Kannada NewsKarnataka NewsLatest

ಕಾಂಗ್ರೆಸ್ – ಅಲ್ಪಸಂಖ್ಯಾತರಿಗೆ ಇರುವ ಸಂಬಂಧ ಭಕ್ತರು ಭಗವಂತನಿಗಿರೋ ಸಂಬಂಧ -ಡಿ.ಕೆ.ಶಿವಕುಮಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಮಗೂ ಮತ್ತು ಅಲ್ಪಸಂಖ್ಯಾತರಿಗೆ ಇರುವ ಸಂಬಂಧ ಭಕ್ತರು ಭಗವಂತನಿಗಿರೋ ಸಂಬಂಧ. ನೀವು ನಮ್ಮಿಂದ ದೂರವಾಗುತ್ತೀರಾ ಎಂದರೆ ಯಾರೂ ನಂಬಲ್ಲ, ನಾವು ನಿಮ್ಮನ್ನ ದೂರ ಮಾಡುತ್ತೇವೆ ಎಂದರೂ ಯಾರೂ ನಂಬಲ್ಲ. ಪಕ್ಷ ಹಾಗೂ ಈ ಸಮುದಾಯದ ನಡುವೆ ಅಂತಹ ಗಟ್ಟಿಯಾದ ಸಂಬಂಧ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ.
ಬೆಳಗಾವಿಯ ಗಾಂಧಿಭವನದಲ್ಲಿ ಬುಧವಾರ ನಡೆದ ಅಲ್ಪಸಂಖ್ಯಾತರ ಸಮಾವೇಶ  “ನಮ್ಮ ನಡೆ ಐಕ್ಯತೆ ಮತ್ತು ವಿಶ್ವಾಸದ ಕಡೆ” ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿ (NEP) ಮೂಲಕ ಈ ಸರ್ಕಾರ ಇತಿಹಾಸ ತಿರುಚಲು ಹೊರಟಿದೆ. ಇದು NEP ನ್ಯಾಷನಲ್ ಎಜುಕೇಷನ್ ಪಾಲಿಸಿ ಅಲ್ಲಾ, ನಾಗಪುರ ಏಜುಕೇಷನ್ ಪಾಲಸಿ. ಇದನ್ನು ಮೊದಲು ಹೇಳಿದ್ದೇ ನಾನು. ಈ ಬಗ್ಗೆ ನಾವು ಅನೇಕ ಚರ್ಚೆ ಮಾಡಿದ್ದೇವೆ. ಇದು ನಮ್ಮ ವಿದ್ಯಾಭ್ಯಾಸ ಕ್ರಮವನ್ನು 100 ವರ್ಷ ಹಿಂದಕ್ಕೆ ಕರೆದೊಯ್ಯುತ್ತದೆ. ಇವರಿಗೆ ಸಾಮಾನ್ಯ ಪರಿಜ್ಞಾನವೇ ಇಲ್ಲ ಎಂದರು.
ಬೇರೆ ರಾಜ್ಯಗಳಲ್ಲಿ ಇದನ್ನು ಜಾರಿಗೆ ತರಲು ಹಿಂದೇಟು ಹಾಕುತ್ತಿರುವಾಗ ನಮ್ಮ ಸಚಿವರು ಷಹಬ್ಬಾಶ್ ಗಿರಿ ಪಡೆಯಲು ಈ ವರ್ಷವೇ ಜಾರಿಗೆ ಮುಂದಾಗಿದ್ದಾರೆ. ಅದರ ಪ್ರಕಾರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೇರೆ ಪದವಿ ವಿಷಯವನ್ನು ಓದಬಹುದಂತೆ. ಅದು ಹೇಗೆ ಸಾಧ್ಯ?
ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ವ್ಯಪಾರಸ್ಥ, ಆಸಕ್ತಿಯಲ್ಲಿ ರಾಜಕಾರಣಿ, ಆಯ್ಕೆಯಲ್ಲಿ ನಾನು ಶಿಕ್ಷಣ ಸಂಸ್ಥೆ ನಡೆಸುವವನು ಎಂದು ಹೇಳುತ್ತಿರುತ್ತೇನೆ. ನಾನು ವಿದ್ಯಾಸಂಸ್ಥೆ ನಡೆಸುತ್ತಿದ್ದರೂ ಇದು ನನಗೇ ಅರ್ಥವಾಗಿಲ್ಲ. ಇನ್ನು ಪಾಲಕರಿಗೆ ಮತ್ತು ಮಕ್ಕಳಿಗೆ ಏನು ಅರ್ಥವಾಗುತ್ತದೆ.
ನಿಮ್ಮೆಲ್ಲರ ಆಶೀರ್ವಾದದಿಂದ 2023 ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಆತ್ಮವಿಶ್ವಾಸ ಇದೆ. ಆ ವಿಶ್ವಾಸಕ್ಕೆ ನೀವು ಶಕ್ತಿ ತುಂಬಬೇಕು. ನೀವು ಹೊಸ ಮತ ಬರುವಂತೆ ಮಾಡಬೇಕು.
ಬಿಜೆಪಿಯವರಿಗೆ ಅಲ್ಪಸಂಖ್ಯಾತ ‌ಮತವನ್ನು ಕಿತ್ತು ಹಾಕುವುದೇ ಕೆಲಸವಾಗಿದೆ. ಬಿಜೆಪಿ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಈ ಬಗ್ಗೆ ನೀವು ಜಾಗೃತರಾಗಿ ಎಂದು ಕರೆ ನೀಡಿದರು.
ಬಿಜೆಪಿಯವರದ್ದು ನಾವು ಹಿಂದೂ ನಾವು ಮುಂದು ಎನ್ನುವ ಸಿದ್ಧಾಂತವಾದರೆ, ಹಿಂದೂ, ಮುಸಲ್ಮಾನರು, ಸಿಖ್ಖರು ಸೇರಿದಂತೆ ನಾವೆಲ್ಲರೂ ಒಂದೇ ಎನ್ನುವುದೇ ಕಾಂಗ್ರೆಸ್ ಸಿದ್ದಾಂತ.
ಮುಸಲ್ಮಾನರ ವಿರುದ್ಧ ಯಾರೇ ಅವಹೇಳನಕಾರಿಯಾಗಿ ಮಾತನಾಡಿದಾಗ ಕಾಂಗ್ರೆಸ್ ಎಂದಿಗೂ ನಿಮ್ಮನ್ನು ಬಿಟ್ಟುಕೊಡಲಿಲ್ಲ. ನಿಮ್ಮನ್ನು ಪಂಚರ್ ಹಾಕುವವರು ಎಂದರು. ಆದರೆ ಕರೋನ ‌ಸಮಯದಲ್ಲಿ ನಿಮ್ಮ ಸಮುದಾಯದ ಜನ ಎಲ್ಲ ಧರ್ಮದವರ ಹೆಣಗಳನ್ನು ಹೊತ್ತು ಮಾನವೀಯತೆ ಮೆರೆದಿದ್ದಾರೆ.
NEP ಯನ್ನ ಕರ್ನಾಟಕ ರಾಜ್ಯದಲ್ಲಿ ತರದ ರೀತಿಯಲ್ಲಿ ಕಾಂಗ್ರೆಸ್ ಹೋರಾಟ ‌ಮಾಡುತ್ತದೆ. ಇದು ನಮ್ಮ ಬದ್ಧತೆ. ಇದನ್ನು ಪ್ರಣಾಳಿಕೆಯಲ್ಲಿ ಸೇರಿಸುತ್ತೇವೆ. ನಿಮ್ಮ ಸಮಾಜದವರಲ್ಲಿ ಪ್ರಜ್ಞಾವಂತಿಕೆ ಇದೆ. ಮುಂಬರುವ ಚುನಾವಣೆಯಲ್ಲಿ ಪ್ರಬುದ್ಧರಾಗಿ ಮತ ಹಾಕಿ. ಚುನಾವಣೆಯಲ್ಲಿ ಟಿಕೆಟ್ ವಿಚಾರವಾಗಿ ಮನವಿ ಮಾಡಿದ್ದೀರಿ. ಆದರೆ ಟಿಕೆಟ್ ಪಡೆದರೆ ಅವರನ್ನು ಗೆಲ್ಲಿಸಲು ಈಗಿನಿಂದಲೇ ತಯಾರಿ ಮಾಡಬೇಕು. ನಿಮ್ಮ ಕ್ಷೇತ್ರದಲ್ಲಿನ ಸಮಸ್ಯೆ, ಅಲ್ಲಿ ಹೇಗೆ ತಯಾರಿ ಮಾಡಬೇಕು, ಹೇಗೆ ಸಾಮರಸ್ಯ ಮೂಡಿಸಬೇಕು ಎಂಬುದನ್ನು ನೋಡಿಕೊಳ್ಳಬೇಕು.
ನಾನು ಅಧ್ಯಕ್ಷನಾಗಿ ಬಂದ ಮೇಲೆ ಪರಿಷತ್ ಸ್ಥಾನದ 2 ಸೀಟಲ್ಲಿ ಒಂದನ್ನು ನಜೀರ್ ಅಹ್ಮದ್ ಅವರಿಗೆ ಕೊಟ್ಟೆವು. ಇನ್ನು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನಮ್ಮ ಕಾರ್ಯಾಧ್ಯಕ್ಷರಾದ  ಸಲೀಂ ಅಹ್ಮದ್ ಅವರಿಗೆ ಟಿಕೆಟ್ ನೀಡಿ, ಗೆಲ್ಲಿಸಿದ್ದೇವೆ.
ನಮ್ಮ ಅವಧಿಯಲ್ಲಿ ನಿಮಗೆ ಯಾವುದೇ ರೀತಿ ಅನ್ಯಾಯವಾಗುವುದಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ನಿಮಗಾಗಿ ಅನೇಕ ಕಾರ್ಯಕ್ರಮ ನೀಡಿದ್ದೆವು. ನಿಮಗೆ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಶಕ್ತಿ ತುಂಬುವ ಪ್ರಯತ್ನ ಮಾಡುತ್ತೇವೆ.
ಇಂದು ನಾವು ದೊಡ್ಡ ಸಂಕಟದಲ್ಲಿ ಸಿಲುಕಿದ್ದೇವೆ. ಈ ಹಿಂದೆ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದರು. ಅದರಿಂದ ನಷ್ಟ ಆಗಿದ್ದು ಯಾರಿಗೆ? ರೈತರಿಗೆ. ಕಷ್ಟಕಾಲದಲ್ಲಿ ಅವರು ಅದನ್ನು ಮಾರಿಕೊಳ್ಳುತ್ತಿದ್ದರು, ಆದರೆ ಈಗ ಅದಕ್ಕೆ ಅವಕಾಶವಿಲ್ಲವಾಗಿದೆ.
ಈಗ ಮತಾಂತರ ನಿಷೇಧ ಕಾಯ್ದೆ ತರಲು ಹೊರಟಿದ್ದಾರೆ. ಈ ಮಸೂದೆ ಪ್ರತಿಯನ್ನು ನಾನು ಹರಿದು ಹಾಕಿದ್ದೇನೆ. ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು. ಯಾರೂ ಕೂಡ ಹುಟ್ಟುವಾಗ ಇಂತಹ ಧರ್ಮ, ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕುವುದಿಲ್ಲ. ಎಲ್ಲರ ರಕ್ತವೂ ಕೆಂಪು ಬಣ್ಣ, ಎಲ್ಲರ ಬೆವರು ಉಪ್ಪೇ..
ಇಡೀ ವಿಶ್ವಕ್ಕೆ ವಿಶ್ವಮಾನವ ತತ್ವ ಸಂದೇಶ ಸಾರಿದ್ದು ಭಾರತ. ವಿಶ್ವವೇ ಒಂದು ಕುಟುಂಬ ಎಂದು ಹೇಳುವುದೇ ನಮ್ಮ ಸಂಸ್ಕೃತಿ. ಈ ಮಸೂದೆ ಮಂಡನೆ ಬಳಿಕ ಅನೇಕ ಮಠಾಧೀಶರು ನನಗೆ ಕರೆ ಮಾಡಿ ಏನಾಗುತ್ತಿದೆ ಎಂದು ಕೇಳಿದರು.
ಬಸವಣ್ಣನವರ ತತ್ವ ಏನು? 12 ನೇ ಶತಮಾನದಲ್ಲಿ ಎಲ್ಲ ವರ್ಗದವರಿಗೂ ಲಿಂಗಧಾರಣೆ ಮಾಡಿ ಲಿಂಗಾಯತ ಧರ್ಮ ಪಾಲಿಸಲಿಲ್ಲವೇ? ಹಾಗಾದರೆ ಬಸವಣ್ಣನವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತೀರಾ?
ಅಂಬೇಡ್ಕರ್ ಅವರು ಈ ದೇಶದ ಸಂವಿಧಾನ ರಚಿಸಿದ್ದಾರೆ, ಅದರ ವಿರುದ್ಧ ನಡೆಯುತ್ತೀರಾ? ಅವರು ಹಿಂದೂ ಧರ್ಮ ಬಿಟ್ಟು ಬೌದ್ಧ ಧರ್ಮ  ಅನುಸರಿಸಿದರು. ಅವರಿಗೆ ಯಾವ ಶಿಕ್ಷೆ ನೀಡುತ್ತೀರಿ?
ಬಿಜೆಪಿ ನಾಯಕರ ಮಕ್ಕಳು ಯಾವ ಶಾಲೆ, ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದಾರೆ. ಕ್ರೈಸ್ತರ ಶಿಕ್ಷಣ ಸಂಸ್ಥೆಯಲ್ಲಿ ಸೇರಲು ಮನವಿ ಕೊಡುತ್ತಾರೆ. ಇವರಲ್ಲಿ ಯಾರದಾರೂ ಒಬ್ಬರು ಬಲವಂತದ ಮತಾಂತರ ಆಗಿದೆ ಎಂದು ದೂರು ಕೊಟ್ಟಿದ್ದಾರಾ? ಕಾಂಗ್ರೆಸ್ ಕಾಯ್ದೆಯನ್ನು ವಿರೋಧ ಮಾಡುತ್ತದೆ.
ದೇಶದ ಜನ ಕಬ್ಬಿಣ ಇದ್ದಂತೆ. ಕಬ್ಬಿಣ ಎರಡು ಕೆಲಸ ಮಾಡುತ್ತದೆ. ಕತ್ತರಿಯೂ ಕಬ್ಬಿಣದಿಂದ ಮಾಡಿದರೆ ಸೂಜಿಯೂ ಕಬ್ಬಿಣದಿಂದ ಮಾಡಲಾಗುತ್ತದೆ. ಬಿಜೆಪಿಯವರು ಕತ್ತರಿಯಂತೆ ಸಮಾಜ ಕತ್ತರಿಸುವ ರೀತಿ ಕೆಲಸ ಮಾಡುತ್ತಾರೆ. ನಾವು ಸೂಜಿಯಂತೆ ಸಮಾಜ ಒಂದು ಮಾಡುವ ಕೆಲಸ‌ ಮಾಡ್ತೇವೆ.
ದೇಶದಲ್ಲಿ ಕಾಂಗ್ರೆಸ್ ಒಂದು ಇತಿಹಾಸ ಹೊಂದಿದೆ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಎಲ್ಲ ವರ್ಗದ ಜನ ಅಧಿಕಾರಕ್ಕೆ ಬಂದಂತೆ.
ನಮ್ಮ ಅಧ್ಯಕ್ಷೆ ಸೋನಿಯಾ ಗಾಂಧಿ, ಕ್ರೈಸ್ತ ಹೆಣ್ಣು ಮಗಳು. ದೇಶದ ಪ್ರಧಾನಿ ಆಗುವ ಅವಕಾಶ ಬಂದಾಗ, ನನಗೆ ಅಧಿಕಾರ ಬೇಡ, ಆರ್ಥಿಕ ತಜ್ಞ ದೇಶದ ಪ್ರಧಾನಿ ಆಗಲಿ ಎಂದರು. ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರು ದೇಶಕ್ಕಾಗಿ ಪ್ರಾಣ ತೆತ್ತರು. ತ್ಯಾಗ  ಬಲಿದಾನದ ಇತಿಹಾಸ ಕಾಂಗ್ರೆಸ್ ಪಕ್ಷಕ್ಕಿದೆ. ದೇಶಕ್ಕೆ‌ ಕೈ ನಾಯಕರು ಬಲಿದಾನ ಮಾಡಿದ್ದಾರೆ.
ಇಂತಹ ಒಂದೇ ಒಂದು ತ್ಯಾಗದ ಉದಾಹರಣೆ ಬಿಜೆಪಿಯಲ್ಲಿದಿಯಾ? ಕಳೆದ ಏಳು ವರ್ಷಗಳಲ್ಲಿ ಬಡವರಿಗಾಗಿ ಬಿಜೆಪಿ ಸರ್ಕಾರ ದೇಶದಲ್ಲಿ ಯಾವುದಾದರೂ ಒಂದು ಕಾರ್ಯಕ್ರಮ ಕೊಟ್ಟಿದೆಯಾ? ಅಧಿಕಾರ, ಮೀಸಲಾತಿ ಕೊಟ್ಟಿದೆಯಾ?
ಕೋವಿಡ್ ಸಮಯದಲ್ಲಿ ಏನು ಸಹಾಯ ಮಾಡಿದರು? ಹೆಣದ ಮೇಲೆ ಹಣ ಮಾಡಿದರು. ಮುಸಲ್ಮಾನರ ಮೇಲೆ ದ್ವೇಷ ಕಾರಿದರು. ನಾವು ಸುಮ್ಮನೆ ಕೂರಲಿಲ್ಲ, ಅವರಿಗೆ ತಕ್ಕ ಉತ್ತರ ಕೊಟ್ಟೆವು. ನಂತರ ಅವರ ಬಾಣ ಅವರಿಗೆ ತಿರುಗಿ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಬಿಜೆಪಿಯವರ ಕೈವಾಡವಿತ್ತು ಎಂದು ಬಯಲಾಯ್ತು.
ನೀವು ಜವಾಬ್ದಾರಿಯಿಂದ ಕೆಲಸ ಮಾಡಿ. ಯಾರೋ ಒಂದಿಬ್ಬರು ಮಾಡುವ ತಪ್ಪನ್ನು ಇಡೀ ಸಮುದಾಯದ ಮೇಲೆ ಹಾಕುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಬದ್ಧತೆ ಇದೆ. ಅದರಲ್ಲಿ ಕಿಂಚಿತ್ತೂ ರಾಜಿ ಆಗುವುದಿಲ್ಲ. ನಿಮ್ಮನ್ನು ನಾವು ಯಾವತ್ತು ಕೈ ಬಿಡಲ್ಲ. ಕಾಂಗ್ರೆಸ್ ಪಕ್ಷ ನಿಮ್ಮ ಜತೆ ಇದೆ ಎಂದು ಹೇಳಲು ನಾನು ಇಲ್ಲಿಗೆ ಬಂದಿದ್ದೇನೆಯೇ ಹೊರತು ಚಪ್ಪಾಳೆ ತಟ್ಟಿಸಿಕೊಳ್ಳಲು ಅಲ್ಲ ಎಂದರು.

ದೇಶದಲ್ಲಿ ಅಲ್ಪಸಂಖ್ಯಾತರ ಸ್ಥಿತಿ ಶೋಚನಿಯ : ಸತೀಶ್ ಜಾರಕಿಹೊಳಿ ಕಳವಳ

ದೇಶದಲ್ಲಿ ಕೆಲ ರಾಜ್ಯಗಳಲ್ಲಿ ಅಲ್ಪಸಂಖ್ಯಾತರು ಹಾಗೂ ದಲಿತರ ಸ್ಥಿತಿ ಶೋಚನೀಯವಾಗಿದೆ. ಸ್ವಾತಂತ್ರ್ಯ ಬಂದು 74 ವರ್ಷಗಳ ಕಳೆದರೂ ಇಂದಿಗೂ ಕುದುರೆ ಮೇಲೆ ಕುಳಿತು ಮದುವೆಯಲ್ಲಿ ಸಂಭ್ರಮಿಸುವ ಹಕ್ಕಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಸಮಾಧಾನ ಹೊರಹಾಕ

 

ಅಲ್ಪ ಸಂಖ್ಯಾತರು ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿ ನಿಂತಿದ್ದಾರೆ. ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ. ಅಲ್ಪಸಂಖ್ಯಾತರು, ದಲಿತರು ಅಭಿವೃದ್ಧಿಯಾಗಬೇಕಿದೆ. ನಿಮ್ಮ ಅಭಿವೃದ್ಧಿಗಾಗಿ ನಿವೆಲ್ಲರೂ ಒಗ್ಗೂಡಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಬೇಕು ಎಂದು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದಂತ ಸಂವಿಧಾನದಿಂದ ನಾವೆಲ್ಲರೂ ಬೆಳೆಯಲು ಅನುಕೂಲವಾಗಿದೆ. ಇದರಿಂದಲೇ ಸಾಮಾಜಿಕವಾಗಿ ನ್ಯಾಯ ಸಿಗುತ್ತಿದೆ. ಕೆಳವರ್ಗದ ಜನಾಂಗದ ಬಗ್ಗೆ ಈಗಲೂ ಕಿಳರಿಮೆ ಇದೆ. ಅದನ್ನು ಬುಡ ಸಮೇತ ಕಿತ್ತಹಾಕಲು ಎಲ್ಲರೂ ಗಟ್ಟಿಯಾಗಬೇಕು ಎಂದು ಹೇಳಿದರು.

ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸಿದ್ದರಾಮಯ್ಯ ಸರ್ಕಾರದಿಂದ
4 ಸಾವಿರ ಕೋಟಿ, ರೂ. ನೀಡಲಾಗಿದೆ. ಬಿಜೆಪಿಯಿಂದ ಕೇವಲ 5 ಕೋಟಿ ರೂ ನೀಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾವೆಲ್ಲರೂ ಗೌರವಯುತವಾಗಿ ಇರಲು ಸಾಧ್ಯ, ನಿಮ್ಮ ‌ಶಕ್ತಿಯನ್ನು ಗಟ್ಟಿಮಾಡಿಕೊಳ್ಳಿ ಎಂದು ಸಲಹೆ ನೀಡಿದರು

ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ್,
ಅಂಜಲಿ ನಿಂಬಾಳಕರ್, ಶಾಸಕ ರಹೀಂ ಖಾನ್ , ವಿಧಾನಪರಿಷತ್ ರಾದ ಸದಸ್ಯ ಸಿಎಂ ಇಬ್ರಾಹಿಂ, ಚನ್ನರಾಜ್ ಹಟ್ಟಿಹೊಳಿ, ಅಬ್ದುಲ್ ಜಮಾದಾರ್, ಮಾಜಿ ಶಾಸಕ ಪೀರೊಜ್ ಸೇಠ್, ರಾಜು ಸೇಠ, ಬಸೀರ್ ಅಹ್ಮದ್ , ವೀರ ಕುಮಾರ್ ಪಾಟೀಲ, ದಳವಾಯಿ ಹಾಗೂ ಇತರರು ಇದ್ದರು

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಸತೀಶ್ ಜಾರಕಿಹೊಳಿ, ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ರಿಜ್ವಾನ್ ಅರ್ಶದ್, ಖನೀಜ್ ಫಾತಿಮಾ, ರಹೀಂ ಖಾನ್, ಎಂಎಲ್ಸಿಗಳಾದ ನಜೀರ್ ಅಹಮದ್, ಚನ್ನರಾಜ್ ಹಟ್ಟಿಹೊಳಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್, ಮಾಜಿ ಸಚಿವರಾದ ತನ್ವೀರ್ ಸೇಠ್, ಎ.ಬಿ. ಪಾಟೀಲ್, ವೀರಕುಮಾರ್ ಪಾಟೀಲ್, ಮುಖಂಡರಾದ ಫಿರೋಜ್ ಸೇಠ್, ನಿಕೇತ್ ರಾಜ್, ರಾಜು ಸೇಠ್, ಸಿಖ್ ಸಮುದಾಯದ ಓಂಕಾರ್ ಸಿಂಗ್ ಭಾಟಿಯಾ, ಕ್ರೈಸ್ತ ಧರ್ಮಗುರು ಬಿಷಪ್ ಡೆರಿಕ್ ಫರ್ನಾಂಡಿಸ್ ಮತ್ತಿತರ ಮುಖಂಡರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ರಿಯಾಜ್ ಅಹಮದ್ ಪಟೇಲ್ ಮತ್ತಿತರರು ತಮ್ಮ ಬೆಂಬಲಿಗರ ಜತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button