Latest

ಅಳುತ್ತಾ ಬರುವ ರೋಗಿಗಳನ್ನು ನಗಿಸುತ್ತಾ ಕಳಿಸುವುದೇ ಧ್ಯೇಯ: ಡಾ. ಚಂದನ್ ಹುದ್ದಾರ್

ಕೊವಿಡ್ ಉಲ್ಬಣಗೊಂಡಿದ್ದ ಸಮಯದಲ್ಲಿ ಕೆಲ ವೈದ್ಯರು ತಮ್ಮ ಜೀವವನ್ನೂ ಲೆಕ್ಕಿಸದೆ ಸೋಂಕಿತರಿಗೆ ಚಿಕಿತ್ಸೆ ನೀಡಿ ವೈದ್ಯಕೀಯ ಕ್ಷೇತ್ರದ ಹಿರಿಮೆ ಎತ್ತಿ ಹಿಡಿದ್ದಾರೆ. ಇಂಥಹ ಅಪರೂಪದ ಸೇವೆ ನೀಡಿ ಮನೆಮಾತಾದವರಲ್ಲಿ ಶಿರಸಿಯ ಡಾ. ಚಂದನ್ ಹುದ್ದಾರ್ ಕೂಡ ಒಬ್ಬರು.
ಪ್ರಸ್ತುತ ಶಿರಸಿಯ ಡಾ. ಶ್ರೀಪಾದ ಹೆಗಡೆ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಚಂದನ್ ಹುದ್ದಾರ ಕೊವಿಡ್ ಸಮಯದಲ್ಲಿ ಆಸ್ಪತ್ರೆಗೆ ಬರಲಾಗದ ಕೆಲ ಬಡ ರೋಗಿಗಳಿಗೆ ಸ್ವತಃ ಅವರ ಮನೆಗೇ ತೆರಳಿ ಚಿಕಿತ್ಸೆ ನೀಡಿದ್ದಾರೆ. ಉತ್ತಮ ಚಿಕಿತ್ಸೆ ಪಡೆದು ಗುಣಮುಖರಾದ ಅನೇಕರು ಡಾ. ಚಂದನ್ ಹುದ್ದಾರ ಅವರ ಸೇವೆಯನ್ನು ಸದಾ ಸ್ಮರಿಸುತ್ತಾರೆ.

ನಗಿಸುತ್ತಾ ಕಳಿಸುವ ಧ್ಯೇಯ

ಜನರಲ್ ಮೆಡಿಸಿನ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಡಾ. ಚಂದನ್ ಹುದ್ದಾರ್ ಆಸ್ಪತ್ರೆಗೆ ಬರುವ ರೋಗಿಗಳಿಗೆ ಔಷಧ ಚಿಕಿತ್ಸೆ ನೀಡುವುದರ ಜೊತೆಗೆ ಧೈರ್ಯ ತುಂಬುವುದು ಸಹ ಬಹಳ ಮುಖ್ಯ ಎಂದು ಅಭಿಪ್ರಾಯಪಡುತ್ತಾರೆ.

ರೋಗಿಗಳು ತಮಗೆ ಉಂಟಾಗಿರುವ ಅಸ್ವಸ್ಥತೆಯ ಕಾರಣದಿಂದ ಒಡಲಲ್ಲಿ ದುಖಃ ಹೊತ್ತು ಆಸ್ಪತ್ರೆಗೆ ಬರುತ್ತಾರೆ, ಅವರಿಗೆ ಚಿಕಿತ್ಸೆ ನೀಡಿ ರೋಗ ಗುಣಪಡಿಸಬಹುದು. ಆದರೆ ಮನಸ್ಸಿಗೆ ಆಗಿರುವ ನೋವಿಗೆ ವೈದ್ಯರು ನೀಡುವ ಭರವಸೆಯ ಮಾತುಗಳು ಪರಿಹಾರ ನೀಡುತ್ತವೆ. ಜೀವಿಗಳಿಗೆ ಅನಾರೋಗ್ಯ ಕಾಡುವುದು ಸಹಜ, ಆದರೆ ಅದಕ್ಕೆ ಸೂಕ್ತ ಚಿಕಿತ್ಸೆಯೂ ಲಭ್ಯವಿದೆ. ಅಳುತ್ತಾ ಬರುವವರನ್ನು ನಗಿಸುತ್ತಾ ಕಳಿಸುವುದೇ ವೈದ್ಯರ ಗುರಿಯಾಗಬೇಕು ಎಂದು ಅವರು ಹೇಳುತ್ತಾರೆ.

ಪಾರ್ಶ್ವ ವಾಯು ಪೀಡಿತರಿಗೆ ಉತ್ತಮ ಚಿಕಿತ್ಸೆ

ಡಾ. ಚಂದನ್ ಹುದ್ದಾರ ಅವರು ಪ್ರಸಕ್ತ ೧೦ಕ್ಕೂ ಹೆಚ್ಚು ಪಾರ್ಶ್ವವಾಯು (ಪ್ಯಾರಲಿಸಿಸ್) ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇವರಲ್ಲಿ ೫ ರೋಗಿಗಳು ಈಗಾಗಲೇ ಮತ್ತೆ ನಡೆದಾಡುವಷ್ಟು ಚೇತರಿಸಿಕೊಂಡಿದ್ದಾರೆ. ಪ್ಯಾರಾಲಿಸಿಸ್ ಹೊಡೆತದಿಂದ ರೋಗಿಗಳಿಗೆ ಉಂಟಾಗಿದ್ದ ಮಾನಸಿಕ ಆಘಾತದಿಂದ ಮೊದಲು ಅವರನ್ನು ಹೊರತರುವ ಕೆಲಸ ಮಾಡಿದ್ದೇನೆ. ಇದರಿಂದಾಗಿ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಒಮ್ಮೆ ಚಿಕಿತ್ಸೆ ಫಲಪ್ರದವಾಗಲು ಶುರುವಾದಮೇಲೆ ರೋಗಿ ಸುಲಭದಲ್ಲಿ ಚೇತರಿಸಿಕೊಳ್ಳುತ್ತಾನೆ ಎಂದು ಡಾ. ಚಂದನ್ ಹೇಳುತ್ತಾರೆ.
ಇನ್ನು ಡಿಪ್ರೆಶನ್, ನಿದ್ರಾಹೀನತೆ ಮೊದಲಾದ ಮಾನಸಿಕ ತೊಂದರೆಗಳು ದೈಹಿಕವಾಗಿಯೂ ಪರಿಣಾಮ ಬೀರುತ್ತವೆ. ಇಂಥಹ ತೊಂದರೆಗೆ ಒಳಗಾದವರಲ್ಲಿ ಎಷ್ಟೋ ಜನರಿಗೆ ತಮ್ಮ ದೈಹಿಕ ತೊಂದರೆಗಳ ಮೂಲ ಯಾವುದು ಎಂಬುದು ತಿಳಿದಿರುವುದಿಲ್ಲ. ಅಂಥವರಿಗೆ ದೈಹಿಕ ಅಸ್ವಸ್ಥತೆಗೆ ಮಾತ್ರ ಚಿಕಿತ್ಸೆ ನೀಡಿದರೆ ಸಾಲದು, ಅವರು ಮಾನಸಿಕವಾಗಿ ಚೇತರಿಸಿಕೊಳ್ಳುವಂತೆ ಚಿಕಿತ್ಸೆ ನೀಡಿದರೆ ದೈಹಿಕ ತೊಂದರೆಗೂ ಚಿಕಿತ್ಸೆ ನೀಡಲು ಸುಲಭವಾಗುತ್ತದೆ ಎಂದು ಅವರು ಹೇಳುತ್ತಾರೆ.
ಪ್ರತಿ ದಿನ ೫೦ಕ್ಕೂ ಹೆಚ್ಚು ಹೊರ ರೋಗಿಗಳಿಗೆ ಚಿಕಿತ್ಸೆ ನೀಡುವ ಡಾ. ಚಂದನ್ ಸಮಯವನ್ನು ಲೆಕ್ಕಿಸದೆ ರೋಗಿಗಳ ಚಿಕಿತ್ಸೆಗೆ ನಿಲ್ಲುತ್ತಾರೆ. ಸಾವಿರಾರು ಜನ ಅವರಿಂದ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ವೈದ್ಯಕೀಯ ಕ್ಷೇತ್ರವೂ ವಾಣಿಜ್ಯೀಕರಣವಾಗುತ್ತಿರುವ ಇಂದಿನ ದಿನಮಾನದಲ್ಲಿ ಡಾ. ಚಂದನ್‌ರಂತಹ ವೈದ್ಯರು ಸೇವೆಯೇ ಕರ್ತವ್ಯ ಎಂದು ಭಾವಿಸಿ ವಿಶೇಷವಾಗಿ ಗುರುತಿಸಿಕೊಳ್ಳುತ್ತಾರೆ.

ನನಗೆ ಸುಮಾರು ನಾಲ್ಕು ತಿಂಗಳಿಂದ ನಿರಂತರವಾಗಿ ಉದರದ ತೊಂದರೆ ಗ್ಯಾಸ್ಟ್ರಿಕ್ ಎಸಿಡಿಟಿಯಿಂದ ಅಸ್ವಸ್ಥತೆ ಉಂಟಾಗಿತ್ತು. ಅಲ್ಲದೇ ನಿದ್ರಾಹೀನತೆಯೂ ಕಾಡುತ್ತಿತ್ತು. ಡಾ. ಚಂದನ್ ಅವರು ನನ್ನ ಆರೋಗ್ಯ ಸಮಸ್ಯೆಯ ಮೂಲ ಮಾನಸಿಕ ಒತ್ತಡ ಎಂಬುದನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಿದ್ದು ಈಗ ಸಂಪೂರ್ಣ ಗುಣಮುಖನಾಗಿದ್ದೇನೆ.

-ಡಾ. ಚಂದನ್ ಹುದ್ದಾರ ಅವರಿಂದ ಚಿಕಿತ್ಸೆ ಪಡೆದವರು, ಶಿರಸಿ.

 

ಆಸ್ಪತ್ರೆಗೆ ಬರುವ ರೋಗಿಗಳಲ್ಲಿ ಹೆಚ್ಚಿನವರು ತಮಗಾದ ಅನಾರೋಗ್ಯದಿಂದ ಮಾನಸಿಕವಾಗಿಯೂ ಒತ್ತಡಕ್ಕೆ ಒಳಗಾಗಿರುತ್ತಾರೆ. ಹಾಗಾಗಿ ಚಿಕಿತ್ಸೆ ನೀಡುವುದರ ಜೊತೆಗೆ ರೋಗಿಗಳಲ್ಲಿ ಧೈರ್ಯ ತುಂಬಬೇಕಾದದ್ದೂ ವೈದ್ಯರ ಕರ್ತವ್ಯ.

-ಡಾ. ಚಂದನ್ ಹುದ್ದಾರ್.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button