Kannada NewsKarnataka NewsLatest

ಹಲಸಿ ಘಟನೆಗೆ 2013ರ ಘಟನೆ ಕಾರಣ!

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹಲಸಿಯಲ್ಲಿ ನಿನ್ನೆ ಬಸವೇಶ್ವರರ ಭಾವಚಿತ್ರಕ್ಕೆ ಸೆಗಣಿ ಎರಚಿದ ಪ್ರಕರಣ 2013ರ ಘಟನೆಯ ಮುಂದುವರಿದ ಭಾಗ ಎನ್ನುವ ಅಂಶ ಬೆಳಕಿಗೆ ಬಂದಿದೆ.

ಗ್ರಾಮದ ಬಸವೇಶ್ವರ ವೃತ್ತದ ಬಸವೇಶ್ವರ ಭಾವಚಿತ್ರಕ್ಕೆ ಸೆಗಣಿ ಎರಚಿದ ದುಷ್ಕರ್ಮಿಗಳು ವೃತ್ತದಲ್ಲಿ ಅಳವಡಿಸಿದ್ದ ಬಸವೇಶ್ವರ ವೃತ್ತ ಕನ್ನಡ ನಾಮಫಲಕಕ್ಕೆ ಮಸಿ ಬಳಿದಿದ್ದರು. ಜೊತೆಗೆ ಗ್ರಾಮ ಪಂಚಾಯತಿ ಆವರಣದಲ್ಲಿದ್ದ ಕನ್ನಡ ಬಾವುಟವನ್ನು ಕಿತ್ತುಹಾಕಿದ್ದರು.

ಈ ಸಂಬಂಧ ಈಗಾಗಲೆ ಮೂವರನ್ನು ಬಂಧಿಸಲಾಗಿದೆ. ಅವರ ವಿಚಾರಣೆ ಮುಂದುವರಿದಿದೆ.

ಈ ಮಧ್ಯೆ ಇದು 2013ರಲ್ಲಿ ನಡೆದ ಘಟನೆಯ ಮುಂದುವರಿದ ಭಾಗ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ. ಗ್ರಾಮದಲ್ಲಿ ಕನ್ನಡಿಗರು ಮತ್ತು ಮರಾಠಿಗರು ಸಮಸಂಖ್ಯೆಯಲ್ಲಿದ್ದಾರೆ. ಎಲ್ಲರೂ ಸೌಹಾರ್ದಯುತವಾಗಿಯೇ ಇದ್ದಾರೆ.

2013ರಲ್ಲಿ ಗ್ರಾಮದಲ್ಲಿ ಕನ್ನಡ ಧ್ವಜದ ಸಂಖ್ಯೆ 3 ಇತ್ತು. ಎಂಇಎಸ್ ತನ್ನದೆಂದು ಹೇಳಿಕೊಳ್ಳುವ ಭಗವಾಧ್ವಜ 2 ಇತ್ತು. ಹಾಗಾಗಿ ಗ್ರಾಮಸ್ಥರೆಲ್ಲ ಕುಳಿತು ಒಂದು ಕನ್ನಡ ಧ್ವಜ ಕಡಿಮೆ ಮಾಡಲು ನಿರ್ಧರಿಸಿದ್ದರು. ಅದು ಸೌಹಾರ್ದಯುತವಾಗಿಯೇ ನಡೆದಿತ್ತು.

ಆದರೆ ಇತ್ತೀಚೆಗೆ ಗ್ರಾಮದಲ್ಲಿ ಒಂದು ಕನ್ನಡ ಧ್ವಜ ಜಾಸ್ತಿ ಇದೆ ಎನ್ನುವ ಅಸಹನೆ ಕೆಲವು ಮರಾಠಿ ಭಾಷಿಕ ಯುವಕರಲ್ಲಿತ್ತು. ಈಚೆಗೆ ಶಿವಾಜಿ ಪುತ್ಥಳಿಗೆ ಮಸಿ ಬಳಿದ, ಸಂಗೊಳ್ಳಿ ರಾಯಣ್ಣ ಪುತ್ಥಳಿ ಭಗ್ನಗೊಳಿಸಿದ ಪ್ರಕರಣದ ನಂತರ ಈ ಬಗ್ಗೆ ಹಲಸಿಯ 5 -6 ಯುವಕರು ಚರ್ಚಿಸಿದ್ದರು. ಅವರಲ್ಲಿ ಮೂವರು ಯುವಕರು ಕನ್ನಡ ಧ್ವಜ ಕಿತ್ತು ಹಾಕಲು ಮುಂದಾದರು.

ಕನ್ನಡ ಧ್ವಜಕ್ಕೆ ಸೆಗಣಿ ಬಳಿಯುವ, ಕಿತ್ತೆಸೆಯುವ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಬಸವೇಶ್ವರರ ಭಾವಚಿತ್ರಕ್ಕೂ ಬಳಿದಿದ್ದಾರೆ. ಬಸವೇಶ್ವರರು ಕನ್ನಡದವರು ಎನ್ನುವ ಭಾವನೆ ಆ ಯುವಕರ ಮನಸ್ಸಿನಲ್ಲಿರಬಹುದು. ಅದು ವಿಚಾರಣೆ ವೇಳೆ ಗೊತ್ತಾಗಬೇಕಿದೆ.

ಒಟ್ಟಾರೆ ಹಳೆಯ ಘಟನೆಯನ್ನು ಸಾಂದರ್ಭಿಕವಾಗಿ ಬಳಸಿಕೊಂಡು ಕಿಡಿ ಹಚ್ಚುವ ಕೆಲಸವನ್ನು ಈ ಯುವಕರು ಮಾಡಿದ್ದರು. ಅದು ದೊಡ್ಡ ವಿವಾದಕ್ಕೆ ಕಾರಣವಾಯಿತು.

ವಿವಾದ ಜೋರಾಗಿ ಪೊಲೀಸ್ ವಿಚಾರಣೆ ತೀವ್ರವಾಗುತ್ತಿದ್ದಂತೆ ಈ ಮೂವರು ಯುವಕರು ಗ್ರಾಮ ತೊರೆದಿದ್ದರು. ಆದರೆ ತಮ್ಮ ಹೆಸರು ಬಹಿರಗವಾಗಿರುವುದನ್ನು ತಿಳಿದು ವಾಪಸ್ಸಾಗಿ ಪೊಲೀಸರ ವಶವಾದರು.

ಹಲಸಿಯಲ್ಿ ಬಂಧಿತ ಕಿಡಿಗೇಡಿಗಳು

ಇದೀಗ ಪೊಲೀಸರು ಕಿಡಿಗೇಡಿಗಳನ್ನು ಬಂಧಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ. ಶಾಂತವಾಗಿದ್ದ ಊರಲ್ಲಿ ಅನಗತ್ಯವಾಗಿ ವಿವಾದಕ್ಕೆ ಕಾರಣವಾಗಿದೆ. ಗ್ರಾಮಸ್ಥರು ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಮುಂದೆಯೂ ಶಾಂತಿ, ಸೌಹಾರ್ದತೆಯಿಂದ ಇರಲಿ ಎನ್ನುವುದೇ ಎಲ್ಲರ ಆಶಯ.

 

ಹಲಸಿ ಪ್ರಕರಣ : ರಾತ್ರೋ ರಾತ್ರಿ ಮೂವರ ಬಂಧನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button