Kannada NewsLatest

ಮತಾಂತರ ಮಹಾಸಮರ; ಸದನದಲ್ಲಿ ಕೋಲಾಹಲ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಕುರಿತು ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ವಾಕ್ಸಮರ, ಕೋಲಾಹಲ ನಡೆದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೇ ಮತಾಂತರ ನಿಷೇಧ ಕಾಯ್ದೆ ಬಿಲ್ ಸಿದ್ಧಗೊಂಡಿತ್ತು. ಅದೇ ಬಿಲ್ ಈಗ ಮಂಡಿಸುತ್ತಿದ್ದೇವೆ. ಈ ಬಗ್ಗೆ ವಿಪಕ್ಷಗಳು ವಿರೋಧಿಸುವುದು ಸರಿಯಲ್ಲ ಎಂಬ ಸಚಿವ ಮಾಧುಸ್ವಾಮಿ ಹೇಳಿಕೆಗೆ ಕಾಂಗ್ರೆಸ್ ಸದಸ್ಯರು ಸಿಡಿದೆದ್ದಿದ್ದಾರೆ.

ಮತಾಂತರ ನಿಷೇಧ ಕಾಯ್ದೆ ಕುರಿತು ಗೃಹ ಸಚಿವ ಅರಗ ಜ್ಞಾನೇಂದ್ರ ವಿವರಣೆ ನೀಡಿದ ಬಳಿಕ ಸದನದಲ್ಲಿ ಮಾತನಾಡಿದ ಸಚಿವ ಮಾಧುಸ್ವಾಮಿ, ವಿಧೇಯಕದಲ್ಲಿ ಯಾವುದೇ ಧರ್ಮವನ್ನು ಟಾರ್ಗೆಟ್ ಮಾಡುತ್ತಿಲ್ಲ. ಬಲವಂತದ ಮತಾಂತರಕ್ಕೆ ಮಾತ್ರ ಆಕ್ಷೇಪ, ಶಿಕ್ಷೆ ಇದೆ. 2016ರಲ್ಲಿಯೇ ಈ ಬಿಲ್ ಸಿದ್ಧಪಡಿಸಲಾಗಿತ್ತು. ಆದರೆ ಆಕಸ್ಮಿಕವಾಗಿ ಕ್ಯಾಬಿನೆಟ್ ಮುಂದೆ ಬಂದಿಲ್ಲ. ಅದನ್ನೇ ನಾವೀಗ ಮಂಡಿಸುತ್ತೇವೆ ಎಂದರು.

ಸಿದ್ದರಾಮಯ್ಯ ಸಿಎಂ ಆಗಿದ್ದ ಕಾಲದಲ್ಲೇ ಬಿಲ್ ಗೆ ಸೂಚಿಸಿ ಬಿಲ್ ಮಾಡಿ ತರುವಂತೆ ಕಾನೂನು ಆಯೋಗಕ್ಕೆ ಹೇಳಿದ್ದರು ಎಂದು ಮಾಧುಸ್ವಾಮಿ ತಿಳಿಸುತ್ತಿದ್ದಂತೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ ನಾನು ಪರಿಶೀಲನೆಗೆ ಸೂಚಿಸಿದ ದಾಖಲೆ ತೋರಿಸುವಂತೆ ಹೇಳಿದರು. ಸಂವಿಧಾನ ವಿರೋಧಿ ಬಿಲ್ ನಾವು ಒಪ್ಪಿಕೊಳ್ಳಲ್ಲ. ನಾನೇ ಸೂಚಿಸಿದ ದಾಖಲೆ ಇದ್ದರೆ ಪರಿಶೀಲಿಸುತ್ತೇನೆ ಎಂದರು. ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಗದ್ದಲ-ಕೋಲಾಹಲ ಆರಂಭವಾಯಿತು.

ಈ ವೇಳೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಬಿಲ್ ಸಿದ್ಧವಾಗಿದೆ. ನೀವೇ ಮಾಡಿದ ದಾಖಲೆ, ಬಿಲ್ ಗಳನ್ನು ನಾವೀಗ ಮಂಡಿಸುತ್ತಿರುವಾಗ ನೀವು ವಿರೋಧಿಸುತ್ತಿರುವುದು ಹಾಸ್ಯಾಸ್ಪದ. ಮತಾಂತರವನ್ನು ನಾವು ನಿಷೇಧ ಮಾಡುತ್ತಿಲ್ಲ. ಬಲವಂತದ ಮತಾಂತರಕ್ಕೆ ಅವಕಾಶವಿಲ್ಲ ಎಂಬದನ್ನು ತಿಳಿಸಿದ್ದೇವೆ. ಅದಕ್ಕೆ ಸಂಬಂಧಿಸಿದ ಶಿಕ್ಷೆ ಬಗ್ಗೆಯೂ ಎಚ್ಚರಿಸಲಾಗುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಕಾನೂನಿನ ಬಗ್ಗೆ ತಿಳಿದವರು. ಸದನದಲ್ಲಿಯೂ ಅವರ ಸಲಹೆ ಅಗತ್ಯವಿದೆ. ಸರ್ವಾನುಮತದಿಂದ ಈ ಕಾಯ್ದೆ ಜಾರಿಗೆ ಅವಕಾಶ ನೀಡಿ. ಅನುಮಾನವಿದ್ದರೆ ತಾವೇ ಮಾಡಿದ ಬಿಲ್ ನ ದಾಖಲೆಗಳನ್ನು ತರಿಸಿಕೊಂಡು ನೋಡಿ. ಈಗ ನೀವು ಅದೇ ಬಿಲ್ ನ್ನು ಒಪ್ಪಲ್ಲ ಎಂದರೆ ಈ ರಾಜ್ಯವನ್ನು ದೇವರೇ ಕಾಪಾಡಬೇಕು. ಅನಗತ್ಯವಾಗಿ ಅಪಹಾಸ್ಯಕ್ಕೀಡಾಗಬೇಡಿ ಎಂದು ಟಾಂಗ್ ನೀಡಿದರು.

ಸಂವಿಧಾನ ವಿರೋಧಿ ಬಿಲ್ ನ್ನು ಯಾವುದೇ ಕಾರಣಕ್ಕೂ ನಾವು ಒಪ್ಪಲ್ಲ. ಯಡಿಯೂರಪ್ಪ ಹೇಳಿದ ಮಾತ್ರಕ್ಕೆ ನಾನು ಒಪ್ಪಿಕೊಳ್ಳಲಾಗದು ಎಂದರು. ಈ ವೇಳೆ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ವಿಧೇಯಕದ ಬಗ್ಗೆ ದಾಖಲೆಯ ಅಂಶಗಳನ್ನು ಸ್ಪೀಕರ್ ಕಾಗೇರಿ ಓದಿ ಹೇಳಿದರು. ಅಲ್ಲದೇ ಈ ಕಡತಕ್ಕೆ ಕಾಂಗ್ರೆಸ್ ಸಹಿ ಹಾಕಿರುವ ಬಗ್ಗೆಯೂ ವಿವರಿಸಿದರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ 2016ರ ಕಡತದ ಬಗ್ಗೆ ನಾನು ಮತ್ತೊಮ್ಮೆ ಪರಿಶೀಲನೆ ನಡೆಸುತ್ತೇನೆ. ದಾಖಲೆಗಳನ್ನು ಪರಿಶೀಲಿಸುವುದಾಗಿ ತಿಳಿಸಿದರು.

10 ನಿಮಿಷಗಳ ಕಾಲ ವಿಧಾನಸಭಾ ಕಲಾಪವನ್ನು ಮುಂದೂಡಲಾಗಿದೆ. ಒಟ್ಟಾರೆ ಮತಾಂತರ ನಿಷೇಧ ಕಾಯ್ದೆ ಜಾರಿ ವಿಚಾರದಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾಗುವ ಸಾಧ್ಯತೆ ದಟ್ಟವಾಗಿದ್ದು, ವಿಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಮುಂದಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button