Kannada NewsKarnataka NewsLatest

ಬಿಜೆಪಿ ಸರ್ಕಾರದ ಹಾಗೂ ಗೃಹ ಸಚಿವರ ಅಸಮರ್ಥತೆಯೇ ಇದಕ್ಕೆಲ್ಲ ಕಾರಣ – ಡಿ.ಕೆ.ಶಿವಕುಮಾರ

ಸಿ.ಟಿ ರವಿ ಅವರು ನನ್ನ ಹೆಸರು ಬಳಸಿದರೆ ನಾಯಕರಾಗಬಹುದು ಎಂದು ಭಾವಿಸಿದ್ದಾರೆ

ತಮಗೆ ಬೇಕಾದ ಮಸೂದೆಗೆ ಅನುಮೋದನೆ ಪಡೆದು ಗಂಟುಮೂಟೆ ಕಟ್ಟಿಕೊಂಡು ಹೋಗಲು ಸಿದ್ಧತೆ ನಡೆಸಿದ್ದಾರೆ.

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶಿವಾಜಿ ಮಹಾರಾಜರ ಪ್ರತಿಮೆಗೆ ಅಪಮಾನ ಎಸಗಿದವರಾಗಲಿ, ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ಹಾಳು ಮಾಡಿದವರಾಗಲಿ, ಕನ್ನಡ ಧ್ವಜ ಸುಟ್ಟವರಾಗಲಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಆಗಲೇಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಅವರು,  ನಮ್ಮ ದೇಶದ ದೊಡ್ಡ ಆಸ್ತಿ ಎಂದರೆ ನಮ್ಮ ಸಂಸ್ಕೃತಿ. ನಮ್ಮ ಭಾಷೆ, ನೆಲ, ಜಲ. ಇದೆಲ್ಲವೂ ಇಡೀ ವಿಶ್ವ ನಮ್ಮತ್ತ ತಿರುಗಿ ನೋಡುವಂತೆ ಮಾಡಿವೆ. ನಮ್ಮ ರಾಜ್ಯದಲ್ಲೇ ಹಲವಾರು ರೀತಿ ಭಾಷೆ ಮಾತನಾಡುತ್ತಾರೆ. ಸೌಹಾರ್ದತೆಗೆ ನಮ್ಮ ರಾಜ್ಯ ಮೊದಲಿನಿಂದಲೂ ಹೆಸರು ಮಾಡಿದೆ. ಇಂದು ಈ ಗಡಿ ಭಾಗದಲ್ಲಿ ನಾವು ಸುವರ್ಣ ವಿಧಾನಸೌಧ ಕಟ್ಟಿ ಇದು ನಮ್ಮ ಭಾಗ ಎಂದು ಕೆಲಸ ಮಾಡುತ್ತಿದ್ದೇವೆ.

ಈ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿ, ಇತಿಹಾಸದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ನಾಶ ಮಾಡಿ, ಪಕ್ಕದ ರಾಜ್ಯದಲ್ಲಿ ನಮ್ಮ ಕನ್ನಡ ಬಾವುಟ ಸುಟ್ಟಿರುವುದು ಸರಿಯಲ್ಲ. ಇದು ಹೇಗಾಗಿದೆ ಎಂಬ ವಿಮರ್ಶೆ ಮಾಡಬೇಕಾಗಿದೆ. ಈ ಕೃತ್ಯವನ್ನು ನಾವು ಮತ್ತು ನಮ್ಮ ಪಕ್ಷ ಖಂಡಿಸುತ್ತದೆ. ಶಿವಾಜಿ ಮಹಾರಾಜರ ಪ್ರತಿಮೆಗೆ ಅಪಮಾನ ಎಸಗಿದವರಾಗಲಿ, ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ಹಾಳು ಮಾಡಿದವರಾಗಲಿ, ಕನ್ನಡ ಧ್ವಜ ಸುಟ್ಟವರಾಗಲಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಆಗಲೇಬೇಕು ಎಂದು ಆಗ್ರಹಿಸಿದರು.

ಅಂಜಲಿ ನಿಂಬಾಳ್ಕರ್ ಅವರ ಕ್ಷೇತ್ರದ ಹಲಸಿ ಗ್ರಾಮದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿದ್ದಾರೆ. ಬಸವಣ್ಣನವರ ಫೋಟೋಗೂ ಮಸಿ ಹಾಕಿದ್ದಾರೆ. ಇವತ್ತಿನವರೆಗೂ ಕೂಡ ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಇದಕ್ಕೆ ಏನು ಕಾರಣ? ಯಾರು ದುರ್ಬಲರಾದರು? ಪೊಲೀಸ್ ವ್ಯವಸ್ಥೆ ಹದಗೆಟ್ಟಿದೆಯಾ? ಎಂಬ ಬಗ್ಗೆ ಮುಖ್ಯಮಂತ್ರಿಗಳು ಉತ್ತರಿಸಬೇಕು ಎಂದು ಆಗ್ರಹಿಸಿದರು.

ಈ ಹಿಂದೆ ಉಡುಪಿ ಹಾಗೂ ವಿಜಯಪುರದಲ್ಲಿ ಆಯುಧ ಪೂಜೆ ಹಬ್ಬದ ಸಮಯದಲ್ಲಿ ಪೊಲೀಸರ ಸಮವಸ್ತ್ರ ತ್ಯಜಿಸಿ, ಅವರದೇ ಹೊಸ ಉಡುಪು ಧರಿಸಿ, ಕೆಟ್ಟ ಸಂಪ್ರದಾಯ ಆರಂಭಕ್ಕೆ ಕಾರಣರಾಗಿದ್ದಾರೆ. ಮುಖ್ಯಮಂತ್ರಿಗಳು ಗೃಹಸಚಿವರಾಗಿದ್ದವರು. ನೈತಿಕ ಪೊಲೀಸ್ ಗಿರಿ ವಿಚಾರವಾಗಿ ಅವರು ಬೆಂಬಲದ ಹೇಳಿಕೆ ಯಾಕೆ ಕೊಟ್ಟರು ನಮಗೆ ಗೊತ್ತಿಲ್ಲ. ಈ ರೀತಿ ಕಾನೂನು ಕೈಗೆತ್ತಿಕೊಳ್ಳುವವರ ವಿಚಾರದಲ್ಲಿ ಮೃಧು ಧೋರಣೆ ತಾಳಿದರೆ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದೂ ಹೇಳಿದರು.

ಈ ಹಿಂದೆ ಹುಬ್ಬಳ್ಳಿಯಲ್ಲಿ ಚರ್ಚ್ ಗೆ ಬಲವಂತವಾಗಿ ನುಗ್ಗಿ ಭಜನೆ ಮಾಡಿದ್ದರು. ಇವೆಲ್ಲ ಸಮಾಜದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ. ಹೀಗಾಗಿ ಕಾನೂನನ್ನು ಯಾರು ಕೈಗೆತ್ತಿಕೊಳ್ಳುತ್ತಾರೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಬಂಧಿಸಬೇಕು. ನಮ್ಮ ಧ್ವಜ ಹಾಗೂ ಮಾತೃಭೂಮಿ ನಮಗೆ ತಾಯಿ ಸಮಾನ. ಇದರ ಜತೆಗೆ ದೇಶದ ಐಕ್ಯತೆ, ಸಮಗ್ರತೆ ಹಾಗೂ ಶಾಂತಿಯ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಕುಮಾರ, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಕೋಮು ಸಂಘರ್ಷಕ್ಕೆ ಉತ್ತೇಜನ ನೀಡುತ್ತಿದೆ. ಇದರಿಂದ ರಾಜ್ಯಕ್ಕೆ ಬರುವ ಬಂಡವಾಳ ಹೂಡಿಕೆ ಮೇಲೆ ಪ್ರಭಾವ ಬೀರಲಿದೆ. ಇದರ ಬಗ್ಗೆ ಸರ್ಕಾರ ಚಿಂತನೆ ನಡೆಸಿಲ್ಲ. ಬಿಜೆಪಿ ಕೇವಲ ತಮ್ಮ ರಾಜಕೀಯ ಅಜೆಂಡಾ ಬಗ್ಗೆ ಮಾತ್ರ ಯೋಚಿಸುತ್ತಿದೆ. ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಹಿತದ ಬಗ್ಗೆ ಆಲೋಚಿಸುತ್ತದೆ ಎಂದರು.

ಸಿ.ಟಿ ರವಿ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಿ.ಟಿ ರವಿ ಅವರು ನನ್ನ ಹೆಸರು ಬಳಸಿದರೆ ನಾಯಕರಾಗಬಹುದು ಎಂದು ಭಾವಿಸಿದ್ದಾರೆ. ಅವರು ತಮ್ಮದೇ ಜಿಲ್ಲೆಯಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕೇವಲ 3 ಮತಗಳ ಅಂತರದ ಗೆಲವು ಸಾಧಿಸಿರುವುದರಿಂದ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 4-5 ಸ್ಥಾನ ಗೆಲ್ಲಲಿದೆ ಎಂದು ಭಾವಿಸಿದ್ದರು. ಆದರೆ ಕಾಂಗ್ರೆಸ್ ಪಕ್ಷ 11 ಕ್ಷೇತ್ರಗಳನ್ನು ಗೆದ್ದಿದೆ. ಹೀಗಾಗಿ ಪಕ್ಷದ ಹಿನ್ನಡೆಯ ನಂತರ ಅವರು ಕಾಂಗ್ರೆಸ್ ಪಕ್ಷವನ್ನು ದೂರಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಈ ಕೃತ್ಯಗಳನ್ನು ಕಾಂಗ್ರೆಸ್ ಪಕ್ಷದವರೇ ಮಾಡಿದ್ದರೆ ಅವರನ್ನು ಬಂಧಿಸಲಿ. ಇದುವರೆಗೂ ಯಾಕೆ ಬಂಧಿಸಿಲ್ಲ? ನಾನು ಈ ಕೃತ್ಯಕ್ಕೆ ಪ್ರೋತ್ಸಾಹ ನೀಡಿದ್ದರೆ ನನ್ನನ್ನು ಬಂಧಿಸಲಿ. ಸದನದಲ್ಲಿ ಉತ್ತರ ನೀಡಲಾಗದೇ ಈ ರೀತಿ ನಾಯಕರ ಹೆಸರು ತಳುಕು ಹಾಕುತ್ತಿದ್ದಾರೆ. ಅವರಿಗೆ ತಾಕತ್ತಿದ್ದರೆ ನಮ್ಮನ್ನು ಬಂಧಿಸಲಿ. ಬಿಜೆಪಿ ಸರ್ಕಾರದ ಹಾಗೂ ಗೃಹ ಸಚಿವರ ಅಸಮರ್ಥತೆಯೇ ಇದಕ್ಕೆಲ್ಲ ಕಾರಣ. ಇದು ಜನರಲ್ಲಿ ಗೊಂದಲ ಸೃಷ್ಟಿಸಿ ಗಮನ ಬೇರೆಡೆಗೆ ಸೆಳೆಯಲು ಅವರು ಮಾಡುತ್ತಿರುವ ನಾಟಕ ಎಂದು ಟೀಕಿಸಿದರು.

ಸುವರ್ಣಸೌಧದ ಮುಂದೆ 100 ಕ್ಕೂ ಹೆಚ್ಚು ವಿವಿಧ ಸಂಘಟನೆಗಳು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಧರಣಿ ಮಾಡುತ್ತಿವೆ. ರೈತರಿಗೆ, ಕೋವಿಡ್ ನಿಂದ ಸತ್ತವರಿಗೆ ಪರಿಹಾರ ನೀಡಲು ಈ ಸರ್ಕಾರದಿಂದ ಆಗಿಲ್ಲ. ಈ ವಿಚಾರವಾಗಿ ಕೇಳಿದ ಪ್ರಶ್ನೆಗಳಿಗೆ ಕಳೆದ ನಾಲ್ಕು ದಿನಗಳಿಂದ ಮುಖ್ಯಮಂತ್ರಿಗಳು ಉತ್ತರ ನೀಡಿಲ್ಲ. ಅವರಿಗೆ ಈ ವಿಚಾರಗಳನ್ನು ಚರ್ಚೆಗೆ ತೆಗೆದುಕೊಳ್ಳಲು ಆಸಕ್ತಿ ಇಲ್ಲ. ಅವರು ಕೇವಲ ಮತಾಂತರ ಮಸೂದೆ ಬಗ್ಗೆ ಮಾತ್ರ ಚಿಂತಿತರಾಗಿದ್ದಾರೆ. ಸಚಿವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಅವರು ರಾಜಿನಾಮೆ ನೀಡಬೇಕಿತ್ತು. ಅದಕ್ಕೂ ಅವಕಾಶ ನೀಡದೇ, ಅವರು ಕೇವಲ ತಮಗೆ ಬೇಕಾದ ಮಸೂದೆಗೆ ಅನುಮೋದನೆ ಪಡೆದು ಗಂಟುಮೂಟೆ ಕಟ್ಟಿಕೊಂಡು ಹೋಗಲು ಸಿದ್ಧತೆ ನಡೆಸಿದ್ದಾರೆ. ಇದನ್ನು ನಾವು ವಿರೋಧಿಸುತ್ತೇವೆ. ಕಾನೂನು ಹೋರಾಟದ ಜತೆಗೆ ಬೀದಿಗಿಳಿದು ಕೂಡ ಹೋರಾಟ ಮಾಡುತ್ತೇವೆ’ ಎಂದರು.

ಎಂಇಎಸ್ ನಿಷೇಧಕ್ಕೆ ಸಿದ್ದರಾಮಯ್ಯ ಆಗ್ರಹ; ಅವರಿಗೆ ಮಾನ, ಮರ್ಯಾದೆ ಏನೂ ಇಲ್ಲ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button