Kannada NewsKarnataka News
ಎಂಇಎಸ್ ಪುಂಡರ ದೊಂಬಿ ಗಂಭೀರ: 38 ಆರೋಪಿಗಳಿಗೆ ಜಾಮೀನಿಲ್ಲ ; ಯಾರ್ಯಾರು ಆರೋಪಿಗಳು? ಇಲ್ಲಿದೆ ವಿವರ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಲ್ಲಿ ಈಚೆಗೆ ಅನಗತ್ಯವಾಗಿ ಪುಂಡಾಟ ನಡೆಸಿ ಪೊಲೀಸ್ ಸಿಬ್ಬಂದಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ ಸರಕಾರಿ ಆಸ್ತಿಪಾಸ್ತಿ ಹಾನಿಗೊಳಿಸಿದ ಮಹಾರಾಷ್ಟ್ರ ಏಕೀಕರಣ ಸಮಿತಿ ಪುಂಡರಿಗೆ ಜಾಮೀನು ನಿರಾಕರಿಸಲಾಗಿದೆ.
ಇಡೀ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ ಪುಂಡರು ಮತ್ತೆ ಇಂತಹ ದುಷ್ಕೃತ್ಯ ನಡೆಸಂತೆ ಅಂತ್ಯ ಹಾಡಲು ನಿರ್ಧರಿಸಿದೆ.
ಈವರೆಗೆ 38 ಜನರನ್ನು ಬಂಧಿಸಲಾಗಿದ್ದು, ಇನ್ನೂ 22 ಜನರನ್ನು ಬಂಧಿಸಬೇಕಾಗಿದೆ. ಅವರ ನಿರೀಕ್ಷಣಾ ಜಾಮೀನು ತಿರಸ್ಕೃತವಾಗಿದೆ.
ಬೆಂಗಳೂರಿನಲ್ಲಿ ಶಿವಾಜಿ ಪುತ್ಥಳಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಬೆಳಗಾವಿಯಲ್ಲಿ ಗಲಭೆ ನಡೆಸಿದ್ದರು. ಈ ಹಿಂದೆ ಕೂಡ ಪದೇ ಪದೆ ಭಾಷೆ ಮತ್ತು ಗಡಿ ಹೆಸರಿನಲ್ಲಿ ದ್ವೇಷದ ಕಿಚ್ಚು ಹಚ್ಚಿ ಗದ್ದಲ ಎಬ್ಬಿಸುವ ಚಾಳಿ ಇವರದ್ದಾಗಿತ್ತು.
ಈ ಬಾರಿ ಹಲವು ಸರಕಾರಿ ವಾಹನಗಳಿಗೆ ಕಲ್ಲು ತೂರಿದ್ದಲ್ಲದೆ, ಬೆಂಕಿಯನ್ನೂ ಹಚ್ಚಲಾಗಿತ್ತು.
ದಂಡ ಪ್ರಕ್ರಿಯಾ ಸಂಹಿತೆ ಕಲಂ: 439 ರಡಿಯಲ್ಲಿ ಸಲ್ಲಿಸಿದ ಜಾಮೀನು ಅರ್ಜಿಗೆ ಸರಕಾರಿ ಅಭಿಯೋಜಕರಾದ ಕಿರಣ ಪಾಟೀಲ ಅವರು ಬಲವಾದ ಆಕ್ಷೇಪ ಸಲ್ಲಿಸಿದ ಹಿನ್ನೆಲೆಯಲ್ಲಿ ಜಾಮೀನು ನಿರಾಕರಿಸಲಾಗಿದೆ.
ಆರೋಪಿಯು ತಾನು ಯಾವುದೇ ಅಪರಾದವನ್ನು ಮಾಡಿಲ್ಲ, ತಾನು ಸಂಭಾವಿತನು ಎಂದು ಹೇಳುವುದು ಸತ್ಯಕ್ಕೆ ದೂರವಾದ ಸಂಗತಿ ಆಗಿದೆ. ಇದರಲ್ಲಿ ನಮೂದು ಮಾಡಿದ ಆರೋಪಿತರು ಬೆಳಗಾವಿ, ಧರ್ಮವೀರ ಸಂಭಾಜಿ ವೃತ್ತದಲ್ಲಿ ಸೇರಿ ಬೆಂಗಳೂರಿನಲ್ಲಿ ಶಿವಾಜಿ ಪುತ್ಥಳಿಗೆ ಅವಮಾನ ಮಾಡಲಾಗಿದೆ ಎಂದು ಪ್ರತಿಭಟನೆ ಮಾಡಿ ಅಲ್ಲಿಂದ ಬೆಳಗಾವಿ ಕಲ್ಮಠ ರೋಡ್ ಕಡೆಗೆ ಆರೋಪಿ ನಂ.1 ರಿಂದ 4 ಇವರ ನೇತೃತ್ವದಲ್ಲಿ ದೊಂಬಿ ಮಾಡಿಸುವ ಉದ್ದೇಶದಿಂದ ಸೇರಿ ಉದ್ದೇಶ ಪೂರ್ವಕವಾಗಿ ಉದ್ರೇಕಿಸಿ ಎಲ್ಲಾ ಆರೋಪಿತರು ಸೇರಿ ಕಲ್ಮಠ ರೋಡ್, ಯಾತ್ರಿ ನಿವಾಸದ ಹತ್ತಿರ ರಸ್ತೆಯ ಬದಿಯಲ್ಲಿ ನಿಂತ ವಾಹನಗಳಿಗೆ ಕಲ್ಲು ಮತ್ತು ಇಟ್ಟಂಗಿ ಒಗೆದು ಹಾನಿ ಪಡಿಸಿದ್ದಲ್ಲದೇ ಸರ್ಕಾರಿ ಕರ್ತವ್ಯದಲ್ಲಿದ್ದ ಪಿರ್ಯಾದಿಗೆ ಅಡತಡೆ ಮಾಡಿ ತಲೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ್ದಲ್ಲದೆ ಸರ್ಕಾರಿ ವಾಹನಕ್ಕೆ ಬೆಂಕಿ ಹಚ್ಚಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಕೆಟ್ ಠಾಣೆ ಪೊಲೀಸರು ಸೆ.143,147,148,307,353,332,153, 336,427,435.109.504,506 00 149 & 2(A) The Karnataka Prevention of destruction and loss of property Act, 1981 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಕರಣದಲ್ಲಿ ಪಿರ್ಯಾದಿಯ ಮೇಲೆ ಆರೋಪಿತರು ಮಾರಣಾಂತಿಕ ಹಲ್ಲೆ ಮಾಡಿದ್ದು, ಗಾಯದ ಪ್ರಮಾಣ ಪತ್ರವನ್ನು ಬಿಮ್ಸ್ ಆಸ್ಪತ್ರೆ ಬೆಳಗಾವಿಯಿಂದ ಪಡೆದುಕೊಳ್ಳುವುದು ಬಾಕಿ ಇದೆ.
ಪ್ರಕರಣದಲ್ಲಿ ಕೆಲವು ಜನರು ಪರಾರಿಯಾದ್ದು, ಅವರನ್ನು ಪತ್ತೆ ಮಾಡಿ ದಸ್ತಗೀರ ಮಾಡುವದು ಬಾಕಿ ಇದೆ.
ಆರೋಪಿತರು ಬೆಳಗಾವಿ ಶಹರದಲ್ಲಿ ದೊಂಬಿ ಗಲಾಟೆ ಎಬ್ಬಿಸಿ, ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸಿ ಸಮಾಘಾತುಕ ಗಂಭೀರ ಕೃತ್ಯವನ್ನು ಎಸಗಿದ್ದು, ಜಾಮೀನಿಗೆ ಅರ್ಹರಲ್ಲ
ಆರೋಪಿತರು ಮೇಲೆ ಹೇಳಿದ ಘಟನೆಯಲ್ಲಿ ಭಾಗಿಯಾಗಿರುವುದಲ್ಲದೇ ಬೆಳಗಾವಿ ಶಹರದ ಬೇರೆ ಬೇರೆ ಭಾಗಗಳಲ್ಲಿ ಅಪರಾದ ಎಸಗಿ ಬಹಳಷ್ಟು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಅವುಗಳ ತನಿಖೆ ಕಾರ್ಯ ಭಾಕಿ ಇರುತ್ತದೆ.
ಆರೋಪಿತರು ಬೆಳಗಾವಿಯ ಶಾಂತಿ ಸುವ್ಯತೆಗೆ ಧಕ್ಕೆ ತಂದು ಸರಕಾರಿ ಆಸ್ತಿ ಪಾಸ್ತಿಗಳನ್ನು ನಷ್ಟ ಮಾಡುವುದಲ್ಲದೇ ಜನರ
ನಡುವೆ ಭಾಷಾ ವೈಷಮ್ಯ ಬೆಳೆಸಲು ಪ್ರಯತ್ನಿಸಿದ್ದು ಅಲ್ಲದೇ ಅಮಾಯಕ ಜನರ ಆಸ್ತಿ ಪಾಸ್ತಿಗಳನ್ನು ನಾಶ ಮಾಡಿ ಅವರಿಗೂ ಸಹ ಬಹಳಷ್ಟು ಹಾನಿ ಮಾಡಿದ್ದು ಜಾಮೀನಿಗೆ ಅರ್ಹರಲ್ಲ ಎಂದು ಕಿರಣ ಪಾಟೀಲ ವಾದಿಸಿದ್ದರು.
ಮಾಜಿ ಮೇಯರ್ ಸರಿತಾ ಪಾಟೀಲ, ಅಮರ ಯಳ್ಳೂರಕರ್ ಸೇರಿದಂತೆ ಇನ್ನೂ 11 ಜನರು ತಲೆಮರೆಸಿಕೊಂಡಿದ್ದು, ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಕೂಡ ತಿರಸ್ಕೃತವಾಗಿದೆ.
ಬಂಧಿತ 38 ಜನರು ಯಾರು? ಇಲ್ಲಿ ಕ್ಲಿಕ್ ಮಾಡಿ – 2-201-2021 ARREST ACCUSED INFORMATION
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ