಸರಿನಲ್ಲಿ ಸಂಸ್ಥೆ ಸ್ಥಾಪಿಸಿ, ಡಿ.ದೇವರಾಜ ಅರಸು ಅವರ ಹೆಸರಿನಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭಕ್ಕೆ ಮುಂದಾದರು. ಈಗ ಕಾಲೇಜು ಯಶಸ್ವಿಯಾಗಿ ನಡೆಯುತ್ತಿದೆ. ಗೃಹ ಸಚಿವರಾಗಿದ್ದಾಗ ಅವರ ಮೇಲೆ ಆರೋಪಗಳು ಕೇಳಿ ಬಂದ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಸ್ವಾಭಿಮಾನ ತೋರಿದರು. ನಮ್ಮ ತಂದೆ ಎಸ್.ಆರ್.ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗುವ ಸಂದರ್ಭದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ೧೯೯೪ ರಲ್ಲಿ ಜನತಾದಳ ಸರ್ಕಾರ ಅಧಿಕಾರಕ್ಕೆ ತರಲು ಅಪಾರವಾಗಿ ಶ್ರಮಿಸಿದ್ದರು. ಈಗಿನ ವಿರೋಧಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿರುವ ಜೆ.ಸಿ.ಮಾಧುಸ್ವಾಮಿ, ಡಾ.ಜಿ.ಪರಮೇಶ್ವರ್, ರಮೇಶಕುಮಾರ ಸೇರಿದಂತೆ ಅನೇಕರೊಡನೆ ನಿರಂತರ ಒಡನಾಟ ಹೊಂದಿದ್ದರು. ವೈಯಕ್ತಿಕವಾಗಿ ಬಹಳ ಗಟ್ಟಿ ಮನಸ್ಥಿತಿ, ಆತ್ಮಸ್ಥೈರ್ಯ ಹೊಂದಿದ್ದರ ಪರಿಣಾಮವಾಗಿ ೯೫ ರ ಇಳಿ ವಯಸ್ಸಿನಲ್ಲಿಯೂ ಎರಡು ಬಾರಿ ಕೋವಿಡ್ ವಿರುದ್ಧ ಹೋರಾಡಿ ಗುಣಮುಖರಾಗಿದ್ದರು. ತಾವು ಆಡಿದ ಮಾತನ್ನು ಯಾವುದೇ ಬೆಲೆ ತೆತ್ತಾದರೂ ಉಳಿಸಿಕೊಳ್ಳುತ್ತಿದ್ದರು. ಬಡವರು, ವಿಕಲಚೇತನರ ವಿಕಾಸಕ್ಕಾಗಿ ಸಂಸ್ಥೆ ತೆರೆದು ತಮ್ಮ ಟ್ರಸ್ಟಿನ ಮೂಲಕ ನೆರವು ನೀಡುತ್ತಿದ್ದರು. ಆದಾಯವನ್ನು ಪರೋಪಕರಕ್ಕೆ ವಿನಿಯೋಗಿಸಿ ಅನೇಕ ರಂಗಗಳಿಗೆ ತಮ್ಮ ಕೊಡುಗೆಗಳನ್ನು ಜಾಲಪ್ಪನವರು ನೀಡಿರುವದನ್ನು ಮುಖ್ಯಮಂತ್ರಿಯವರು ಸ್ಮರಿಸಿದರು.
ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ದೀರ್ಘ ಸಾರ್ವಜನಿಕ ಬದುಕು ಬದುಕಿದ ಆರ್.ಎಲ್.ಜಾಲಪ್ಪನವರ ರಾಜಕೀಯ ಜೀವನ ತೆರೆದ ಪುಸ್ತಕದಂತಿದೆ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷರಾಗಿ, ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್ ಹಾಗೂ ತಾಲೂಕು ಅಭಿವೃದ್ಧಿ ಮಂಡಳಿಯ ಮೂಲಕ ರಾಜಕೀಯ ರಂಗ ಪ್ರವೇಶಿಸಿದ ಜಾಲಪ್ಪನವರನ್ನು ಡಿ.ದೇವರಾಜ ಅರಸು ಗುರುತಿಸಿ ವಿಧಾನ ಪರಿಷತ್ ಸದಸ್ಯರನ್ನಾಗಿಸಿದರು. ಅವರು ಶಾಸಕರಾದ ಕೂಡಲೇ ತಮ್ಮ ಒಟ್ಟು ಆಸ್ತಿಯನ್ನು ಕುಟುಂಬದ ಸದಸ್ಯರಿಗೆ ವಿಭಾಗಿಸಿ ಹಸ್ತಾಂತರ ಮಾಡಿದರು. ತಮ್ಮ ಅಧಿಕಾರದಲ್ಲಿ ಕುಟುಂಬದ ಸದಸ್ಯರು ಹಸ್ತಕ್ಷೇಪ ಮಾಡದಂತೆ ನೋಡಿಕೊಂಡರು. ೧೯೭೩ ರಿಂದಲೂ ಅವರನ್ನು ಹತ್ತಿರದಿಂದ ಬಲ್ಲ ತಮ್ಮ ಹಾಗೂ ಅವರ ನಡುವೆ ಸುಮಾರು ೨೦ಕ್ಕೂ ಹೆಚ್ಚು ವರ್ಷಗಳ ಅಂತರವಿದ್ದರೂ ಕೂಡ ಆತ್ಮೀಯತೆ, ಗೆಳೆತನಕ್ಕೆ ಅದು ಅಡ್ಡಿಯಾಗಲೇ ಇಲ್ಲ. ೧೯೯೬ರಲ್ಲಿ ಅವರ ಲೋಕಸಭೆಗೆ ಚುನಾಯಿತರಾದಾಗ ಹೆಚ್.ಡಿ. ದೇವೆಗೌಡರು ಪ್ರಧಾನಿಯಾದರು, ಆಗ ನನ್ನನ್ನು ಮುಖ್ಯಮಂತ್ರಿ ಮಾಡಲು ಪಕ್ಷದಲ್ಲಿ ಹಠ ಹಿಡಿದಿದ್ದರು. ಹೆಚ್.ಡಿ. ರೇವಣ್ಣ ಮತ್ತು ವಿ. ಸೋಮಣ್ಣ ನೇತೃತ್ವದಲ್ಲಿ ಸುಮಾರು ೮೭ ಜನ ಶಾಸಕರ ಸಹಿ ಸಂಗ್ರಹ ಮಾಡಿಸಿದ್ದರು. ತಮ್ಮ ಹಿತೈಷಿಗಳಿಗೆ ಅಗತ್ಯವಿರುವ ಎಲ್ಲ ನೆರವು ನೀಡುತ್ತಿದ್ದರು. ಅವರು ಸ್ಥಾಪಿಸಿದ ಡಿ. ದೇವರಾಜ ಅರಸು ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿಯ ಸ್ಥಾಪಕ ನಿದೇಶಕನನ್ನಾಗಿ ನೇಮಿಸಿಕೊಂಡಿದ್ದರು. ನಿರ್ದೇಶಕರಾದವರು ಸತತವಾಗಿ ಮೂರು ಸಭೆಗಳಿಗೆ ಗೈರು ಹಾಜರಾದರೆ ಅವರನ್ನು ನಿರ್ದೇಶಕ ಸ್ಥಾನದಿಂದ ತೆಗೆದು ಹಾಕಲು ಅವರು ಬೈಲಾ ನಿಯಮವಿತ್ತು. ನಾನು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಮೂರು ಸಭೆಗಳಿಗೆ ಗೈರಾದ ಪರಿಣಾಮವಾಗಿ ಆ ಸ್ಥಾನದಿಂದ ತೆಗೆದು ಹಾಕಿ ನೇರವಾಗಿ ವಿಷಯ ತಿಳಿಸಿದರು. ಅಂತಹ ದಕ್ಷತೆ, ನೇರ ನುಡಿ ಅವರದಾಗಿತ್ತು. ಕೋಲಾರದಲ್ಲಿ ನ್ಯಾಯವಾದಿ ಸಿ.ಎಸ್. ದ್ವಾರಕನಾಥ್ ಅವರ ಮೂಲಕ ಮೊದಲ ಅಹಿಂದ ಸಮಾವೇಶ ಸಂಘಟಿಸಿದ್ದರು. ನಂತರ ೨೦೦೫ ರ ಅವಧಿಯಲ್ಲಿ ಹುಬ್ಬಳ್ಳಿಯಲ್ಲಿ ನಾವು ಆಯೋಜಿಸಿದ್ದ ಅಹಿಂದ ಸಮಾವೇಶದಲ್ಲಿ ಸ್ವತಃ ಅವರು ಪಾಲ್ಗೊಂಡು ನೈತಿಕ ಬೆಂಬಲ ಸೂಚಿಸಿದರು. ಆಗ ವಿಧಾನಪರಿಷತ್ ಸದಸ್ಯರಾಗಿದ್ದ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಕೂಡ ಭಾಗವಹಿಸಿದ್ದರು. ನಾನು ಮುಖ್ಯಮಂತ್ರಿಯಾಗಬೇಕಾದರೆ ಕಾಂಗ್ರೆಸ್ ಪಕ್ಷ ಸೇರಬೇಕೆಂಬ ಸಲಹೆ ನೀಡಿದ್ದರು. ಸಾಮಾಜಿಕ ನ್ಯಾಯ, ಬಡವರು, ರೈತರ ಪರ ಕಳಕಳಿ ಹೊಂದಿದ್ದ ಜಾಲಪ್ಪನವರಂತಹ ನಾಯಕರು ಇಂದಿನ ರಾಜಕಾರಣದಲ್ಲಿ ವಿರಳ ಎಂದರು.
ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಆರ್ ಎಲ್ ಜಾಲಪ್ಪ ಒರಟು ಮನುಷ್ಯನಾದರೂ ಹೃದಯವಂತರಾಗಿದ್ದರು. ಕೃಷಿ ಮಾರುಕಟ್ಟೆಯಲ್ಲಿ ರೈತರು ಪಾವತಿಸಬೇಕಾಗಿದ್ದ ಶೇ.೨ರ ತೆರಿಗೆಯನ್ನು ವರ್ತಕರಿಂದಲೇ ಸಂಗ್ರಹಿಸುವ ಬದಲಾವಣೆ ಜಾರಿಗೊಳಿಸಿದರು. ವ್ಯಾಪಾರಿಗಳ ವಲಯದಿಂದ ಎಷ್ಟೇ ವಿರೋಧ ಬಂದರೂ ಮಣಿಯಲಿಲ್ಲ. ಸಹಕಾರ ಚಳುವಳಿ ಮತ್ತು ರಂಗದಲ್ಲಿ ಸದಸ್ಯರು ಬಹಳ ದೀರ್ಘಕಾಲ ಇರಲು ಬಿಡುತ್ತಿರಲಿಲ್ಲ ಇದಕ್ಕಾಗಿ ಕಠಿಣ ಕಾನೂನುಗಳನ್ನು ತಂದರು. ಗೃಹ ಸಚಿವರಾಗಿದ್ದ ವೇಳೆಯಲ್ಲಿ ರಾತ್ರಿ ಹೊತ್ತು ಸ್ವತಃ ಗಸ್ತು ತಿರುಗಿ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಗೆ ಪೊಲೀಸರಲ್ಲಿ ಜಾಗೃತಿ ಮೂಡಿಸಿದರು. ಬಹಳ ಅಧ್ಯಯನಶೀಲರಾಗಿದ್ದ ಜಾಲಪ್ಪನವರು ಸ್ವತಃ ಕೃಷಿಕರಾಗಿ ಭೂಮಿಗೆ ಇಳಿದು ಅದ್ಭುತವಾಗಿ ತೆಂಗು ಬಾಳೆ ಮತ್ತಿತರ ಬೆಳೆಗಳನ್ನು ಬೆಳೆದಿದ್ದರು. ಸಿದ್ದಗಂಗಾ ಶ್ರೀಗಳ ಪರಮ ಭಕ್ತರಾಗಿದ್ದರು. ರಶೀದ್ ಕೊಲೆ ಪ್ರಕರಣದಲ್ಲಿ ಅವರ ವಿರುದ್ಧ ಅನಗತ್ಯ ಆರೋಪಗಳು ಕೇಳಿ ಬಂದಾಗ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಪ್ರಕರಣವನ್ನು ಏಕಾಏಕಿ ಸಿಬಿಐಗೆ ವಹಿಸಿದರು. ಇದರಿಂದ ಮನ ನೊಂದ ಜಾಲಪ್ಪನವರು ತಕ್ಷಣ ತಮ್ಮ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಪ್ರಕರಣದ ವಿಚಾರಣೆಗಾಗಿ ಕೊಯಿಮತ್ತೂರು ನ್ಯಾಯಾಲಯಕ್ಕೆ ತೆರಳುವ ಸಂದರ್ಭದಲ್ಲಿ ನೂರಾರು ಜನ ಅವರ ಬೆಂಬಲಿಗರು ಬಸ್ಸು, ವಾಹನಗಳಲ್ಲಿ ತೆರಳಿ ನೈತಿಕ ಬೆಂಬಲ ಸೂಚಿಸುತ್ತಿದ್ದರು ಎಂದು ಸ್ಮರಿಸಿದರು.
ಸದಸ್ಯರಾದ ಡಾ. ಜಿ. ಪರಮೇಶ್ವರ, ಕುಮಾರ ಬಂಗಾರಪ್ಪ, ಜಿ.ಟಿ. ದೇವೆಗೌಡ, ವೆಂಕಟರಮಣಯ್ಯ, ಅರಸಿಕೆರೆ ಶಿವಲಿಂಗೇಗೌಡ ಅವರು ಆರ್. ಎಲ್. ಜಾಲಪ್ಪನವರ ಗುಣಗಾನ ಮಾಡಿದರು. ಮೃತರ ಗೌರವಾರ್ಥ ಸದನದಲ್ಲಿ ಒಂದು ನಿಮಿಷ ಮೌನ ಆಚರಿಸಲಾಯಿತು.
ಪಿ.ಪಿ.ಪಿ ಮಾದರಿಯಲ್ಲಿ ವಧಾಗಾರ: ಸಚಿವ ಪ್ರಭು ಚವ್ಹಾಣ್
ರಾಜ್ಯದಲ್ಲಿ ಪಿ.ಪಿ.ಪಿ ಮಾದರಿಯಲ್ಲಿ ವಧಾಗಾರಗಳನ್ನು ನಿರ್ಮಿಸಲು ಮೂಲಭೂತ ಸೌಕರ್ಯಗಳ ಇಲಾಖೆಯಿಂದ ಪ್ರಸ್ತಾವನೆ ಸಿದ್ಧವಾಗಿದೆ. ಕೆ.ಎಸ್.ಐ.ಐ.ಡಿ.ಸಿ. ಮೂಲಕ ಅರ್ಹ ಸಂಸ್ಥೆ ಮತ್ತು ವ್ಯಕ್ತಿಗಳಿಂದ ಎಕ್ಸ್‌ಪ್ರೆಷನ್ ಆಫ್ ಇಂಟರೆಸ್ಟ್ ಆಹ್ವಾನಿಸಲಾಗಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ಹೇಳಿದರು.
ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಶಿರಾ ಕ್ಷೇತ್ರದ ಶಾಸಕ ಡಾ. ರಾಜೇಶಗೌಡ ಅವರ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.
ಕಳೆದ ಅಕ್ಟೋಬರ ೧೨ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ೨೧ನೇ ರಾಜ್ಯ ಮಟ್ಟದ ಪಿ.ಪಿ.ಪಿ. ಯೋಜನೆಗಳ ಏಕ ಗವಾಕ್ಷಿ ಮಂಜೂರಾತಿ ಸಮಿತಿ ಸಭೆಯಲ್ಲಿ ವಧಾಗಾರಗಳನ್ನು ಪಿ.ಪಿ.ಪಿ. ಮಾದರಿಯಲ್ಲಿ ಅನುಷ್ಠಾನಗೊಳಿಸಲು ಅನುಮೋದಿಸಲಾಗಿದೆ. ಈಗಾಗಲೇ ಮೂಲಭೂತ ಸೌಕರ್ಯಗಳ ಇಲಾಖೆಯ ಮೂಲಕ ಆರ್.ಎಫ್.ಪಿ ತಯಾರಾಗಿದೆ. ವ್ಯವಹಾರ ಸಲಹಾ ಸೇವೆಗಳನ್ನು ನೇಮಕ ಮಾಡಿಕೊಳ್ಳಲು ಕೆ.ಎಸ್.ಐ.ಐ.ಡಿ.ಸಿ ತುಮಕೂರು ಜಿಲ್ಲೆ ಶಿರಾ ತಾಲೂಕು ಚೀಲನಹಳ್ಳಿಯಲ್ಲಿ ಆಧುನಿಕ ವಧಾಗಾರದ ಸಿವಿಲ್ ಕಾಮಗಾರಿ ಪೂರ್ಣಗೊಂಡಿದೆ ಎಂದರು.
ಚಾಮುಂಡಿ ಬೆಟ್ಟ ಭೂ ಕುಸಿತ ತಡೆಯಲು ಕ್ರಮ : ಸಚಿವ ಸಿ. ಸಿ ಪಾಟೀಲ
ಮೈಸೂರಿನ ಚಾಮುಂಡಿ ಬೆಟ್ಟದ ಹೊಸನಂದಿ ರಸ್ತೆಯ ಪ್ರದೇಶದಲ್ಲಿ ರೀಇನ್‌ಫೋರ್ಸ್ಡ್ ಅರ್ಥ್ ಸ್ಟೀಪನ್ಡ್ ಸ್ಟ್ರಕ್ಚರ‍್ಸ್ ವಾಲ್ ನಿರ್ಮಿಸಲು ೧೦ ಕೋಟಿ ರೂ. ವೆಚ್ಚದ ಪ್ರಸ್ತಾವನೆ ಸಿದ್ಧವಾಗಿದೆ. ಕಾಮಗಾರಿಯನ್ನು ಪ್ರಾರಂಭಿಸಲು ಕ್ರಮವಹಿಸಲಾಗುವದು ಎಂದು ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ್ ಹೇಳಿದರು.
ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೆಗೌಡ ಅವರ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.
ಚಾಮುಂಡಿ ಬೆಟ್ಟದ ಹೊಸನಂದಿ ರಸ್ತೆಯ ೧.೪೦ ಕಿ.ಮೀ ಉದ್ದದ ರಸ್ತೆಯು ಜಿಲ್ಲಾ ಮುಖ್ಯ ರಸ್ತೆಯಾಗಿದೆ. ಕಳೆದ ನವೆಂಬರ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದ ಕುಸಿದಿರುವ ರಸ್ತೆಯನ್ನು ಪುನರ್ ನಿರ್ಮಾಣ ಮಾಡಲು ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರನ್ನು ಸಂಪರ್ಕಿಸಿ ವರದಿ ಪಡೆಯಲಾಗಿದೆ. ಭೂ ಕುಸಿತ ಪ್ರದೇಶದಲ್ಲಿ ರೀಇನ್‌ಫೋರ್ಸ್ಡ್ ಅರ್ಥ್ ಸ್ಟೀಪನ್ಡ್ ಸ್ಟ್ರಕ್ಚರ‍್ಸ್ ವಾಲ್ ನಿರ್ಮಿಸಲು ೧೦ ಕೋಟಿ ರೂ ಗಳ ಪ್ರಸ್ತಾವನೆ ಸಿದ್ಧವಾಗಿದೆ. ನಿರ್ಮಾಣ ಕಾಮಗಾರಿ ಪ್ರಾರಂಭಿಸಲು ಕ್ರಮವಹಿಸಲಾಗುವದು ಎಂದರು.
ಬೆಳೆ ಹಾನಿ ಪರಿಹಾರ ಡಿಸೆಂಬರ್ ಅಂತ್ಯಕ್ಕೆ ಪಾವತಿ: ಸಚಿವ ಆರ್ ಅಶೋಕ
ಬೆಳೆ ಹಾನಿಗೆ ಒಳಗಾದ ರೈತರಿಗೆ ಡಿಸೆಂಬರ ಅಂತ್ಯದೊಳಗೆ ಪರಿಹಾರ ಒದಗಿಸಲಾಗುವದು. ಮನೆ ಹಾನಿಗೆ ಒಳಗಾದವರಿಗೆ ನಿಯಮಾನುಸಾರ ಪರಿಶೀಲಿಸಿ ಜನೇವರಿ ೧೫ ಒಳಗಾಗಿ ಪಾವತಿಸಲು ಕಾಲಾವಧಿ ನಿಗದಿ ಪಡಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.
ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಕಿತ್ತೂರು ಕ್ಷೇತ್ರದ ಶಾಸಕ ಮಹಾಂತೇಶ ದೊಡ್ಡಗೌಡರ ಅವರ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.
ಕಿತ್ತೂರು ತಾಲೂಕಿನಲ್ಲಿ ಬೆಳೆಹಾನಿಗೆ ಒಳಗಾದ ೮೭೭ ಅರ್ಹರಿಗೆ ೨೬.೭೯ ಲಕ್ಷ ರೂ. ಹಾಗೂ ಬೈಲಹೊಂಗಲ ತಾಲೂಕಿನ ೫೧೪೭ ಅರ್ಹರಿಗೆ ೫೬೨.೭೦ ಲಕ್ಷ ರೂ ಪಾವತಿಸಲಾಗಿದೆ. ಎ ಮತ್ತು ಬಿ ವರ್ಗದ ಮನೆ ಹಾನಿಗೆ ಮೊದಲ ಕಂತಿನಲ್ಲಿ ತಲಾ ೯೫,೧೦೦ರೂ ಹಾಗೂ ಸಿ ವರ್ಗದ ಮನೆಗಳಿಗೆ ಒಂದೇ ಕಂತಿನಲ್ಲಿ ತಲಾ ೫೦,೦೦೦ ರೂ. ಪಾವತಿಸಲು ಸೂಚಿಸಿ ಅನುದಾನ ಬಿಡುಗಡೆ ಮಾಡಲಾಗಿದೆ. ಮೂಲಭೂತ ಸೌಕರ್ಯಗಳ ತುರ್ತು ದುರಸ್ತಿಗೆ ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ನಗರಾಭಿವೃದ್ಧಿ, ಜಲಸಂಪನ್ಮೂಲ ಇಲಾಖೆಯಲ್ಲಿ ಲಭ್ಯವಿರುವ ಅನುದಾನಕ್ಕೆ ಅನುಗುಣವಾಗಿ ಕಾಮಗಾರಿಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ವಿರೋಧ ಪಕ್ಷದ ಸದಸ್ಯರು ಭೂ ಕಬಳಿಕೆ ಆರೋಪ ಎದುರಿಸುತ್ತಿರುವ ಸಚಿವರ ರಾಜೀನಾಮೆಗೆ ಆಗ್ರಹಿಸಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರು. ಜೆಡಿಎಸ್ ಸದಸ್ಯರು ಭಾಷೆಯ ಕಾರಣಕ್ಕಾಗಿ ಕೊಲ್ಲಾಪುರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿರುವದು, ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ ಹಾಗೂ ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆ ಮಸಿ ಬಳಿದ ಕಿಡಿಗೇಡಿಗಳನ್ನು ಬಂಧಿಸಲು ಆಗ್ರಹಿಸಿ ಚರ್ಚೆಗೆ ಅವಕಾಶ ಕೋರುತ್ತಿದ್ದರು. ಗದ್ದಲದ ನಡುವೆಯೇ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರಶ್ನೋತ್ತರ ಕಲಾಪವನ್ನು ಪೂರ್ಣಗೊಳಿಸಿದರು.
ಸದಸ್ಯರ ಕೋರಿಕೆಗೆ ಸಮಯ ನಿಗದಿಪಡಿಸಿದ ಸಭಾಪತಿ ಹೊರಟ್ಟಿ
ಪರಿಷತ್‌ನಲ್ಲಿ ನಾಳೆ ಸಂಪೂರ್ಣ ಉ.ಕ ಗಂಭೀರ ಸಮಸ್ಯೆಗಳ ಚರ್ಚೆ
ಬೆಳಗಾವಿಯ ಸುವರ್ಣಸೌಧದಲ್ಲಿ ಕಳೆದೊಂದು ವಾರದಿಂದ ಅಧಿವೇಶನ ಆರಂಭವಾಗಿದ್ದರೂ ಉತ್ತರ ಕರ್ನಾಟಕದ ಗಂಭೀರ ಸಮಸ್ಯೆಗಳಾಗದಿರುವುದಕ್ಕೆ ಮಾಧ್ಯಮಗಳು ಮತ್ತು ಜನರಿಂದ ಆಕ್ಷೇಪ ವ್ಯಕ್ತವಾದ ನಂತರ ಎಚ್ಚೆತ್ತ ಸದನದ ಸದಸ್ಯರು ಪಕ್ಷಬೇಧ ಮರೆತು ಉತ್ತರ ಕರ್ನಾಟಕದ ಗಂಭೀರ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳುವಂತೆ ಒತ್ತಾಯಿಸಿದ ಪ್ರಸಂಗ ವಿಧಾನಪರಿಷತ್‌ನಲ್ಲಿ ಸೋಮವಾರ ನಡೆಯಿತು.
ಆರಂಭದಲ್ಲಿಯೇ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರು ಮಹದಾಯಿ ಯೋಜನೆ ಅಧಿಸೂಚನೆ ಆಗಿದೆ;ಆದ್ರೂ ಇನ್ನೂ ಕೆಲಸ ಆರಂಭವಾಗಿಲ್ಲ. ತುಂಗಾಭದ್ರಾ ಜಲಾಶಯದಲ್ಲಿ ಹೂಳು ತುಂಬಿದ್ದು,ನವಲಿ ಬಳಿ ಸಮಾನಂತರ ಜಲಾಶಯ ನಿರ್ಮಾಣ ಮಾಡುವುದಕ್ಕೆ ಡಿಪಿಎಆರ್ ಸಿದ್ದಪಡಿಸಿದರೂ ನಂತರ ಪ್ರಗತಿ ಶೂನ್ಯವಾಗಿದೆ. ೩೭೧ಜೆ ಪರಿಣಾಮಕಾರಿ ಅನುಷ್ಠಾನವಾಗುತ್ತಿಲ್ಲ; ಈ ಭಾಗದ ಬಹುತೇಕ ಯೋಜನೆಗಳು ನನೆಗುದಿಗೆ ಬಿದ್ದಿವೆ. ಜನರು ಈ ಭಾಗದ ಸಮಸ್ಯೆಗಳು ಚರ್ಚೆಯಾಗ್ಬೇಕು ಮತ್ತು ಅವುಗಳಿಗೆ ಪರಿಹಾರ ಸಿಗುವುದಕ್ಕೆ ಚಾತಕ ಪಕ್ಷಿಯಂತೆ ಕಾಯ್ತಿದ್ದಾರೆ ಎಂದು ತಿಳಿಸಿದರು.
ಈಗಲಾದ್ರೂ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಮಹತ್ವದ ವಿಷಯಗಳ ಕುರಿತು ಚರ್ಚಿಸಬೇಕು ಎಂದು ಅವರು ಮನವಿ ಮಾಡಿದರು.
ಸಂಗೊಳ್ಳಿ ರಾಯಣ್ಣರ ಪ್ರತಿಮೆ ಭಗ್ನವಾಗಿದೆ ಮತ್ತು ಶಿವಾಜಿ ಮಹಾರಾಜರ ಪ್ರತಿಮೆ ಮಸಿ ಬಳಿಯಲಾಗಿದೆ; ಈ ರೀತಿಯ ಘಟನೆಗಳು ನಡೆಯದಂತೆ ಸರಕಾರ ಮುಂಜಾಗ್ರತೆ ವಹಿಸಬೇಕು ಮತ್ತು ಎಂಇಎಸ್ ಪುಂಡರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಹಿರಿಯ ಸದಸ್ಯ ಲಕ್ಷ್ಮಣ ಸವದಿ ಅವರು ೩ ವರ್ಷಗಳ ನಂತರ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದು, ಅಧಿವೇಶನ ಆರಂಭವಾಗಿ ಒಂದು ವಾರವಾದ್ರೂ ಈ ಭಾಗದ ಒಂದೇ ಒಂದು ಸಮಸ್ಯೆ ಚರ್ಚೆಯಾಗ್ತಿಲ್ಲ ಎಂದರು.
ಶಾಸಕರು ಮತ್ತು ಅಧಿಕಾರಿಗಳು ಬೆಳಗಾವಿಗೆ ಪಿಕ್‌ನಿಕ್ ಮಾಡಲು ಮತ್ತು ಗೋವಾ ಟೂರ್ ಮಾಡಲು ಬಂದಿದ್ದಾರೆಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಭಾಗ ಪ್ರತಿನಿಧಿಸುತ್ತಿರುವ ನಾವು ಹೊರಗಡೆ ತಲೆತಗ್ಗಿಸುವಂತಾಗಿದೆ ಎಂದು ತಿಳಿಸಿದ ಲಕ್ಷ್ಮಣ ಸವದಿ ಅವರು ಇನ್ನುಳಿದ ದಿನಗಳಲ್ಲಾದ್ರೂ ಉ-ಕ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು ಎಂದರು.
ಇತ್ತೀಚೆಗೆ ಸುರಿದ ಮಳೆಯಿಂದ ಲಕ್ಷಾಂತರ ಹೆಕ್ಟೇರ್ ದ್ರಾಕ್ಷಿ ಬೆಳೆ ಹಾನಿಯಾಗಿದೆ.ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಿದ ಸದಸ್ಯ ಸವದಿ ಅವರು ಸಚಿವರ ಭೂಕಬಳಿಕೆ ವಿಷಯದಲ್ಲಿ ಬೆಂಗಳೂರಿನಲ್ಲಿ ವಿಶೇಷ ಅಧಿವೇಶನ ನಡೆಸಿ ನಮಗೆ ಅಭ್ಯಂತರವಿಲ್ಲ;ಆದ್ರೇ ಸುವರ್ಣಸೌಧದಲ್ಲಿ ಉ-ಕ ಮಹತ್ವದ ವಿಷಯಗಳ ಚರ್ಚೆಯಾಗಲಿ ಎಂದು ಕೋರಿಕೊಂಡರು.
ಸದಸ್ಯ ಶ್ರೀಕಂಠೇಗೌಡ ಅವರು ಕೂಡ ಇದೇ ರೀತಿ ಮಾತುಗಳನ್ನಾಡಿದರು.
ಸಭಾನಾಯಕರು ಆಗಿರುವ ಸಮಾಜಕಲ್ಯಾಣ ಸಚಿವ ಕೋಟಶ್ರೀನಿವಾಸ ಪೂಜಾರಿ ಹಾಗೂ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಉತ್ತರ ಕರ್ನಾಟಕದ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ಸರಕಾರ ಸಿದ್ಧವಿದೆ ಎಂದರು.
ಸಭಾಪತಿ ಬಸವರಾಜ ಹೊರಟ್ಟಿ ಅವರು ನಾಳೆ(ಡಿ.೨೧) ಬೆಳಗ್ಗೆ ೧೧ರ ಬದಲಿಗೆ ೧೦.೩೦ಕ್ಕೆ ಪರಿಷತ್ ಶುರುವಾಗಲಿದ್ದು,ಪ್ರಶ್ನೋತ್ತರ ಮುಗಿದ ನಂತರ ಸಂಪೂರ್ಣ ಉತ್ತರ ಕರ್ನಾಟಕದ ಗಂಭೀರ ಸಮಸ್ಯೆಗಳಿಗೆ ಸಮಯ ಮೀಸಲಿಡಲಾಗುವುದು ಎಂದರು.
ಅನುದಾನಿತ ಶಾಲೆಗಳಲ್ಲಿರುವ ಖಾಲಿ ಹುದ್ದೆಗಳ ಭರ್ತಿ:ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ
ರಾಜ್ಯದಲ್ಲಿರುವ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡುವುದಕ್ಕೆ ಸಂಬಂಧಿಸಿದಂತೆ ಮತ್ತು ಸರಿಯಾಗದ ಜಾಹೀರಾತು ನೀಡಿಲ್ಲ ಎಂದು ಅನುಮತಿ ತಡೆ ಹಿಡಿದಿರುವುದಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್‌ನಲ್ಲಿ ಕೆಲಹೊತ್ತು ಗಂಭೀರ ಚರ್ಚೆ ನಡೆಯಿತು.
ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ಅವರು ಶಿಕ್ಷಣ ವ್ಯವಸ್ಥೆಯಲ್ಲಿ ಖಾಸಗಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪಾತ್ರ ದೊಡ್ಡದಿದೆ.ಹುದ್ದೆಗಳನ್ನು ತುಂಬಲು ನಿರ್ಲಕ್ಷ್ಯವಹಿಸಲಾಗುತ್ತಿದೆ. ೭೦೪೫ ಹುದ್ದೆಗಳು ಖಾಲಿ ಇದ್ದರೂ ಸಹ ೨೧೯೫ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಿಕೊಳ್ಳುವುದಕ್ಕೆ ಅನುಮತಿ ನೀಡಲಾಗಿದೆ. ಅವುಗಳಲ್ಲಿಯೂ ಕೆಲ ಹುದ್ದೆಗಳಿಗೆ ನಾನಾ ಕಾರಣ ನೀಡಿ ತಡೆನೀಡಲಾಗಿದೆ ಎಂದು ಆರೋಪಿಸಿದ ಅವರು,ಕೂಡಲೇ ಎಲ್ಲ ಖಾಲಿ ಹುದ್ದೆಗಳ ಭರ್ತಿಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಮತ್ತು ಜಿಲ್ಲಾಮಟ್ಟದ ಪತ್ರಿಕೆಗಳಲ್ಲಿ ಸರಿಯಾಗಿ ಜಾಹೀರಾತು ನೀಡಿಲ್ಲ ಅಂತ ಕಾರಣ ನೀಡಿ ೨೩೪ ಹುದ್ದೆಗಳಿಗೆ ತಡೆ ನೀಡಿರುವುದು ಸರಿಯಿಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು,ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಅನಗತ್ಯ ಕೊಕ್ಕೆ ಹಾಕಿ ತಡೆಹಿಡಿತಾ ಇದ್ದು,ಅವರನ್ನು ಕರೆದು ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಒತ್ತಾಯಿಸಿದ ಸದಸ್ಯರಾದ ಪುಟ್ಟಣ್ಣ,ಮುನಿರಾಜು,ಶಶೀಲ್ ನಮೋಶಿ, ಅರುಣ್ ಶಹಾಪುರ ಅವರು ಒಂದು ತಿಂಗಳೊಳಗೆ ಈ ಸಮಸ್ಯೆ ಮುಕ್ತಿ ಕಾಣಿಸಿ ಎಂದು ಮನವಿ ಮಾಡಿಕೊಂಡರು.
ಇದಕ್ಕುತ್ತರಿಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಈ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
೧೯೯೫ರ ನಂತರ ಪ್ರಾರಂಭವಾದ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲಾ-ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸದಿರುವುದರಿಂದ ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿದೆ ಎಂಬ ಸದಸ್ಯ ಅ.ದೇವೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ನಾಗೇಶ ಅವರು ಈ ಕುರಿತು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಪರಿಹರಿಸಲಾಗುವುದು ಎಂದರು.
’ಮೊಬೈಲ್ ದುಷ್ಪರಿಣಾಮ’ ಮಕ್ಕಳಿಗೆ ಶಿಕ್ಷಕರಿಂದ ತಿಳಿವಳಿಕೆ: ಶಿಕ್ಷಣ ಸಚಿವ ನಾಗೇಶ
ಬೆಳಗಾವಿ ಸುವರ್ಣಸೌಧ (ಕರ್ನಾಟಕ ವಾರ್ತೆ)೨೦: ಕೋವಿಡ್‌ನಿಂದಾಗಿ ಆನ್‌ಲೈನ್ ಕಲಿಕೆಗೆ ಒತ್ತು ನೀಡಿದ ಪರಿಣಾಮ ಮಕ್ಕಳು ಮೊಬೈಲ್ ದಾಸರಾಗಿರುವುದನ್ನು ಸದನಲ್ಲಿ ಒಪ್ಪಿಕೊಂಡ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರು ಈಗಾಗಲೇ ಭೌತಿಕ ತರಗತಿಗಳು ಪ್ರಾರಂಭವಾಗಿದ್ದು, ಈ ಸಂದರ್ಭದಲ್ಲಿ ಮಕ್ಕಳಿಗೆ ಮೊಬೈಲ್ ದುಷ್ಪರಿಣಾಮಗಳ ಕುರಿತು ಶಿಕ್ಷಕರ ಮೂಲಕ ತಿಳಿಹೇಳಲಾಗುವುದು ಎಂದರು.
ವಿಧಾನಪರಿಷತ್‌ನಲ್ಲಿ ಸದಸ್ಯೆ ಡಾ.ತೇಜಸ್ವಿನಿಗೌಡ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಮಕ್ಕಳ ಮಾನಸಿಕ ಸಮತೋಲನ ಕುರಿತು ಅಧ್ಯಯನ ನಡೆಸಿರುವುದಿಲ್ಲ. ಮಕ್ಕಳು ಕೋವಿಡ್ ಹಿನ್ನೆಲೆಯಲ್ಲಿ ಮಾನಸಿಕ ಕ್ಷೋಬೆಗೆ ಒಳಗಾಗದಂತೆ ಸೂಕ್ತ ಸಲಹೆ,ಆಪ್ತ ಸಮಾಲೋಚನೆ ನೀಡಲಾಗಿದೆ. ಕೋವಿಡ್ ಸಾಂಕ್ರಾಮಿಕ ಎದುರಿಸುವ ಬಗ್ಗೆಯೂ ಸೂಕ್ತ ಸಲಹೆ,ಮಾರ್ಗದರ್ಶನ ನಿಡಲಾಗಿದೆ ಎಂದರು.
ಶಾಲಾ-ಕಾಲೇಜುಗಳು ಸ್ಥಗಿತವಾಗಿದ್ದರಿಂದ ಮಕ್ಕಳು ಖಿನ್ನತೆಗೊಳಗಾಗಿದ್ದಾರೆ.ಮಕ್ಕಳ ಮಾನಸಿಕ ಸಮತೋಲನ ಕುರಿತು ಹಾಗೂ ಮೊಬೈಲ್ ಗೀಳರಾಗಿರುವುದನ್ನು ತಪ್ಪಿಸುವುದರ ಕುರಿತು ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ಅಧ್ಯಯನ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಸದಸ್ಯೇ ತೇಜಸ್ವಿನಿಗೌಡ ಅವರು ಮನವಿ ಮಾಡಿದರು.
ಸಚಿವರು ತಜ್ಞರಿಂದ ಅಧ್ಯಯನ ನಡೆಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಬುಡಕಟ್ಟು ಜನರ ಹಾಡಿಗಳಿಗೆ ಮನೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಮಂಜೂರಿಗೆ ಕ್ರಮ:ಸಚಿವ ಕತ್ತಿ
ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಬುಡಕಟ್ಟು ಜನರ ಹಾಡಿಗಳಲ್ಲಿ ಮನೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ಕೋರಿ ಯಾವುದೇ ಅರ್ಜಿಗಳು ಸ್ವೀಕೃತವಾಗಿಲ್ಲ; ಅರ್ಜಿ ಸಲ್ಲಿಸಿದಲ್ಲಿ ನಿಯಮಾನುಸಾರ ಮಂಜೂರು ಮಾಡಿಸಿಕೊಡುವ ಕೆಲಸ ಮಾಡಲಾಗುವುದು ಎಂದು ಅರಣ್ಯ,ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಉಮೇಶ ಕತ್ತಿ ಅವರು ವಿಧಾನಪರಿಷತ್‌ನಲ್ಲಿ ತಿಳಿಸಿದರು.
ಸದಸ್ಯ ಶಾಂತರಾಮ್ ಬುಡ್ನ ಸಿದ್ದಿ ಅವರ ಚುಕ್ಕೆಗುರುತಿನ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು ಕೊಡಗು ಜಿಲ್ಲೆಯ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಒಳಪಡುವ ಚೆನ್ನಯ್ಯನ ಕೋಟೆ,ಮಾಲ್ದಾರೆ,ಕೆ.ಬಾಡಗ,ನಿಟ್ಟೂರು, ದೇವರಪುರ, ತಿತಿಮತಿ ಮತ್ತು ನಾಲ್ಕೇರಿ ಹಾಡಿಗಳಲ್ಲಿ ಹಕ್ಕುಪತ್ರ ಪಡೆದು ವಸತಿ ಹೊಂದಿಲ್ಲದೇ ಇರುವ ಫಲಾನುಭವಿಗಳಿಗೆ ವೈಯಕ್ತಿಕ ಅರಣ್ಯ ಹಕ್ಕು ಮಾನ್ಯ ಮಾಡಲಾದ ೬೧೩ ವಸತಿ ರಹಿತ ಫಲಾನುಭವಿಗಳಿಗೆ ಹೊಸದಾಗಿ ವಾಸದ ಮನೆಗಳನ್ನು ನಿರ್ಮಿಸಲು ಅನುಮತಿ ಕೋರಿ ಪ್ರಸ್ತಾವನೆಗಳು ಸ್ವೀಕೃತವಾಗಿದ್ದು,ಸದರಿ ಪ್ರಸ್ತಾವನೆಗಳನ್ನು ಪರಿಶೀಲಿಸಿ ನಿಯಮಾನುಸಾರ ಮನೆಗಳನ್ನು ನಿರ್ಮಿಸಲು ಅನುಮತಿ ನೀಡಲಾಗಿದೆ. ಪ್ರಸ್ತುತ ಇಂತ ಯಾವುದೇ ಪ್ರಸ್ತಾವನೆಗಳು ಇಲಾಖೆಯಲ್ಲಿ ಬಾಕಿ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕಾಡ್ಗಿಚ್ಚು ನಂದಿಸುವಿಕೆಗೆ ಹೆಲಿಕಾಪ್ಟರ್ ಖರೀದಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ: ಸಚಿವ ಕತ್ತಿ
ಅರಣ್ಯ ದುರ್ಗಮ ಬೆಟ್ಟ ಪ್ರದೇಶದಲ್ಲಿ ಕಾಡ್ಗಿಚ್ಚು ಹೊತ್ತಿಕೊಂಡಾಗ ಶೀಘ್ರವಾಗಿ ನಂದಿಸಲು ಹೆಲಿಕಾಪ್ಟರ್‌ಗಳು ಸದ್ಯ ನಮ್ಮಲ್ಲಿಲ್ಲ;ಅವುಗಳನ್ನು ಇಲಾಖೆ ವತಿಯಿಂದ ಖರೀದಿ ಮಾಡುವುದಕ್ಕೆ ಸಂಬಂಧಿಸಿದಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅರಣ್ಯ ಖಾತೆ ಸಚಿವ ಉಮೇಶ ಕತ್ತಿ ಅವರು ವಿಧಾನಪರಿಷತ್‌ನಲ್ಲಿ ತಿಳಿಸಿದರು.
ಸದಸ್ಯ ಡಾ.ತೇಜಸ್ವಿನಿಗೌಡ ಅವರ ಚುಕ್ಕೆಗುರುತಿನ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಅರಣ್ಯ ಇಲಾಖೆಯು ಬೆಂಕಿಯ ಸಂದರ್ಭದಲ್ಲಿ ಬೆಂಕಿಯ ಮುಂಗಡ ಮೇಲ್ವಿಚಾರಣೆಗಾಗಿ ಭಾರತೀಯ ಅರಣ್ಯ ಸಮೀಕ್ಷೆ ಮತ್ತು ರಾಷ್ಟ್ರೀಯ ದೂರ ಸಂವೇದಿ ಏಜೆನ್ಸಿ ಸಹಯೋಗದೊಂದಿಗೆ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ಸಹಯೋಗದಲ್ಲಿ ಅರಣ್ಯ ಬೆಂಕಿ,ಉಸ್ತುವಾರಿ ಮತ್ತು ವಿಶ್ಲೇಷಣಾ ಕೋಶ ಸ್ಥಾಪಿಸಲಾಗಿದೆ. ಈ ಕೋಶದ ವತಿಯಿಂದ ಕಾಡ್ಗಿಚ್ಚನ್ನು ಪತ್ತೆಹಚ್ಚಲು ಉಪಗ್ರಹ ಚಿತ್ರಗಳು ಮತ್ತು ಮಾಹಿತಿ ತಂತ್ರಜ್ಞಾನ ಬಳಸಲಾಗುತ್ತಿದೆ. ಈ ತಂತ್ರಜ್ಞಾನವು ಕಾಡಿನ ಬೆಂಕಿಯನ್ನು ಪರಿಣಾಮಕಾರಿಯಾಗಿ ಮತ್ತು ಸಮಯೋಚಿತವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದರು.
ತುರ್ತು ಪರಿಸ್ಥಿತಿಗೆ ಹಾಜರಾಗಲು ಆಯಕಟ್ಟಿನ ಸ್ಥಳಗಳಲ್ಲಿ ತಾತ್ಕಾಲಿಕ ಅಗ್ನಿಶಾಮಕ ಕೇಂದ್ರಗಳನ್ನು ಸ್ಥಾಪಿಸುವಲ್ಲಿ ಅರಣ್ಯ ಇಲಾಖೆಯು ಅಗ್ನಿಶಾಮಕ ಮತ್ಯು ತುರ್ತುಸೇವೆಗಳ ಇಲಾಖೆಯೊಂದಿಗೆ ಸಹಕರಿಸುತ್ತಿದೆ ಮತ್ತು ಇದಕ್ಕಾಗಿ ೫೦ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಬೆಂಕಿ ಅವಘಡಗಳು ಸಂಭವಿಸಿದ ಸ್ಥಳಗಳನ್ನು ಪತ್ತೆಹಚ್ಚಲು ಸೂಕ್ಷ್ಮಪ್ರದೇಶಗಳನ್ನು ವಾಚ್ ಟಾವರ್‌ಗಳನ್ನು ನಿರ್ಮಿಸಲಾಗಿದೆ. ವೈರ್‌ಲೆಸ್ ಸೆಂಟರ್‌ಗಳಂತ ಪರಿಣಾಮಕಾರಿ ಸಂವಹ ಸಾಧನಗಳ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ವಿವರಿಸಿದ ಅವರು ದೊಡ್ಡಬೆಂಕಿಯ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳ ಸೇವೆಯನ್ನು ಪಡೆದು ಬೆಂಕಿ ನಂದಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು.
*ಮಾನವ-ಆನೆ ಸಂಘರ್ಷ ನಿಯಂತ್ರಣಕ್ಕೆ ೬೨೪ ಕಿ.ಮೀ ರೈಲ್ವೆ ಬ್ಯಾರಿಕೇಡ್ ನಿರ್ಮಾಣದ ಅವಶ್ಯಕತೆ: ರಾಜ್ಯದಲ್ಲಿ ಮಾನವ-ಆನೆ ಸಂಘರ್ಷ ನಿಯಂತ್ರಣಕ್ಕಾಗಿ ಉಪಯೋಗಿತ ರೈಲ್ವೆ ಹಳಿಗಳನ್ನು ಉಪಯೋಗಿಸಿ ೬೨೪ ಕಿ.ಮೀ ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಾಣದ ಅವಶ್ಯಕತೆ ಇದ್ದು, ೧೬೫.೩೮ಕಿ.ಮೀ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದೆ. ೪೫೮.೬೨ ಕಿ.ಮೀ ಬ್ಯಾರಿಕೇಡ್ ನಿರ್ಮಿಸಲು ರೂ.೫೫೦.೩೪ಕೋಟಿ ಅವಶ್ಯಕತೆ ಇದ್ದು,ಅನುದಾನಕ್ಕಾಗಿ ರಾಷ್ಟ್ರೀಯ ಪರಿಹಾರತ್ಮಕ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು,ಅವರು ಒಪ್ಪಿಕೊಂಡಿರುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು ೨೦೧೯-೨೦ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿದಂತೆ ರೈಲ್ವೆ ಬ್ಯಾರಿಕೆಡ್ ನಿರ್ಮಾಣಕ್ಕಾಗಿ ಹೊಸ ಯೋಜನೆ ಅನುಷ್ಠಾನಗೊಳಿಸಲಾಗಿದ್ದು, ಈ ಯೋಜನೆ ಅಡಿ ೧೮೧.೮೦೨ಕಿ.ಮೀ ಬ್ಯಾರಿಕೇಡ್( ಈ ಮೊದಲು ನಿರ್ಮಿಸಿದ ೧೬೫.೩೮ಕಿ.ಮೀ ಸೇರಿ) ನಿಮಿಸಲಾಗಿದೆ ಎಂದರು.
*ಬಂಕಾಪುರ ತೋಳ ವನ್ಯಜೀವಿಧಾಮಕ್ಕೆ ಅನುಮೋದನೆ: ಇಂಡಿಯನ್ ಗ್ರೇ ವುಲ್ಫ್ ಎಂದು ಕರೆಯಲ್ಪಡುವ ತೋಳಗಳ ಆವಾಸಸ್ಥಾನದ ಸಂರಕ್ಷಣೆಗಾಗಿ ಗಂಗಾವತಿ ವಲಯದ ಬಂಕಾಪುರ ಬ್ಲಾಕ್-೨ ಮೀಸಲು ಅರಣ್ಯ ಪ್ರದೇಶದ ೩೩೨.೬೭ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಬಂಕಾಪುರ ತೋಳ ವನ್ಯಜೀವಿಧಾನ ಎಂದು ಘೋಷಿಸಲು ೧೫ನೇ ವನ್ಯಜೀವಿ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಅವರು ವಿವರಿಸಿದರು.
ರಾಜ್ಯದಲ್ಲಿ ವನ್ಯಜೀವಿಗಳಿಗೆ ಸಂಪೂರ್ಣ ರಕ್ಷಣೆ ನೀಡುವ ಸಲುವಾಗಿ ೫ ರಾಷ್ಟ್ರೀಯ ಉದ್ಯಾನವನ, ೩೩ ಅಭಯಾರನ್ಯಗಳು(೦೫ಹುಲಿ ಸಂರಕ್ಷಿತ ಪ್ರದೇಶಗಳು ಒಳಗೊಂಡಂತೆ),೧೪ ಸಂರಕ್ಷಣಾ ಮೀಸಲು ಪ್ರದೇಶ ಮತ್ತು ೧ ಸಮುದಾಯ ಮೀಸಲು ಪ್ರದೇಶವೆಂದು ಘೋಷಿಸಲಾಗಿದೆ ಎಂದು ಅವರು ತಿಳಿಸಿದರು.
ಕೋವಿಡ್ ಕಾರಣದಿಂದ ಅರಣ್ಯ ಇಲಾಖೆಗೂ ಅನುದಾನದ ಕೊರತೆಯಾಗಿರುವುದನ್ನು ಸದನಲ್ಲಿ ಒಪ್ಪಿಕೊಂಡ ಸಚಿವ ಕತ್ತಿ ಅವರು ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು ಎಂದರು.
ಪ್ರಾಧ್ಯಾಪಕರ ಹುದ್ದೆಗೆ ಬಡ್ತಿ ತ್ವರಿತವಾಗಿ ನೀಡಲು ಕ್ರಮ:ಸಚಿವ ಡಾ.ಅಶ್ವತ್‌ನಾರಾಯಣ
ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಸಹಪ್ರಾಧ್ಯಾಪಕರುಗಳಿಗೆ ಯುಜಿಸಿ ನಿಯಮಾನುಸಾರ ಪ್ರಾಧ್ಯಾಪಕ ಹುದ್ದೆಗಳಿಗೆ ತ್ವರಿತವಾಗಿ ಬಡ್ತಿ ನೀಡಲು ಕ್ರಮವಹಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್‌ನಾರಾಯಣ ಅವರು ವಿಧಾನಪರಿಷತ್‌ನಲ್ಲಿ ತಿಳಿಸಿದರು.
ಸದಸ್ಯ ಡಾ.ತಳವಾರ ಸಾಬಣ್ಣ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವ ಡಾ.ಅಶ್ವತ್ ನಾರಾಯಣ ಅವರು ಸಹ ಪ್ರಾಧ್ಯಾಪಕ ಹುದ್ದೆಯಿಂದ ಪ್ರಾಧ್ಯಾಪಕ ಹುದ್ದೆಗೆ ಪದೋನ್ನತಿ ಕೋರಿ ೫೧೬ ಅರ್ಜಿಗಳು ಸ್ವೀಕೃತವಾಗಿದ್ದು,೩೧೯ ಜನರು ಅರ್ಹರಿದ್ದಾರೆ. ದಿನಾಂಕ ನಿಗದಿಪಡಿಸಿ ಈಗಾಗಲೇ ೦೯ ವಿಷಯಗಳಲ್ಲಿ ೩೭ ಸಹಪ್ರಾಧ್ಯಾಪಕರುಗಳಿಗೆ ಆಯುಕ್ತರ ಹಂತದಲ್ಲಿ ಸಂದರ್ಶನ ನಡೆಸಲಾಗಿದೆ. ೯೭ ಜನರಿಗೆ ಬಡ್ತಿ ನೀಡಲು ಅವಕಾಶವಿದ್ದು, ತ್ವರಿತವಾಗಿ ಬಡ್ತಿ ನೀಡಲು ಕ್ರಮವಹಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಗ್ರೇಡ್-೧ ಪ್ರಾಂಶುಪಾಲರ ನೇಮಕಕ್ಕೂ ಕ್ರಮವಹಿಸಲಾಗುವುದು ಎಂದು ಸಚಿವರು ತಿಳಿಸಿದರು.
ಸದಸ್ಯ ಡಾ.ಸಾಬಣ್ಣ ತಳವಾರ ಅವರು ಹಲವಾರು ಜನ ಸಹ ಪ್ರಾಧ್ಯಾಪಕರು ನಿವೃತ್ತಿ ಹಂತದಲ್ಲಿದ್ದು,ಅವರಿಗೆ ಅವಕಾಶ ಮಾಡಿಕೊಡುವಂತೆ ಕೋರಿದರು.
ಕಸಾಪ ಸದಸ್ಯತ್ವ ೧ಕೋಟಿ ವಿಸ್ತರಿಸಲು ನಿರ್ದೇಶನ:ಸಚಿವ ಸುನಿಲ್‌ಕುಮಾರ್
ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಸದಸ್ಯ ೩.೪೦ಲಕ್ಷ ಅಜೀವ ಸದಸ್ಯರಿದ್ದು, ಸದಸ್ಯತ್ವವನ್ನು ೧ ಕೋಟಿ ವಿಸ್ತರಿಸಲು ಕಸಾಪ ಅದ್ಯಕ್ಷರಿಗೆ ನಿರ್ದೇಶನ ನೀಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್‌ಕುಮಾರ್ ಅವರು ವಿಧಾನಪರಿಷತ್‌ನಲ್ಲಿ ತಿಳಿಸಿದರು.
ಸದಸ್ಯ ಗೋವಿಂದರಾಜು ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು ಕನ್ನಡ ಸಾಹಿತ್ಯ ಪರಿಷತ್‌ನ ನೂತನ ಅಧ್ಯಕ್ಷರು ಈಗಾಗಲೇ ಸದಸ್ಯತ್ವ ಸಂಖ್ಯೆಯನ್ನು ೧ ಕೊಟಿಗೆ ವಿಸ್ತರಿಸುವುದಾಗಿ ತಿಳಿಸಿದ್ದು,ಅವರಿಗೆ ನಾನು ಕೂಡ ಸದಸ್ಯತ್ವ ಸಂಖ್ಯೆಯನ್ನು ವಿಸ್ತರಿಸಲು ನಿರ್ದೇಶನ ನೀಡಲಾಗಿದೆ ಎಂದರು.
ಕಳೆದ ಮೂರು ವರ್ಷಗಳಲ್ಲಿ ೧೭ ಕೋಟಿ ರೂ.ಗಳ ಅನುದಾನವನ್ನು ಕಸಾಪಕ್ಕೆ ಬಿಡುಗಡೆ ಮಾಡಲಾಗಿದೆ ಎಂದರು.
ಆರ್ಥಿಕ ನಿರ್ಬಂಧ ತೆರವಿನ ನಂತರ ವಿಶ್ವವಿದ್ಯಾಲಯಗಳ
ನೇಮಕಾತಿ ಕ್ರಮ; ಸಚಿವ ಅಶ್ವಥ್ ನಾರಾಯಣ
ಆರ್ಥಿಕ ಇಲಾಖೆ ನೇಮಕಾತಿ ಪ್ರಕ್ರಿಯೆಗಳಿಗೆ ನಿರ್ಬಂಧ ವಿಧಿಸಿದೆ. ಈ ನಿರ್ಬಂಧದನ್ವಯ ಕಲ್ಯಾಣ ಕರ್ನಾಟಕ ಪ್ರದೇಶಗಳನ್ನು ಹೊರತು ಪಡಿಸಿ, ಬೇರೆ ವಿಭಾಗಗಳ ನೇಮಕಾತಿ ಪ್ರಕ್ರಿಯೆಗಳನ್ನು ತಡೆಹಿಡಿಯಲಾಗಿದೆ. ಆರ್ಥಿಕ ಇಲಾಖೆಯ ನಿರ್ಬಂಧ ತೆರವಿನ ನಂತರ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ, ಐಟಿ ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಉದ್ದಮಶೀಲತೆ ಸಚಿವ ಅಶ್ವಥ್ ನಾರಾಯಣ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿಯವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ ಅವರು ರಾಜ್ಯದಲ್ಲಿ ಒಟ್ಟು ೨೩ ವಿಶ್ವವಿದ್ಯಾಲಯಗಳು ಸರ್ಕಾರದ ಅನುದಾನದಲ್ಲಿ ಸ್ಥಾಪಿಸಲ್ಪಟ್ಟಿವೆ. ಒಟ್ಟು ೪೧೫೮ ಬೋಧಕ, ೮೪೪೭ ಬೋಧಕೇತರ ಸಿಬ್ಬಂದಿ ಹುದ್ದೆಗಳು ಮಂಜೂರಾಗಿವೆ. ೨೨೬೬ ಬೋಧಕ ಹಾಗೂ ೫೧೩೮ ಬೋಧಕೇತರ ಹುದ್ದೆಗಳು ಖಾಲಿಯಿವೆ. ವಿಶ್ವ ವಿದ್ಯಾಲಯಗಳಲ್ಲಿ ಅತಿಥಿ/ತಾತ್ಕಾಲಿಕ ಉಪನ್ಯಾಸಕರನ್ನು ನೇಮಿಸಿಕೊಂಡು ಶೈಕ್ಷಣಿಕ ಚಟುವಟಿಕೆಗಳನ್ನು ನೆಡೆಸಲಾಗುತ್ತಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ೨೦೧೯ರಲ್ಲಿ ಬೋಧಕ ಹುದ್ದೆಗಳ ನೇರ ನೇಮಕಾತಿಗೆ ಆದೇಶ ಹೊರಡಿಸಲಾಗಿದೆ. ವಿಶ್ವವಿದ್ಯಾಲಯಗಳ ಪರಿನಿಯಮಾವಳಿಗಳನ್ವಯ ವೃಂದ ಮತ್ತು ನೇಮಕಾತಿ ನಿಯಮಾನುಸಾರ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಸಚಿವ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.
ವನ್ಯಜೀವಿ ಸಂರಕ್ಷಣೆಗೆ ೩೮೬ ಕೋಟಿ ರೂಪಾಯಿ ವೆಚ್ಚ: ಸಚಿವ ಉಮೇಶ್ ಕತ್ತಿ
ರಾಜ್ಯದಲ್ಲಿ ವನ್ಯಜೀವಿಗಳ ಸಂರಕ್ಷಣೆಗೆ ಕಳೆದ ಎರಡು ವರ್ಷಗಳಲ್ಲಿ ಒಟ್ಟು ೩೮೬ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ ಎಂದು ಅರಣ್ಯ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಕಾರಗಳ ಸಚಿವ ಉಮೇಶ್ ವಿ ಕತ್ತಿ ಮಾಹಿತಿ ನೀಡಿದ್ದಾರೆ.
ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ ಅವರು ಅರಣ್ಯ ಇಲಾಖೆಯ ವನ್ಯಜೀವಿಗಳ ಸಂರಕ್ಷಣೆಗೆ ಕಟ್ಟುನಿಟ್ಟಿನ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗಿದೆ. ಆನೆ, ಹುಲಿ, ಚಿರತೆ ಮುಂತಾದ ವನ್ಯಪ್ರಾಣಿಗಳ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗಿದೆ. ೨೦೧೭ರ ಆನೆ ಗಣತಿಯಂತೆ ೬೦೪೯ ಆನೆಗಳು, ೨೦೧೮ರ ಹುಲಿಗಣತಿಯಂತೆ ೫೨೪ ಹುಲಿಗಳು ರಾಜ್ಯದ ಅಭಯಾರಣ್ಯಗಳಲ್ಲಿವೆ. ಅರೇಬಿಯನ್ ಸಮುದ್ರದ ಹಂಪ್ ಬ್ಯಾಕ್ ತಿಮಿಂಗಲ, ಪಕ್ಷಿ ಪ್ರಬೇಧಗಳಾದ ಗ್ರೇಟ್ ಇಂಡಿಯನ್ ಬಸ್ಟರ್ಡ್, ಲೆಸ್ಸರ್ ಫ್ಲೋರಿಕಾನ್, ರಣ ಹದ್ದು ಸಂರಕ್ಷಣೆಗೂ ಯೋಜನೆ ರೂಪಿಸಲಾಗಿದೆ.
೨೦೧೯-೨೦ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ ೬೩.೭೨ ಕೋಟಿ ಹಾಗೂ ೨೦೨೦-೨೧ನೇ ಸಾಲಿನಲ್ಲಿ ೬೬.೨೧ ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ರಾಜ್ಯ ಸರ್ಕಾರ ೨೦೧೯-೨೦ ನೇ ಸಾಲಿನಲ್ಲಿ ೧೩೯ ಕೋಟಿ ಹಾಗೂ ೨೦೨೦-೨೧ನೇ ಸಾಲಿನಲ್ಲಿ ೧೨೨ ಕೋಟಿ ರೂಪಾಯಿಗಳನ್ನು ವನ್ಯಜೀವಿ ಸಂರಕ್ಷಣೆಗಾಗಿ ಬಿಡುಗಡೆ ಮಾಡಲಾಗಿದೆ. ಒಟ್ಟು ೩೮೬ ಕೋಟಿ ರೂಪಾಯಿಗಳನ್ನು ಕಳೆದ ಎರಡು ವರ್ಷಗಳಲ್ಲಿ ವ್ಯಯ ಮಾಡಲಾಗಿದೆ.
ರಾಜ್ಯದಲ್ಲಿ ೫ ರಾಷ್ಟ್ರೀಯ ಉದ್ಯಾನವನ, ೩೩ ಅಭಿಯಾರಣ್ಯ , ೧೪ ಸಂರಕ್ಷಣಾ ಮೀಸಲು ಪ್ರದೇಶ ಹಾಗೂ ೧ ಸಮುದಾಯ ಮೀಸಲು ಪ್ರದೇಶವನ್ನು ವನ್ಯಜೀವಿಗಳ ಸಂರಕ್ಷಣೆಗಾಗಿ ಮೀಸರಿಸಲಾಗಿದೆ.
ವನ್ಯಜೀವಿಗಳಿಗೆ ನೀರಿನ ಸೌಕರ್ಯ, ಆವಾಸ ಅಭಿವೃದ್ಧಿ, ಅರಣ್ಯಗಳಲ್ಲಿನ ಕೆರೆಗಳ ಹೂಳುಎತ್ತುವಿಕೆ, ಚೆಕ್ ಡ್ಯಾಂ ನಿರ್ಮಾಣ, ನಾಲಾ ಅಭಿವೃದ್ಧಿ, ಸೌರ್ಯಬೇಲಿ, ಆನೆ ತಡೆಕಂದಕಗಳನ್ನು ನಿರ್ಮಾಣ ಕಾಮಗಾರಿಗಳನ್ನು ರಕ್ಷಿತಾ ಅರಣ್ಯಗಳಲ್ಲಿ ಕೈಗೊಳ್ಳಲಾಗಿದೆ.
ಕಾವಲು ಸಿಬ್ಬಂದಿಗಳನ್ನು ನೇಮಿಸಿ ಕಳ್ಳ ಬೇಟೆ ತಡೆಯಲಾಗುತ್ತಿದೆ. ಅಭ್ಯಯಾರಣ್ಯಗಳಲ್ಲಿ ಸಂಭವಿಸುವ ಕಾಡ್ಗಿಚ್ಚು ನಂದಿಸುವ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಉಮೇಶ ಕತ್ತಿ ಅವರು ತಿಳಿಸಿದ್ದಾರೆ.
ಭೂಗತ ವಿದ್ಯುತ್ ಕೇಬಲ್ ಅಳವಡಿಕೆ ಯೋಜನಾ ವರದಿ ಸಿದ್ದ ; ಸಚಿವ ವಿ ಸುನೀಲ್ ಕುಮಾರ್
೨೦೧೮-೧೯ನೇ ಬಜೆಟ್‌ನಲ್ಲಿ ಘೋಷಿಸಲಾದ ಬೆಂಗಳೂರು ನಗರದಲ್ಲಿನ ಎಲ್ಲಾ ಓವರ್ ಹೆಡ್ ವಿದ್ಯುತ್ ಸರಬರಾಜು ಮಾರ್ಗಗಳನ್ನು ಭೂಗತ ವಿದ್ಯುತ್ ಕೇಬಲ್ ಮಾರ್ಗಗಳನ್ನಾಗಿ ಬದಲಾಯಿಸುವ ಯೋಜನಾ ವರದಿ ಸಿದ್ದವಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್‌ಕುಮಾರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಗೋವಿಂದರಾಜ್ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ ಅವರು ಬೆಸ್ಕಾಂ ವ್ಯಾಪ್ತಿಯ ಬೆಂಗಳೂರು ನಗರಕ್ಕೆ ಒಳಪಡುವ ೬೩ ಉಪವಿಭಾಗಗಳ ಪೈಕಿ ೫೩ ಉಪವಿಭಾಗಗಳಲ್ಲಿ ೧೧ಕೆವಿ ಸಾರ್ಮಥ್ಯದ ವಿದ್ಯುತ್ ಸರಬರಾಜಿನ ಮೇಲ್ಮಾರ್ಗಗಳನ್ನು ಭೂಗತ ಕೇಬಲ್ ಮಾರ್ಗಗಳಾಗಿ ಪರಿವರ್ತಿಸಿ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸಲು ರೂ. ೫೩೨೫ ಕೋಟಿ ರೂಪಾಯಿಗಳ ಯೋಜನಾ ವರದಿ ಸಿದ್ದವಾಗಿದೆ ಎಂದು ಅವರು ವಿವರಿಸಿದ್ದಾರೆ.
ನಾಲ್ಕು ಹಂತಗಳಲ್ಲಿ ಯೋಜನೆ ಅನುಷ್ಠಾಗೊಳಿಸಲಾಗುತ್ತಿದ್ದು, ರೂ.೫೦೩೧.೬೫ ಕೋಟಿ ರೂಪಾಯಿಗಳಿಗೆ ದರ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ಪ್ರಗತಿಯಲಿದೆ ಎಂದರು.
ನವೆಂಬರ್ ಅಂತ್ಯಕ್ಕೆ ೪೮೨೧.೫೯ ಕಿ.ಮೀ. ಉದ್ದದ ೧೧ ಕೆವಿ ಭೂಗತ ಕೇಬಲ್‌ನ್ನು, ೨೬೭ ಕಿ.ಮೀ ಉದ್ದದ ಎಲ್.ಟಿ ಭೂಗತ ಕೇಬಲ್, ೨೮೩೭ ಕಿ.ಮೀ ಎಲ್.ಟಿ ಏರಿಯಲ್ ಬಂಚ್ಡ್ ಕೇಬಲ್ ಅಳವಡಿಸಲಾಗಿದೆ. ೧೮೨೨.೭೯ ಕೋಟಿ ರೂಪಾಯಿ ವ್ಯಯಿಸಲಾಗಿದೆ.
ಹೆಸ್ಕಾಂ ವ್ಯಾಪ್ತಿ ಹೊರತುಪಡಿಸಿ ಬೇರೆ ವಿದ್ಯುತ್ ಸರಬರಾಜು ನಿಗಮಗಳ ವ್ಯಾಪ್ತಿಯಲ್ಲಿ ಭೂಗತ ಕೇಬಲ್ ಅಳವಡಿಕೆ ಯೋಜನೆಯನ್ನು ಘೋಷಣೆಯನ್ನು ಮಾಡಿರುವುದಿಲ್ಲ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಪ್ರತಿಮೆ ಭಗ್ನಗೊಳಿಸಿದವರ ವಿರುದ್ಧ ದೇಶದ್ರೋಹ ಹಾಗೂ ಗೂಂಡಾ ಕಾಯ್ದೆಯಡಿ ಪ್ರಕರಣ : ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ