ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಜನವಿರೋಧಿ ಯಾವುದೇ ಕಾಯ್ದೆಗಳಿದ್ದರೂ ಅದನ್ನು 2023ಕ್ಕೆ ನಾವು ವಾಪಸ್ ಪಡೆಯುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಇಂದು ಸದನದಲ್ಲಿ ಮತಾಂತರ ನಿಷೇಧ ಮಸೂದೆ ಚರ್ಚೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಆನ್ ರೆಕಾರ್ಡ್ ಹೇಳುತ್ತಿದ್ದೇನೆ. 2023ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಈಗ ಬಿಜೆಪಿ ಸರ್ಕಾರ ಜಾರಿಗೆ ತರುವ ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ಎಲ್ಲವನ್ನು ನಾವು ವಾಪಸ್ ಪಡೆಯುತ್ತೇವೆ ಎಂದು ಹೇಳಿದರು.
ಸಂಖ್ಯಾ ಬಲ ಇದೆ ಎಂದು ಏನು ಬೇಕಾದರೂ ಮಾಡಬಹುದು ಎಂದು ಬಿಜೆಪಿ ಅಂದುಕೊಂಡಿದೆ. ಯಾರೇ ಆಗಲಿ ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ವಿಧೇಯಕವನ್ನು ಮತಕ್ಕೆ ಹಾಕಲು ಸಿದ್ಧತೆ ನಡೆಸಿದೆ. ವಿಧಾನಸಭೆಯಲ್ಲಿ ನಮಗೆ ಅಗತ್ಯ ಸಂಖ್ಯಾಬಲವಿಲ್ಲ, ಆದರೆ ವಿಧಾನ ಪರಿಷತ್ ನಲ್ಲಿ ನಮಗೆ ಬಹುಮತವಿದೆ. ಇದೇ ಕಾರಣಕ್ಕಾಗಿ ವಿಧಾನಸಭೆಯಲ್ಲಿ ನಮ್ಮನ್ನು ಸೋಲಿಸಲೆಂದು ಬಿಜೆಪಿ ಪ್ಲಾನ್ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ಜೆಡಿಎಸ್ ವಿಧಾನಸಭೆಯಲ್ಲಿ ಹೇಳುವುದು ಒಂದು ಮಾಡುವುದು ಒಂದು. ವಿಧೇಯಕ ಮಂಡನೆ ವೇಳೆ ವಿರೋಧ ಮಾಡುತ್ತಾರೆ. ಕೊನೆ ಹಂತದಲ್ಲಿ ಕೈಕೊಡುತ್ತಾರೆ. ಚರ್ಚೆ ವೇಳೆ ಸಭಾತ್ಯಾಗ ಮಾಡುತ್ತಾರೆ. ಇದೆಲ್ಲವೂ ಬಿಜೆಪಿಗೆ ಬೆಂಬಲ ನೀಡಿದಂತೆ ಆಗುತ್ತದೆ ಎಂದು ಹೇಳಿದರು.
ದೇಶದಲ್ಲಿ 236 ಜನರಲ್ಲಿ ಒಮಿಕ್ರಾನ್ ಪತ್ತೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ